ADVERTISEMENT

ಕಾಣದ ಕೈ-ಕೇಳುವ ದನಿಗಳ ಮಧ್ಯೆ...

ಮೇ 24 ವಿಶ್ವ ಸ್ಕಿಜೋಫ್ರಿನಿಯಾ ದಿನ

ಡಾ.ಕೆ.ಎಸ್.ಪವಿತ್ರ
Published 20 ಮೇ 2016, 19:41 IST
Last Updated 20 ಮೇ 2016, 19:41 IST
ಕಾಣದ ಕೈ-ಕೇಳುವ ದನಿಗಳ ಮಧ್ಯೆ...
ಕಾಣದ ಕೈ-ಕೇಳುವ ದನಿಗಳ ಮಧ್ಯೆ...   

ರೋಗಿಗೆ ತನ್ನಲ್ಲಿರುವ ಭ್ರಮೆಗಳು, ಕೇಳುವ ದನಿಗಳು, ಅನುಮಾನ ಈ ಎಲ್ಲವೂ ಎಂದು ಗ್ರಹಿಸಲು ಆಗುವುದಿಲ್ಲ. ತನ್ನ ಸುತ್ತಲಿರುವ ಪರಿಸರದಲ್ಲಿಯೇ ಇವೆಲ್ಲವೂ ನಡೆಯುತ್ತಿದೆ ಎಂದು ಆತ ಭಾವಿಸುತ್ತಾನೆ. ತಾನು ಸರಿಯೇ ಇರುವಾಗ, ತನಗೇಕೆ ಚಿಕಿತ್ಸೆ ಬೇಕು ಎಂದು ಪ್ರಶ್ನಿಸುತ್ತಾನೆ.. ಮನೆಯವರೇನು ಮಾಡಬೇಕು? ವಿವರ ಇಲ್ಲಿದೆ..

ಭಾರತದಲ್ಲಿ ‘ಸ್ಕಿಜೋಫ್ರಿನಿಯಾ’ ರೋಗಿಗಳ ಸ್ಥಿತಿಯ ಬಗ್ಗೆ ವಿವರಿಸುತ್ತಿದ್ದಾಗ, ಜಪಾನ್‌ನಲ್ಲಿ ಮನೋವೈದ್ಯರೊಬ್ಬರು ಕೇಳಿದ್ದರು. “ನಮ್ಮ ಜಪಾನ್‌ನಲ್ಲಿ ‘ಸ್ಕಿಜೋಫ್ರಿನಿಯಾ’ ಎಂಬ ಹೆಸರನ್ನೇ ಬದಲಾಯಿಸುತ್ತಿದ್ದೇವೆ. ನಿಮ್ಮ ಭಾರತದಲ್ಲೂ ಹಾಗೆ ಮಾಡಲು ಸಾಧ್ಯವಿಲ್ಲವೇ?” ಹೌದು, ಅವರು ಕೈಗೊಂಡಿರುವ ಕ್ರಮದಲ್ಲಿಯೂ ರೋಗಿಗಳಿಗೆ ಉಪಯೋಗವಾಗಲು ಸಾಧ್ಯವಿದೆ ಎನಿಸಿತ್ತು.

‘ಸ್ಕಿಜೋಫ್ರಿನಿಯಾ’ ಅಥವಾ ಕನ್ನಡದಲ್ಲಿ ನಾವು ಕರೆಯುವ ‘ಚಿತ್ತ ವೈಕಲ್ಯ’ ಎಲ್ಲರೂ ಹೆದರುವಂತೆ ಮಾಡುವ, ಚಿಕಿತ್ಸೆ ಗೊತ್ತಿದ್ದವರಿಗೂ ಕಸಿವಿಸಿ ಮೂಡಿಸುವ ಶಬ್ದ. ಕೆಳಗಿನ ಉದಾಹರಣೆಯನ್ನೇ ಗಮನಿಸೋಣ.

“ಡಾಕ್ಟ್ರೇ, ನಮ್ಮ ಮಗ ಏನೇನೋ ಮಾತು ಕೇಳತ್ತೆ ಅಂದ, ಅವನ ಪಾಡಿಗೆ ಅವನೇ ಮಾತಾಡ್ತಿದ್ದ. ಸರಿ, ಎಲ್ಲರೂ ಸೈಕಿಯಾಟ್ರಿಸ್ಟ್ ಹತ್ತಿರ ಹೋಗಿ ಅಂದ್ರು. ನಾವು ಒಬ್ಬರ ಹತ್ತಿರ ಹೋದ್ವಿ. ಅವರು ಇದು ‘ಸ್ಕಿಜೋಫ್ರಿನಿಯಾ’ ಅಂದು ಬಿಟ್ರು. ಅದಕ್ಕೇ ನಾವು ಅವರನ್ನ ನಂಬಲಿಲ್ಲ.

ಮತ್ತೊಬ್ರ ಹತ್ರ ಹೋದ್ವಿ. ಅವರೂ ಅದೇ ಅಂತ ಅಂದ್ರು. ನಾವು ಇಂಟರ್‌ನೆಟ್ಟೆಲ್ಲಾ ಹುಡುಕಿದ್ವಿ. ನಮಗನ್ನಿಸ್ತು, ಇದು ಡಿಪ್ರೆಷನ್ನೇ ಅಂತ . ಆ ಮೇಲೆ ನೀವು ನಮಗೆ ಸರಿಯಾದ ಡಯಾಗ್ನೋಸಿಸ್ ಕೊಡಬಹುದು ಅಂತ ಬಂದ್ವಿ!  ಹೇಳಿ ಡಾಕ್ಟ್ರೇ ನಮ್ಮ ಮಗನಿಗೆ ಸ್ಕಿಜೋಫ್ರಿನಿಯಾ ಇಲ್ಲ ಅಲ್ವಾ?”.

ತಮ್ಮ ಮಗನಿಗಿದ್ದ ‘ಸ್ಕಿಜೋಫ್ರಿನಿಯಾ’ ಕಾಯಿಲೆಯನ್ನು ಒಪ್ಪದೆ ವೈದ್ಯರಿಂದ ವೈದ್ಯರ ಬಳಿ ಓಡುತ್ತಾ, ಈ ತಂದೆ-ತಾಯಿ ಯಾವ ಚಿಕಿತ್ಸೆಯನ್ನೂ ಕೊಡಿಸದೆ ಒಂದು ವರ್ಷಕಾಲ ತಮ್ಮ ಮಗನಿಗಿರುವುದು ‘ಸ್ಕಿಜೋಫ್ರಿನಿಯಾ’ ಅಲ್ಲ ಎಂದು ನಿರೂಪಿಸಲು ಒದ್ದಾಡುತ್ತಿದ್ದರು.

ಈ ಘಟನೆಯನ್ನು ಕೇಳಿದಾಕ್ಷಣ ತಂದೆ-ತಾಯಿಗಳ ‘ಮೂರ್ಖತನ’ದ ಬಗ್ಗೆ ಹೆಚ್ಚಿನವರು ಗೇಲಿ ಮಾಡಿದರೂ, ಇಂಥ ಸಂದರ್ಭಗಳು ‘ಸ್ಕಿಜೋಫ್ರಿನಿಯಾ’ ಅಥವಾ ‘ಚಿತ್ತವೈಕಲ್ಯ’ ಎಂಬ ಶಬ್ದಗಳ ಬಗ್ಗೆ, ಆ ‘ಕಾಯಿಲೆ’ಗಿಂತ ಎಷ್ಟು ಹೆದರುತ್ತಾರೆ, ಮುಂದಿನ ಭವಿಷ್ಯವನ್ನು  ಆ ಹೆದರಿಕೆಯ ಮೇಲೆ ಆಧರಿಸಿಯೇ ಕಲ್ಪಿಸುತ್ತಾರೆ  ಎಂಬುದು ಸ್ಪಷ್ಟವಾಗುತ್ತದೆ.

ಕಾಣದ ಕೈ-ಕೇಳುವ ಧ್ವನಿಗಳು...
‘ಸ್ಕಿಜೋಫ್ರಿನಿಯಾ’ದ ಲಕ್ಷಣಗಳು ಮನೋವೈದ್ಯರನ್ನು ಬಿಟ್ಟರೆ ಇತರರಿಗೆ ಸುಲಭವಾಗಿ ಅರ್ಥವಾಗುವಂತಹವಲ್ಲ. ಯಾರೋ ತಮ್ಮ ವಿರುದ್ಧ ಸಂಚು ಹೂಡುತ್ತಿರುವರೆಂಬ ಭ್ರಮೆ, ಜನರಿಲ್ಲದೆಯೂ ಮಾತನಾಡಿದಂತೆ ಭಾಸವಾಗುವ ಮಿದುಳಿನೊಳಗೇ ಸೃಷ್ಟಿಯಾಗುವ ದನಿಗಳು,

ತಮ್ಮ ಯೋಚನೆಗಳು ಬೇರೆಯವರಿಗೆ ಗೊತ್ತಾಗುತ್ತಿದೆ ಯೆಂಬ ಭಾವನೆ, ಜಗತ್ತು ತನ್ನನ್ನೇ ಕುರಿತು ಅವಲೋಕಿಸುತ್ತಿದೆ ಎಂಬ ಅನುಮಾನ ಇವೆಲ್ಲಾ ‘ಕಾಯಿಲೆ’ಯೊಂದರ ಲಕ್ಷಣಗಳು ಎಂದು ಗೊತ್ತಾಗುವುದು ಒಂದು ಹಂತದ ನಂತರವೇ. ‘ನಮಗೆ ಇದು ಕಾಯಿಲೆಯಿರಬಹುದು ಎಂಬ ಅಂದಾಜಿದ್ದರೆ ನಾವು ಮೊದಲೇ ಚಿಕಿತ್ಸೆ ಕೊಡಿಸುತ್ತಿದ್ದೆವು’ ಎನ್ನುವವರು ಇಂದಿಗೂ ಬಹಳಷ್ಟು ಜನ.

‘ಸ್ಕಿಜೋಫ್ರಿನಿಯಾ’ದ ಹಿಂದಿನ ವಿಚ್ಛಿನ್ನ ವ್ಯಕ್ತಿತ್ವ (Split perso*ality) ಎಂಬ ಮನೋವಿಜ್ಞಾನದ ಆಸಕ್ತಿ-ವಿಚಿತ್ರ ಭಾವನೆ-ಕುತೂಹಲ ಮೂಡಿಸುವ ಸಿದ್ಧಾಂತವನ್ನು ಮೀರಿ ಮನೋವೈದ್ಯಕೀಯ ಸಂಶೋಧನೆಗಳು ಇಂದು ಇದನ್ನು ಮಿದುಳಿನ ಕಾಯಿಲೆಯಾಗಿ ನಿರೂಪಿಸಿವೆ.

ಅಂದರೆ ಸಕ್ಕರೆ ಕಾಯಿಲೆ -ರಕ್ತದೊತ್ತಡಗಳ ರೀತಿಯಲ್ಲಿ ಸ್ಕಿಜೋಫ್ರಿನಿಯಾವೂ ಒಂದು ‘ಕಾಯಿಲೆ’ ಎಂದು ಇಂದು ಪ್ರಬಲವಾಗಿ ಕಂಡು ಬಂದಿದೆ.
ಭ್ರಮೆಗಳು-ಕೇಳುವ ದನಿಗಳು ಮಿದುಳಿನಲ್ಲೇ ಉತ್ಪತ್ತಿಯಾಗುತ್ತವೆ.

ನರವಾಹಕ-ರಾಸಾಯನಿಕಗಳ ಏರುಪೇರು, ಮಿದುಳಿನ ರಚನಾತ್ಮಕ ವ್ಯತ್ಯಾಸ, ಮಿದುಳಿನ ಮಾಹಿತಿ ಸಂಸ್ಕರಣ-I*formatio* processi*g ಇವುಗಳಲ್ಲಿ ದೋಷಗಳು ಕಂಡುಬರುತ್ತವೆ ಎಂಬುದು ಸಂಶೋಧನೆಗಳು ಎತ್ತಿ ಹಿಡಿದಿರುವ ಸತ್ಯ. ಹಾಗೆಯೇ ಯಾವುದೇ ಕಾಯಿಲೆಯಲ್ಲಿಯೂ ಇರಬಹುದಾದ ಕೆಲವು ಭಾಗ ಅತಿ ತೀವ್ರತೆಯ ರೋಗಿಗಳನ್ನು ಹೊರತುಪಡಿಸಿ ಮಿಕ್ಕವರು ಸರಿಯಾದ ಚಿಕಿತ್ಸೆಯಿಂದ ಎಲ್ಲರಂತೆ ಜೀವನ ನಡೆಸಲು ಇಂದು ಸಾಧ್ಯವೂ ಇದೆ.

ಹೀಗಿದ್ದರೂ ಜನರು ಚಿಕಿತ್ಸೆಗೆ ತತ್‌ಕ್ಷಣ ಮುಂದಾಗದಿರುವುದು ಏಕೆ? ಇಂಥ ಸಂದರ್ಭದಲ್ಲಿ ಚರ್ಚೆಗೆ ಬರುವುದು, ಯಾವುದೇ ರೋಗದ ಚಿಕಿತ್ಸೆಗೆ ಬೇಕಾಗುವ ‘ಅರಿವಿನ ಒಳನೋಟ’ (i*sight). ಏನಿದು ಒಳನೋಟ? ನಮಗೆ ಹೊಟ್ಟೆನೋವು ಬಂತು ಎಂದುಕೊಳ್ಳಿ. ನೋವಿನ ಅನುಭವ ನಮಗಾಗುತ್ತದೆ. ನಾವೇ ವೈದ್ಯರ ಬಳಿ ಓಡುತ್ತೇವೆ. ನಮಗೆ ಹೊಟ್ಟೆನೋವಿದೆ ಎನ್ನುತ್ತೇವೆ, ಚಿಕಿತ್ಸೆ ತೆಗೆದುಕೊಳ್ಳುತ್ತೇವೆ.

ಇಲ್ಲಿ ನೋವು ನಮ್ಮ ಹೊಟ್ಟೆಯಲ್ಲೇ ಇದೆ. ನಮ್ಮ ಹೊಟ್ಟೆಗೇ ಚಿಕಿತ್ಸೆ ತೆಗೆದುಕೊಳ್ಳಬೇಕು ಎನ್ನುವ ಅರಿವು ನಮಗಿದೆ. ಹಾಗೆಯೇ ಇತರ ಮಾನಸಿಕ ಸಮಸ್ಯೆಗಳ ಬಗ್ಗೆ ನೋಡಿದರೂ ಇದು ನಿಜ.

ಖಿನ್ನತೆ-ಆತಂಕದ ಗೀಳು ಕಾಯಿಲೆಗಳಲ್ಲಿ ಸ್ವತಃ ರೋಗಿಗೆ ರೋಗದ ಬಗೆಗೆ ಸಂಪೂರ್ಣ ಮಾಹಿತಿಯಿರದಿದ್ದರೂ, ತನಗೆ ತೊಂದರೆಯಿದೆ ಎಂಬ ಅಂಶವನ್ನು ಒಪ್ಪಿ, ರೋಗಿ ಚಿಕಿತ್ಸೆ ತೆಗೆದುಕೊಳ್ಳಲು ಸ್ವತಃ ಮುಂದಾಗುತ್ತಾನೆ.

ಈಗ ಸ್ಕಿಜೋಫ್ರಿನಿಯಾದ ಬಗ್ಗೆ ನೋಡೋಣ. ಇಲ್ಲಿ ಚಿಕಿತ್ಸೆಯ ಪ್ರಥಮ ಮತ್ತು ಅತಿ ದೊಡ್ಡ ಅಡ್ಡಿ ರೋಗಿಗೆ ಈ ಅರಿವಿನ ಒಳನೋಟದ ಕೊರತೆಯಿರುವುದು. ಪರಿಣಾಮ, ರೋಗಿಗೆ ತನ್ನಲ್ಲಿರುವ ಭ್ರಮೆಗಳು, ಕೇಳುವ ದನಿಗಳು, ಅನುಮಾನ ಈ ಎಲ್ಲವೂ ತನಗಾಗುತ್ತಿರುವ ‘ನೋವು’ (ಹೊಟ್ಟೆನೋವಿನಲ್ಲಿರುವ ನೋವಿನಂತೆ) ಎಂದು ಗ್ರಹಿಸಲೇ ಸಾಧ್ಯವಾಗುವುದಿಲ್ಲ. ತನ್ನ ಸುತ್ತಮುತ್ತಲಿರುವ ಪರಿಸರದಲ್ಲಿಯೇ ಇವೆಲ್ಲವೂ ನಡೆಯುತ್ತಿದೆ ಎಂದು ಆತ ಭಾವಿಸುತ್ತಾನೆ.

ತಾನು ಸರಿಯೇ ಇರುವಾಗ, ತನಗೇಕೆ ಚಿಕಿತ್ಸೆ ಬೇಕು ಎಂದು ಪ್ರಶ್ನಿಸುತ್ತಾನೆ. ಸರಿ, ರೋಗಿಗೆ ‘ಒಳ ನೋಟ’ವಿರುವುದಿಲ್ಲ. ಆತನ ಕುಟುಂಬದವರಿಗೆ? ಯಾರಾದರೂ ಬಂದು ನಿಮ್ಮ ಬಳಿ ‘ನನ್ನನ್ನು ಕೊಲ್ಲಲು ಯಾರೋ ಹೊಂಚು ಹಾಕುತ್ತಿದ್ದಾರೆ ಅಥವಾ ನನಗೆ ಯಾರೋ ಮಾತನಾಡಿದಂತೆ ಅನಿಸುತ್ತಿದೆ, ಭಯವಾಗುತ್ತಿದೆ’ ಎನ್ನುತ್ತಾರೆ ಎಂದುಕೊಳ್ಳಿ.

ಇಂಥ ಅನುಭವ ನಮಗಾಗಿರುವ ಸಾಧ್ಯತೆ ಕಡಿಮೆಯಾದ್ದರಿಂದ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ‘ಏ, ಏನೂ ಇಲ್ಲ, ಸ್ವಲ್ಪ ಧೈರ್ಯ ತೊಗೋ ಎಲ್ಲಾ ಸರಿಹೋಗುತ್ತದೆ’ ಎನ್ನುತ್ತೇವೆ. ಅದೇ ಇನ್ನೊಬ್ಬರು ಬಂದು ‘ನನಗೆ ತುಂಬಾ ತಲೆನೋವು/ ಹೊಟ್ಟೆನೋವು’ ಎನ್ನುತ್ತಾರೆ ಅಂದುಕೊಳ್ಳೋಣ.

ನಮಗೂ ಯಾವಾಗಲಾದರೊಂದು ಸಹಜ, ಸಾಮಾನ್ಯವಾಗಿ ಇಂಥ ನೋವುಗಳ ಅನುಭವಿಸಿರುವುದರಿಂದ ಅವರ ಅನುಭವ- ‘ನೋವು’ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ತತ್‌ಕ್ಷಣ ‘ವೈದ್ಯರ ಬಳಿ ಹೋಗೋಣ’ ಎನ್ನುತ್ತೇವೆ!

‘ಸ್ಕಿಜೋಫ್ರಿನಿಯಾ’ ಎಂಬ ಹೆಸರು ಬದಲಾಗದಿದ್ದರೂ, ಅದರ ಚಿಕಿತ್ಸೆಯಲ್ಲಿ ಹೊಸ ಹೊಸ ಔಷಧಿಗಳು ಬರುತ್ತಲೇ ಇವೆ. ಲಕ್ಷಾಂತರ ಜನ ‘ಚಿತ್ತವಿಕಲತೆ’ ಎಂಬ ರೋಗದ ಹಣೆಪಟ್ಟಿ ಧರಿಸಿಯೂ, ನಮ್ಮ ನಡುವೆ ನಮ್ಮಂತೆಯೇ ಸ್ವಸ್ಥ ಮನಸ್ಕರಾಗಿ ಓಡಾಡುತ್ತಿದ್ದಾರೆ. ನಿಜವಾಗಿ ಚಿಕಿತ್ಸೆಯ ದೃಷ್ಟಿಯಿಂದ ನೋಡಿದರೆ ‘ಸ್ಕಿಜೋಫ್ರಿನಿಯಾ’ ಎಂಬ ಕಾಯಿಲೆಯ ‘ಹೆಸರು’ ವೈದ್ಯನಿಗೆ ಮಾತ್ರ ಮುಖ್ಯವಾಗಬೇಕು.

ಅದೂ ಏತಕ್ಕೆ? ಚಿಕಿತ್ಸೆಯ ಕ್ರಮ, ಔಷಧಿ, ಇತರ ಸಾಧ್ಯತೆಗಳು, ಮುಂದಿನ ಅವಧಿ ಇವೆಲ್ಲವನ್ನೂ ನಿರ್ಧರಿಸಲು. ರೋಗಿಗೆ ಕಾಯಿಲೆಯ ‘ಹೆಸರು’ ಮುಖ್ಯವಲ್ಲ. ಬದಲಾಗಿ ಎಲ್ಲ ರೀತಿಯಲ್ಲಿ ಗುಣಮುಖರಾಗಿ ಸಹಜ ಜೀವನ ನಡೆಸುವುದು ರೋಗಿಗೆ ಅತಿ ಮುಖ್ಯ. ‘ಸ್ಕಿಜೋಫ್ರಿನಿಯಾ’ದ ಬಗ್ಗೆ ಕೆಟ್ಟ ಕುತೂಹಲ, ವರ್ಣರಂಜಿತ ವಿವರಣೆ,

ವಿಚಿತ್ರವಾದ ವ್ಯಕ್ತಿತ್ವದ ಜೊತೆಗೆ ತಳಕು ಹಾಕುವುದು, ಕ್ರೌರ್ಯ-ಕೊಲೆ-ಅಪರಾಧಗಳ ಜೊತೆ ಚಿತ್ರಿಸುವುದು ಅಥವಾ ಅತಿಯಾದ ಸಹಾನುಭೂತಿ ಇವುಗಳಿಗಿಂತ ಸ್ಕಿಜೋಫ್ರಿನಿಯಾದ ರೋಗಿಗಳು, ಮನೋವೈದ್ಯರು ಸಮಾಜದಿಂದ ಬಯಸುವುದು ಎಲ್ಲರಂತೆ ಸಹಜವಾದ ಜೀವನ, ಗೌರವಯುತ ನಡವಳಿಕೆ.

ಇಪ್ಪತ್ತೆಂಟು ವರ್ಷದ ಒಬ್ಬ ರೋಗಿಯ ಮನಸ್ಸಿನಾಳದ ಮಾತುಗಳು ಇವು. “ಎಂಟು ವರ್ಷಗಳ ಸಮಯ ನಿಧಾನವಾಗಿ ಸ್ಕಿಜೋಫ್ರಿನಿಯಾ ನನ್ನನ್ನು ಆವರಿಸಿತು. ಅನುಮಾನಗಳ ಭ್ರಮೆಯಲ್ಲಿ ಸಿಲುಕಿದ ನಾನು ಕುಟುಂಬದವರು ಎಷ್ಟೇ ಪ್ರಯತ್ನಿಸಿದರೂ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ. ನನ್ನ ಪ್ರಕಾರ ಆ ಔಷಧಿಗಳನ್ನು ತೆಗೆದುಕೊಂಡರೆ ನನಗೆ ‘ಹುಚ್ಚ’ ಎಂಬ ಹಣೆಪಟ್ಟಿ ಅಂಟುತ್ತಿತ್ತು.

ಅಂತೂ 4  ವರ್ಷಗಳ ಕೆಳಗೆ ಭ್ರಮೆಯ ತೀವ್ರತೆಯಲ್ಲಿ ಔಷಧಿ ತೆಗೆದುಕೊಳ್ಳಲು ಒಪ್ಪಿದೆ. ನಾನು ಚಿಕಿತ್ಸೆಗೆ ಬಂದದ್ದು ತಡವಾದ್ದರಿಂದ ನಾನು ಜೀವನಪೂರ್ತಿ ಔಷಧಿ ಸೇವಿಸಬೇಕೆಂಬ ಸಲಹೆಯನ್ನು ಹೇಗೋ ಸ್ವೀಕರಿಸಿದೆ. ಇದೀಗ ಒಂದು ಮಾತ್ರೆಯನ್ನು  ಪ್ರತಿನಿತ್ಯ ತೆಗೆದುಕೊಳ್ಳುತ್ತೇನೆ. ನನ್ನ ಭ್ರಮೆಗಳು ಮಾಯವಾಗಿವೆ.

ಮಾತ್ರೆಯ ಜೊತೆಗೆ ದಿನನಿತ್ಯ ರಭಸದ ನಡಿಗೆಯನ್ನು ಮಾಡುವುದನ್ನು ಬಿಟ್ಟರೆ, ಬೇರ್‌್ಯಾವ ಚಿಕಿತ್ಸೆ, ‘ಧ್ಯಾನ’, ‘ಪಾಸಿಟಿವ್ ಥಿಂಕಿಂಗ್’ ಇವ್ಯಾವುದನ್ನು ನಾನು ವಿಶೇಷವಾಗಿ ಮಾಡುವುದಿಲ್ಲ. ಎಲ್ಲರಂತೆ ಕೆಲಸ ಮಾಡುತ್ತೇನೆ, ಭವಿಷ್ಯವನ್ನು ಎದುರು ನೋಡುತ್ತೇನೆ! ಜನರು ನನಗೆ ‘ಮಾನಸಿಕ ಕಾಯಿಲೆಯಿರಬಹುದು’ ಎಂದು ಯಾವತ್ತೂ ಅನುಮಾನಿಸಿಲ್ಲ.

‘ನನಗೆ ಸ್ಕಿಜೋಫ್ರಿನಿಯಾ ಇದೆ’ ಎಂದು ನಾನು ಹೇಳಿದರೆ ಅವರು ಆಶ್ಚರ್ಯಪಡಬಹುದೇನೋ!  ಈಗ ನನಗೆ ಅರ್ಥವಾಗಿದೆ ಜನರು ನನಗೆ ಮಾನಸಿಕ ಕಾಯಿಲೆ ಇದೆ ಎಂದು ಗೇಲಿ ಮಾಡುವ ಸಾಧ್ಯತೆ ನನ್ನ ನಡವಳಿಕೆಯಿಂದ ವೈಪರೀತ್ಯದಿಂದ ಹೊರತು, ನಾನು ಚಿಕಿತ್ಸೆ ಪಡೆಯುತ್ತಿರುವೆ’ ಎಂಬ ಅಂಶದಿಂದ ಅಲ್ಲ! ” 

ADVERTISEMENT

ಸ್ಕಿಜೋಫ್ರಿನಿಯಾ ಲಕ್ಷಣಗಳು
* ಒಂದು ತಿಂಗಳಿಗೂ ಮೀರಿ ವಿನಾಕಾರಣ ಭಯ, ನಿದ್ರಾಹೀನತೆ, ನಿರಾಸಕ್ತಿ.

* ತನ್ನ ಪಾಡಿಗೆ ತಾನೇ ಮಾತನಾಡುವುದು, ನಗುವುದು.

* ಅನುಮಾನ, ಬೇರೆಯವರು ತನ್ನ ವಿರುದ್ಧ ಸಂಚು ಹೂಡುತ್ತಿದ್ದಾರೆ, ವಿಷಯ ಬೆರೆಸುತ್ತಿದ್ದಾರೆ, ಹಿಂಬಾಲಿಸುತ್ತಿದ್ದಾರೆ.

* ತನಗೆ ಏನೂ ಆಗಿಲ್ಲ, ಬೇರೆಯವರಲ್ಲಿಯೇ ದೋಷವಿದೆ ಎಂದು ಹೇಳಿ ಚಿಕಿತ್ಸೆಗೆ ಬರಲು ಒಪ್ಪದಿರುವುದು.

* ಯಾರೂ ಇರದಿದ್ದರೂ ಯಾರದ್ದೋ ಮಾತು ಕೇಳಿಸುತ್ತಿದೆ ಎನ್ನುವುದು.

* ಓದು -ಉದ್ಯೋಗಗಳಲ್ಲಿ  ಕ್ಷಮತೆ ಕ್ರಮೇಣ ಕಡಿಮೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.