ADVERTISEMENT

ರುಚಿಮೊಗ್ಗು ಅರಳಿಸುವ ವಿಧವಿಧ ತಂಬುಳಿ...

ನಳಪಾಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2016, 19:30 IST
Last Updated 25 ನವೆಂಬರ್ 2016, 19:30 IST
ಮೆಂತ್ಯ ಸೊಪ್ಪಿನ ತಂಬುಳಿ
ಮೆಂತ್ಯ ಸೊಪ್ಪಿನ ತಂಬುಳಿ   

ಮೆಂತ್ಯ ಸೊಪ್ಪಿನ ತಂಬುಳಿ
ಬೇಕಾಗುವ ಪದಾರ್ಥಗಳು:

* ಒಂದು ಲೋಟ ಮಜ್ಜಿಗೆ,
* ಒಂದು ದೊಡ್ಡ ಹಸಿಮೆಣಸು,
* ಒಂದು ಕಟ್ಟು ಮೆಂತೆ ಸೊಪ್ಪು,
* ಒಂದು ಕಾಯಿ ಹೋಳು,
* ಎರಡು ಚಮಚ ತುಪ್ಪ,
* ರುಚಿಗೆ ಉಪ್ಪು
ತಯಾರಿಸುವ ಬಗೆ: ಮೆಂತ್ಯದ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ( ತುಪ್ಪ ಇದ್ದರೆ ರುಚಿ ಹೆಚ್ಚು) ಕಾಯಿಸಿ. ಅದಕ್ಕೆ ಮೆಂತ್ಯದ ಸೊಪ್ಪನ್ನು ಹಾಕಿ ಹುರಿಯಿರಿ. ಅದು ಬಾಡಿದ ಮೇಲೆ ಅದಕ್ಕೆ ಕಾಯಿತುರಿ, ಮೆಣಸಿನ ಕಾಯಿ ಸೇರಿಸಿ ರುಬ್ಬಿ. ಅದಕ್ಕೆ ಮಜ್ಜಿಗೆ ಮಿಶ್ರ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಬಸಳೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ:

* ಹದಿನೈದರಿಂದ ಇಪ್ಪತ್ತು ಬಸಳೆ ಎಲೆಗಳು  * ಒಂದು ಹೋಳು ಕಾಯಿ
* ಒಂದು ಹಸಿಮೆಣಸಿನಕಾಯಿ   * ಒಂದು ಚಮಚ ತುಪ್ಪ
* ಒಂದು ಲೋಟ ಮೊಸರು   * ಸ್ವಲ್ಪ ಜೀರಿಗೆ
ತಯಾರಿಸುವ ವಿಧಾನ : ಬಾಣಲೆಯಲ್ಲಿ ತುಪ್ಪ ಹಾಕಿ ಜೀರಿಗೆಯೊಂದಿಗೆ ಕಾಯಿಸಿ. ಎರಡು ನಿಮಿಷದ ನಂತರ ಹೆಚ್ಚಿದ ಸೊಪ್ಪನ್ನು ಅದಕ್ಕೆ ಹಾಕಿ. ಸ್ವಲ್ಪ ಹೊತ್ತು ಬಾಡಿಸಿ. ಅದನ್ನು ಕಾಯಿತುರಿಯೊಂದಿಗೆ ಮೆಣಸಿನ ಕಾಯಿ ಹಾಕಿ ರುಬ್ಬಬೇಕು. ಆನಂತರ ಮೊಸರಿನೊಂದಿಗೆ ಉಪ್ಪು ಹಾಕಿದರೆ ತಂಬುಳಿ ಸಿದ್ಧ.

ಕಿತ್ತಳೆ ಸಿಪ್ಪೆ  ತಂಬುಳಿ
ಬೇಕಾಗುವ ಸಾಮಗ್ರಿ: ಒಣಗಿಸಿದ ಕಿತ್ತಳೆ ಸಿಪ್ಪೆ, ಮಜ್ಜಿಗೆ ಎರಡು ಲೋಟ, ತೆಂಗಿನ ತುರಿ ಕಾಲು ಲೋಟ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಒಣಗಿದ ಕಿತ್ತಳೆ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಬೇಕು. ಇದನ್ನು ತೆಂಗಿನ ತುರಿಯೊಂದಿಗೆ ರುಬ್ಬಬೇಕು. ಅನಂತರ ಮಜ್ಜಿಗೆಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ತುಪ್ಪದ ಒಗ್ಗರಣೆ ಹಾಕಬೇಕು.

ADVERTISEMENT

ನೆಲನೆಲ್ಲಿ ತಂಬುಳಿ
ಬೇಕಿರುವ ಪದಾರ್ಥಗಳು:

* ಒಂದು ಹಿಡಿ ನೆಲನೆಲ್ಲಿ ಸೊಪ್ಪು    * ಕಾಲು ಚಮಚ ಬಿಳಿಯ ಎಳ್ಳು
* ಕಾಲು ಚಮಚ ಜೀರಿಗೆ             * 2 ಕಾಳು ಕರಿಮೆಣಸಿನ ಕಾಳು
* ಇಂಗು - ಚಿಟಿಕೆಯಷ್ಟು              * ಕಾಯಿತುರಿ - ಕಾಲು ಭಾಗ
* ಉಪ್ಪು - ರುಚಿಗೆ ತಕ್ಕಷ್ಟು            * ತುಪ್ಪ - 2 ಚಮಚ
* ಕಡೆದ ಮಜ್ಜಿಗೆ - ಒಂದು ಲೋಟ
* ಬೆಲ್ಲ - ರುಚಿಗೆ ತಕ್ಕಷ್ಟು (ಸಿಹಿ ಆಗದವರು ಬೆಲ್ಲವನ್ನು ಹಾಕದೆಯೂ ಮಾಡಬಹುದು)

ಮಾಡುವ ವಿಧಾನ: ನೆಲನೆಲ್ಲಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ. ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಜೀರಿಗೆ, ಎಳ್ಳು, ಕರಿಮೆಣಸಿನ ಕಾಳು ಹಾಗೂ ಇಂಗನ್ನು ಹಾಕಿ ಹುರಿಯಬೇಕು. ಹಾಕಿದ ಪದಾರ್ಥ ಚಟಪಟ ಎಂದಾಕ್ಷಣ ಇದಕ್ಕ ನೆಲನೆಲ್ಲಿ ಸೊಪ್ಪು ಹಾಕಿ ಬಾಡಿಸಿ (ಹುರಿಯಿರಿ).
ಈ ಪದಾರ್ಥವನ್ನು ತಣ್ಣಗೆ ಮಾಡಿ ನಂತರ ನಂತರ ಕಾಯಿತುರಿಯೊಂದಿಗೆ ಮಿಕ್ಸಿಯಲ್ಲಿ ಹಾಕಿ. ನಂತರ ಅದನ್ನು ಸೋಸಿ ರಸವನ್ನು ಹಿಂಡಬೇಕು. ಸೋಸಿದ ರಸಕ್ಕೆ ಕಡೆದ ಮಜ್ಜಿಗೆ, ಉಪ್ಪು ಹಾಗೂ ಬೆಲ್ಲವನ್ನು ಹಾಕಿದರೆ ಸವಿಯಲು ಸಿದ್ಧ.

ಅಮೃತಬಳ್ಳಿ ತಂಬುಳಿ
ಬೇಕಿರುವ ಪದಾರ್ಥಗಳು

* 10 - ಅಮೃತಬಳ್ಳಿ ಎಲೆ
* ಕಾಲು ಕಪ್‌ ತೆಂಗಿನ ತುರಿ 
* 5 ಕಾಳುಮೆಣಸು 
* ಅರ್ಧ ಚಮಚ ಜೀರಿಗೆ
* 1 ಲೋಟ ಮಜ್ಜಿಗೆ
* ಸಣ್ಣ ಬೆಲ್ಲದ ಚೂರು
* ರುಚಿಗೆ ಉಪ್ಪು
* 1 ಚಮಚ ಎಣ್ಣೆ
ತಯಾರಿಸುವ ಬಗೆ: ಅಮೃತಬಳ್ಳಿ ಎಲೆ, ಜೀರಿಗೆ, ಮೆಣಸಿನ ಕಾಳು , ಎಣ್ಣೆ ಎಲ್ಲವನ್ನೂ ಮಿಶ್ರಣ ಮಾಡಿಕೊಂಡು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ .
ಅದು ಆರಿದ ಮೇಲೆ ಅದಕ್ಕೆ ಬೆಲ್ಲ, ಹುರಿದಿಟ್ಟಿರುವ  ಎಲೆ ಇತ್ಯಾದಿ , ತೆಂಗಿನ ತುರಿ ಇವುಗಳನ್ನು ಮಜ್ಜಿಗೆಯಲ್ಲಿ ರುಬ್ಬಿ. ಉಪ್ಪು ಸೇರಿಸಿದರೆ ಆರೋಗ್ಯಕರ ತಂಬುಳಿ ಸಿದ್ಧ.

ದಾಳಿಂಬೆ ಸಿಪ್ಪೆ ತಂಬುಳಿ
ಬೇಕಾಗುವ ಸಾಮಗ್ರಿ:
ಒಣಗಿಸಿದ ದಾಳಿಂಬೆ ಸಿಪ್ಪೆ, ಮಜ್ಜಿಗೆ ಎರಡು ಲೋಟ,ತೆಂಗಿನ ತುರಿ ಕಾಲು ಲೋಟ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ದಾಳಿಂಬೆ ಸಿಪ್ಪೆಯನ್ನು ಒಣಗಿಸಿ. ಇದನ್ನು ತುಪ್ಪದಲ್ಲಿ ಹುರಿಯಿರಿ. ನೆನಪಿರಲಿ. ಹೆಚ್ಚಿಗೆ ಸಿಪ್ಪೆ ಹಾಕುವುದು ಬೇಡ. ಹುರಿದ ಸಿಪ್ಪೆಯನ್ನು ತೆಂಗಿನ ತುರಿಯೊಂದಿಗೆ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ತುಪ್ಪದ ಒಗ್ಗರಣೆ ಕೊಡಬೇಕು.

ನೆಲ್ಲಿಕಾಯಿ ತಂಬುಳಿ
ಬೇಕಾಗುವ ಪದಾರ್ಥಗಳು:

* ನೆಲ್ಲಿಕಾಯಿ ಹತ್ತು  * ಮಜ್ಜಿಗೆ ಎರಡು ಲೋಟ
* ತೆಂಗಿನ ತುರಿ ಕಾಲು ಲೋಟ * ಜೀರಿಗೆ, ಉಪ್ಪು, ಹಸಿಮೆಣಸು
ತಯಾರಿಸುವ ವಿಧಾನ: ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ. ಬೀಜರಹಿತ ನೆಲ್ಲಿಕಾಯಿ, ತೆಂಗಿನತುರಿ, ಹಸಿಮೆಣಸು, ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ. ಇದಕ್ಕೆ ಮಜ್ಜಿಗೆ ಉಪ್ಪು ಸೇರಿಸಿ ಕಲಕಿಸಿದರೆ ನೆಲ್ಲಿಕಾಯಿ ತಂಬುಳಿ ರೆಡಿ.

ದೊಡ್ಡ ಪತ್ರೆ  ತಂಬುಳಿ
ಬೇಕಾಗುವ ಸಾಮಾನು

* ದೊಡ್ಡಪತ್ರೆ - ಅರ್ಧ ಕಪ್
* ಜೀರಿಗೆ - 1 ಚಮಚ
* ಬೆಲ್ಲ - ಅರ್ಧ ಚಮಚ
* ತೆಂಗಿನ ತುರಿ - ಅರ್ಧ ಕಪ್
* ಮಜ್ಜಿಗೆ - 1 ಕಪ್
* ಉಪ್ಪು ರುಚಿಗೆ
* ಎಣ್ಣೆ 1 ಚಮಚ
ಮಾಡುವ ವಿಧಾನ: ದೊಡ್ಡ ಪತ್ರೆ ಮತ್ತು ಜೀರಿಗೆಯನ್ನು  ಎಣ್ಣೆಯಲ್ಲಿ ಹುರಿದು ತೆಂಗಿನ ತುರಿ , ಮಜ್ಜಿಗೆಯಲ್ಲಿ  ರುಬ್ಬಿ. ಮತ್ತೆ ಬೇಕಾದ್ರೆ ಮಜ್ಜಿಗೆ ಇನ್ನಷ್ಟು ಸೇರಿಸಿ. ಉಪ್ಪು, ಬೆಲ್ಲ ಹಾಕಿದರೆ ಮುಗಿಯಿತು, ತಂಬುಳಿ ಸಿದ್ಧ.

ಮೆಂತ್ಯಕಾಳಿನ ತಂಬುಳಿ
ಬೇಕಾಗುವ ಸಾಮಗ್ರಿ:

* ಮೆಂತ್ಯದ ಕಾಳು ಅರ್ಧ ಚಮಚ  * ಮಜ್ಜಿಗೆ ಎರಡು ಲೋಟ
* ತೆಂಗಿನ ತುರಿ ಅರ್ಧ ಲೋಟ  * ಉಪ್ಪು ರುಚಿಗೆ
* ಬೆಲ್ಲ ಸ್ವಲ್ಪ    * ಎಣ್ಣೆ ಒಂದು ಚಮಚ
* ಒಗ್ಗರಣೆಗೆ ಬೇವಿನ ಎಲೆ  * ಜೀರಿಗೆ ಅರ್ಧ ಚಮಚ
* ಸಾಸಿವೆ ಅರ್ಧ ಚಮಚ   * ಒಂದು ಕೆಂಪುಮೆಣಸು
ತಯಾರಿಸುವ ವಿಧಾನ: ಮೆಂತ್ಯವನ್ನು ಹುರಿದುಕೊಂಡು ತೆಂಗಿನಕಾಯಿ ಜೊತೆ ಮಿಕ್ಸಿಯಲ್ಲಿ ಹಾಕಿ. ಈ ಮಿಶ್ರಣಕ್ಕೆ ಮಜ್ಜಿಗೆ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಸ್ವಲ್ಪ  ಬೆಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ. ಒಗ್ಗರಣೆ ಬಿಸಿ ಮಾಡಿ ಹಾಕಿ. ಇದಕ್ಕೆ ಕಾಲು ಚಮಚ ಜೀರಿಗೆ, ಕಾಲು ಚಮಚ ಕಾಳು ಮೆಣಸನ್ನು ಕೂಡಾ ಮೆಂತೆ ಜೊತೆ ಹುರಿದು ಒಟ್ಟಿಗೆ ರುಬ್ಬಬಹುದು.

ಶುಂಠಿ ತಂಬುಳಿ
ಬೇಕಾಗುವ ಸಾಮಗ್ರಿ:

* ಶುಂಠಿ ಒಂದು ಇಂಚು   * ಜೀರಿಗೆ ಒಂದು ಚಮಚ, ಹಸಿಮೆಣಸು ಒಂದು
* ಮಜ್ಜಿಗೆ ಎರಡು ಲೋಟ   * ತೆಂಗಿನ ತುರಿ ಕಾಲು ಲೋಟ
* ಉಪ್ಪು ರುಚಿಗೆ   * ಎಣ್ಣೆ ಒಂದು ಚಮಚ
* ಬೇವಿನ ಎಲೆ    * ಜೀರಿಗೆ ಅರ್ಧ ಚಮಚ
* ಸಾಸಿವೆ ಅರ್ಧ ಚಮಚ   * ಕೆಂಪು ಮೆಣಸು, ಇಂಗು ಚಿಟಿಕೆ.

ತಯಾರಿಸುವ ವಿಧಾನ: ಶುಂಠಿ, ಜೀರಿಗೆ, ಹಸಿಮೆಣಸು, ತೆಂಗಿನ ತುರಿ ಇವುಗಳನ್ನು ನುಣ್ಣಗೆ ರುಬ್ಬಿ ಈ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು, ಹಾಕಿ ಕಲಸಿ. ಒಂದು ಪಾತ್ರೆಯಲ್ಲಿ ಒಗ್ಗರಣೆಯನ್ನು ಚಟಪಟಿಸಿ ಹಾಕಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.