ADVERTISEMENT

ಅಪೂರ್ವ ದಿನವೇ ನಿನಗೆ ನಮಸ್ಕಾರ

ಪ್ರಜಾವಾಣಿ ವಿಶೇಷ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST
ಅಪೂರ್ವ ದಿನವೇ  ನಿನಗೆ ನಮಸ್ಕಾರ
ಅಪೂರ್ವ ದಿನವೇ ನಿನಗೆ ನಮಸ್ಕಾರ   

‘ಮನಃಸ್ಥಿತಿ ನಮ್ಮನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೊದಲು ನಾವು ಮನಃಸ್ಥಿತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂಬುದು ಹಿರಿಯರೊಬ್ಬರ ಮಾತು. ಬದುಕಿನಲ್ಲಿ ಒಮ್ಮೆ ಕತ್ತಲು ಆವರಿಸಿತು ಎಂದರೆ ಅದು ಆಕಸ್ಮಿಕವಾಗಿಯೇ ಎಂಬ ಅರ್ಥವಲ್ಲ. ಬದಲಾಗಿ ಬದುಕಿನ ಮೇಲೆ ಕಾಳಜಿ ಕಡಿಮೆ ಇದೆ ಎಂಬುದರ ಅರಿವು ನಮಗಾಗಬೇಕು ಎನ್ನುತ್ತಾರೆ ಮಾಸ್ಟರ್ ಒಬ್ಬರು.

ಬದುಕಿನ ಬಗ್ಗೆ ಗೌತಮ ಬುದ್ದ ಹೀಗೆ ಸಲಹೆ ನೀಡುತ್ತಾರೆ - ‘ಮೊದಲು ನಿಮ್ಮೊಳಗೆ ನೀವು ದೀಪವಾಗಬೇಕು’ ಎಂದು. ನಮ್ಮೊಳಗಿರುವ ಈ ದೀಪದಲ್ಲಿ ಸ್ವ–ಕಾಳಜಿ ಹಾಗೂ ಪ್ರೀತಿ ಇರಬೇಕು. ಈ ಪ್ರೀತಿಯ ದೀಪವು ಎಲ್ಲರ ಜೀವನದಲ್ಲೂ ಬೆಳಕಿನ ಭಾವವನ್ನು ಹಬ್ಬಿಸಬೇಕು. ಯಾವಾಗಲಾದರೂ ಒಮ್ಮೆ ದೀಪದ ಉರಿ ಕಡಿಮೆಯಾದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅದಕ್ಕಾಗಿ ಚಿಂತಿಸಬೇಡಿ. ದೀಪದ ಉರಿ ಪ್ರಖರವಾಗಿರಲಿ, ಮಂದವಾಗಿರಲಿ. ಅದು ತಾನಿರುವ ಜಾಗದಲ್ಲಿ ಬೆಳಕನ್ನು ನೀಡುತ್ತಿರುತ್ತದೆ, ಜೊತೆಗೆ ಬೆಳಕಿನ ಭಾವ ಅಲ್ಲಿ ಆವರಿಸಿರುತ್ತದೆ.

ದೀಪ ಎಂದೆಂದಿಗೂ ಆರದೇ ಉರಿಯುತ್ತಿರಬೇಕು ಎಂದರೆ ಸಾಧ್ಯವೇ? ಅದು ಸಾಧ್ಯವಿಲ್ಲ. ಈ ದೀಪದಂತೆ ಬದುಕು ಕೂಡ. ಬದುಕು ಎಂದಿಗೆ ಕೊನೆಗಾಣುತ್ತದೋ ಯಾರಿಗೂ ತಿಳಿದಿರುವುದಿಲ್ಲ. 90 ವರ್ಷದ ಹಿರಿಯ ಸನ್ಯಾಸಿಯೊಬ್ಬರು ಜೀವನದ ಕುರಿತು ಗುಟ್ಟೊಂದನ್ನು ಹೇಳುತ್ತಾರೆ. ಅದೇನೆಂದರೆ: ‘ಇಂದಿನ ದಿನವನ್ನು ಇಂದೇ ಕೊನೆ ಎಂಬಂತೆ ಕಳೆಯಬೇಕು. ಯಾರಿಗೆ ಗೊತ್ತು... ಇದೇ ನಿಮ್ಮ ಮೊದಲ ಹಾಗೂ ಕೊನೆಯ ದಿನವಾಗಿರಬಹುದು’.

ADVERTISEMENT

ಯಾವುದೇ ವಸ್ತು ಅಥವಾ ವ್ಯಕ್ತಿಯಾಗಲಿ - ಅವನು ಹೀಗೆ, ಅದು ಹೀಗೆ... ಎಂದು ಹೀಗೆಳೆಯುವುದರಲ್ಲೇ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಆ ವಸ್ತು ಅಥವಾ ವ್ಯಕ್ತಿ ಹೇಗೇ ಇರಲಿ, ಅದನ್ನು ಒಪ್ಪಿಕೊಳ್ಳಿ. ಒಪ್ಪಿಕೊಳ್ಳುವುದರಲ್ಲೇ ಎಲ್ಲವೂ ಅಡಗಿದೆ. ನಿಮ್ಮನ್ನು ಎದುರುಗೊಳ್ಳುವ ಪ್ರತಿ ವ್ಯಕ್ತಿ ಹಾಗೂ ವಸ್ತುವನ್ನು ಆತ್ಮಬಲದಿಂದ ಎದುರುಗೊಳ್ಳಿ. ಇಡೀ ಬದುಕು ನಿಂತಿರುವುದು ಈ ದಿನದ ಮೇಲೆ. ನಾನು ಯಾವುದಕ್ಕೂ ಹಿಂಜರಿಯಬಾರದು ಎಂಬ ಭಾವದೊಂದಿಗೆ ಎಲ್ಲವನ್ನೂ ಎದುರುಗೊಳ್ಳಬೇಕು.

ಒಂದು ದಿನ ಅಂದರೆ ಇವತ್ತು... ಇಂದಿರುವುದು ಒಂದೇ ಸೂರ್ಯೋದಯ, ಒಂದು ಸೂರ್ಯಾಸ್ತ. ಈ ದಿನದ 24 ಗಂಟೆಯಲ್ಲಿ ನೀವು ಹೇಗಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಸಂಪೂರ್ಣವಾಗಿ ಆಶ್ಚರ್ಯಕರ ಹಾಗೂ ಸಂಪೂರ್ಣ ಹೊಗಳಿಕೆ ಎನ್ನುವಂತಹ ಘಟನೆಗಳಿಂದ ಈ ದಿನ ಕೂಡಿತ್ತು ಎಂದುಕೊಂಡರೆ ನಿಮ್ಮ ಕಣ್ಣುಗಳು ಮುಗ್ಧತೆಯಿಂದ ಹೊಳೆಯುತ್ತವೆ. ಈ ದಿನ ಒಳ್ಳೆಯ ವಾತಾವರಣವೂ ಇರಲಿಲ್ಲ, ಕೆಟ್ಟ ವಾತಾವರಣವೂ ಇರಲಿಲ್ಲ... ಇದೊಂದು ಅಪೂರ್ವವಾದ ದಿನ... ಅನನ್ಯವಾದ ವಾತಾವರಣ ಇಂದು ನಮ್ಮ ಪಾಲಿಗಿತ್ತು ಎಂದುಕೊಳ್ಳಬೇಕು.

ವ್ಯಕ್ತಿಗಳ ಬಗ್ಗೆ ಹೇಳುವುದಾದರೆ ಪ್ರತಿ ವ್ಯಕ್ತಿಯ ಜೀವನದಲ್ಲೂ ಅವರದೇ ಆದ ಭಿನ್ನವಾದ ಕತೆಗಳಿರುತ್ತವೆ. ಅವರೆಲ್ಲರಿಗೂ ಅವರ ಪೂರ್ವಿಕರ, ಅವರ ಧರ್ಮದ ಕುರಿತ ವರ್ಣನೀಯ ಕತೆಗಳಿರುತ್ತವೆ, ಅವರ್ಣನೀಯ ಸಂಗತಿಗಳೂ ಇರುತ್ತವೆ. ಪ್ರತಿಯೊಬ್ಬರಲ್ಲೂ ಒಂದು ಪುಸ್ತಕಕ್ಕಾಗುವಷ್ಟು ನಂಬಲಾಗದ ಆಸಕ್ತಿದಾಯಕ ಕತೆಗಳಿರುತ್ತವೆ. ಬದುಕಿನಲ್ಲಿ ಎದುರಾಗುವ ಈ ಎಲ್ಲವನ್ನೂ ಎಲ್ಲರನ್ನೂ ಇಂದೇ ಭೇಟಿ ಮಾಡಲು ಅವಕಾಶ ನೀಡಿ. ನಿಮ್ಮ ಕಣ್ಣಿನಿಂದ, ನಿಮ್ಮ ಇರುವಿಕೆಯಿಂದ, ನಿಮ್ಮ ಸ್ಪರ್ಶದಿಂದ ಅವರನ್ನು ತೃಪ್ತಿಗೊಳಿಸಿ.

ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ. ನಿಮ್ಮನ್ನು ಸೇರಿದಂತೆ ಎಲ್ಲರನ್ನೂ ಕ್ಷಮಿಸಿ. ಅದರೊಂದಿಗೆ ಯಾರು ಪಶ್ಚಾತ್ತಾಪಪಡುವರೋ ಅವರನ್ನು ಕ್ಷಮಿಸಿ. ನಾನು ಕ್ಷಮೆ ಕೇಳುವುದೇ ಇಲ್ಲ ಎಂದು ಮೊಂಡಾಟ ಮಾಡುವವರ ಕ್ಷಮೆಯನ್ನು ಗಾಳಿಯೊಂದಿಗೆ ಬರೆಯಿರಿ. ಆಗ ಆ ಕ್ಷಮೆ ಶುದ್ಧವಾದ ವಾತಾವರಣದೊಂದಿಗೆ ಸೇರುತ್ತದೆ. ಕ್ಷಮೆಯ ಭಾವ ನಮ್ಮನ್ನು ಮುಟ್ಟುತ್ತದೆ. ಹೀಗೆ ಎಲ್ಲವನ್ನೂ, ಎಲ್ಲರನ್ನೂ ಕ್ಷಮಿಸಿ ಬದುಕಬೇಕು. ಪ್ರತಿದಿನವನ್ನೂ ಇದು ನನ್ನ ದಿನ, ಇದೊಂದೇ ದಿನ ನನಗಿರುವುದು ಎಂಬಂತೆ ಕಳೆಯಬೇಕು. ಕುಡಿಯೊಡೆದ ಮೊಳಕೆಯಂತೆ, ಮಗುವಿನ ಕೋಮಲ ಸ್ಪರ್ಶದಂತೆ ನಮ್ಮ ಇರುವಿಕೆ ಇನ್ನೊಬ್ಬರಿಗೆ ಇಷ್ಟವಾಗಬೇಕು.

ಪ್ರತಿದಿನ ಸೂರ್ಯಾಸ್ತವಾದ ಮೇಲೆ ಕತ್ತಲು ಜಗತ್ತನ್ನು ಆವರಿಸುತ್ತದೆ. ಇದೇ ನನ್ನ ಕೊನೆಯ ದಿನ ಎಂಬಂತೆ ಮಲಗಲು ಹಾಸಿಗೆಯನ್ನು ತಯಾರು ಮಾಡಬೇಕು. ಇದು ತುಂಬಾ ಸುಂದರವಾದ ದಿನ ಮತ್ತು ಪರಿಪೂರ್ಣವಾದ ದಿನ ಎಂದುಕೊಳ್ಳಬೇಕು. ಜಗತ್ತಿಗೆ ಒಂದು ಆತ್ಮೀಯವಾದ ವಿದಾಯವನ್ನು ಹೇಳಬೇಕು. ಮನಃಶಾಂತಿಯಿಂದ ಇರಬೇಕು. ನಿಧಾನಕ್ಕೆ ಕಣ್ಣುಗಳನ್ನು ಮುಚ್ಚಿ ಜಗತ್ತಿನ ಪ್ರತಿಯೊಬ್ಬರಿಗೂ ಒಳ್ಳೆಯ ಜೀವನ ಸಿಗಲಿ ಎಂದು ಬೇಡಿಕೊಳ್ಳಬೇಕು. ಬಹುಶಃ ಅವರೆಲ್ಲರೂ ಯಾವ್ಯಾವುದೋ ಕಾರಣಗಳಿಂದ ನಿಮ್ಮ ಇಂದಿನ ಸಂತೋಷಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿರಬಹುದು. ಅವರೆಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಸದಾ ಸಂತೋಷ ಸಿಗುವಂತೆ ಬೇಡಿಕೊಳ್ಳಬೇಕು. ಈ ದಿನವನ್ನು ನಾನು ಪರಿಪೂರ್ಣತೆಯಿಂದ ಕಳೆದಿದ್ದೇನೆ ಎಂಬ ಭಾವದೊಂದಿಗೆ ಆಳವಾದ ಹಾಗೂ ಸವಿಯಾದ ನಿದ್ದೆಯೊಂದಿಗೆ ಈ ದಿನವನ್ನು ಮುಗಿಸಿ, ಇದು ದೈವಿಕವಾದ ದಿನ ಎಂದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.