ADVERTISEMENT

ಮಾವಿನ ಮೆನು

ಮಂಜುನಾಥ ರಾಠೋಡ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಪನೀರ್ ಆಮ್‌ ಟಿಕ್ಕಾ
ಪನೀರ್ ಆಮ್‌ ಟಿಕ್ಕಾ   

ಅಲ್ಲಿ ಪ್ರತಿ ಖಾದ್ಯದಲ್ಲೂ ಮಾವಿನದ್ದೇ ಸ್ವಾದ, ಪ್ರತಿ ತಿನಿಸಿನಲ್ಲೂ ಮಾವಿನ ಭಿನ್ನ ರುಚಿ. ಸಾಂಪ್ರದಾಯಿಕ ಶೈಲಿಯ ಮಾವಿನ ತಿನಿಸುಗಳ ರೆಸಿಪಿಗಳಿಗೆ ಹೊಸತನದ ಸ್ಪರ್ಶ ನೀಡಿದ್ದರು ಶೆಫ್‌ಗಳು.

ಐಟಿಸಿ ಸಮೂಹದ ಮೈ ಫಾರ್ಚೂನ್ ರೆಸ್ಟೊರೆಂಟ್‌ನಲ್ಲಿ ಆಯೋಜಿಸಲಾಗಿರುವ ಮಾವು ಆಹಾರ ಉತ್ಸವದಲ್ಲಿ ಎಲ್ಲ ತಿನಿಸುಗಳೂ ಮಾವುಮಯ!

ಮಾವಿನ ಆಹಾರ ಉತ್ಸವಕ್ಕೆಂದೇ ಐಟಿಸಿ ಬಾಣಸಿಗರು ವಿಶೇಷ ಮೆನು ತಯಾರಿಸಿ ಮಾವುಪ್ರಿಯರ ಜಿಹ್ವಾ ಚಾಪಲ್ಯ ತಣಿಸುತ್ತಿದ್ದಾರೆ.

ADVERTISEMENT

ಮೊದಲಿಗೆ ಸ್ವಾಗತ ಪಾನೀಯ (ವೆಲ್‌ಕಂ ಡ್ರಿಂಕ್‌)  ಮಾವಿನ ಹುಳಿ, ಜೀರಿಗೆ ಬೆರೆತಿದ್ದ  ಹುಳಿ ಒಗರು ಸವಿ ನೀಡುತ್ತಿದ್ದ  ‘ಆಮ್‌ ಕ ಪನ್ನಾ’ ಮುಂದೆ ಬರಲಿರುವ ಸಾಲು ಸಾಲು ಮಾವಿನ ತಿನಿಸುಗಳಿಗೆ ಅತಿಥಿಗಳನ್ನು ಸಜ್ಜುಗೊಳಿಸುತ್ತದೆ.

(ಮ್ಯಾಂಗೊ ಸ್ಕ್ವೇರ್)

ನಂತರದ ಸರದಿ ಸ್ಟಾರ್ಟರ್‌ನದ್ದು, ಸೌತೆಕಾಯಿಯನ್ನು ಉದ್ದಕ್ಕೆ ತೆಳುವಾಗಿ ಹೆಚ್ಚಿ ಅದರ ಮೇಲೆ ಗ್ರಿಲ್‌ ಮಾಡಿದ ಪನೀರ್‌, ಮಾವಿನ ಹೋಳು, ಹಪ್ಪಳದ ತುಣುಕುಗಳನ್ನು ಜೋಡಿಸಿ ಮೇಲೆ ಪುದೀನ ಎಲೆಯಿಂದ ಅಲಂಕಾರ ಮಾಡಿದ್ದ ಪನೀರ್ ಆಮ್‌ ಟಿಕ್ಕಾ ನೋಡಲು ಅಂದವಾಗಿತ್ತು. ಅದು ಪನೀರ್‌ ರುಚಿಯೊಂದಿಗೆ ಹದವಾದ ಮಾವಿನ ರುಚಿ ಬೆಸೆದುಕೊಂಡಿರುವುದು ನಾಲಗೆಯ ಅನುಭವಕ್ಕೆ ಬಂತು.

ಮಾಂಸಾಹಾರಿಗಳಿಗೆ ಪನೀರ್ ಬದಲಿಗೆ ಸಿಗಡಿ–ಚಿಕನ್ ಆಮ್‌ ಟಿಕ್ಕಾ ನೀಡುತ್ತಾರೆ. ನಂತರದ ಸರದಿ  ಮ್ಯಾಂಗೊ ಸ್ಕ್ವೇರ್‌ನದ್ದು. ಮಸಾಲೆ ಮೆತ್ತಿ ಹದವಾಗಿ ಗ್ರಿಲ್ ಮಾಡಿದ ಮಾವು, ಪೈನಾಪಲ್, ಬ್ರೊಕೊಲಿಗಳನ್ನು ಚುಚ್ಚಿ, ಈರುಳ್ಳಿ, ಕ್ಯಾರೆಟ್‌ಗಳೊಂದಿಗೆ ಕೊಟ್ಟ ಮ್ಯಾಂಗೊ ಸ್ಕ್ವೇರ್ ಖಾರ ಮತ್ತು ಹುಳಿಯ ಭಿನ್ನ ಕಾಂಬಿನೇಷನ್‌.

ಮಾಂಸಾಹಾರಿಗಳಿಗೆ ಮಾವು, ಫ್ರೈ ಮಾಡಿದ ಸಿಗಡಿ ನೀಡಲಾಗುತ್ತದೆ. ತಟ್ಟೆ ಅಳತೆಯ ಕಡಪ ಕಲ್ಲಿನ ಮೇಲೆ ಸರ್ವ್ ಮಾಡುವ ಸ್ಟಫ್ಡ್‌ ಕಾಟೇಜ್‌ ಚೀಸ್‌ ಪಕ್ಕಾ ಕಾಂಟಿನೆಂಟಲ್ ಖಾದ್ಯ. ಭಾರತೀಯ ಆಹಾರದ ರುಚಿಗೆ ಒಗ್ಗಿದ ನಾಲಗೆಗೆ ಇದರ ರುಚಿ ಅಪರಿಚಿತವೆನಿಸುತ್ತದೆ, ಆದರೆ ಅದರಲ್ಲೂ ಸಿಗುವ ಮಾವಿನ ಸ್ವಾದ ಹಿತ ನೀಡುತ್ತದೆ. ಮಾಂಸಾಹಾರಿಗಳಿಗೆ ಇದೇ ಮಾದರಿಯಲ್ಲಿ ಸ್ಟಫ್ಡ್‌ ಮ್ಯಾಂಗೊ ಚಿಕನ್ ಸರ್ವ್ ಮಾಡುತ್ತಾರೆ.

ಸ್ಟಾರ್ಟರ್‌ಗಳಿಂದಲೇ ಹೊಟ್ಟೆ ಅರ್ಧ ತುಂಬಿ ಹೋಗುತ್ತದೆ. ನಂತರ ನಾಲಗೆಯ ಚಿತ್ತ ಮೇನ್‌ ಕೋರ್ಸ್‌ನತ್ತ ಹರಿಯುತ್ತದೆ.

(ಸ್ಟಫ್ಡ್‌ ಮ್ಯಾಂಗೊ ಚಿಕನ್)

ಮೇನ್‌ ಕೋರ್ಸ್‌ನ ಘಮಘಮಿಸುವ ಗೀರೈಸ್ ಮತ್ತು ಮಾವಿನ ಗ್ರೇವಿ ದೂರದಿಂದಲೇ ಮೂಗಿನ ಹೊಳ್ಳೆ ಉಬ್ಬುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಹಬೆಯಾಡುವ ಗೀರೈಸ್‌ ಬರಿಯಾಗೆ ತಿಂದರೂ ರುಚಿ ಎನಿಸುತ್ತದೆ. ಮಾವಿನ ಕಾಯಿ, ಗೋಬಿ, ಹುರುಳಿ ಹಾಕಿ ಮಾಡಿದ ಕುರ್ಮಾ ಬೆರತ ಮೇಲೆ ಗೀ ರೈಸ್‌ ತನ್ನ ರುಚಿ ಹೆಚ್ಚಸಿಕೊಂಡು ಬೆರಳು ಚೀಪಿಕೊಂಡು ತಿನ್ನುವಂತೆ ಮಾಡುತ್ತದೆ.

ಊಟದ ನಂತರ ಡೆಸರ್ಟ್ಸ್‌ನ ಸರದಿ. ಫಿಲಿಡೆಲ್ಫಿಯಾದಿಂದ ತರಿಸಿದ ವಿಶೇಷ ಚೀಸ್ ಮತ್ತು ಚಾಕೊಲೇಟ್‌ ಫ್ಲೇವರ್‌ನ ಬಿಸ್ಕೆಟ್‌ ಮತ್ತು ರಸಪುರಿ ಮಾವಿನ ಹಣ್ಣಿನ ಪದರ ಹಾಕಿದ ಚೀಸ್‌ ಕೇಕ್‌ ರುಚಿ ಎನಿಸುತ್ತದೆ.

ಕೊನೆಯಲ್ಲಿ ನೀಡುವ ಮ್ಯಾಂಗೊ ರಸಮಲಾಯ್‌ ಸೇವಿಸಿದರೆ ನಮ್ಮನ್ನು ಆಹಾರ ಉತ್ಸವದ  ಖಾದ್ಯಗಳ ಕೊನೆಯ ಭಾಗಕ್ಕೆ ತಂದು ನಿಲ್ಲಿಸುತ್ತದೆ. ಮೃದುವಾದ ರಸಮಲಾಯ್‌ ಜೊತೆ ಅಲ್ಲಿಲ್ಲ ಸಿಗುವ ಮಾವಿನ ಹಣ್ಣಿನ ತುಣುಕುಗಳು ರಸಮಲಾಯ್‌ ರುಚಿಯನ್ನು ಇಮ್ಮಡಿಗೊಳಿಸುತ್ತವೆ.

**

ಮಾವು, ಖಾದ್ಯಗಳಿಗೆ ಸುಲಭವಾಗಿ ಒಗ್ಗುತ್ತದೆ. ಸಂಪ್ರದಾಯಿಕ ಶೈಲಿಯ ರೆಸಿಪಿಗಳನ್ನು ಅಭಿವೃದ್ಧಿಪಡಿಸಿ ಮಾವು ಆಹಾರ ಉತ್ಸವದಲ್ಲಿ ಬಡಿಸಲಾಗುತ್ತಿದೆ

–ಸಚಿನ್ ತಲ್ವಾರ್ 
ಮುಖ್ಯ ಶೆಫ್‌, ಮೈ ಫಾರ್ಚೂನ್‌ ರೆಸ್ಟೊರೆಂಟ್

**

ರೆಸ್ಟೊರೆಂಟ್‌: ಐಟಿಸಿ ಮೈ ಫಾರ್ಚೂನ್
ವಿಶೇಷ: ಮಾವಿನ ಆಹಾರ ಉತ್ಸವ
ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11
ಕೊನೆಯ ದಿನ: ಜುಲೈ 31

ಇಬ್ಬರಿಗೆ: ₹1500

ಸ್ಥಳ: 46, ರಿಚ್ಮಂಡ್‌ ರಸ್ತೆ, ಹಾಸ್‌ಮಾಟ್ ಆಸ್ಪತ್ರೆ ಪಕ್ಕ
ಮಾಹಿತಿಗೆ: 080–2500 1700, 97418 70506

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.