ADVERTISEMENT

ಬಗೆ ಬಗೆ ಜಾಮೂನ್‌

ನಮ್ಮೂರ ಊಟ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST
ಖೋವ ಗುಲಾಬ್ ಜಾಮೂನ್
ಖೋವ ಗುಲಾಬ್ ಜಾಮೂನ್   

ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದಾದ ವಿವಿಧ ಜಾಮೂನ್‌  ರೆಸಿಪಿಗಳನ್ನು ವಿವರಿಸಿದ್ದಾರೆ ಗೀತಸದಾ, ಮೋಂತಿಮಾರು.

***
ಚಂದ್ರ ಜಾಮೂನ್
ಸಾಮಗ್ರಿ:
ನೇಂದ್ರ ಬಾಳೆಹಣ್ಣು - ಎರಡು, ಸಕ್ಕರೆ - ಒಂದು ಲೋಟ, ತುಪ್ಪ - ಅರ್ಧ ಲೋಟ, ಏಲಕ್ಕಿ ಪುಡಿ - ಚಿಟಿಕಿ, ಕೇಸರಿ - ಬಣ್ಣಕ್ಕಾಗಿ.

ವಿಧಾನ: ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕಕ್ಕಿಡಿ. ಇದು ಸ್ವಲ್ಪ ದಪ್ಪವಾಗುತ್ತಾ ಬಂದಾಗ ಇಳಿಸಿ ಏಲಕ್ಕಿ ಮತ್ತು ಕೇಸರಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ನೇಂದ್ರಬಾಳೆ ಹಣ್ಣನ್ನು ಅರ್ಧಇಂಚು ದಪ್ಪಕ್ಕೆ ಹೆಚ್ಚಿಕೊಂಡು ಕಾದ ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಕೆಂಪು ಬಣ್ಣ ಬರುವವರೆಗೂ ಕರಿಯಿರಿ. ನಂತರ ಇದನ್ನು ಸಕ್ಕರೆ ಪಾಕಕ್ಕೆ ಹಾಕಿಟ್ಟು ಅರ್ಧ ಗಂಟೆಯ ನಂತರ ಸರ್ವ್ ಮಾಡಬಹುದು.

***
ಖೋವ ಗುಲಾಬ್ ಜಾಮೂ
ನ್
ಸಾಮಗ್ರಿ: ಖೋವ- ಅರ್ಧ ಲೋಟ, ಮೈದಾ - ಮುಕ್ಕಾಲು ಲೋಟ, ಅಡುಗೆ ಸೋಡ - ಅರ್ಧ ಚಮಚ, ಸಕ್ಕರೆ - ಎರಡು ಲೋಟ, ರೋಸ್ ಎಸೆನ್ಸ್ - ಅರ್ಧ ಚಮಚ, ಕೇಸರಿಬಣ್ಣ - ಚಿಟಿಕಿ, ತುಪ್ಪ- ಒಂದು ಲೋಟ.

ವಿಧಾನ: ಸಕ್ಕರೆಗೆ ಅರ್ಧ ಲೋಟ ನೀರು ಸೇರಿಸಿ ಪಾಕಕ್ಕಿಡಿ. ಇದು ಪಾಕಕ್ಕೆ ಬಂದ ಕೂಡಲೇ ಬಣ್ಣ ಮತ್ತು ರೋಸ್ ಎಸೆನ್ಸ್ ಹಾಕಿ ಒಲೆಯಿಂದ ಇಳಿಸಿ. ಮಿಕ್ಸಿಂಗ್ ಬೌಲ್‌ಗೆ ಮೈದಾ, ಸೋಡಾ, ಖೋವ ಹಾಕಿ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಇದನ್ನು ಉಂಡೆಮಾಡಿ ಕಾದ ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ, ಇದನ್ನು ಮೊದಲೇ ಮಾಡಿಟ್ಟ ಸಕ್ಕರೆ ಪಾಕಕ್ಕೆ ಹಾಕಿ ಒಂದು ಗಂಟೆಯ ನಂತರ ಸರ್ವ್ ಮಾಡಬಹುದು.

***
ಜೇನರಿ 
ಜಾಮೂನ್
ಸಾಮಗ್ರಿ: ಉದ್ದಿನ ಬೇಳೆ - ಒಂದು ಲೋಟ, ಸಕ್ಕರೆ - ಎರಡು ಲೋಟ, ಉಪ್ಪು - ರುಚಿಗೆ ಬೇಕಷ್ಟು, ಏಲಕ್ಕಿ ಪುಡಿ-ಸುವಾಸನೆಗಾಗಿ.

ADVERTISEMENT

ವಿಧಾನ: ಉದ್ದಿನಬೇಳೆಯನ್ನು ತೊಳೆದು ಅರ್ಧ ಗಂಟೆಯ ಕಾಲ ನೆನೆಸಿಡಿ. ನಂತರ ನೀರು ಬಸಿದು, ನಯವಾಗಿ, ಗಟ್ಟಿಯಾಗಿ ರುಬ್ಬಿಕೊಳ್ಳಿ. ಹಿಟ್ಟಿಗೆ ಹೆಚ್ಚು ನೀರು ಹಾಕಬಾರದು. ಹಿಟ್ಟಿಗೆ ಉಪ್ಪು ಬೆರೆಸಿ ಗೋಲಿಗಾತ್ರದ ಉಂಡೆಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದು ಹೊಂಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆದು ಮೊದಲೇ ಸಿದ್ದಮಾಡಿಟ್ಟುಕೊಂಡ ಏಲಕ್ಕಿ ಮಿಶ್ರಿತ ಸಕ್ಕರೆ ಪಾಕದಲ್ಲಿ ಹಾಕಿ. ಬಹಳ ಹಿಂದಿನಿಂದಲೂ ಹಳ್ಳಿಗಳಲ್ಲಿ ತಯಾರಿಸುವ ಗುಲಾಬ್‌ಜಾಮ್ ರೆಡಿ.

***
ಕೋಕನಟ್ ಜಾಮೂ
ನ್
ಸಾಮಗ್ರಿ: ಕಡ್ಲೆಬೇಳೆ - ಅರ್ಧ ಲೋಟ, ತೆಂಗಿನತುರಿ-ಎರಡು ಚಮಚ, ಪೇಪರ್ ಅವಲಕ್ಕಿ - ನಾಲ್ಕು ಚಮಚ, ಗೋಡಂಬಿ-ನಾಲ್ಕು, ಬಾದಾಮಿ-ಎರಡು, ಏಲಕ್ಕಿ-ಚಿಟಿಕಿ.

ವಿಧಾನ: ನೆನೆಸಿಟ್ಟ ಕಡ್ಲೆಬೇಳೆ, ಅವಲಕ್ಕಿ, ತೆಂಗಿನತುರಿ, ಗೋಡಂಬಿ, ಬಾದಾಮಿ ಇತ್ಯಾದಿಗಳನ್ನು ಹೆಚ್ಚು ನೀರು ಹಾಕದೆ ಗಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದನ್ನು ಉಂಡೆ ಕಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಆರಿದ ಮೇಲೆ ಇದನ್ನು ಮೊದಲೇ ಮಾಡಿಟ್ಟುಕೊಂಡ ಸಕ್ಕರೆ ಪಾಕಕ್ಕೆ ಹಾಕಿ. ಸ್ವಲ್ಪ ಸಮಯದ ನಂತರ ಸರ್ವ್ ಮಾಡಬಹುದು.

***
ಆಲೂಗಡ್ಡೆ ಗುಲಾಬ್ ಜಾಮೂ
ನ್
ಸಾಮಗ್ರಿ: ಆಲೂಗಡ್ಡೆ - ಅರ್ಧ ಕೆ.ಜಿ., ಸಕ್ಕರೆ - ಎರಡು ಲೋಟ, ತುಪ್ಪ - ಒಂದು ಲೋಟ, ಕೇಸರಿಬಣ್ಣ - ಚಿಟಿಕಿ, ಏಲಕ್ಕಿ - ಒಂದು ಚಮಚ, ರೋಸ್ ಎಸೆನ್ಸ್ - ನಾಲ್ಕು ಬಿಂದು.

ವಿಧಾನ: ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಹೆಚ್ಚಿಕೊಂಡು ತುಪ್ಪದಲ್ಲಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ನಂತರ ಇದನ್ನು ಮೊದಲೇ ಮಾಡಿಟ್ಟ ಸಕ್ಕರೆ ಪಾಕದಲ್ಲಿ ಹಾಕಿಡಿ. ಅರ್ಧ ಗಂಟೆಯ ನಂತರ ಸರ್ವ್ ಮಾಡಬಹುದು.

***
ಬ್ರೆಡ್ ಜಾಮೂನ್
ಸಾಮಗ್ರಿ:
ಆರು ಬ್ರೆಡ್ ಪೀಸುಗಳು, ಮೈದಾಹುಡಿ - ನಾಲ್ಕು ಚಮಚ, ತುಪ್ಪ - ಒಂದು ಚಮಚ, ಕರಿಯಲು ಎಣ್ಣೆ, ಸಕ್ಕರೆ - ಎರಡು ಲೋಟ, ಏಲಕ್ಕಿಪುಡಿ - ಸುವಾಸನೆಗಾಗಿ.

ವಿಧಾನ: ಬ್ರೆಡ್‌ನ ಬಿಳಿಭಾಗವನ್ನು ಮಾತ್ರ ನೀರಿನಲ್ಲಿ ಮುಳುಗಿಸಿ ನೀರು ತೆಗೆದು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಉಂಡೆಯ ಹದಕ್ಕೆ ಬರುವಷ್ಟು ಮೈದಾ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ತುಪ್ಪ ಹಾಕಿ ಪುನ: ನಾದಿ ಬೇಕಾದ ಆಕಾರಕ್ಕೆ ಜಾಮೂನ್ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಇದನ್ನು ಮೊದಲೇ ಮಾಡಿಟ್ಟುಕೊಂಡ ಸಕ್ಕರೆ ಪಾಕಕ್ಕೆ ಹಾಕಿ ಸ್ವಲ್ಪ ಸಮಯದ ನಂತರ ಸರ್ವ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.