ADVERTISEMENT

ಎಳೆತ್ವಚೆಗೆ ಮೃದುಬಟ್ಟೆ

ಅರಿವೆಯ ಹರವು

ನಿಷ್ಕಾ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST
ಎಳೆತ್ವಚೆಗೆ ಮೃದುಬಟ್ಟೆ
ಎಳೆತ್ವಚೆಗೆ ಮೃದುಬಟ್ಟೆ   

ಬೇಸಿಗೆ ಎಂದರೆ ಬಿಸಿಲಷ್ಟೇ ಅಲ್ಲ. ಶಾಲೆಗೆ ಸುದೀರ್ಘ ರಜೆಯ ಕಾಲವೂ ಹೌದು. ಹಾಗಾಗಿ ಮಕ್ಕಳಿಗೆ ಆ ದಪ್ಪನೆ ಬಟ್ಟೆಯ ಯೂನಿಫಾರ್ಮ್‌ನಿಂದ ಬಿಡುಗಡೆ. ಮನೆಯಲ್ಲಿರುವಾಗಲಾಗಲೀ, ಹೊರ ಹೋಗುವುದಾಗಲೀ ಚಿಕ್ಕದಾಗಿ ಬಿಡುತ್ತವೆ ಎಂದು ಪದರ ಪದರವಾಗಿ ಹೊಲಿದ ವಿನ್ಯಾಸದ ಭರ್ಜರಿ ಡ್ರೆಸ್‌ ಹಾಕುವುದು ಸರಿಯಲ್ಲ. ಹಗುರವಾದ ಹತ್ತಿಯ ಬಟ್ಟೆಯ ಡ್ರೆಸ್‌ ಆದರೆ ಆರಾಮ. ಪುಟ್ಟಕಂದಮ್ಮಗಳಿಗಂತೂ ಬೇಸಿಗೆಗೆ ಬಟ್ಟೆ ಹಾಕದಿದ್ದರೂ ಆದೀತು. ಹಳೆಯ ಕಾಟನ್‌ನ ಬಟ್ಟೆಯನ್ನು ಸಡಿಲವಾಗಿ ಸುತ್ತಿ ಮಲಗಿಸಿದರೆ ಸರಿ.

ಸಡಿಲ ತೆಳುವಾದ ಕಾಟನ್‌ನ ಜಬಲಾ ಅತ್ಯುತ್ತಮ ಆಯ್ಕೆ. ತೆಳುವಾದ ಹೊಸೈರಿ ಮೆಟೀರಿಯಲ್‌ನ ಅಂಗಿಗಳೂ ಆದೀತು. ಆದರೆ ಮಕ್ಕಳಿಗೆ ಮುಂದೆ ಬಟನ್‌ ಇರುವ ಡ್ರೆಸ್‌ ಸೂಕ್ತ. ಉಡುಪು ಬಿಗಿಯಾಗಿರಕೂಡದು.  ಬಿಗಿ ಬಟ್ಟೆಯಾದರೆ ರಕ್ತ ಪರಿಚಲನೆ ಸರಾಗವಾಗಿ ಆಗದು. ಸಡಿಲವೇ ಇರಲಿ. ಮೆತ್ತನೆ ಮಲ್‌ ಕಾಟನ್, ಈಜಿಪ್ಷಿಯನ್‌ ಕಾಟನ್‌ನ ಬಟ್ಟೆ ಹೆಚ್ಚು ಸೂಕ್ತ.  ಉಲನ್‌ನ ಹೊದಿಕೆ, ಫ್ಲೀಶ್‌ಮಕ್ಕಳು ಬೆಚ್ಚಗೆ ಇದ್ದರೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೇನೋ ಸರಿ,  ಆದರೂ ನವಜಾತ ಶಿಶುಗಳಿಗೂ ಸೆಕೆಯಾಗುತ್ತದೆ.

ಕಿರಿಕಿರಿ ಮಾಡುತ್ತವೆ. ಎಳೆಯ ತ್ವಚೆ ಮೇಲೆ ಬೊಬ್ಬೆಗಳೇಳಬಹುದು. ವರ್ಷದೊಳಗಿನ ಮಕ್ಕಳಾದರೂ ದೇಹದ ಉಷ್ಣಾಂಶ, ವಾತಾವರಣದ ಉಷ್ಣಾಂಶ ಹೆಚ್ಚಿ ಜ್ವರ, ಮೀಸಲ್ಸ್‌ (ಗೊಬ್ಬರ, ಅಥವಾ ಅಮ್ಮ) ಕಾಣಿಸಿಕೊಳ್ಳುವ ಅಪಾಯ ಇಲ್ಲದೇ ಇಲ್ಲ. ಕೃತಕ ಬಟ್ಟೆಯಂತೂ ಬೇಡವೇ ಬೇಡ. ಇದರಿಂದ ಬೆವರು, ಸೆಕೆ ಸೇರಿ ತ್ವಚೆಯ ಅಲರ್ಜಿ, ತುರಿಕೆ, ಮೈಮೇಲೆ ಗಂಧೆಗಳೇಳುವ ಸಾಧ್ಯತೆ ಇಲ್ಲದೇ ಇಲ್ಲ.

ಶಾಲೆಗೆ ಹೋಗುವ ವಯಸ್ಸೇನೂ ಅಲ್ಲ, ಆದರೂ ತುಸುವೇ ದೊಡ್ಡ ಮಕ್ಕಳಿದ್ದರೆ ಬೇಸಿಗೆ ಎಂದು ತುಂಬ ಚಿಕ್ಕ ಸ್ಕರ್ಟ್‌, ಶಾರ್ಟ್ಸ್‌ ಮತ್ತು ಸ್ಲೀವ್‌ಲೆಸ್‌ ಅಥವಾ ಸಣ್ಣ ತೋಳಿನ ಡ್ರೆಸ್ಸನ್ನೇ ಯಾವಾಗಲೂ ಹಾಕಬೇಕಾಗಿಲ್ಲ. ಮನೆಯಲ್ಲಿದ್ದಾಗ, ಮನೆ ಹತ್ತಿರವೇ ಆಡಿಕೊಂಡಿರುವ ಸಮಯದಲ್ಲಿ ಇವು ಪರವಾಗಿಲ್ಲ. ಆದರೆ ಸೂರ್ಯನ ಬಿಸಿಲಿಗೆ ಆ ಎಳೆ ತ್ವಚೆ ನಲುಗುತ್ತದೆ; ಬಿಸಿಲಿಗೆ ಬಣ್ಣ ಕಂದುತ್ತದೆ. ಹಾಗಾಗಿ ಸಡಿಲವಾದ ತುಂಬು ತೋಳಿನ ಡ್ರೆಸ್‌ ಹೆಚ್ಚು ಸೂಕ್ತ. ನೇರ ಬಿಸಿಲಿನ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ. ಮುಖದ ಮೇಲೂ ಬಿಸಿಲು ಬಿದ್ದು ಹಾನಿಯಾಗದಂತೆ ಕಣ್ಣುಗಳಿಗೂ ರಕ್ಷಣೆ ಇರುವಂತೆ ಕ್ಯಾಪ್, ಹ್ಯಾಟ್ ಹಾಕಬಹುದು.

ಪ್ರಯಾಣ ಸಂದರ್ಭದಲ್ಲಿ, ಕೂಡ ಇಂಥದೇ ಬಿಳಿಯ ಬಣ್ಣದ ಡ್ರೆಸ್ ಹಾಕಿದರೆ ಸರಿ. ಪ್ರವಾಸ ಸಪ್ಪೆ ಎನಿಸಬಹುದು ಎಂದರೆ ತಿಳಿ ಬಣ್ಣಗಳ, ಹೂವಿನ ವಿನ್ಯಾಸದ ಉಡುಪುಗಳನ್ನು ಹಾಕಬಹುದು. ತಿಳಿ ಬಣ್ಣದ ಬಟ್ಟೆಗಳು ಪ್ರಖರ ಬಿಸಿಲಿನಲ್ಲೂ ಕಣ್ಣಿಗೆ ಆರಾಮ ಎನಿಸುತ್ತವೆ. ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಬಿಸಿಯ ಅನುಭವ ದೇಹಕ್ಕೆ ಅಷ್ಟಾಗಿ ಆಗಗೊಡದೇ ರಕ್ಷಿಸುತ್ತವೆ. ಅದರಲ್ಲೂ ಹತ್ತಿಯ ಬಟ್ಟೆಯೇ ಆದರೆ ಸೆಕೆ ಆಗುವುದಿಲ್ಲ, ಅವುಗಳ ರಂಧ್ರಗಳಿರುವ ಗುಣ ಗಾಳಿಯಾಡುವಂತೆ ಮಾಡುತ್ತದೆ. ಬೆವರನ್ನು ಹೀರಿಕೊಂಡು ಆರಾಮ ಒದಗಿಸುತ್ತದೆ.

ಅಪ್ಪಟ ಹತ್ತಿಯ ಬಟ್ಟೆಯದೇ ಉಡುಪುಗಳಲ್ಲೂ ಬೇಕಾದಷ್ಟು ವೈವಿಧ್ಯಗಳು ಸಿಗುತ್ತವೆ. ಹುಡುಗರಿಗೂ ಸ್ಲೀವ್‌ಲೆಸ್‌್‌ ಟಿಶರ್ಟ್, ಬಣ್ಣ ಬಣ್ಣದ ಕಾರ್ಟೂನ್‌ ಕ್ಯಾರೆಕ್ಟರ್‌ನ ಚಿತ್ರಗಳಿರುವ ಬನಿಯನ್‌ಗಳೂ ಆಕರ್ಷಕವಾಗಿ ಲಭ್ಯ ಇವೆ. ಜಿಗಿದಾಡುವ, ಒಂದು ಕಡೆ ನಿಂತಲ್ಲಿ ನಿಲ್ಲದ ತುಂಟ ಮಕ್ಕಳಿಗೆ   ಬರ್ಮುಡಾ, ಹಾಫ್‌ ಪ್ಯಾಂಟ್‌ ಥ್ರೀ ಫೋರ್ತ್‌ ಪ್ಯಾಂಟ್‌ಗಳ ಮೇಲೆ ಇಂಥ ಟಿಶರ್ಟ್‌ ಅಥವಾ ಬನಿಯನ್‌ ಹಾಕಿಬಿಟ್ಟರೆ ಆಯಿತು. ಆದರೆ ಜೀನ್ಸ್‌ ಅಥವಾ ದಪ್ಪನೆ ಕಾಟನ್‌ನ ಪ್ಯಾಂಟ್‌ ಬೇಡ. ಅಗಲ ಬಾಟ್‌ಮ್‌ನ ಕಾಟನ್‌ ಪ್ಯಾಂಟ್‌ ಆದರೆ ಸರಿ. ಟರ್ಟಲ್‌ ನೆಕ್‌, ಪೋಲೊ ನೆಕ್‌ನ ಅಂಗಿ,  ಸಿಂಥೆಟಿಕ್‌ ಟೈಟ್ಸ್ ಯಾಕೆ ಬೇಕು?

ಒಟ್ಟಿನಲ್ಲಿ ಟೆರಿಕಾಟ್, ಪಾಲಿಯೆಸ್ಟರ್, ಟೆರಿವೂಲ್‌ ಮಿಶ್ರಿತ ಸಿಂಥೆಟಿಕ್‌ ಬಟ್ಟೆ ಇದ್ದರೆ ಕಟ್ಟಿ ಮೇಲಿಟ್ಟುಬಿಡಿ ಬೇಸಿಗೆ ಮುಗಿಯುವವರೆಗೆ. ಕಾಟನ್‌ನಲ್ಲೂ ಮಿಕ್ಸ್‌ಡ್‌ ಕಾಟನ್‌ನ ವ್ಯತ್ಯಾಸ ತಿಳಿಯಲು ಉಡುಪಿನ ಒಂದೇ ಪದರವನ್ನು ತೋರು ಬೆರಳು ಮತ್ತು ಹೆಬ್ಬೆರಳ ನಡುವೆ ಹಿಡಿದು ವೃತ್ತಾಕಾರವಾಗಿ ಬೆರಳು ಸವರಿ ನೋಡಬಹುದು. ಅಪ್ಪಟ ಹತ್ತಿಯ  ಅನುಭವವೇ ಬೇರೆ. ಮಿಕ್ಸ್‌ಡ್‌ ಆಗಿದ್ದರೆ ತುಸು ಉರುಟಾಗಿರುತ್ತದೆ. ಸಿಂಥೆಟಿಕ್ ಆಗಿದ್ದರೆ ಸರಾಗವಾಗಿ ಬೆರಳು ಜಾರಿಕೊಂಡಂತೆ ಎನಿಸುತ್ತದೆ.

ಮದುವೆಯಂಥ ದೊಡ್ಡ ಸಮಾರಂಭಗಳಿಗಾದರೂ ಸರಿಯೇ ರೇಷ್ಮೆ ಬೇಡವೇ ಬೇಡ. ಇದು ಮಕ್ಕಳನ್ನು ಮತ್ತಷ್ಟು ಬೆಚ್ಚಗೆ ಇಡುತ್ತದೆ. ಕಾಟನ್ ಬಟ್ಟೆಯ ಮೇಲೇ ಚಿನ್ನದ ಬಣ್ಣದ ಲೇಪವಿರುವ, ಬ್ಲಾಕ್‌ ಪ್ರಿಂಟ್‌ನ ಇಲ್ಲವೆ ಕಸೂತಿ ವಿನ್ಯಾಸ ಮಾಡಿದ ಡ್ರೆಸ್‌ಗಳನ್ನು ಹಾಕಬಹುದು. ಇವೂ ಕಡಿಮೆ ಕಿಮ್ಮತ್ತಿನವೇನೂ ಇಲ್ಲ. ಘನತೆಯೇನೂ ಕಡಿಮೆಯಾಗುವುದಿಲ್ಲ. ನೋಡಲು ಗ್ರ್ಯಾಂಡ್‌ ಆಗಿ ಕಂಡರೂ ಮಕ್ಕಳಿಗೆ ಕಿರಿಕಿರಿ ಆಗುವುದಿಲ್ಲ. ಜತೆಗಿದ್ದ ದೊಡ್ಡವರಿಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT