ADVERTISEMENT

ಕರ್ನಾಟಕ ಊಟ ಮಾಡಿ, ಕನ್ನಡ ಸಿನಿಮಾ ನೋಡಿ

ರಸಾಸ್ವಾದ

ರಮೇಶ ಕೆ
Published 3 ಅಕ್ಟೋಬರ್ 2016, 19:30 IST
Last Updated 3 ಅಕ್ಟೋಬರ್ 2016, 19:30 IST
ಕರ್ನಾಟಕ ಊಟ ಮಾಡಿ,  ಕನ್ನಡ ಸಿನಿಮಾ ನೋಡಿ
ಕರ್ನಾಟಕ ಊಟ ಮಾಡಿ, ಕನ್ನಡ ಸಿನಿಮಾ ನೋಡಿ   

ಹೋಟೆಲ್‌ ಹತ್ತಿರವಾಗುತ್ತಿದ್ದಂತೆ ಮುಂಭಾಗದಲ್ಲಿ ತೆಂಗಿನ ಗರಿಯಿಂದ ಮಾಡಿದ ದೋಣಿ ಕಣ್ಣಿಗೆ ಕಾಣುತ್ತದೆ. ಒಳ ಹೋಗುತ್ತಿದ್ದಂತೆ ಹೂವಿನ ಸಿಂಗಾರ ಮಾಡಿದ ಹಳೆಯ ಎತ್ತಿನ ಗಾಡಿ ಗಮನ ಸೆಳೆಯುತ್ತದೆ. ಅದಕ್ಕೆ ಎರಡು ವಿದ್ಯುತ್‌ ಲಾಟೀನ್‌ಗಳನ್ನು ನೇತು ಹಾಕಿದ್ದಾರೆ. ಗಾಜಿನ ಗೋಡೆಗೆ ಕರ್ನಾಟಕ ಭೂಪಟ ಅಂಟಿಸಿದ್ದಾರೆ. ಎತ್ತ ನೋಡಿದರೂ ಕರುನಾಡಿನ ಅಡುಗೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ರಾಜ್ಯದ ವಿವಿಧ ಭಾಗಗಳ ಅಡುಗೆ ಸವಿಯುವ ಜೊತೆಗೆ ಕನ್ನಡ ಸಿನಿಮಾ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ ಮೂವೆನ್‌ಪಿಕ್‌ ಹೋಟೆಲ್‌ನ ಮೈ ಪ್ಲೇಸ್‌ ರೆಸ್ಟೊರೆಂಟ್‌.

ಅಕ್ಟೋಬರ್ 13ರವೆರೆಗೆ ಇಲ್ಲಿ ಕರ್ನಾಟಕ ಆಹಾರೋತ್ಸವ ನಡೆಯುತ್ತಿದೆ. ಇದರ ಅಂಗವಾಗಿ ಮೈ ಪ್ಲೇಸ್‌ ರೆಸ್ಟೊರೆಂಟ್‌ನಲ್ಲಿ ಉತ್ತರ ಕರ್ನಾಟಕ, ಹಳೆ ಮೈಸೂರು, ಕರಾವಳಿ ಭಾಗಗಳ ಆಹಾರವನ್ನು ಉಣಬಡಿಸುತ್ತಿದ್ದಾರೆ.

ರೆಸ್ಟೊರೆಂಟ್‌ ಮುಂಭಾಗದಲ್ಲಿ ಕುಂಬಾರನೊಬ್ಬ ಚಿಕ್ಕಚಿಕ್ಕ ಮಡಕೆಗಳನ್ನು ಮಾಡುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿರುತ್ತಾನೆ. ಕನ್ನಡ ಸಿನಿಮಾ ಗೀತೆಗಳು ಕಿವಿಗೆ ಇಂಪು ನೀಡುತ್ತವೆ.

ತರಹೇವಾರಿ ಅಡುಗೆ
ಎರಡು ತಿಂಗಳಿಗೊಮ್ಮೆ ಒಂದಿಲ್ಲೊಂದು ಆಹಾರೋತ್ಸವ ಆಯೋಜಿಸುವ ಹೋಟೆಲ್‌ನಲ್ಲಿ ಈ ಬಾರಿ ಕರ್ನಾಟಕ ಆಹಾರ ಉತ್ಸವ ನಡೆಯುತ್ತಿದೆ. ಮದ್ದೂರು ವಡೆ, ಮಂಗಳೂರು ಫಿಶ್‌ ರವಾ ಫ್ರೈ, ನೀರು ದೋಸೆ ಜೊತೆಗೆ ನೆಂಚಿಕೊಳ್ಳಲು ಚಿಕನ್‌ ಸುಕ್ಕ, ಬಾಳೇಕಾಯಿ ಪಲ್ಯ, ನೂಲ್‌ ಪುಟ್ಟು, ಹೋಳಿಗೆ ಸಾರು ಇಷ್ಟವಾಗಲಿವೆ.

ಕೋರಿರೋಟಿ ಮಟನ್‌ ಸುಕ್ಕ,  ರಾಗಿ ಮುದ್ದೆ ಜೊತೆಗೆ ಮಂಡ್ಯ ಶೈಲಿಯ ನಾಟಿ ಕೋಳಿ ಸಾರು, ಏಡಿ ಸಾರು, ಸಿಗಡಿ ಸಾರು... ಹೀಗೆ ವಿಭಿನ್ನ ರುಚಿಯ ಅಡುಗೆಗಳಿವೆ. ಎಳನೀರು, ಪಾನಿಪೂರಿ, ಮಸಾಲೆ ಪೂರಿ ಹಾಗೂ ಭೇಲ್‌ಪುರಿ, ಕಡ್ಲೆಬೇಳೆ ವಡೆ, ಹೀರೆಕಾಯಿ ಭಜ್ಜಿ ಚಾಟ್ಸ್‌ಪ್ರಿಯರಿಗೆ ಇಷ್ಟವಾಗಲಿವೆ. ಇಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕಾಗಿ ಬಫೆ ವ್ಯವಸ್ಥೆ ಇದೆ.

‘ದಾವಣಗೆರೆ, ಬೆಳಗಾಂ, ಹುಬ್ಬಳ್ಳಿ, ಮೈಸೂರು, ಕೊಡಗು, ಧಾರವಾಡ ಭಾಗಗಳ ಅಡುಗೆಗಳನ್ನು ಮಾಡಿದ್ದೇವೆ. ರಾಜ್ಯದ ವಿವಿಧ ಭಾಗಗಳಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಅವರ ಅಜ್ಜಿಯರೊಂದಿಗೆ ಮಾತನಾಡಿ ರೆಸಿಪಿ ಪಡೆದುಕೊಂಡೆ, ಅದನ್ನು ಇಲ್ಲಿ ಪರಿಚಯಿಸಿದ್ದೇನೆ’ ಎನ್ನುತ್ತಾರೆ ಬಾಣಸಿಗ ಗೌರವ್‌.

‘ಹಲವು ರೆಸ್ಟೊರೆಂಟ್‌ಗಳಲ್ಲಿ 30 ವರ್ಷಗಳಿಂದ ಬಾಣಸಿಗನಾಗಿ ಕೆಲಸ ಮಾಡಿದ್ದೇನೆ. ಕಡುಬು, ತಟ್ಟೆ ಇಡ್ಲಿ, ಪಂದಿಕರಿ, ಮರವಾಯಿ ಸುಕ್ಕ, ಅಕ್ಕಿ, ಜೋಳದ ರೊಟ್ಟಿ, ಬೆಳಗಾಂ ಶೈಲಿ ಬಿರಿಯಾನಿ, ಮಟನ್ ಮೆಣಸಿನಸಾರು ಮಂಗಳೂರು ಸಿಗಡಿಸಾರು... ಹೀಗೆ ರಾಜ್ಯದ ಪ್ರಮುಖ ಅಡುಗೆಗಳನ್ನು ಪರಿಚಯಿಸಲು ಪ್ರಯತ್ನಿಸಿದ್ದೇವೆ’ ಎಂದು ಅವರು ವಿವರಿಸಿದರು.

ಡೆಸರ್ಟ್ಸ್‌ನಲ್ಲಿ ಮುಖ್ಯವಾಗಿ ಮೈಸೂರು ಪಾಕ್‌, ಧಾರವಾಡ ಪೇಡಾ, ಕಾಯಿ ಹೋಳಿಗೆ, ಶೇಂಗಾ ಉಂಡೆ, ಪಾಯಸ, ಪೇಸ್ಟ್ರೀಸ್‌ ಇಷ್ಟವಾಗಲಿವೆ.

ಊಟದೊಂದಿಗೆ ಸಿನಿಮಾ
ಕರ್ನಾಟಕದ ಅಡುಗೆ ರುಚಿ ನೋಡಿದ ಗ್ರಾಹಕರು ರೆಸ್ಟೊರೆಂಟ್‌ನ ಒಳಗಿರುವ ಸಿನಿಮಾ ಹಾಲ್‌ನಲ್ಲಿ ಕನ್ನಡ ಸಿನಿಮಾಗಳನ್ನು ನೋಡಬಹುದು. ಮಧ್ಯಾಹ್ನ ಹಾಗೂ ರಾತ್ರಿ ಒಂದೊಂದು ಸಿನಿಮಾಗಳ ಪ್ರದರ್ಶನವಿರುತ್ತದೆ. ಹೆಚ್ಚಾಗಿ ಡಾ.ರಾಜಕುಮಾರ್‌ ಅವರ ಸಿನಿಮಾಗಳಿವೆ.

ಪ್ರತಿದಿನವೂ ಆಹಾರೋತ್ಸವದ ಮೆನು ಬದಲಾಗುತ್ತಿರುತ್ತದೆ. ಮಧ್ಯಾಹ್ನ 12.30ರಿಂದ 3 ಹಾಗೂ ಸಂಜೆ 7ರಿಂದ  ರಾತ್ರಿ 11.30ರವರೆಗೆ ಆಹಾರೋತ್ಸವ ಇರುತ್ತದೆ.

ವಿಭಿನ್ನ ಕಲ್ಪನೆ
‘ಹಲವು ಆಹಾರೋತ್ಸವಗಳಿಗೆ ಹೋಗಿದ್ದೇನೆ. ಆದರೆ ಇಷ್ಟೊಂದು ವೈವಿಧ್ಯ ನೋಡಿಲ್ಲ. ಚಾಟ್ಸ್‌ನಿಂದ ಮುಖ್ಯ ಮೆನುವರೆಗೂ ಆಯ್ಕೆಗೆ ಅವಕಾಶವಿದೆ. ಹೊಟ್ಟೆ ತುಂಬಾ ಊಟ ಮಾಡಿ, ಸಿನಿಮಾ ನೋಡುವ ಅವಕಾಶ ಕಲ್ಪಿಸಿರುವುದು ವಿಭಿನ್ನ ಕಲ್ಪನೆ’ ಎಂದು ಆಹಾರೋತ್ಸವವನ್ನು ಹೊಗಳುತ್ತಾರೆ ಹೆಬ್ಬಾಳದ ಮಾರುತಿ.

***
ರೆಸ್ಟೊರೆಂಟ್‌: ಮೂವೆನ್‌ಪಿಕ್‌, ಮೈ ಪ್ಲೇಸ್‌
ವಿಶೇಷತೆ: ಊಟದ ಜತೆಗೆ ಸಿನಿಮಾ ವೀಕ್ಷಣೆ
ಸಮಯ:ಮಧ್ಯಾಹ್ನ 12.30ರಿಂದ 3 ಹಾಗೂ ಸಂಜೆ 7ರಿಂದ  ರಾತ್ರಿ 11.30ರವರೆಗೆ
ಒಬ್ಬರಿಗೆ: ₹ 1,200, 1,500 (ರಾತ್ರಿ)
ಸ್ಥಳ: ನಂ115, ಗೋಕುಲ ಬಡಾವಣೆ, ಎಚ್ಎಂಟಿ ರಸ್ತೆ, ಬಿಇಎಲ್‌ ವೃತ್ತದ ಸಮೀಪ, ಮತ್ತೀಕೆರೆ.
ಸ್ಥಳ ಕಾಯ್ದಿರಿಸಲು: 080-43001000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT