ADVERTISEMENT

ಆರೋಗ್ಯಕ್ಕೂ ಬೇಕು ಸಂವಹನ ಸೇತುವೆ

ಕೆ.ಸಿ.ರಘು
Published 23 ಜೂನ್ 2017, 19:30 IST
Last Updated 23 ಜೂನ್ 2017, 19:30 IST
ಆರೋಗ್ಯಕ್ಕೂ ಬೇಕು ಸಂವಹನ ಸೇತುವೆ
ಆರೋಗ್ಯಕ್ಕೂ ಬೇಕು ಸಂವಹನ ಸೇತುವೆ   

‘ನಮ್ಮ ಧ್ವನಿ ಯಾರಿಗೂ ಕೇಳಿಸದು’ (Our Voices Are Rarely Heard) – ಎನ್ನುವುದು ಅಮೆರಿಕಾದ ಕಾಲಿ ಬಾನ್ಡಾಡ್ ಮತ್ತು ಗ್ಯಾಬ್ರಿಯೆಲ್ ಕ್ಯಾನನ್ ಎಂಬುವವರು ನಿರ್ಮಿಸಿದ ಸಾಕ್ಷ್ಯಚಿತ್ರ. ಇದು ಕ್ಯಾಲಿಫೋರ್ನಿಯಾದ ಪೆಲಿಕನ್ ಬೇಯಲ್ಲಿರುವ ಜೈಲುವಾಸಿಗಳ ಚಿತ್ರಣ. ಅಲ್ಲಿಯ ಕಠಿಣ ಶಿಕ್ಷೆಯೆಂದರೆ ಇನ್ನೊಬ್ಬ ಮನುಷ್ಯನ ಸಂಪರ್ಕವೇ ಸಿಗದಂತೆ ಅನೇಕ ವರ್ಷ ಸೆರೆಮನೆಯಲ್ಲಿಡುವುದು. ಇದು ಇತರ ಉಗ್ರ ಶಿಕ್ಷೆಗಿಂತ ಕ್ರೂರ.

ಮನುಷ್ಯ ಇತರರ ಸಂಪರ್ಕ, ಸಂವಹನೆ ಮತ್ತು ಸಂವಾದಗಳನ್ನು ಕಳೆದುಕೊಂಡಾಗ ಮಾನಸಿಕ ಖಿನ್ನತೆ ಮತ್ತು ಹತ್ತು ಹಲವು ರೋಗಗಳಿಗೆ ತುತ್ತಾಗುತ್ತಾನೆ ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಆಧುನಿಕ ಮನುಷ್ಯ ಮುಕ್ತನಾಗಿದ್ದೂ ಒಂಟಿಯಾಗಿದ್ದಾನೆ.  ಸ್ವಯಂಪ್ರೇರಿತ ಒಂಟಿತನಕ್ಕೆ ನಮ್ಮಲ್ಲಿ ಬೇರೆಯೇ ವ್ಯಾಖ್ಯಾನವಿದೆ; ತನ್ನನ್ನು ತಾನು ಕಾಣುವ ಬಗೆ – ಎನ್ನುತ್ತದೆ ನಮ್ಮ ಅಧ್ಯಾತ್ಮ ಪರಂಪರೆ.

ಆದರೆ ಸಮಾಜ ವ್ಯವಹರಿಸುವ ರೀತಿಯಿಂದ ಬಾಂಧವ್ಯಗಳ ಬೆಸುಗೆಯಿಂದ ಕಳಚಿಕೊಂಡರೆ ನಾವು ಭಾವಹೀನರಾಗುತ್ತೇವೆ; ಬದುಕು ಬರಡಾಗುತ್ತದೆ. ಇದರಿಂದ ಸಮಾಜದ ಸ್ವಾಸ್ಥ್ಯಕ್ಕೂ ಧಕ್ಕೆ ಉಂಟಾಗುತ್ತದೆ.

ADVERTISEMENT

ಅನಾರೋಗ್ಯಕ್ಕೆ ಇರುವ ಕಾರಣಗಳಲ್ಲಿ ಶೇ.68ರಷ್ಟನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳೆಂದು ಗುರುತಿಸಲಾಗಿದೆ. ಇನ್ನುಳಿದ ಶೇ.32ರಷ್ಟು ಮಾತ್ರ ಆನುವಂಶಿಕ ಮತ್ತು ಭೌತಿಕ ಕಾರಣಗಳೆನ್ನುತ್ತಾರೆ. ಮಾನಸಿಕ ಖಿನ್ನತೆಗೆ ಸಿಗ್ಮಡ್ ಫ್ರಾಯ್ಡ್ ಮಾತನಾಡುವುದನ್ನೇ ಚಿಕಿತ್ಸೆಯನ್ನಾಗಿ ಬಳಸಿಕೊಂಡ.

ಇತ್ತೀಚಿಗೆ ಕೆನಡಾ ಮತ್ತು ಅಮೆರಿಕದ ಅನೇಕ ಮಹಾನಗರಗಳಲ್ಲಿ ಹೊಸ ಅಥವಾ ಹಳೆಯ ರೀತಿಯ ಕೆಫೆಗಳು ಶುರುವಾಗಿವೆ. ಅಲ್ಲಿ ವೈಫೆ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಜ್ಯಾಮ್ ಮಾಡಲಾಗುವುದು. ಕಾರಣ – ಅಲ್ಲಿ ಕುಳಿತ ಜನರು ಪರಸ್ಪರ ಮಾತನಾಡಲೆಂದು! ನಮಲ್ಲಿ ಈಗ ಇಂಟರ್ನೆಟ್ ಸಂಪರ್ಕ ಸಿಕ್ಕರೆ ಸ್ವರ್ಗ ಸಿಕ್ಕಂತೆ ಸಂಭ್ರಮಿಸುತ್ತೇವೆ.

ಜನರು ಸಂಭಾಷಣೆಯಲ್ಲಿ ನಿರತರಾಗುವುದು, ಪರಸ್ಪರ ವಿಚಾರ ವಿನಿಮಯ ಅಥವಾ ಸುಮ್ಮನೆ ಹರಟೆ ಹೊಡೆಯುವುದು ನಮ್ಮ ಸಹಜತೆಗೂ ಸಂತೋಷಕ್ಕೂ ಕಾರಣವಾಗುತ್ತವೆ. ಗುಲಾಮಗಿರಿ ಆಚರಣೆಯಲ್ಲಿದ್ದ ಕಾಲದಲ್ಲಿ ಜನರನ್ನು ಯಾವುದೋ ದೇಶಕ್ಕೆ ಕೊಂಡೊಯ್ದು ದುಡಿಸಿಕೊಳ್ಳುತ್ತಿದ್ದರು; ತಮ್ಮವರಿಂದ ದೂರವಾದ ಜನರು ತಮ್ಮವರೊಂದಿಗೆ ಸಂಪರ್ಕ ಸಾಧಿಸಲು ಹಾತೊರೆಯುತ್ತಿದ್ದುದು ಸಹಜ. ಹೀಗೆ ಕೆನಾಡಾಕ್ಕೆ ರವಾನೆಯಾಗಿದ್ದ ಚೀನಾದೇಶದ ನಾಗರಿಕರು ಭೂಮಿಯಲ್ಲಿ ಚಿಕ್ಕ ರಂದ್ರವನ್ನು ಮಾಡಿ ತಮ್ಮ ಪಾಡನ್ನು ಎಲ್ಲೋ ಇದ್ದ ತಮ್ಮವರಿಗೆ ಕೇಳಲೆಂದು ಪಿಸುಗುಟ್ಟುತ್ತಿದ್ದರಂತೆ!

ರಿಚರ್ಡ್ ಜಿ. ವಿಲ್ಕಿನ್‌ಸನ್ ಮತ್ತು ಕೇಟ್ ಪಿಕೆಟ್ ಬರೆದಿರುವ  ‘ದಿ ಸ್ಪಿರಿಟ್ ಲೆವೆಲ್’ ಎಂಬ ಪುಸ್ತಕದಲ್ಲಿ ಸಾಮಾಜಿಕ ಹಿತ ಮತ್ತು ಆರ್ಥಿಕ ಸಮಾನತೆಗಳು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಹೇಗೆ ಅಗಾಧವಾದ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ್ದಾರೆ. ವೈದ್ಯಕೀಯ ಅಧ್ಯಯನಗಳೂ ಒತ್ತಡ, ಆಂತಕ, ಒಂಟಿತನಗಳು ನಮ್ಮ ರೋಗನಿರೋಧಕಶಕ್ತಿಯನ್ನು ಕುಂದಿಸುತ್ತವೆ.

ಈ ಒತ್ತಡದಲ್ಲಿ ದೇಹ ತನ್ನನ್ನು ಕಾಪಾಡಿಕೊಳ್ಳಲು ಕಾರ್ಟಿಸಾಲ್ ಹಾಮೋನ್‌ಗಳು ಹೆಚ್ಚು ಹೆಚ್ಚು ಉತ್ಪಾದಿಸುವುದರಿಂದ ದೇಹ ತನ್ನ ಕೋಟೆಯ ಭದ್ರತೆಯನ್ನು ಕ್ರಮೇಣ ಕಳೆದುಕೊಳ್ಳುತ್ತದೆ; ಸೊಂಕುರೋಗ ಸುಲಭವಾಗಿ ತಗುಲುವಂತಾಗುತ್ತದೆ. ಆಗ ಲಸಿಕೆಗಳ ಕೆಲಸ ಕೂಡ ಅಷ್ಟು ಸಮರ್ಪಕವಾಗಿರದು ಎನ್ನುತ್ತಿವೆ; ಗಾಯಗಳು ವಾಸಿಯಗುವ ಸಮಯ ಕೂಡ ನಿಧಾನವಾಗುತ್ತದೆ.

ಇತ್ತೀಚಿಗೆ ನಮ್ಮ ನಮ್ಮ ನಡುವೆ ಮಾತುಕತೆ–ಸಲ್ಲಾಪಗಳೇ ಸತ್ತೇ ಹೋಗಿದೆ ಎಂದರೆ ತಪ್ಪಾಗದು. ನಮ್ಮ ದೃಶ್ಯಮಾಧ್ಯಮಗಳನ್ನು ಕಂಡರೆ ನಮ್ಮ ಈ ಸಂಶಯ ನಿವಾರಣೆಯಾಗುವುದು ಖಂಡಿತ. ‘ಸಂವಹನಕ್ಕೆ ವಿಶೇಷ ಒತ್ತಡ ಇಲ್ಲದಿದ್ದರೆ ಮಾತನಾಡಬಹುದು’ ಎಂದಿದ್ದ ಮಾರ್ಕ್ ಟ್ವೈನ್. ತಾಯಿ ಮಗುವಿನ ನಡುವೆ ನಡೆವ ಸಂವಾದ ಅರ್ಥವಿಲ್ಲವೆಂದೆನಿಸಿದರೂ ಅದು ಅರ್ಥ ಮೀರಿದ ನೈಜ ಸಾವಯವ ಸಂಭಾಷಣೆ.

Gibberish is only the best communication – ಎನ್ನುವುದುಂಟು. ಮಕ್ಕಳನ್ನು ಯಾಂತ್ರಿಕ ಆಟಿಕೆಗೆ ತುತ್ತಾಗಿಸಿ, ಅವರನ್ನು ಮಾತಿಗೆ ದೂರ ಮಾಡಿ, ಅಥವಾ ಟೀವಿ ಮುಂದೆ ಕೂರಿಸಿ ಸುಮ್ಮನಿರುಸುವಂತೆ ಪೋಷಕರು ಮಾಡುತ್ತಿದ್ದಾರೆ. ಮಕ್ಕಳಲ್ಲಿ ಇಂದು ಹೆಚ್ಚು ಹೆಚ್ಚು ಕಾಣುತ್ತಿರುವ ಆಟಿಸಂ ಸಮಸ್ಯೆಗೆ ಇದೊಂದು ಪ್ರಮುಖ ಕಾರಣ. ಇಂದು ಸಂಸಾರದಲ್ಲಿ ಮರೆಯಾಗುತ್ತಿರುವ ಸಾಮರಸ್ಯಕ್ಕೆ ಕಾರಣ ಮನೆಯಲ್ಲಿರುವವರೆಲ್ಲರ ದೃಷ್ಟಿ–ಗುರಿ ಟಿವಿಯತ್ತ ಇರುವುದೇ  ಎನ್ನುತ್ತಾರೆ, ದಲೈಲಾಮ!

ನಮ್ಮ ಮೆದುಳು ಕೂಡ ಕೇವಲ ಹುಟ್ಟಿನಿಂದ ಬಳುವಳಿಯಾಗಿ ಪಡೆದ ಶಾಶ್ವತ ಅಂಗವಲ್ಲ; ಸಾಮಾಜಿಕ ವ್ಯವಹಾರದಿಂದ ಕಟ್ಟಲ್ಪಡುವ ನೇಯ್ಗೆ ಅದು. ಇದನ್ನು ಇಂದು social synapse ಎನ್ನುತ್ತಾರೆ. ನಮ್ಮ ಮೆದುಳು ನಮ್ಮ ತಲೆಯೊಳಗೆ ಮಾತ್ರವೇ ಬಂಧಿತವಲ್ಲ; ಅದು ಇತರರೊಂದಿಗೂ ಬೆಸೆದು ಹರಡಿರುವ ಜಾಲ. ಇದನ್ನು ಹಕ್ಕಿಗಳಲ್ಲಿ, ಮೀನುಗಳಲ್ಲಿ ಇನ್ನೂ ಸ್ಪಷ್ಟವಾಗಿ ಕಾಣಬಹುದು.

ಲಕ್ಷಗಟ್ಟಲೆ ಚಿಕ್ಕ ಮೀನುಗಳು ಕ್ಷಣಾರ್ಧದಲ್ಲಿ ಗುಂಪುಗೂಡಿ ದೊಡ್ಡ ಮೀನಿನ ಆಕಾರವನ್ನು ತೋರುತ್ತವೆ;  ತಮ್ಮನ್ನು ಭಕ್ಷಿಸಲು ಬಂದ ದೊಡ್ಡ ಮೀನಿಗೆ ಅದಕ್ಕಿಂತ ದೊಡ್ಡದೆಂದು ಭಯವನ್ನು ಆ ಮೂಲಕ ಹುಟ್ಟಿಸುತ್ತವೆ. ಇದೇ ರೀತಿ ಹಕ್ಕಿಗಳು ಸಹ ಏಕಕಾಲದಲ್ಲಿ ವ್ಯವಹರಿಸುತ್ತವೆ. ಈ ಸಮೂಹಪ್ರಜ್ಞೆ ಅವುಗಳ ರಕ್ಷಣೆಗೆ, ಉಳಿವಿಗೆ ಸಹಾಯವಾಗುತ್ತದೆ. ಈ ಪ್ರಜ್ಞೆ ವೈಯಕ್ತಿಕವೂ ಹೌದು, ಸಾಮೂಹಿಕವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.