ADVERTISEMENT

ಹಪ್ಪಳ, ಫೇಣಿ ಮಾಡಿ ನೋಡಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಹಪ್ಪಳ, ಫೇಣಿ ಮಾಡಿ ನೋಡಿ
ಹಪ್ಪಳ, ಫೇಣಿ ಮಾಡಿ ನೋಡಿ   
ಬೇಸಿಗೆಯಲ್ಲಿ ಗೃಹಿಣಿಯರಿಗೆ ಹಪ್ಪಳ ಮಾಡಿ ಶೇಖರಿಸಿಟ್ಟುಕೊಳ್ಳುವ ಅಭ್ಯಾಸ. ಹಪ್ಪಳ, ಸಂಡಿಗೆ ಇದ್ದರೆ ಊಟದ ರುಚಿಯೂ ಹೆಚ್ಚುತ್ತದೆ. ಹಲವು ಬಗೆಯ ಹಪ್ಪಳ, ಫೇಣಿ ಮಾಡುವ ವಿಧಾನ ಇಲ್ಲಿದೆ.

ಅಕ್ಕಿ ಹಪ್ಪಳ
ಬೇಕಾಗುವ ಸಾಮಗ್ರಿಗಳು: ಅರ್ಧ ಕೆ.ಜಿ. ದೋಸೆ ಅಕ್ಕಿ, ರುಬ್ಬಿದ ಹಸಿಮೆಣಸಿನಕಾಯಿ, ಉಪ್ಪು.
 
ಮಾಡುವ ವಿಧಾನ: ಅಕ್ಕಿಯನ್ನು ಒಂದು ದಿನ ನೆನೆಯಲು ಇಡಿ, ಮರುದಿನ ಇದಕ್ಕೆ ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ರುಬ್ಬಿ ಮುದ್ದೆ ಮಾಡಿಕೊಳ್ಳಿ. ನಂತರ ದಪ್ಪ ದಪ್ಪ ಉಂಡೆ ಮಾಡಿ ಇನ್ನೊಮ್ಮೆ ಕುಕ್ಕರಿನಲ್ಲಿ ಇಡ್ಲಿಯಂತೆ ಹತ್ತು ನಿಮಿಷ ಬೇಯಿಸಿ ತೆಗೆದು ಚೆನ್ನಾಗಿ ನಾದಿ, ಉಂಡೆಮಾಡಿ ಹಪ್ಪಳಗಳನ್ನು ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಿ. ಈ ಹಿಟ್ಟಿಗೆ ಈರುಳ್ಳಿ ರಸ, ಟೊಮೆಟೊ ರಸ ಸೇರಿಸಿ ಬೇರೆ ಬೇರೆ ಪರಿಮಳದ ಹಪ್ಪಳಗಳನ್ನು ಸಹ ಮಾಡಬಹುದು.
 
 
ಮೆಣಸಿನಕಾಯಿ ಬಾಳಕ
ಬೇಕಾಗುವ ಸಾಮಗ್ರಿಗಳು:
ಹಸಿ ಮೆಣಸಿನಕಾಯಿ, ಜೀರಿಗೆ, ಇಂಗು, ಉಪ್ಪು.

ಮಾಡುವ ವಿಧಾನ: ಉಪ್ಪು, ಜೀರಿಗೆ, ಇಂಗು ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ,  ಹಸಿಮೆಣಸಿನಕಾಯಿಯ ಹೊಟ್ಟೆ ಸೀಳಿ ಅದರೊಳಗೆ ಪುಡಿಯನ್ನು ತುಂಬಿ ಒಣಗಿಸಿ ಅಥವಾ ಹುಳಿ ಮಜ್ಜಿಗೆಗೆ ಉಪ್ಪು, ಇಂಗು ಜೀರಿಗೆ ಪುಡಿ ಸೇರಿಸಿ ಸೀಳಿದ ಮೆಣಸಿನಕಾಯಿಯನ್ನು ಹಾಕಿ ಎರಡು ದಿನ ನೆನೆಸಿಟ್ಟ ನಂತರ ಒಣಗಿಸಿ.
 
 
ಅರಳಿನ ಸಂಡಿಗೆ
ಬೇಕಾಗುವ ಸಾಮಗ್ರಿಗಳು:
ಐದು ಲೀಟರ್ ಭತ್ತದ ಅರಳು, ಸಣ್ಣಗೆ ತುಂಡು ಮಾಡಿದ ಬೂದುಕುಂಬಳಕಾಯಿ, ಅರ್ಧ ಬಟ್ಟಲು ರುಬ್ಬಿದ ಹಸಿಮೆಣಸಿನಕಾಯಿ, ಒಂದು ಬಟ್ಟಲು ಸೀಮೆಅಕ್ಕಿ ಗಂಜಿ, ಉಪ್ಪು

ಮಾಡುವ ವಿಧಾನ: ಭತ್ತದ ಅರಳನ್ನು ನೀರಿಗೆ ಹಾಕಿ ತಕ್ಷಣ ತೆಗೆದು ಒಂದು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ಉಪ್ಪು, ಮೆನಸಿನಕಾಯಿ, ಸೀಮೆಅಕ್ಕಿ ಗಂಜಿ, ಬೂದುಕುಂಬಳಕಾಯಿ ತುಂಡು ಹಾಕಿ ಹಗುರವಾಗಿ ಕಲೆಸಿಕೊಳ್ಳಿ. ಒಂದು ಗುಂಡಗಿರುವ ಚಮಚವನ್ನು ನೀರಿನಲ್ಲಿ ಅದ್ದಿ ಅದಕ್ಕೆ ಸಂಡಿಗೆ ಮಿಶ್ರಣ ಹಾಕಿ ಹಗುರವಾಗಿ ಅಮುಕಿ ಪ್ಲಾಸ್ಟಿಕ್ ಹಾಳೆಯ ಮೇಲೆ ಹಾಕಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಸಂಡಿಗೆಗೆ ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಸಹ ಸೇರಿಸಿಕೊಳ್ಳಬಹುದು.
 
 
ಅಕ್ಕಿ ಫೇಣಿ
ಬೇಕಾಗುವ ಸಾಮಗ್ರಿಗಳು:
ಅರ್ಧ ಕೆ.ಜಿ. ದೋಸೆ ಅಕ್ಕಿ, ರುಚಿಗೆ ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ಎರಡು ದಿನ ನೆನೆಸಿ, ರುಬ್ಬಿ ಶೋಧಿಸಿಕೊಳ್ಳಿ. ನಂತರ ಒಂದು ರಾತ್ರಿ ಇಟ್ಟು ಮರುದಿನ ಮೇಲಿನ ನೀರನ್ನು ತೆಗೆದು ಬೇರೆ ನೀರು, ಉಪ್ಪು ಹಾಕಿ ಫೇಣಿ ಹಿಟ್ಟಿನ ಹದಕ್ಕೆ ಬೇಯಿಸಿ. ಫೇಣಿಗಳನ್ನು ಒತ್ತಿ ಬಿಸಿಲಿನಲ್ಲಿ ಒಣಗಿಸಿ. ಇದೇ ಹಿಟ್ಟನ್ನು ತೆಳುವಾಗಿ ಮಾಡಿ ಚಮಚದಲ್ಲಿ ಎರೆದು ಒಣಗಿಸಬಹುದು ಅಥವಾ ಗಟ್ಟಿಹಿಟ್ಟನ್ನು ಸಂಡಿಗೆಯಂತೆ ಸಹ ಇಡಬಹುದು.
 
 
ಅವಲಕ್ಕಿ ಚಕ್ಕುಲಿ
ಬೇಕಾಗುವ ಸಾಮಗ್ರಿಗಳು:
ಅರ್ಧ ಕೆ.ಜಿ. ತೆಳು ಅವಲಕ್ಕಿ. ಒಂದು ಬಟ್ಟಲು  ಹುಳಿ ಮೊಸರು, ಒಂದು ಲೀಟರ್ ಭತ್ತದ ಅರಳು, ಕಾರಕ್ಕೆ ರುಬ್ಬಿದ ಹಸಿಮೆಣಸಿನಕಾಯಿ, ಉಪ್ಪು

ಮಾಡುವ ವಿಧಾನ: ಅವಲಕ್ಕಿಯನ್ನು ಪುಡಿಮಾಡಿ ಮೊಸರು, ಮೆಣಸಿನಕಾಯಿ, ಉಪ್ಪು ನೀರು ಸೇರಿಸಿ ಸ್ವಲ್ಪ ತೆಳುವಾಗಿ ಕಲೆಸಿಡಿ. ಒಂದು ಗಂಟೆಯ ನಂತರ ಹಿಟ್ಟು ಗಟ್ಟಿಯಾಗಿರುತ್ತದೆ. ಚೆನ್ನಾಗಿ ನಾದಿ ಚಕ್ಕುಲಿ ಬಿಲ್ಲೆ ಹಾಕಿ ಪುಟ್ಟ ಪುಟ್ಟ ಚಕ್ಕುಲಿಗಳನ್ನು ಒತ್ತಿ ಬಿಸಿಲಿನಲ್ಲಿ ಒಣಗಿಸಿ.

ಗೋಧಿ ಫೇಣಿ
ಬೇಕಾಗುವ ಸಾಮಗ್ರಿಗಳು:
ಅರ್ಧ ಕೆ.ಜಿ. ಗೋಧಿ, ರುಚಿಗೆ ಉಪ್ಪು

ಮಾಡುವ ವಿಧಾನ: ಗೋಧಿಯನ್ನು ಮೂರು ದಿನ ನೀರು ಬದಲಾಯಿಸುತ್ತಾ ನೆನೆಸಿಡಬೇಕು. ನಾಲ್ಕನೆಯ ದಿನ ಅದನ್ನು ರುಬ್ಬಿಕೊಳ್ಳಿ. ಹಾಲನ್ನು ತೆಳು ಬಟ್ಟೆಯಲ್ಲಿ ಸೋಸಿ ಅಗಲವಾದ ಪಾತ್ರೆಯಲ್ಲಿ ಹಾಕಿಕೊಳ್ಳಿ. ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಒಂದು ರಾತ್ರಿ ಹಾಗೇ ಇಡಿ.
ಮರುದಿನ ಆ ಹಾಲಿನ ಮೇಲೆ ನಿಂತಿರುವ ತಿಳಿ ನೀರನ್ನು ತೆಗೆದು ಉಳಿಯುವ ಗಟ್ಟಿ ಹಾಲಿಗೆ ನಾಲ್ಕು ಕಪ್ ನೀರು, ಉಪ್ಪು ಸೇರಿಸಿ ಕಲೆಸಿ ಅದನ್ನು ಒಲೆಯ ಮೇಲೆ ಇಟ್ಟು ಗಟ್ಟಿಯಾಗುವವರೆಗೂ ಗೊಟಾಯಿಸಿ, ಹತ್ತು ನಿಮಿಷ ಮುಚ್ಚಿ ಇಡಿ.
ನಂತರ ತೆಳುವಾದ ಬಿಳಿ ಬಟ್ಟೆ ಅಥವಾ ದಪ್ಪನೆಯ ಪ್ಲಾಸ್ಟಿಕ್ ಹಾಳೆಯ ಮೇಲೆ ಫೇಣಿಗಳನ್ನು ಒತ್ತಿ ಬಿಸಿಲಿನಲ್ಲಿ ಒಣಗಿಸಿ. ಮಾರನೆಯ ದಿನ ಫೇಣಿಗಳನ್ನು ಮಗುಚಿ ಹಾಕಿ ಒಣಗಿಸಿ ಡಬ್ಬದಲ್ಲಿ ತುಂಬಿಟ್ಟುಕೊಳ್ಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.