ADVERTISEMENT

‘ಬಾನ್‌ಸೌತ್‌’ನಲ್ಲಿ ಗೋವಾ ಆಹಾರ ಉತ್ಸವ

ರಸಾಸ್ವಾದ

ಹೇಮಾ ವೆಂಕಟ್
Published 30 ನವೆಂಬರ್ 2016, 6:01 IST
Last Updated 30 ನವೆಂಬರ್ 2016, 6:01 IST
ಬಟರ್‌ ಗಾರ್ಲಿಕ್‌ ಪ್ರಾನ್‌
ಬಟರ್‌ ಗಾರ್ಲಿಕ್‌ ಪ್ರಾನ್‌   
ಗೇಟ್‌ ಸರಿಸಿ ಒಳಹೋಗುತ್ತಿದ್ದಂತೆ ಪುಟ್ಟ ಕೈತೋಟ. ದೊಡ್ಡದಾದ ಜಗುಲಿ. ಕುಳಿತುಕೊಳ್ಳಲು ಗೋಡೆಗೆ ಸೇರಿಕೊಂಡ ಕಟ್ಟೆ. ಮುಂಬಾಗಿಲ ಎದುರು ಎರಡು ಸುಂದರ ಗೋಧಿಕಂಬ, ಹೆಂಚಿನ ಚಾವಣಿ.  ಅಪ್ಪಟ ಮಲೆನಾಡಿನ ಮನೆಯನ್ನು ನೆನಪಿಸುವ ವಾತಾವರಣ.
 
ಮುಂಬಾಗಿಲು ತೆರೆದು ಒಳ ಹೋಗಿ ಎಡಭಾಗಕ್ಕೆ ತಿರುಗಿದರೆ ದೊಡ್ಡ ಹಾಲ್‌, ಹಾಲ್‌ನ ಮಧ್ಯದಲ್ಲಿ ಅಡುಗೆ ಮನೆ.  ಅಡುಗೆಮನೆಯ ಎರಡೂ ಬದಿಗಳಲ್ಲಿ  ಕುಳಿತು ಉಣ್ಣುವ ವ್ಯವಸ್ಥೆ. ಬಂದವರೆಲ್ಲ ಒಳಮನೆ ಸೇರುವಾಗ ನೆಂಟರ ಮನೆಗೆ ಬಂದಂತೆ ಭಾಸವಾಗುತ್ತದೆ.  
 
ಹೀಗಿದೆ ಕೋರಮಂಗಲದ 5ನೇ ಬ್ಲಾಕ್‌ನಲ್ಲಿರುವ  ‘ಬಾನ್‌ಸೌತ್‌’ ಹೊಟೇಲ್‌ನ ಪರಿಸರ.
 
ಕಟ್ಟಡದ ಒಳ ಹೊಕ್ಕ ಮೇಲೂ ಇದು ಹೊಟೇಲ್ ಎನಿಸುವುದೇ ಇಲ್ಲ. ದೊಡ್ಡ ಕುಟುಂಬವೊಂದು ವಾಸವಾಗಿದ್ದ  ಮನೆಯ  ವಿನ್ಯಾಸವನ್ನು ಇಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಡುಗೆ ಮನೆಯನ್ನು ಮಾತ್ರ ಹಾಲ್‌ಗೆ ತರಲಾಗಿದೆ.
 
ಹಾಲ್‌ನ ಮೂಲೆಯಿಂದ ಮೂಲೆಗೆ ಸಿಮೆಂಟ್‌ನ ಕಟ್ಟೆ ಇದೆ. ಅದರ ಮೇಲೆ ಕುಷನ್‌ ಮತ್ತು ಗೋಡೆಗೆ ಒರಗಲು ದಿಂಬು ಇಡಲಾಗಿದೆ. ಹಳೆಯ ಅಡುಗೆ ಮನೆಯನ್ನು ಬಫೆ ಕೊಠಡಿಯನ್ನಾಗಿ ಬಳಸಲಾಗುತ್ತಿದೆ.  ಬಂದವರೆಲ್ಲ  ಬಫೆ ಕೊಠಡಿಗೆ ಹೋಗಿ ಬೇಕಿರುವ ಖಾದ್ಯ ಬಡಿಸಿಕೊಳ್ಳಬಹುದು.
 
ಗೋವಾ ಆಹಾರ ಉತ್ಸವ
ಸದ್ಯ ಬಾನ್‌ಸೌತ್‌ನಲ್ಲಿ  ಗೋವಾ ಫುಡ್‌ ಕಾರ್ನಿವಲ್‌ ನಡೆಯುತ್ತಿದೆ. ಗೋವಾದ ವಿಶಿಷ್ಟ ಮೀನಿನ ಖಾದ್ಯಗಳ ಉತ್ಸವದ ವಿಶೇಷ. ಎಂಟು ಬಗೆಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸ್ಟಾರ್ಟರ್‌ಗಳು ಇವೆ.
 
ಬಾಳೆಹಣ್ಣಿನ ಬಜ್ಜಿ, ಅಡೆ, ಚಿಕನ್‌ ಪೆರಿಪೆರಿ, ಮಟನ್‌ ಸುಕ್ಕಾ, ಫಿಶ್‌ ರವಾ ಫ್ರೈ, ಬಟರ್‌ ಗಾರ್ಲಿಕ್‌ ಪ್ರಾನ್‌, ಪೊಟ್ಯಾಟೊ ಸ್ಕ್ರಿಮೆಂಟೊ, ಕೊಂಕಣಿ ಕಬಾಬ್‌, ಪೊಡಿ ಇಡ್ಲಿ, ಹರ್ಯಾಲಿ ಪಟ್ಟಿ ಸಮೋಸ ಹೀಗೆ ಹತ್ತಾರು ಬಗೆಯ  ಸ್ಟಾರ್ಟರ್‌ಗಳಿವೆ. ಹೆಚ್ಚು ಮಸಾಲೆ ಅಥವಾ ಖಾರ ಇಲ್ಲದ ಕಾರಣ ಮಕ್ಕಳಿಗೂ ಇಷ್ಟವಾಗುತ್ತದೆ.
 
ಸ್ಟಾರ್ಟರ್‌ಗಳನ್ನು ತಿಂದ ನಂತರ  ಊಟ ಮಾಡುವ ಸಾಮರ್ಥ್ಯ ಇದ್ದವರು ಚಿಕನ್‌ ಬಿರಿಯಾನಿ, ವೆಜ್‌ ಬಿರಿಯಾನಿ, ಗೋವಾ ಪೋರ್ಚುಗೀಸ್‌ ಸಲಾಡ್‌, ಮೂರ್ನಾಲ್ಕು ಬಗೆಯ ಸಲಾಡ್‌, ಸ್ಟೀಮ್ಡ್‌ ರೈಸ್‌, ವೆಜ್‌ ಹಕ್ಕಾ ನೂಡಲ್ಸ್‌ ರುಚಿ ನೋಡಬಹುದು.
 
ಗೋವಾ ಶೈಲಿಯ ಮೀನಿನ ಸಾರು, ಮಟನ್‌ ಕರಿ, ಚಿಕನ್‌ ಕರಿ, ಬೇಬಿ ಪೊಟ್ಯಾಟೊ ಕಫ್ರಿಯಲ್‌, ಮೇತಿ ಪನೀರ್‌ ಕೂರ್ಮಾ ಎಲ್ಲವೂ ಇವೆ. ಎಷ್ಟು ಬೇಕೋ ಅಷ್ಟು ಬಡಿಸಿಕೊಳ್ಳಬಹುದು. 
 
ಇಷ್ಟು ತಿಂದ ನಂತರವೂ ನಮಗೆ ಡೆಸರ್ಟ್‌ ತಿನ್ನುವ ಮನಸಿದ್ದರೆ, ಹತ್ತಾರು ಬಗೆಯ ಡೆಸರ್ಟ್‌ಗಳು ಹೊರಬಾಗಿಲ  ಬಳಿ ಕಾಯುತ್ತಿರುತ್ತವೆ.
ಡೊಡೊಲ್‌, ಅಲ್ಲೆಬಲ್ಲೆ, ಚಾಕೊಲೇಟ್‌ ಪೇಸ್ಟ್ರೀ, ಎಳನೀರು ಪಾಯಸಂ, ಅಡೈ ಪ್ರದಾನಂ, ಗುಲಾಬ್‌ ಜಾಮೂನ್‌, ಕಾಕ್‌ಟೇಲ್‌ ಫ್ರುಟ್‌ ಕಸ್ಟರ್ಡ್‌, ಕಟ್ ಫ್ರುಟ್ಸ್‌, ಐಸ್‌ಕ್ರೀಂ ಸವಿಯಬಹುದು. ತಾಜಾ ಸೋಡಾ ಕುಡಿಯಬಹುದು. ‘ಸುಲೈಮನಿ ಚಾಯ್‌’ ಮತ್ತು ‘ಡಿಗ್ರಿ ಕಾಪಿ’ ಕುಡಿದು ಹೊರಡಬಹುದು.
 
ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಆಹಾರ ಉತ್ಸವ ನಡೆಯುತ್ತದೆ ಎಂದು ಹೋಟೆಲ್‌ನ ಮ್ಯಾನೇಜರ್‌ ಶ್ರೀನಿವಾಸ್‌ ಹೇಳುತ್ತಾರೆ.
 
ಕ್ಯಾಟರಿಂಗ್‌ ಕೂಡಾ ಇದೆ
ಬಾನ್‌ ಸೌತ್‌ ಹೋಟೆಲ್‌   ಶಾಖೆ ಇಂದಿರಾನಗರದಲ್ಲಿಯೂ  ಇದೆ. ಎರಡೂ ಕಡೆ ಕ್ಯಾಟರಿಂಗ್‌  ವ್ಯವಸ್ಥೆ ಇದೆ. ದಿನಕ್ಕೆ 7ಸಾವಿರ ಊಟದ ಪೊಟ್ಟಣಗಳನ್ನು ವಿವಿಧ ಕಾರ್ಪೊರೇಟ್‌ ಕಂಪೆನಿಗಳಿಗೆ ಪೂರೈಸಲಾಗುತ್ತಿದೆ.
 
**
ರಸಂ, ಮೊಸರನ್ನ ತಪ್ಪಿಸಲ್ಲ
ಬೆಂಗಳೂರಿನ ಜನ ಏನೇ ಉಂಡರೂ  ಮೊಸರನ್ನ, ರಸಂ ಕೇಳದೇ ಇರುವುದಿಲ್ಲ. ಹಾಗಾಗಿ ನಾವು ಯಾವುದೇ ಉತ್ಸವ ಮಾಡಿದರೂ ರಸಂ ಮತ್ತು ಮೊಸರನ್ನ ತಪ್ಪಿಸಲ್ಲ.  ಪ್ರತಿ ತಿಂಗಳು ಒಂದೊಂದು ರಾಜ್ಯದ ಆಹಾರ ಉತ್ಸವ ಮಾಡುತ್ತಲೇ ಇರುತ್ತೇವೆ.
 
ಆಯಾ ರಾಜ್ಯಗಳ ಖಾದ್ಯದ ಜೊತೆಗೆ  ಇಡ್ಲಿ, ಚಪಾತಿ, ಪರೋಟ, ನಾನ್‌  ಕೂಡಾ ಇರುತ್ತದೆ. ಯಾಕೆಂದರೆ ಇಲ್ಲಿಗೆ ಎಲ್ಲ ಪ್ರದೇಶದ ಜನರೂ ಬರುತ್ತಾರೆ. ಏನೇ ವಿಶೇಷ ಇದ್ದರೂ ಅವರ ಆಹಾರ ಪದ್ಧತಿಯ ತಿನಿಸುಗಳೂ ಇರಬೇಕಾಗುತ್ತದೆ.
– ತ್ಯಾಗು, ಶೆಫ್‌
 
 
**
ರೆಸ್ಟೊರೆಂಟ್‌: ಬಾನ್‌ಸೌತ್‌
ವಿಶೇಷತೆ: ಮೀನಿನ ಖಾದ್ಯ
ಸಮಯ: ಮಧ್ಯಾಹ್ನ 12ರಿಂದ 3.30, 
ರಾತ್ರಿ 7ರಿಂದ 11. 
ದರ: ₹650ರಿಂದ ಆರಂಭ
ಕೊನೆಯ ದಿನ: ನವೆಂಬರ್‌ 30
ವಿಳಾಸ: 1ನೇ ತಿರುವು, ಕೋರಮಂಗಲ 5ನೇ ಬ್ಲಾಕ್‌, ಜ್ಯೋತಿ ನಿವಾಸ್‌ ಕಾಲೇಜು ರಸ್ತೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.