ADVERTISEMENT

ಅನಾನಸ್ ಅಡುಗೆ ರುಚಿ

ನಮ್ಮೂರ ಊಟ

ಸೌಖ್ಯ ಮೋಹನ್
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ಪಾಯಸ
ಸಾಮಗ್ರಿ: ತುರಿದ ಅನಾನಸ್ 1ಕಪ್, ಗಟ್ಟಿ ಕಾಯಿ ಹಾಲು 3 ಕಪ್, ಬೆಲ್ಲ ಅಥವಾ ಸಕ್ಕರೆ ಮುಕ್ಕಾಲು ಕಪ್, ತುಪ್ಪ 5 ಚಮಚ, ಚಿಟಿಕೆ ಉಪ್ಪು, ಗೋಡಂಬಿ ಮತ್ತು ದ್ರಾಕ್ಷಿ
ವಿಧಾನ: ಬಾಣಲೆಗೆ 2 ಚಮಚ ತುಪ್ಪಹಾಕಿ ಪೈನಾಪಲ್ಲನ್ನು ಹುರಿದುಕೊಳ್ಳಿ. ಮೊದಲು 2 ಕಪ್ ತೆಂಗಿನ ಹಾಲು ಸೇರಿಸಿ ಕುದಿಸಿ. ಬೆಲ್ಲ ಸೇರಿಸಿ. ಉಪ್ಪು ಹಾಕಿ. ಕುದಿಸಿ ಆಮೇಲೆ 1ಚಮಚ ತುಪ್ಪ ಹಾಗೂ ಉಳಿದ 1ಕಪ್ ಹಾಲು ಸೇರಿಸಿ ಒಂದು ಬಾರಿ ಕುದಿಸಿ ಇಳಿಸಿ. 2 ಚಮಚ ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿ ಹುರಿದು ಸೇರಿಸಿ.

ಕಾಯಿರಸ
ಸಾಮಗ್ರಿ: ಅನಾನಸ್ 1 ಕಪ್, ಕಾಯಿತುರಿ ಅರ್ಧ ಕಪ್, ಸಾಂಬಾರ್ ಪುಡಿ 1 ಚಮಚ, ಮೆಣಸಿನ ಪುಡಿ 1ಚಮಚ, ಪಲ್ಯದ ಪುಡಿ 2 ಚಮಚ, ಉಪ್ಪು, ಹುಣಸೇರಸ (ಸ್ವಲ್ಪ ಸಾಕು) ಬೆಲ್ಲ ಅರ್ಧ ಚಮಚ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು. ವಿಧಾನ: ಅನಾನಸ್‌ ಹಣ್ಣನ್ನು  ಉದ್ದುದ್ದವಾಗಿ ಸೀಳಿ ಒಗ್ಗರಣೆಗೆ ಹಾಕಿ ಸ್ವಲ್ಪ ಹುರಿಯಿರಿ. ಸ್ವಲ್ಪ ನೀರು ಹಾಕಿ. ಕಾಯಿತುರಿ, ಸಾಂಬಾರ್ ಪುಡಿ, ಮೆಣಸಿನ ಪುಡಿ ಮತ್ತು ಹುಣಸೇ ಹಣ್ಣನ್ನು ಹಾಕಿ ರುಬ್ಬಿದ ಮಿಶ್ರಣವನ್ನು ಅದಕ್ಕೆ ಹಾಕಿ, ಪಲ್ಯದ ಹುಡಿ, ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಇಳಿಸಿ.

ಜ್ಯಾಮ್
ಬೇಕಾಗುವ ಸಾಮಗ್ರಿಗಳು: ಪೈನಾಪಲ್ ತುರಿದಿದ್ದು  5ರಿಂದ 6 ಕಪ್, ಸಕ್ಕರೆ 4 ಕಪ್, ಏಲಕ್ಕಿ ಪೌಡರ್ 1ಚಮಚವಿಧಾನ: ತುರಿದ ಹಣ್ಣನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಸ್ವಲ್ಪ ಇಂಗಿಸಿ. ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಸಕ್ಕರೆ ಪಾಕವಾಗಿ ಸ್ವಲ್ಪ ಗಟ್ಟಿಯಾದ ಮೇಲೆ ಬೇಕಾದರೆ ಏಲಕ್ಕಿ ಪೌಡರ್ ಸೇರಿಸಿ. ತಣಿದ ನಂತರ ಬಾಟಲಿ ಶೇಖರಿಸಿ. ಪೇಟೆಯಲ್ಲಿ ಸಿಗುವ  ಪ್ರಿಸರ್ವೇಟಿವ್ ಹಾಕಿರುವ ಜ್ಯಾಮ್‌ಗಳ ಬದಲು ಮನೆಯಲ್ಲೇ ತಯಾರಿಸಿ ತಿನ್ನಬಹುದು.

ಮೆಣಸ್ಗಾಯಿ
ಸಾಮಗ್ರಿ: ಅನಾನಸ್ 1ಕಪ್, ಕಾಯಿತುರಿ ಅರ್ಧ ಕಪ್, ಒಣಮೆಣಸು 2ರಿಂದ 3, ಎಳ್ಳು 2 ಚಮಚ, ಉದ್ದಿನಬೇಳೆ 1 ಚಮಚ, ಮೆಂತೆ 1/4 ಚಮಚ, ಉಪ್ಪು, ಹುಣಸೇರಸ 2 ಚಮಚ, ಬೆಲ್ಲ 1 ಚಮಚ, ಹಸಿಮೆಣಸು 2, ಒಗ್ಗರಣೆಗೆ ಕೊಬ್ಬರಿ ಎಣ್ಣೆ, ಸಾಸಿವೆ, ಇಂಗು, ಕರಿಬೇವು.
ವಿಧಾನ: ಹೆಚ್ಚಿದ ಅನಾನಸ್ ಮತ್ತು ಹಸಿಮೆಣಸನ್ನು (ಸೀಳಿ) ನೀರು ಹಾಕಿ ಉಪ್ಪು, ಹುಣಸೇರಸ ಮತ್ತು ಬೆಲ್ಲ ಹಾಕಿ ಬೇಯಿಸಿ. ಉಳಿದ ವಸ್ತುಗಳನ್ನು ಬೇರೆ ಬೇರೆಯಾಗಿ ರುಬ್ಬಿ ಬೆಂದ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಕುದಿಸಿ, ಒಗ್ಗರಣೆ ಕೊಡಿ.

ADVERTISEMENT

ಅನಾನಸ್ ಕೇಸರಿ ಬಾತ್
ಬೇಕಾಗುವ ಸಾಮಗ್ರಿಗಳು: ರವೆ 2ಕಪ್, ಸಕ್ಕರೆ 2ಕಪ್, ಅನಾನಸ್ ತುರಿದಿದ್ದು ಅರ್ಧ ಕಪ್, ತುಪ್ಪ ಒಂದೂವರೆ ಕಪ್, ದ್ರಾಕ್ಷಿ, ಗೋಡಂಬಿ ಸ್ವಲ್ಪ, ಚಿಟಿಕೆ ಉಪ್ಪು, 2 ಚಮಚ ಹಾಲಿನಲ್ಲಿ ನೆನೆಸಿದ ಕೇಸರಿ ಸ್ವಲ್ಪ.
ವಿಧಾನ: ಬಾಣಲೆಗೆ ಅರ್ಧ ಕಪ್ ತುಪ್ಪ ಹಾಕಿ ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ ನಾಲ್ಕು ಕಪ್ ನೀರು (ಕುದಿಯುವ) ಹಾಕಿ ಬೇಯಿಸಿ. ಬೇಯುವಾಗ ಚಿಟಿಕೆ ಉಪ್ಪು ಸೇರಿಸಿ. ರವೆ ಬೆಂದ ತಕ್ಷಣ ತುರಿದ ಅನಾನಸ್ ಹಾಕಿ. ಸಕ್ಕರೆ ಹಾಕಿ. ಹಾಲಿನಲ್ಲಿ ನೆನೆಸಿದ ಕೇಸರಿ ಸೇರಿಸಿ.  ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಚೆನ್ನಾಗಿ ಮಗುಚಿ. ಪಾಕ ಬಂದು ಮುದ್ದೆಯಾದ ತಕ್ಷಣ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ.

ಪೈನಾಪಲ್ ಮಸಾಲ
ಸಾಮಗ್ರಿ: ಪೈನಾಪಲ್ ಹೋಳು 2 ಕಪ್, ಚಾಟ್ ಪೌಡರ್ ಸ್ವಲ್ಪ, ಪೆಪ್ಪರ್ ಪೌಡರ್ ಸ್ವಲ್ಪ.
ವಿಧಾನ: ಪೈನಾಪಲ್ ಹೋಳುಗಳಿಗೆ ಮೇಲಿನ ಎಲ್ಲಾ ಪೌಡರ್‌ಗಳನ್ನು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ ತಿನ್ನಲು ಕೊಡಿ. ಅಥವಾ ಜೇನುತುಪ್ಪ ಮತ್ತು ಪೆಪ್ಪರ್ ಪೌಡರ್ ಕಾಂಬಿನೇಶನ್ ಕೂಡ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.