ADVERTISEMENT

ಗಾಂಧಿಬಜಾರ್‌ನಲ್ಲಿ ಶಿವರಾತ್ರಿ ತಂಬಿಟ್ಟು

ಸುಮನಾ ಕೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ತಂಬಿಟ್ಟು, ಕಜ್ಜಾಯ
ತಂಬಿಟ್ಟು, ಕಜ್ಜಾಯ   

ಶಿವರಾತ್ರಿ ಕೆಲವರಿಗೆ ಉಪವಾಸದ ಹಬ್ಬ, ಕೆಲವರಿಗೆ ಹಬ್ಬದಡುಗೆ ಉಣ್ಣುವ ಹಬ್ಬ. ಜಾತಿಯಿಂದ ಜಾತಿಗೆ, ಪ್ರದೇಶದಿಂದ ಪ್ರದೇಶಕ್ಕೆ ಹಬ್ಬದ ಆಚರಣೆಯಲ್ಲಿಯೂ ವೈವಿಧ್ಯತೆ ಇದೆ.

ಕೆಲ ಕುಟುಂಬಗಳಲ್ಲಿ ಹಬ್ಬದ ದಿನ ಶಿವನಿಗೆ ಅನ್ನ, ಕಲ್ಲುಸಕ್ಕರೆ, ಗೋಡಂಬಿ, ದ್ರಾಕ್ಷಿ ಹಾಗೂ ತುಪ್ಪದಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡುತ್ತಾರೆ. ಮತ್ತೆ ಕೆಲವರು ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು ಅರ್ಪಿಸುತ್ತಾರೆ. ಕೆಲ ಕುಟುಂಗಳಲ್ಲಿ ಜಾಗರಣೆಯ ಮರುದಿನ ಶಿವನಿಗೆ ಸಿಹಿತಿಂಡಿಗಳನ್ನು ಎಡೆ ಇಡುವ ಪದ್ಧತಿ ಇದೆ. ಶಿವನಿಗೆ ನೈವೇದ್ಯವಾಗಿ ತಂಬಿಟ್ಟು, ಕಜ್ಜಾಯ, ಕರ್ಜಿಕಾಯಿ, ಕಡುಬು, ರವೆಲಡ್ಡು, ಶೇಂಗಾಉಂಡೆ ಸಮರ್ಪಣೆ ಸಾಮಾನ್ಯ.

ಹಬ್ಬದ ಸವಿ ಹೆಚ್ಚಿಸುವ ಸಲುವಾಗಿ ನಗರದ ವಿವಿಧ ಅಂಗಡಿಗಳಲ್ಲಿ ತಂಬಿಟ್ಟು, ಕಜ್ಜಾಯ ಹಾಗೂ ವಿವಿಧ ಬಗೆಯ ಉಂಡೆಗಳ ಮಾರಾಟ ಆರಂಭವಾಗಿದೆ. ಹುರಿಗಡಲೆ ತಂಬಿಟ್ಟು, ಗೋಧಿ ತಂಬಿಟ್ಟು, ಅಕ್ಕಿ ತಂಬಿಟ್ಟು, ಹೀಗೆ ಬೇರೆ ಬೇರೆ ವಿಧದ ತಂಬಿಟ್ಟುಗಳು ಸಿಗುತ್ತಿವೆ. ತಂಬಿಟ್ಟಿಗೆ ಕೊಬ್ಬರಿತುರಿ, ದ್ರಾಕ್ಷಿ, ಗಸಗಸೆ, ಗೋಡಂಬಿ ಹಾಕಿರುತ್ತಾರೆ. ಇವು ತಿನ್ನಲೂ ಬಲುರುಚಿ. ಆರೋಗ್ಯಕ್ಕೆ ಹಿತವೂ ಹೌದು. ದೇವರಮನೆಯಲ್ಲಿ ಪೂಜೆಗೆ ಇಟ್ಟ ತಂಬಿಟ್ಟನ್ನು ಬಳಿಕ ಮನೆ ಸದಸ್ಯರೆಲ್ಲರೂ ಹಿರಿಯರಿಂದ ಪ್ರಸಾದವೆಂದು ಪಡೆದು ಸವಿಯುವುದು ರೂಢಿ.

ADVERTISEMENT

ಶಿವರಾತ್ರಿಗೆ ಗಾಂಧಿಬಜಾರ್‌ನ ‘ಮನೆ ಹೋಳಿಗೆ’ ಹಾಗೂ ‘ಬನಶಂಕರಿ ಕಾಂಡಿಮೆಂಟ್ಸ್‌’ಗಳಲ್ಲಿ ತಂಬಿಟ್ಟು ಸಿಗುತ್ತಿವೆ. ಪೂಜೆಗೆ ತಂಬಿಟ್ಟು ಬೇಕಾದವರು ಮುಂಚಿತವಾಗಿ ತಿಳಿಸಿದರೆ ತಂಬಿಟ್ಟನ್ನು ಮನೆಯಲ್ಲಿಯೇ ಶುಚಿ, ರುಚಿಯಾಗಿ ಮಾಡಿಕೊಡುತ್ತಾರೆ.

‘ಶಿವರಾತ್ರಿಗಾಗಿ ನಮ್ಮಲ್ಲಿ ಹುರಿಗಡಲೆ, ಶೇಂಗಾ, ಏಲಕ್ಕಿ, ಕೊಬ್ಬರಿ ಹಾಕಿ ತಯಾರಿಸಿದ ತಂಬಿಟ್ಟು ಸಿಗುತ್ತದೆ. ಗ್ರಾಹಕರು ಬೇರೆ ರೀತಿಯ ತಂಬಿಟ್ಟುಗಳಿಗೆ ಬೇಡಿಕೆ ಇಟ್ಟರೆ, ಅಂಥವನ್ನೂ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಅಂಗಡಿ ಮಾಲೀಕರು.

ಅಕ್ಕಿ ಹಾಗೂ ಬಾಳೆಹಣ್ಣು ಹಾಕಿ ಮಾಡಿದ ಕಜ್ಜಾಯವೂ ಇಲ್ಲಿ ಸಿಗುತ್ತದೆ. ‘ನಾವು ಮನೆಯಲ್ಲೇ ಕಜ್ಜಾಯ, ತಂಬಿಟ್ಟು, ಕರ್ಜಿಕಾಯಿ ಮಾಡಿ ಮಾರುತ್ತೇವೆ. ರುಚಿಯಲ್ಲಿ ರಾಜಿಯಾಗಲ್ಲ. ಡಬ್ಬದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಶೇಖರಿಸಿಟ್ಟರೆ ಕೆಡುವುದಿಲ್ಲ’ ಎನ್ನುತ್ತಾರೆ ‘ಬನಶಂಕರಿ ಕಾಂಡಿಮೆಂಟ್ಸ್‌’ನ ರಘುನಾಥ್‌. ಅವರ ಅಂಗಡಿಯಲ್ಲಿ ಸಿಗುವ ಕೋಡುಬಳೆ, ಚಕ್ಕುಲಿ, ಅವಲಕ್ಕಿ ಮತ್ತು ಇತರ ಉಂಡೆಗಳನ್ನು ಮನೆಗೆ ತಗೆದುಕೊಂಡು ಹೋಗಬಹುದು.

ವಿಳಾಸ- ಬನಶಂಕರಿ ಕಾಂಡಿಮೆಂಟ್ಸ್, ಗಾಂಧಿಬಜಾರ್ ಸರ್ಕಲ್ ಸಮೀಪ, ವಿದ್ಯಾರ್ಥಿ ಭವನ ಹೋಟೆಲ್ ಮುಂಭಾಗ.

ಹಬ್ಬಕ್ಕೆ ಹೋಳಿಗೆ, ತಂಬಿಟ್ಟು
‘ಈಗ ಎಲ್ಲರೂ ಉದ್ಯೋಗಸ್ಥರೇ ಆಗಿರುವುದರಿಂದ ರೆಡಿಮೇಡ್ ತಂಬಿಟ್ಟಿಗೆ ಬೇಡಿಕೆ ಇದೆ. ಯಾರಾದರೂ ಬೇಕು ಎಂದು ಹೇಳಿದರೆ ಮಾತ್ರ ತಯಾರಿಸುತ್ತೇವೆ’ ಎನ್ನುತ್ತಾರೆ ‘ಮನೆ ಹೋಳಿಗೆ’ ಮಾಲೀಕರಾದ ಭಾಸ್ಕರ್ ಕೆ.ಆರ್.

ಮನೆಹೋಳಿಗೆಯಲ್ಲಿ ಅಕ್ಕಿ ತಂಬಿಟ್ಟು ಸಿಗುತ್ತದೆ. 200 ಗ್ರಾಂ ತಂಬಿಟ್ಟಿಗೆ ₹40. ಇಲ್ಲಿ ಬಾದಾಮಿ ಹೋಳಿಗೆ, ಅಂಜೂರ ಹೋಳಿಗೆ, ಗುಲ್ಕಂದ್‌ ಹೋಳಿಗೆ, ಕೊಬ್ಬರಿ ಹೋಳಿಗೆ... ಹೀಗೆ 20ಕ್ಕೂ ಹೆಚ್ಚು ಬಗೆಯ ಹೋಳಿಗೆಗಳು ಸಿಗುತ್ತವೆ.

‘ಶಿವರಾತ್ರಿಯ ಮರುದಿನ ಕೆಲವು ಮನೆಗಳಲ್ಲಿ ಹಬ್ಬದೂಟ ಮಾಡುವವರಿದ್ದಾರೆ. ಹೀಗಾಗಿ ಹೋಳಿಗೆ, ಕಜ್ಜಾಯ ಹೆಚ್ಚು ಖರ್ಚಾಗುತ್ತದೆ. ಮೊದಲು 1000ಕ್ಕೂ ಹೆಚ್ಚು ತಂಬಿಟ್ಟು ಉಂಡೆ ಮಾರುತ್ತಿದ್ದೆವು. ಈಚೆಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ಭಾಸ್ಕರ್‌. 
ಮನೆಹೋಳಿಗೆ ವಿಳಾಸ: 77/78, ಡಿವಿಜಿ ರಸ್ತೆ, ಬಸವನಗುಡಿ. ಮೊ. 098865 84789

*


ಇಲ್ಲೂ ಸಿಗುತ್ತವೆ
ಸುಬ್ಬಮ್ಮ ಸ್ಟೋರ್ಸ್ ಎಂದು ಖ್ಯಾತಿ ಪಡೆದ ಗಾಂಧಿ ಬಜಾರ್‌ನ ಶ್ರೀನಿವಾಸ್‌ ಕಾಂಡಿಮೆಂಟ್ಸ್‌ ಸ್ಟೋರ್ಸ್‌ನಲ್ಲಿ  ರವೆಉಂಡೆ, ಕಜ್ಜಾಯ, ರಾಗಿ ಹುರಿಹಿಟ್ಟು ಸಿಗುತ್ತವೆ. ಈ ಅಂಗಡಿಯ ಕಜ್ಜಾಯ ಫೇಮಸ್‌.  ‘ಈಚಿನ ವರ್ಷಗಳಲ್ಲಿ ಶಿವರಾತ್ರಿ ಸಮಯದಲ್ಲಿ ತಂಬಿಟ್ಟು ತಗೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಕೆಲ ಮುಖ್ಯ ಹಬ್ಬಗಳನ್ನಷ್ಟೇ ಆಚರಿಸುತ್ತಾರೆ. ಹಾಗಾಗಿ ಬೇಡಿಕೆ ಇದ್ದರಷ್ಟೇ ತಂಬಿಟ್ಟು ಸಿದ್ಧಪಡಿಸುತ್ತೇವೆ’ ಎಂದು ಹೇಳುತ್ತಾರೆ ಅಂಗಡಿ ಮಾಲೀಕ ಕೆ.ವಿ ಅನಂತರಾವ್‌. ಸಂಪರ್ಕಕ್ಕೆ– 080 2667 7493

ಗಾಂಧಿ ಬಜಾರ್‌ನ ಸತೀಶ್ ಸ್ಟೋರ್ಸ್‌ನಲ್ಲಿ ಹುರಿದ ಅಕ್ಕಿಯಿಂದ ಮಾಡಿದ ತಂಬಿಟ್ಟು ಮತ್ತು ಶಿವಪೂಜೆಗೆ ಬೇಕಾದ ಸಾಮಗ್ರಿಗಳು ಸಿಗುತ್ತವೆ. ಸಂಪರ್ಕಕ್ಕೆ ದೂ: 080 2660 0405.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.