ADVERTISEMENT

ಎಎಂಎಚ್‌ ಹಾರ್ಮೋನಿಗೂ ಗರ್ಭಧಾರಣೆಗೂ ಇದೆ ನಂಟು

ಡಾ.ಬೀನಾ ವಾಸನ್
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಎಎಂಎಚ್‌ ಹಾರ್ಮೋನಿಗೂ ಗರ್ಭಧಾರಣೆಗೂ ಇದೆ ನಂಟು
ಎಎಂಎಚ್‌ ಹಾರ್ಮೋನಿಗೂ ಗರ್ಭಧಾರಣೆಗೂ ಇದೆ ನಂಟು   

ಗರ್ಭಧಾರಣೆಯಲ್ಲಿನ ಸಮಸ್ಯೆ ಎಂದು ಗುರುತಿಸಲಾಗಿರುವ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌)ಗೂ, ಮಹಿಳೆಯರಲ್ಲಿ ಅಧಿಕ ಎಎಂಎಚ್‌ ಹಾರ್ಮೋನಿನ ಮಟ್ಟಕ್ಕೂ ಒಂದಕ್ಕೊಂದು ಸಂಬಂಧವಿದೆಯೇ? ಇದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಗರ್ಭಧಾರಣೆಯಲ್ಲಿನ ಸಮಸ್ಯೆಗಳ ಪತ್ತೆ ಹಚ್ಚುವಿಕೆಗೆ ನಡೆಸುವ ಚಿಕಿತ್ಸೆಗಳ ಪೈಕಿ ಎಎಂಎಚ್ (ಆ್ಯಂಟಿ ಮ್ಯುಲೆರಿಯನ್ ಹಾರ್ಮೋನು-ಅಂಡಾಣು ಚೀಲದಲ್ಲಿ ಗ್ರಾನುಲೋಸ ಕೋಶಗಳಿಂದ ಉತ್ಪತ್ತಿಯಾಗುವ ಹಾರ್ಮೋನು)ಗಳ ಪರೀಕ್ಷೆಯೂ ನಡೆಯುತ್ತದೆ. ಈ ಮುನ್ನ ಎಎಂಎಚ್‌ ಹಾರ್ಮೋನು ಹೆಚ್ಚಿದ್ದರೆ, ಅದನ್ನು ಅಂಡಾಶಯದ ಉತ್ತಮ ಸಂಗ್ರಹದ ಸೂಚನೆ ಎಂದು ಪರಿಗಣಿಸಲಾಗುತ್ತಿತ್ತು.

ಆದರೆ ಹೊಸ ಸಂಶೋಧನೆಯೊಂದು, ಈ ಎಎಂಎಚ್‌ ಹಾರ್ಮೋನಿನ ಮಟ್ಟವು ಸಹಜಕ್ಕಿಂತ (0.9-3.5 ng/ml)ಗಿಂತ ಅಧಿಕವಾದರೆ, ಅದು ಪಿಸಿಒಎಸ್‌ ಸಮಸ್ಯೆಯ ಸೂಚಕವೂ ಹೌದು ಎಚ್ಚರಿಕೆ ನೀಡಿದೆ. ಹೇಗೆ ಎಎಂಎಚ್‌ ಮಟ್ಟವು ಪಿಸಿಒಎಸ್‌ ಸಮಸ್ಯೆಗೆ ಕೊಂಡಿಯಾಗಿದೆ ಹಾಗೂ ಎಎಂಎಚ್‌ ಮಟ್ಟ ಏರಿದಂತೆ ಪಿಸಿಒಎಸ್‌ ಸಮಸ್ಯೆಯ ಮಟ್ಟವೂ ಗಂಭೀರ ಹಂತ ತಲುಪುವುದನ್ನು ತಿಳಿಸುವ ಹಾದಿಯಲ್ಲಿ ಅಧ್ಯಯನಗಳೂ ಸಾಗುತ್ತಿವೆ.

ADVERTISEMENT

ಅಧಿಕ ಎಎಂಎಚ್‌, ಅಂಡಾಶಯದ ಕಾರ್ಯವೈಖರಿಯಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಏಕೆಂದರೆ ಎಎಂಎಚ್‌ ಉತ್ಪತ್ತಿಯಾಗುವುದು ಅಂಡಾಶಯದ ಅಪಕ್ವ ಕೋಶಗಳಿಂದ. ಆದ್ದರಿಂದ ಅಂಡಾಶಯದಲ್ಲಿ ಅಪಕ್ವ ಕೋಶಗಳು ಹೆಚ್ಚಾದಂತೆ ಎಎಂಎಚ್ ಮಟ್ಟವೂ ಅಸಹಜವಾಗಿ ಅಧಿಕವಾಗುತ್ತದೆ. ಅಂಡಾಶಯದ ಮೇಲ್ಮೈನಲ್ಲಿ ಈ ಅಪಕ್ವ ಕೋಶಗಳಿದ್ದು, ಇವನ್ನು ಅಲ್ಟ್ರಾಸೌಂಡ್ ಇಮೇಜಿಂಗ್ ಮೂಲಕ ಕಾಣಬಹುದು. ಈ ಕೋಶಗಳು ಅಧಿಕವಿದ್ದಷ್ಟು, ಸಹಜವಾಗಿ ಎಎಂಎಚ್‌ ಹಾರ್ಮೋನನ್ನೂ ಹೆಚ್ಚು ಉತ್ಪಾದಿಸುತ್ತದೆ. ಪಿಸಿಒಎಸ್‌ ಇರುವ ಮಹಿಳೆಯರನ್ನು ಪರೀಕ್ಷಿಸಿದಾಗ ಸಾಮಾನ್ಯಕ್ಕಿಂತ ಅಧಿಕ ಮಟ್ಟದಲ್ಲಿ ಎಎಂಎಚ್‌ ಉತ್ಪತ್ತಿಯಾಗಿರುವುದೇ ಕಂಡುಬಂದಿದೆ.

ಅಂಡಾಶಯದ ಕೋಶಗಳು ಪ್ರಬಲವಾಗಿದ್ದಾಗ, ಅವು ಪಕ್ವವಾಗಿ ಅಂಡೋತ್ಪತ್ತಿಗೆ ಸಜ್ಜಾಗುತ್ತವೆ. ಅದರೊಳಗೆ ಎಎಂಎಚ್‌ ಹಾರ್ಮೋನೂ ವಿಲೀನಗೊಳ್ಳುತ್ತವೆ. ಆದರೆ ಎಎಂಎಚ್‌ನ ಮಟ್ಟವೂ ನಿರಂತರವಾಗಿ ಹೆಚ್ಚಿದ್ದರೆ, ಪ್ರಬಲ ಕೋಶಗಳ ಅಭಿವೃದ್ಧಿಗೆ ಅವಶ್ಯಕವಾದ ಈ ವಿಲೀನಗೊಳ್ಳುವ ಪ್ರಕ್ರಿಯೆಗೂ ಅಡ್ಡಿಯಾಗುತ್ತದೆ. ಈ ರೀತಿಯಾಗಿ ಕೋಶದ ಬೆಳವಣಿಗೆ ಹಾಗೂ ಅಂಡೋತ್ಪತ್ತಿಗೆ ತಡೆಯಾಗುತ್ತದೆ. ಕೊನೆಗೆ, ಎಎಂಎಚ್‌ ಹಾರ್ಮೋನು, ಫಾಲಿಕ್ಯುಲೊಜೆನೆಸಿಸ್ (ಕೋಶ ಉತ್ಪತ್ತಿಯ ಪ್ರಕ್ರಿಯೆ)ಗೆ ಪ್ರಮುಖ ಪ್ರತಿರೋಧಕವಾಗುತ್ತದೆ. ಇದು ಅಂಡೋತ್ತತ್ತಿಗೆ ತೊಡಕಾಗಿ ಪರಿಣಮಿಸುತ್ತದೆ. ಆದರೆ ನಿಖರ ಪರೀಕ್ಷೆಯಿಂದ ನಿರ್ದಿಷ್ಟ ಚಿಕಿತ್ಸೆಗೆ ನೆರವಾಗುತ್ತದೆ. ಪಿಸಿಒಎಸ್‌ ಸಮಸ್ಯೆಗೆ ಮೆಟಬಾಲಿಕ್‌ ಅಸಮತೋಲನವೂ ಕಾರಣವಾಗಬಲ್ಲದು. ಇವನ್ನು ಕಂಡುಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟರೆ ಗರ್ಭಧರಿಸುವ ಸಾಧ್ಯತೆ ಹೆಚ್ಚುತ್ತದೆ.

ಸಾರಾಂಶವೆಂದರೆ, ಈ ಎಎಂಎಚ್‌ಗೂ ಅಂಡಾಶಯದ ಸಂಗ್ರಹಕ್ಕೂ, ಆ್ಯಂಡ್ರೋಜೆನ್ ಮಟ್ಟಕ್ಕೂ ಒಂದಕ್ಕೊಂದು ಸಂಬಂಧವಿರುವುದರಿಂದ ಎಎಂಎಚ್‌ ಹಾರ್ಮೋನಿನ ಮಟ್ಟವನ್ನು ಅಂಡಾಶಯದ ಸ್ಥಿತಿಗತಿಯನ್ನು ಪರಿಶೀಲಿಸಲು, ಪಿಸಿಒಎಸ್‌ ಸಮಸ್ಯೆ ಕಂಡುಕೊಳ್ಳಲು ಹಾಗೂ ಪರಿಣಾಮಕಾರಿ ಚಿಕಿತ್ಸೆಯ ದಾರಿಯನ್ನು ಕಂಡುಕೊಳ್ಳಬಹುದು. ಎಎಂಎಚ್‌ ಅನ್ನು ಸಮಸ್ಯೆಯ ಒಂದು ಸೂಚಕವಾಗಿ ಬಳಸಿಕೊಳ್ಳಬಹುದು.

ಮಹಿಳೆಯರಲ್ಲಿನ ಫಲವಂತಿಕೆ ಸಮಸ್ಯೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುವವರಲ್ಲಿ ಎಎಂಎಚ್‌ ಪರೀಕ್ಷೆಯನ್ನೂ ನಡೆಸುವುದು ಸಹಜವೇ. ನಮ್ಮ ಅನುಭವದಲ್ಲೇ ಹೇಳುವುದಾದರೆ, ಸಹಜ ಮಟ್ಟಕ್ಕಿಂತ, ಎರಡು ಅಥವಾ ಮೂರು ಪಟ್ಟು ಎಎಂಎಚ್‌ ಮಟ್ಟ ಹೆಚ್ಚಿದ್ದರೆ (10 ± 2.28 ng/mL), ಅದನ್ನು ಪಿಸಿಒಎಸ್‌ ಹಾಗೂ ಫಲವಂತಿಕೆಯ ಸಮಸ್ಯೆಯ ನಿರ್ದಿಷ್ಟ ಸೂಚನೆ ಎಂದೇ ತಿಳಿಯಬಹುದು.

ಪಿಸಿಎಸ್‌ಒ ಸಮಸ್ಯೆಗೆ ಚಿಕಿತ್ಸೆಯ ರೂಪವಾಗಿ ಹಲವು ಹಾದಿಗಳಿವೆ. ಅಕ್ಯುಪಂಕ್ಚರ್, ಆಹಾರ ಕ್ರಮದಲ್ಲಿನ ಬದಲಾವಣೆ, ವ್ಯಾಯಾಮ ಹಾಗೂ ಪೂರಕ ಪೌಷ್ಟಿಕಾಂಶ ಸೇವನೆ – ಇವೆಲ್ಲವೂ ಗರ್ಭಧಾರಣೆಗೆ ಸಂಬಂಧಿಸಿದ ಚಿಕಿತ್ಸೆಗೆ ಪೂರಕವಾಗಿ ನೆರವಾಗುತ್ತವೆ. ಮಾತ್ರವಲ್ಲ, ಪಿಸಿಒಎಸ್ ಅನ್ನು ನೈಸರ್ಗಿಕವಾಗಿ ನಿವಾರಿಸಿಕೊಳ್ಳಲೂ ಇವು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.