ADVERTISEMENT

ಚರ್ಮ ಸೌಂದರ್ಯಕ್ಕೆ ಹಣ್ಣು ಪಥ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2015, 19:52 IST
Last Updated 27 ಆಗಸ್ಟ್ 2015, 19:52 IST

ಸುಂದರವಾಗಿ ಕಾಣಲು ಕಂಡ ಕಂಡ ಕ್ರೀಂಗಳನ್ನು ಬಳಿದುಕೊಳ್ಳಬೇಕಿಲ್ಲ ಅಥವಾ ಬಗೆ ಬಗೆಯ ಸ್ಕ್ರಬ್‌ಗಳನ್ನು ಬಳಸಬೇಕಿಲ್ಲ. ಆರೋಗ್ಯಪೂರ್ಣ ಹಾಗೂ ಆಕರ್ಷಕ ಚರ್ಮ ಹೊಂದಲು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೋಷಕಾಂಶಗಳನ್ನು ಕಾಲಕಾಲಕ್ಕೆ ಒದಗಿಸುತ್ತಿರಬೇಕಷ್ಟೆ. ತಾಜಾ ಹಣ್ಣು ಮತ್ತು ತರಕಾರಿ ಸೇವನೆಯಿಂದ ಸುಲಭವಾಗಿ ಕಾಂತಿಯುಕ್ತ ಚರ್ಮವನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಅವುಗಳಲ್ಲಿ ತುಂಬಾ ಮುಖ್ಯವಾದವು ಇಲ್ಲಿವೆ.

ಕ್ಯಾರೆಟ್‌
ಮುಖದಲ್ಲಿ ನೆರಿಗೆ ಮೂಡುವುದರ ವಿರುದ್ಧ ಹೋರಾಡಲು ವಿಟಮಿನ್ ಸಿ ಅಧಿಕವಾಗಿರುವ ತರಕಾರಿ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಿಕೊಳ್ಳಿ. ಕ್ಯಾರೆಟ್‌ನಲ್ಲಿ ಬಿಟಾ ಕೆರೋಟಿನ್ ಅಂಶ ಅಧಿಕವಿದ್ದು, ಆರೋಗ್ಯಕರ ಚರ್ಮಕ್ಕೆ ತುಂಬಾ ಉಪಯೋಗಕ್ಕೆ ಬರುವ ವಿಟಮಿನ್ ಎ ಆಗಿ ಇದು ದೇಹದಲ್ಲಿ ಪರಿವರ್ತನೆಗೊಳ್ಳುತ್ತದೆ. ಇದು ಚರ್ಮದ ಸುಕ್ಕು ನೆರಿಗೆಗಳ ವಿರುದ್ಧ ಔಷಧದಂತೆ ಕೆಲಸ ಮಾಡುತ್ತದೆ.

ಸೇಬು
ವಿಟಮಿನ್‌ ಸಿ ಹೇರಳವಾಗಿರುವ ಸೇಬು ಹಣ್ಣಿನ ಸೇವನೆಯ ಅಭ್ಯಾಸ ಇರಿಸಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದು ಚರ್ಮ ಬಿರುಕು ಬಿಡುವುದನ್ನೂ ತಪ್ಪಿಸುತ್ತದೆ. ಚರ್ಮದ ಹಾನಿಯನ್ನು ಸರಿಪಡಿಸುವುದಲ್ಲದೆ, ಚರ್ಮದ ಕೋಶಗಳನ್ನು ರಕ್ಷಿಸಿ ವಯಸ್ಸಾಗುವ ಸೂಚನೆಗಳನ್ನು ತಡೆಯುತ್ತದೆ. ಸೇಬಿನಲ್ಲಿ ಮೊಡವೆಯನ್ನು ದೂರವಿಡಲು ಅವಶ್ಯಕವಿರುವ ಪೆಕ್ಟಿನ್ ಕೂಡ ಹೆಚ್ಚಿದ್ದು, ಇದರಿಂದ ಸಾಕಷ್ಟು ಲಾಭ ಪಡೆದುಕೊಳ್ಳಬಹುದು.

ಸ್ಟ್ರಾಬೆರಿ
ಸ್ಟ್ರಾಬೆರಿಯನ್ನು ಕಿವುಚಿ ಅದಕ್ಕೆ ಜೇನು ಸೇರಿಸಿ ಬೆಣ್ಣೆಹಣ್ಣು ಅಥವಾ ಮೊಸರನ್ನು ಬೆರಿಸಿ ಹಚ್ಚಿಕೊಂಡರೆ ಚರ್ಮ ಹೆಚ್ಚು ಕಾಂತಿಯುಕ್ತವಾಗುತ್ತದೆ. ಸ್ಟ್ರಾಬೆರಿಯಲ್ಲಿ ಮ್ಯಾಲಿಕ್ ಆಮ್ಲ ಇದ್ದು, ನೈಸರ್ಗಿಕವಾಗಿ ಚರ್ಮಕ್ಕೆ ಬಿಳುಪು ನೀಡುತ್ತದೆ.

ಪಪ್ಪಾಯ ಹಾಗೂ ಪೀಚ್
ಪಪ್ಪಾಯ ನೈಸರ್ಗಿಕವಾಗಿ ಚರ್ಮಕ್ಕೆ ಕಳೆ ತರುತ್ತದೆ. ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಅಧಿಕ ವಿಟಮಿನ್ ಎ ಚರ್ಮದಲ್ಲಿ ಒಂದಿಷ್ಟೂ ಕಲೆ ಉಳಿಯದಂತೆ ನೋಡಿಕೊಳ್ಳುತ್ತದೆ. ತೇವಾಂಶದ ಖನಿಯಾಗಿರುವ ಪೀಚ್‌ ಹಣ್ಣಿನಿಂದ ಒಣ ಚರ್ಮದ ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಬಹುದು. ನಿಮ್ಮ ಆಹಾರದಲ್ಲಿ ಪೀಚ್‌ ಹಣ್ಣು ಇದ್ದರಂತೂ ರಾಸಾಯನಿಕಗಳಿರುವ ಮಾಯಿಶ್ಚರೈಸಿಂಗ್ ಕ್ರೀಂ ಹಚ್ಚಿಕೊಳ್ಳುವುದನ್ನು ನಿಲ್ಲಿಸಬಹುದು.

ಕಿವಿ ಮತ್ತು ದಾಳಿಂಬೆ
ಕಿವಿ ಹಣ್ಣನ್ನು ತಿನ್ನುವುದರಿಂದ ಅಥವಾ ಹಚ್ಚಿಕೊಳ್ಳುವುದ ರಿಂದಲೂ ಆರೋಗ್ಯಕರ, ಸ್ವಚ್ಛ ಹಾಗೂ ಸುಂದರ ಚರ್ಮವನ್ನು ಪಡೆಯಬಹುದು. ಕಿವಿ ಹಣ್ಣಿನಲ್ಲಿ ಪೆಕ್ಟಿನ್ ಹಾಗೂ ನಾರಿನಂಶ ಹೆಚ್ಚಿದ್ದು, ಜೀರ್ಣಕ್ಕೆ ಅತ್ಯುಪಕಾರಿ. ಇದು ನೆರಿಗೆಗಳನ್ನು ತಡೆದು ಕಲೆಗಳನ್ನೂ ಹೋಗಲಾಡಿಸುತ್ತದೆ. ದಾಳಿಂಬೆಯಂತೂ ಚರ್ಮಕ್ಕೆ ಎಲ್ಲ ರೀತಿಯಿಂದಲೂ ಅತ್ಯುತ್ತಮ ಔಷಧ.

ನಿಂಬೆಹಣ್ಣು ಮತ್ತು ನೆಲ್ಲಿ
ನಿಷ್ಕಳಂಕ ತ್ವಚೆ ಪಡೆಯಲು ಸಿಟ್ರಸ್ ಅಂಶ ಹೆಚ್ಚಿರುವ ಹಣ್ಣುಗಳ ಸೇವನೆ ತುಂಬಾ ಒಳ್ಳೆಯದು. ಸಿಟ್ರಸ್ ಅಂಶ ಹೇರಳವಾಗಿರುವ ಕಿತ್ತಳೆ, ಮೂಸಂಬಿ, ನಿಂಬೆ ಹಣ್ಣುಗಳು ಚರ್ಮಕ್ಕೆ ಸಾಕಷ್ಟು ಅನುಕೂಲಗಳನ್ನು ನೀಡುತ್ತದೆ.  ನೆಲ್ಲಿಯ ಸಾರದಲ್ಲಿ ವಿಟಮಿನ್ ಎ ತುಂಬಿರುತ್ತದೆ. ಚರ್ಮವನ್ನು ತಾಜಾ ಆಗಿ ಕಾಣುವಂತೆ ಮಾಡುವ ಕೊಲೊಜೆನ್ ಉತ್ಪತ್ತಿಯಲ್ಲಿ ಇದರದ್ದು ಬಹು ಮುಖ್ಯ ಪಾತ್ರ. ಖಾಲಿ ಹೊಟ್ಟೆಯಲ್ಲಿ ನೆಲ್ಲಿಯನ್ನು ಸೇವಿಸಿದರೆ ಕೊಲೊಜೆನ್‌ ಕಡಿಮೆಯಾಗುವುದನ್ನು ತಗ್ಗಿಸುತ್ತದೆ.

ಬೆರ್ರಿಗಳು
ಬೆರ್ರಿಗಳಲ್ಲಿ ಆ್ಯಂಟಿಆಕ್ಸಿಡಂಟ್‌ಗಳು ಹೆಚ್ಚಾಗಿರುತ್ತವೆ. ಸ್ಟ್ರಾಬೆರಿ, ಕ್ರ್ಯಾನ್‌ಬೆರಿ, ಬಿಲ್‌ಬೆರಿ, ಬ್ಲೂಬೆರಿಗಳು ಆರೋಗ್ಯಕ್ಕೆ ಸರ್ವ ರೀತಿಯಿಂದಲೂ ಒಳ್ಳೆಯದು. ಈ ಬೆರ್ರಿಗಳಲ್ಲಿನ ಆ್ಯಂಟಿಯಾಕ್ಸಿಡಂಟ್‌ಗಳು ಚರ್ಮಕ್ಕೆ ಯೌವನ ತುಂಬುತ್ತವೆ.

ಗೆಣಸು‌
ಉರಿ ನಿವಾರಕ ಗುಣ ಹೊಂದಿರುವ, ವಿಟಮಿನ್ ಎ ತುಂಬಿರುವ ಗೆಣಸು ಮೊಡವೆ ತರುವ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಇದರಲ್ಲಿರುವ ವಿಟಮಿನ್ ಸಿ ಮೊಡವೆಯನ್ನು ತಡೆಯುತ್ತದೆ, ಈಗಾಗಲೇ ಮೊಡವೆ ಇದ್ದರೆ ಅದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.