ADVERTISEMENT

ಬೀದಿಲಿ ನಿಂತೊಮ್ಮೆ ತಿನ್ರಿ ಪಾಪಡ್ ಚಾಟ್

ಹರವು ಸ್ಫೂರ್ತಿ
Published 7 ಏಪ್ರಿಲ್ 2017, 14:06 IST
Last Updated 7 ಏಪ್ರಿಲ್ 2017, 14:06 IST
ಬೀದಿಲಿ ನಿಂತೊಮ್ಮೆ ತಿನ್ರಿ ಪಾಪಡ್ ಚಾಟ್
ಬೀದಿಲಿ ನಿಂತೊಮ್ಮೆ ತಿನ್ರಿ ಪಾಪಡ್ ಚಾಟ್   

ದಟ್ಟ ಜನಸಂದಣಿ, ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟುವುದಿರಲಿ, ನಡೆದು ಮುಂದೆ  ಹೋಗಲೂ ಸಾಧ್ಯವಿಲ್ಲದಷ್ಟು ವಾಹನ ಸಂಚಾರ. ಫುಟ್‌ಪಾತ್‌ನಲ್ಲೂ ಓಡಾಡುವ ಬೈಕ್‌ಗಳು, ರಸ್ತೆ ಮಧ್ಯೆ ನುಗ್ಗುವ  ಮಹಿಳೆಯರು. ಇದು ಚಿಕ್ಕಪೇಟೆಯ ದೃಶ್ಯ.

ಗಜಿಬಿಜಿ ರಸ್ತೆಯ ಮೂಲೆಯಲ್ಲೊಂದು ಜಾಗ ಮಾಡಿಕೊಂಡು, ಕಳೆದ 25 ವರ್ಷಗಳಿಂದ ಪಾಪಡ್ ಚಾಟ್‌ ಮಾರುತ್ತಿದ್ದಾರೆ ಗಣಪತ್ ಲಾಲ್ ಮತ್ತು ಅವರ ಮಗ ರತನ್ ಲಾಲ್.

ನಾಲ್ಕು ಚಕ್ರದ ತಳ್ಳೋಗಾಡಿಯ ಮೇಲೆ ಕಬ್ಬಿಣದ ಒಲೆ, ಅದರೊಳಗೆ ಕೆಂಪಾದ ನಿಗಿನಿಗಿ ಕೆಂಡ, ಒಂದು ಬದಿಯಲ್ಲಿ ಪೂರ್ಣಚಂದ್ರನನ್ನು ಹೋಲುವ ಹಪ್ಪಳಗಳ ಜೋಡಣೆ. ಮತ್ತೊಂದು ಬದಿಯಲ್ಲಿ ಸಾಲಾಗಿ ನಿಂತು ನಾಲಿಗೆಯಲ್ಲಿ ನೀರೂರಿಸುವ ಹಸಿಮೆಣಸಿನಕಾಯಿ ಚಟ್ನಿ, ಕೆಂಪು ಖಾರ ಚಟ್ನಿ, ಮಸಾಲೆ ಪುಡಿ, ಮಾವಿನಕಾಯಿ ತುರಿ, ಕ್ಯಾರೆಟ್, ಟೊಮೆಟೊ, ಈರುಳ್ಳಿ ಹೋಳುಗಳು...

ADVERTISEMENT

ಇವನ್ನು ನೋಡುವಾಗಲೇ ಒಂದು ಖಡಕ್ ಮಸಾಲೆ ಹಪ್ಪಳ ತಿನ್ನುವ ಆಸೆ ಚಿಗುರೊಡೆಯುತ್ತದೆ.

ರತನ್ ಒಂದು ಕೈಯಲ್ಲಿ ಬೀಸಣಿಗೆ ಹಿಡಿದು ರಪರಪ ಗಾಳಿ ಬೀಸಿ, ಕೆಂಡದ ಕಾವು ಹೆಚ್ಚಿಸುತ್ತಾ, ಮತ್ತೊಂದು ಕೈಯಲ್ಲಿ ಹಪ್ಪಳವನ್ನು ಕೆಂಡದ ಮೇಲೆ ಇಟ್ಟು ಒಂದೇ ಉಸಿರಿನಲ್ಲಿ ಆ ಬದಿ ಈ ಬದಿ ತಿರುಗಿಸುತ್ತಾ ಹಪ್ಪಳ ಸುಡುತ್ತಾರೆ.

ಮುನಿಸಿಕೊಂಡ ಮುದ್ದು ಹುಡುಗಿಯು ಮುಖ ಊದಿಸಿಕೊಳ್ಳುವಂತೆ ಕ್ಷಣಾರ್ಧದಲ್ಲೇ ಬುರುಬುರು ಊದಿಕೊಂಡ ಅಕ್ಕಿ ಹಪ್ಪಳ ಘಮ ಬೀರುತ್ತಾ ಮಸಾಲೆ ಹಾಕಿಸಿಕೊಳ್ಳಲು ಸಿದ್ಧವಾಗುತ್ತದೆ.

ಕ್ಯಾರೆಟ್‌ನಿಂದ ಅಣಿಗೊಂಡು ಈರುಳ್ಳಿ, ಸೌತೆಕಾಯಿ, ಟೊಮೆಟೊ, ಮಾವಿನಕಾಯಿ ತುರಿ, ಸ್ವಲ್ಪ ಮೊಸರು ಹಾಕಿದ ನಂತರ ರತನ್ ಬೆರಳ ತುದಿ ಮಸಾಲೆಯೆಡೆಗೆ ಸಾಗುತ್ತದೆ. ಚಿಟಕಿ ಚಿಟಕಿಯಾಗಿ ಎಲ್ಲಾ ವಿಧದ ಮಸಾಲೆ ಪುಡಿಗಳನ್ನು ಹರಡುತ್ತಾ ಬಿಳಿ ಹಪ್ಪಳವನ್ನು ಬಣ್ಣಗಳಿಂದ ತುಂಬಿ ಚಿತ್ತಾಕರ್ಷಕ ಮಾಡುತ್ತಾನೆ. ಕೊನೆಯಲ್ಲಿ ಅದರ ಮೇಲೆ ಸೇವ್ ಹರಡಿ ಮಸಾಲ ಹಪ್ಪಳವನ್ನು ಕೈಗಿಡುತ್ತಲೇ ಬಾಯಲ್ಲಿ ನೀರೂತ್ತದೆ.

ಪಾಪಡ್‌ ಚಾಟ್‌ ತಿನ್ನುವುದು ಒಂದು ಕಲೆ ಎನ್ನುತ್ತಾರೆ ರತನ್.

‘ಈ ಪಾಪಡ್ ತಿನ್ನೋಕೆ ಒಂದು ಟಿಕ್ನಿಕ್‌ ಐತೆ. ಬೇರೆ ಚಾಟ್‌ಗಳನ್ನು ತಿನ್ನುವಂತೆ ಒಟ್ರಾಸೆ ಮಾಡಿ ತಿನ್ನಬಾರದು. ಪ್ರತಿ ತುಂಡನ್ನು ಜೋಪಾನವಾಗಿ ಎತ್ತಿ ಬಾಯಿಗಿಡಬೇಕು. ಮೇಲೆ ಹರಡಿರುವ ಮಸಾಲೆ ಆಚೆಈಚೆ ಆಗಬಾರದು. ಸಮ ಪ್ರಮಾಣದಲ್ಲಿ ಹರಡಿರುವ ಎಲ್ಲಾ ಪದಾರ್ಥಗಳು ಪ್ರತಿ ತುಂಡಿಗೂ ಜೊತೆಯಾಗಿ ಬಾಯೊಳಗೆ ಇಳಿಯಬೇಕು’ ಎನ್ನುವುದು ರತನ್ ಜುಲುಮೆ.

ರಾಜಸ್ತಾನ ಮೂಲದ ರತನ್ ಅವರ ತಂದೆ ಗಣಪತ್ ಲಾಲ್ 60 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಕಚೋರಿ, ಸಮೋಸ ಇತರೆ ಚಾಟ್ಸ್‌ಗಳನ್ನು ಮಾಡುತ್ತಿದ್ದರು. ಮಸಾಲೆ ಹಪ್ಪಳಕ್ಕೆ ಬೇಡಿಕೆ ಹೆಚ್ಚಾದ ಕಾರಣ ಬೇರೆಲ್ಲಾ ಚಾಟ್ಸ್‌ ತಯಾರಿಕೆ ನಿಲ್ಲಿಸಿ ಈಗ ಪಾಪಡ್ ಚಾಟ್‌ ಮಾತ್ರ ಮಾಡುತ್ತಿದ್ದಾರೆ.

ಸಣ್ಣ ವಯಸ್ಸಿನಿಂದ ಅಪ್ಪನೊಂದಿಗೆ ಅಂಗಡಿಗೆ ಬರುತ್ತಿದ್ದ ರತನ್ ಹತ್ತನೇ ತರಗತಿ ಶಿಕ್ಷಣ ಮುಗಿಸಿ ಕಳೆದ 3 ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಮಸಾಲೆ ಹಪ್ಪಳ ಮಾಡುತ್ತಿದ್ದಾರೆ.

ದಿನಕ್ಕೆ ಏನಿಲ್ಲವೆಂದರೂ ನೂರರಿಂದ  150 ಹಪ್ಪಳ ಮಾರಾಟವಾಗುತ್ತದೆ. ಚಳಿಗಾಲದಲ್ಲಿ, ಹಬ್ಬವಿರುವ ತಿಂಗಳಲ್ಲಿ 200 ಹಪ್ಪಳ ಮಾರಾಟವಾಗುತ್ತದೆ. ಒಂದು ಮಸಾಲಾ ಹಪ್ಪಳಕ್ಕೆ ₹20. ದೀಪಾವಳಿ, ಹೋಳಿ ಈ ಎರಡು ದಿನ ಬಿಟ್ಟರೆ ಉಳಿದೆಲ್ಲಾ ದಿನಗಳು ಚಿಕ್ಕಪೇಟೆ ಸರ್ಕಲ್‌ನಲ್ಲೇ ಬೆಳಿಗ್ಗೆ 12ರಿಂದ ರಾತ್ರಿ 9ರ ವರೆಗೆ ಇವರ ಗಾಡಿ ಇರುತ್ತದೆ.

ಮನೆಯಲ್ಲೇ ಹಪ್ಪಳ ತಯಾರಿಕೆ
ಪಾಪಡ್‌ ಚಾಟ್‌ಗೆ ಬಳಸುವ ಹಪ್ಪಳವನ್ನು ಮನೆಯಲ್ಲೇ ತಯಾರಿಸುತ್ತಾರೆ ರತನ್. ರಾಜಸ್ತಾನ ಶೈಲಿಯಲ್ಲಿ ಅಕ್ಕಿ, ಗೋಧಿ, ಮೈದಾಹಿಟ್ಟನ್ನು ಸಮ ಪ್ರಮಾಣದಲ್ಲಿ  ಬೆರೆಸಿ, ಉಪ್ಪು, ಅಕ್ಕಿ ಗಂಜಿ, ವಿವಿಧ ಮಸಾಲೆಗಳನ್ನೂ ಸೇರಿಸಿ ಮಿಶ್ರಣ ಮಾಡುತ್ತಾರೆ. ನಂತರ ಈ ಹಿಟ್ಟನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ.

ಬೆಂದ ಹಿಟ್ಟಿನಿಂದ ಹಪ್ಪಳ ಮಾಡಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಾಗುವ ಈ ಹಪ್ಪಳದ ರುಚಿ ಹಲವು ವರ್ಷಗಳಿಂದ ಬದಲಾಗಿಲ್ಲ.

ಪಾರ್ಟಿ, ಮದುವೆ, ಇತರೆ ಕಾರ್ಯಕ್ರಮಗಳಿಗೂ ಪಾಪಡ್ ಚಾಟ್ ಮಾಡಿಕೊಡುತ್ತಾರೆ.
ರತನ್ ಸಂಪರ್ಕ ಸಂಖ್ಯೆ: 7204314066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.