ADVERTISEMENT

ಅನ್ನ, ಚಪಾತಿಗೆ ಬೊಂಬಾಟ್‌ ಸಾಥ್

ಸವಿರುಚಿ

ಮೀನಾಕ್ಷಿ ರಮೇಶ್
Published 27 ಅಕ್ಟೋಬರ್ 2016, 19:30 IST
Last Updated 27 ಅಕ್ಟೋಬರ್ 2016, 19:30 IST
ನವಿಲು ಕೋಸು ಪಲ್ಯ
ನವಿಲು ಕೋಸು ಪಲ್ಯ   
ನವಿಲು ಕೋಸು ಪಲ್ಯ
ಬೇಕಾಗುವ ಸಾಮಗ್ರಿಗಳು: 
2 ನವಿಲುಕೋಸಿನ ಗೆಡ್ಡೆ, 1 ಈರುಳ್ಳಿ, 1 ಟೊಮೊಟೊ, 1 ಚಮಚ ದನಿಯಾ ಪುಡಿ, ಅರ್ಧ ಚಮಚ ಗರಂ ಮಸಾಲೆ, 1ಚಮಚ ಮೆಣಸಿನ ಪುಡಿ, 2 ಚಮಚ ಎಣ್ಣೆ, 1 ಚಮಚ ಜೀರಿಗೆ, ಚಿಟಿಗೆ ಅರಿಷಿಣ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
 
ಮಾಡುವ ವಿಧಾನ: 
ನವಿಲುಕೋಸಿನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಕುಕ್ಕರಿನಲ್ಲಿ ಒಂದು ವಿಶಲ್‌ ಕೂಗಿಸಬೇಕು. ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಬೇಕು.
 
ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮೊಟೊವನ್ನು ಹಾಕಿ ಬಾಡಿಸಬೇಕು. ತದನಂತರ ದನಿಯಾ ಪುಡಿ, ಮೆಣಸಿನ ಪುಡಿ, ಅರಿಷಿಣ, ಗರಂ ಮಸಾಲೆ ಪುಡಿ ಹಾಕಿ ಮಗುಚಬೇಕು.
 
ಆಮೇಲೆ ಬೆಂದ ನವಿಲು ಕೋಸನ್ನು ಹಾಕಿ ಮಗುಚಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ನವಿಲುಕೋಸು ಪಲ್ಯ ಸವಿಯಲು ಸಿದ್ಧ. ಚಪಾತಿಯೊಂದಿಗೆ ಸವಿಯಲು ಬಲು ಸೊಗಸು. ಬಿಸಿಯಾದ ಅನ್ನದೊಂದಿಗೂ ತಿನ್ನಬಹುದು. 
 
**
ದೀವಿ ಹಲಸಿನ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು: 
1 ಕಪ್ ಸಣ್ಣ ಹೆಚ್ಚಿದ ದೀವಿ ಹಲಸಿನ ಹೋಳುಗಳು, ಅರ್ಧ ಕಪ್ ತೆಂಗಿನ ತುರಿ, 1 ಹಸಿ ಮೆಣಸು, ಅರ್ಧ ಚಮಚ ಜೀರಿಗೆ, 1 ಚಮಚ ರವೆ, ಸ್ವಲ್ಪ ಕರಿಬೇವು, ಅರ್ಧಕಪ್ ಮೊಸರು ಅಥವಾ ಮಜ್ಜಿಗೆ, ಒಗ್ಗರಣೆಗೆ 1 ಚಮಚ ಎಣ್ಣೆ, ಚಿಟಿಕೆ ಹಿಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
 
ಮಾಡುವ ವಿಧಾನ: 
ಒಂದು ಪಾತ್ರೆಯಲ್ಲಿ ದೀವಿ ಹಲಸಿಗೆ ನೀರು ಹಾಕಿ ಬೇಯಿಸಬೇಕು. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹಸಿಮೆಣಸು, ರವೆ ಹಾಕಿ ನುಣ್ಣಗೆ ರುಬ್ಬಿ ಬೆಂದ ಹೋಳುಗಳ ಜತೆಗೆ ಸೇರಿಸಿ ಕುದಿಸಬೇಕು. ಅದಕ್ಕೆ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಜ್ಜಿಗೆಯನ್ನು ಸೇರಿಸಿ ಕುದಿ ಬರಿಸಬೇಕು.
 
ಕೊನೆಗೆ ಜೀರಿಗೆ ಹಾಗೂ ಹಿಂಗಿನ ಒಗ್ಗರಣೆ ಹಾಕಿದರೆ ದೀವಿ ಹಲಸಿನ ಮಜ್ಜಿಗೆ ಹುಳಿ ತಯಾರು. ಅನ್ನದೊಂದಿಗೆ ಸವಿಯಲು ಸಿದ್ದ.
 
**
ಕೆಸುವಿನ ದಂಟಿನ ಹುಳಿ
ಬೇಕಾಗುವ ಸಾಮಗ್ರಿಗಳು: 
ಸಣ್ಣಗೆ ಹೆಚ್ಚಿದ ಕೆಸುವಿನ ದಂಟು 1 ಕಪ್, ಸ್ವಲ್ಪ ಹುಣಸೆ ರಸ, 1 ಚಮಚ ಸಾರಿನ ಪುಡಿ ಅಥವಾ ಸಾಂಬಾರಿನ ಪುಡಿ, ಸ್ವಲ್ಪ ಕರಿಬೇವು, 1 ಚಮಚ ಅಕ್ಕಿ ಹಿಟ್ಟು, ಒಗ್ಗರಣೆಗೆ 1 ಚಮಚ ಎಣ್ಣೆ, ಅರ್ಧ ಚಮಚ ಸಾಸಿವೆ, ಸ್ವಲ್ಪ ಹಿಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
 
ಮಾಡುವ ವಿಧಾನ:  
ಒಂದು ಪಾತ್ರೆಯಲ್ಲಿ ಕೆಸುವಿನ ದಂಟಿನ ಹೋಳನ್ನು ನೀರಿನೊಂದಿಗೆ ಬೇಯಿಸಿಕೊಳ್ಳಿ. ಬೆಂದ ಹೋಳಿಗೆ ಹುಣಸೆ ರಸ, ಉಪ್ಪು, ಸಾಂಬಾರಿನ ಪುಡಿ ಹಾಕಿ ಕುದಿಸಿ. 1 ಚಮಚ ಅಕ್ಕಿ ಹಿಟ್ಟಿಗೆ ಎರಡು ಚಮಚ ನೀರು ಸೇರಿಸಿ ಪೇಸ್ಟ್ ಮಾಡಿಕೊಂಡು ಕುದಿಯುತ್ತಿರುವ ಹುಳಿಗೆ ಸೇರಿಸಿ.
 
ಹುಳಿಯು ದಪ್ಪವಾಗುತ್ತದೆ. ಕೊನೆಗೆ ಕರಿಬೇವು ಹಾಗೂ ಹಿಂಗಿನ ಒಗ್ಗರಣೆ ಹಾಕಿದರೆ ರುಚಿಯಾದ ಹುಳಿ ತಯಾರು. ಒಗ್ಗರಣೆಗೆ ಬೆಳ್ಳುಳ್ಳಿ ಹಾಕಬಹುದು. ಅನ್ನದೊಂದಿಗೆ ಸವಿಯಲು ಬಲು ರುಚಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.