ADVERTISEMENT

ಆಹಾಹಾ... ಕೋಳಿ ಖಾದ್ಯ

ವಿದ್ಯಾಶ್ರೀ ಎಸ್.
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಚಿಕನ್‌ ಸುಕ್ಕ
ಚಿಕನ್‌ ಸುಕ್ಕ   

ತವಾದ ಮೇಲೆ ಅಂಜಲ್‌ ಮೀನು ಫ್ರೈ ಮಾಡುತ್ತಿದ್ದರು ಬಾಣಸಿಗ. ಅದರ ಘಮ ಮೂಗಿಗೆ ತಾಗುತ್ತಿದ್ದಂತೆ ಹಸಿವು ಹೆಚ್ಚುತ್ತಿತ್ತು.

ಸಂಜೆ ಹೊತ್ತಿನಲ್ಲಿ ಗಿಜಿಗುಡುವ ಜನರಿಂದ ತುಂಬಿರುವ ಲಿಡೊ ಮಾಲ್‌ ಎದುರಿಗಿರುವ ನ್ಯೂ ಕುಡ್ಲ ಹೋಟೆಲ್‌ಗೆ ಹೋಗುವ ಮಂದಿಗೆ ಈ ಅನುಭವ ಆಗುತ್ತದೆ.
ಉತ್ತರ ಭಾರತದ ಅಡುಗೆಯ ಜೊತೆಗೆ ಕರಾವಳಿ ಶೈಲಿಯ ಅಡುಗೆ ಮಜಾ ಸವಿಯಬೇಕಾದರೆ ಇಲ್ಲಿಗೆ ಹೋಗಬೇಕು.

ಕುಡ್ಲ ಹೋಟೆಲ್‌ ಎಂದಾಕ್ಷಣ ಇಲ್ಲಿ ಕರಾವಳಿ ಭಾಗದ ಅಡುಗೆ ಮಾತ್ರವೇ ಸಿಗುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಹೋಟೆಲ್‌ ಒಳಗೆ ಅಡಿಯಿಟ್ಟವರಿಗೆ ಬಗೆಬಗೆಯ ಮೆನು ನೋಡಿದಾಗ ಖುಷಿಯೆನ್ನಿಸುತ್ತದೆ.   ಉಡುಪಿ ಮೂಲದ ಹರೀಶ್‌ ಈ ಹೋಟೆಲ್‌ ಮಾಲೀಕರು.

ADVERTISEMENT

(ಚಿಕನ್‌ ಸುಕ್ಕ)

‘ನಮ್ಮ ಕಡೆ ಹೋಟೆಲ್‌ ವ್ಯಾಪಾರದಲ್ಲಿ ತೊಡಗಿಕೊಂಡವರೇ ಹೆಚ್ಚು. ರಾಜಾಜಿನಗರಲ್ಲಿ ನನ್ನ ಅಣ್ಣ ‘ಕುಡ್ಲಾ ಬೀಚ್‌’  ಹೋಟೆಲ್‌ ನಡೆಸುತ್ತಾರೆ. ಮನೆಯವರೆಲ್ಲ ಇದೇ ಉದ್ಯಮ ಮಾಡುವುದರಿಂದ ನಾನು ಇದರಲ್ಲಿಯೇ ತೊಡಗಿಸಿಕೊಂಡೆ’ ಎನ್ನುತ್ತಾರೆ ಅವರು.

ಕರಾವಳಿ ಶೈಲಿಯ ಚಿಕನ್‌ ಸುಕ್ಕ, ನೀರು ದೋಸೆ, ಅಂಜಲ್‌, ಬಂಗುಡೆ, ಕಾಣೆ ಮೀನಿನ ಸಾರು, ಫ್ರೈ ಜೊತೆಗೆ ದಕ್ಷಿಣ ಭಾರತ ಶೈಲಿಯ ಬಟರ್‌ ಚಿಕನ್‌, ಚಿಕನ್ ಕಡಾಯಿ, ಚಿಕನ್‌ ಕಾಲಿ ಮಿರ್ಚಿ, ಚಿಕನ್‌ ಪುದೀನಾ ಹೀಗೆ ಜಿಹ್ವೆ ತಣಿಸುವ ಹಲವು ಖಾದ್ಯಗಳು ಇಲ್ಲಿ ದೊರಕುತ್ತವೆ.

ಚಿಲ್ಲಿ ಮಟನ್‌, ಮಟನ್‌ ಫ್ರೈ, ಮಟನ್‌ ಮಸಾಲ, ಮಟನ್‌ ಕಡಾಯಿ ಸೇರಿದಂತೆ ಮಟನ್‌ ಪ್ರಿಯರಿಗೂ ಹಲವು ಆಯ್ಕೆಗಳಿವೆ. ಇದರ ಜೊತೆಗೆ ಆಲೂ ಗೋಬಿ, ಮಿಕ್ಸ್‌ ವೆಜ್‌ ಕರ್ರಿ, ದಾಲ್‌ ಫ್ರೈ, ಮಶ್ರೂಮ್‌, ಗೋಬಿ ಮಂಚೂರಿ ಸೇರಿದಂತೆ ತರಕಾರಿಯ ಖಾದ್ಯಗಳಲ್ಲಿಯೂ ಹಲವು ವೈವಿಧ್ಯಗಳಿವೆ. ಕಡಿಮೆ ಬೆಲೆಗೆ ರುಚ್ಚಿಕಟ್ಟಾದ ಅಡುಗೆ ಸಿಗುವುದು ಇಲ್ಲಿಯ ವೈಶಿಷ್ಟ್ಯ.

(ಪಾಂಪ್ಲೇಟ್ ಫ್ರೈ)

ಚಿಕನ್‌ ಕಬಾಬ್‌ಗೆ ₹100, ಚಿಕನ್‌ ಪೆಪ್ಪರ್‌ ಡ್ರೈಗೆ ₹120, ಚಿಕನ್‌ ಘೀ ರೋಸ್ಟ್‌ ₹140, ಚಿಕನ್‌ ಸುಕ್ಕ ₹ 120 ದರ ನಿಗದಿಪಡಿಸಿದ್ದಾರೆ. 

‘ಇಲ್ಲಿ ಕರಾವಳಿಗಿಂತ ಬೇರೆ ಊರಿನ ಜನರೇ ಹೆಚ್ಚಿದ್ದಾರೆ. ಕೇವಲ ಕರಾವಳಿ ಖಾದ್ಯವೇ ತಯಾರಿಸಿದರೆ ಹೇಗೆ. ಅವರಿಗೂ ಆಯ್ಕೆ ಬೇಕಲ್ವಾ. ಹಾಗಾಗಿ ಉತ್ತರ ಭಾರತದ ಖಾದ್ಯಗಳ ತಯಾರಿಸುತ್ತೇವೆ’ ಎನ್ನುತ್ತಾರೆ ಹರೀಶ್‌.

‘ನೀರು ದೋಸೆ ಮತ್ತು ಚಿಕನ್‌ ಸುಕ್ಕಕ್ಕೆ ಹೆಚ್ಚು ಬೇಡಿಕೆ ಇದೆ. ಮೀನು ಫ್ರೈ ಕೂಡ ಇಷ್ಟಪಡುತ್ತಾರೆ.ಶುಚಿ ಮತ್ತು ರುಚಿಗೆ ಹೆಚ್ಚು ಆದ್ಯತೆ ನೀಡುತ್ತೇವೆ’ ಎನ್ನುತ್ತಾರೆ ಅವರು.

(ಪೆಪ್ಪರ್‌ ಚಿಕನ್‌)

ಹೀಗೆ ಹೇಳುತ್ತಲೇ ನೀರು ದೋಸೆ ಚಿಕನ್‌ ಸುಕ್ಕ ತಂದು ರುಚಿ ನೋಡುವಂತೆ ಹೇಳಿದರು ಹರೀಶ್‌. ಕಡಿಮೆ ಖಾರವಿದ್ದ ಸುಕ್ಕ ತಿನ್ನಲು ರುಚಿಯಾಗಿತ್ತು. ಇದನ್ನು ಚಪಾತಿಯ ಜೊತೆಗೂ ತಿನ್ನಬಹುದು. ಇಲ್ಲಿ ಪ್ರಾನ್ಸ್‌ ಪುಳಿಪುಂಚಿ ಮತ್ತು ಸುಕ್ಕ ಕೂಡ ದೊರಕುತ್ತದೆ. ಅದರ ಮಸಾಲೆ ರುಚಿ ಮತ್ತಷ್ಟು ಬೇಕು ಎನಿಸುವಂತಿದೆ.

ಇವರು ಮೀನನ್ನು ಯಶವಂತಪುರದ ಮೀನಿನ ಮಾರ್ಕೆಟ್‌ನಿಂದ ತರುತ್ತಾರೆ. ‘ಮೀನಿನ ಕಣ್ಣನ್ನು ನೋಡಿಯೇ ಅದರ ತಾಜಾತನವನ್ನು ಗುರುತಿಸುತ್ತೇವೆ’ ಎನ್ನುತ್ತಾರೆ ಅವರು.

ತಮಿಳುನಾಡಿನ ಜಗನ್‌ ಮತ್ತು ಉಡುಪಿ ಮೂಲದ ಪ್ರಕಾಶ್‌ ಇಲ್ಲಿಯ ಬಾಣಸಿಗರು.

ಜಗನ್‌ ತಯಾರಿಸುವ ಹೈದರಾಬಾದ್‌ ಬಿರಿಯಾನಿ, ರುಚಿಮೊಗ್ಗು ಅರಳುವಷ್ಟು ರುಚಿಯಾಗಿದೆ. ಘೀರೋಸ್ಟ್‌ ಕರಾವಾಳಿ ಶೈಲಿ ಎನಿಸದೇ ಇದ್ದರೂ, ಗೋಬಿ ಮಂಚೂರಿಯ ರುಚಿಯನ್ನು ನೆನಪಿಸುತ್ತದೆ. ಸ್ವಲ್ಪ ಸಿಹಿಯಾಗಿರುವ ಇದು ಖಾರಪ್ರಿಯರಿಗೆ ನಿರಾಸೆ ಮೂಡಿಸುತ್ತದೆ. 

(ನೀರು ದೋಸೆ)

ಎಣ್ಣೆಯಲ್ಲಿ ಕರಿದು ತಯಾರಿಸಿದ ಚಿಕನ್‌ ಪೆಪ್ಪರ್‌ ರುಚಿಯಾಗಿರುತ್ತದೆ. ಇಳಿಸಂಜೆಯಲ್ಲಿ ಇದನ್ನು ತಿನ್ನುವುದೇ ಒಂದು ರೀತಿಯ ಮಜಾ.

‘ಇಲ್ಲಿಯ ಪೆಪ್ಪರ್‌ ಚಿಕನ್‌ ನನಗೆ ತುಂಬಾ ಇಷ್ಟ. ಜೊತೆಗೆ ಬಟರ್‌ ಚಿಕನ್‌, ಮೀನಿನ ಸಾರು ರುಚಿಯಾಗಿರುತ್ತದೆ’ ಎನ್ನುತ್ತಾರೆ ಹಲಸೂರಿನ ಶಶಿಕಾಂತ್‌. 2 ಕಿ.ಮೀ ಒಳಗೆ  ₹300ಗೂ ಹೆಚ್ಚು ಆರ್ಡರ್‌ ಮಾಡಿದರೆ ಹೋಟೆಲ್‌ನವರೇ ಮನೆಗೆ ತಂದು ಕೊಡುತ್ತಾರೆ.

**

(ಹರೀಶ್‌)

*

ರೆಸ್ಟೊರೆಂಟ್‌: ನ್ಯೂ ಕುಡ್ಲ ಹೋಟೆಲ್‌

ವಿಶೇಷತೆ: ಸಿಗಡಿ, ಕೋಳಿ ಸುಕ್ಕ, ಪೆಪ್ಪರ್‌ ಚಿಕನ್‌, ಬಿರಿಯಾನಿ
ಸಮಯ: ಬೆಳಿಗ್ಗೆ 1ರಿಂದ4, ಸಂಜೆ 6ರಿಂದ 11

ಒಬ್ಬರಿಗೆ: ₹150

ಸ್ಥಳ: ಟ್ರಿನಿಟಿ ಕಾಂಪ್ಲೆಕ್ಸ್‌ ಹತ್ತಿರ, ಹಳೆ ಮದ್ರಾಸ್‌ ರಸ್ತೆ, ಲಿಡೊ ಮಾಲ್‌ ಬಳಿ

ಕಾಯ್ದಿರಿಸಲು: 80881 70170/ 97398 11702

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.