ADVERTISEMENT

ನಳನಳಿಸುವ ಚರ್ಮಕ್ಕೆ...

ಸ್ವಾಸ್ಥ್ಯ ಸೌಂದರ್ಯ

ಡಾ.ಚೈತ್ರ ವಿ.ಆನಂದ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಚರ್ಮದ ಮೇಲ್ಪದರದಲ್ಲಿ ಮೃತ ಕೋಶಗಳ ಸಂಖ್ಯೆ ಹೆಚ್ಚಾದಂತೆ ಚರ್ಮವು ಕಾಂತಿ­ಹೀನವೆನಿಸತೊಡಗುತ್ತದೆ. ಚರ್ಮದ ಈ ಮೇಲ್ಪದರವನ್ನು ಸ್ವಚ್ಛಗೊಳಿಸಿ, ಹೊಸ ಜೀವಕೋಶಗಳನ್ನು ಹೊಳೆಯುವಂತೆ ಮಾಡುವ ಪ್ರಕ್ರಿಯೆಗೆ ಸೌಂದರ್ಯ ಶಾಸ್ತ್ರದಲ್ಲಿ ಎಕ್ಸ್‌ಫೋಲಿಯೇಷನ್‌ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸಲಾಗುವ ಉತ್ಪನ್ನಗಳನ್ನು ಎಕ್ಸ್‌ಫೋಲಿಯೆಂಟ್‌ ಎಂದು ಕರೆಯಲಾಗುತ್ತದೆ.

ಸ್ಕ್ರಬ್‌ನಂತೆಯೇ ಕೆಲಸ ಮಾಡುವ ಎಕ್ಸ್‌ಫೋಲಿಯಂಟ್‌ಗಳು ಚರ್ಮದ ಮೃತಕೋಶಗಳನ್ನು ಮೃದುವಾಗಿ ಬೇರ್ಪಡಿಸುತ್ತವೆ. ಫೇಷಿಯಲ್‌ನಲ್ಲಿ ಈ ಕ್ರಿಯೆ ಸಹಜವಾಗಿಯೇ ಮಾಡುತ್ತಾರೆ. ಆದರೆ ಮನೆಯಲ್ಲಿಯೂ ವಾರಕ್ಕೆ ಒಮ್ಮೆಯಾದರೂ ಒಂದು ಹತ್ತು ನಿಮಿಷಗಳನ್ನು ಮೀಸಲಾಗಿಟ್ಟರೆ ಮುಖದ ಕಾಂತಿ ಕುಂದುವುದೇ ಇಲ್ಲ. ಇದಕ್ಕಾಗಿ ವಿಶೇಷ ಎಕ್ಸ್‌ಫೋಲಿಯೆಂಟ್‌ಗಳ್ನು ಕೊಳ್ಳುವ ಅಗತ್ಯವೂ ಇಲ್ಲ.

ಆದರೆ ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾದ ಆರೈಕೆ ಮಾಡಿಕೊಳ್ಳುವುದು ಅತಿಮುಖ್ಯ. ಆಗಲೇ ಪರಿಣಾಮಕಾರಿಯಾದ ಫಲಿತಾಂಶ ಕಾಣಬಹುದು.

ಮಾರುಕಟ್ಟೆಯಲ್ಲಿ ಪೀಲ್ಸ್‌ಗಳು, ಸ್ಕ್ರಬ್‌ಗಳ ರೂಪದಲ್ಲಿ ಹತ್ತು ಹಲವಾರು ಎಕ್ಸ್‌ಫೋಲಿಯಂಟ್‌ ಉತ್ಪನ್ನಗಳೂ ಚಿಕಿತ್ಸೆಗಳೂ ಲಭ್ಯ ಇವೆ. ಆದರೆ ಪರಿಣತರ ನಿರ್ದೇಶಾನುಸಾರವೇ ಇವುಗಳನ್ನು ಬಳಸುವುದು ಸೂಕ್ತ. ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಲೇಪನಗಳೂ ಈ ಕೆಲಸವನ್ನು ಮಾಡುತ್ತವೆ. ಆದರೆ ಬಲು ಸೂಕ್ಷ್ಮ ಹಾಗೂ ಕಾಳಜಿಯಿಂದ ಈ ಕೆಲಸ ಆಗಬೇಕು.  ಮನೆಯಲ್ಲಿ ಬಳಸುವ ಲೇಪದಲ್ಲಿ ಎಲ್ಲವೂ ಮೃದುವಾದ ದುಂಡನೆಯ ಆಕಾರದಲ್ಲಿರುವ ಸ್ಕ್ರಬರ್‌ಗಳಿರಬೇಕು. ಇಲ್ಲದಿದ್ದಲ್ಲಿ ಚರ್ಮ ಘಾಸಿಗೊಳ್ಳುವ ಸಾಧ್ಯತೆಗಳಿರುತ್ತವೆ.

ಒಣ ಚರ್ಮದವರಿಗೆ
ಆಲಿವ್‌ ಆಯಿಲ್‌ ಮತ್ತು ಸಕ್ಕರೆ ಮಿಶ್ರಣ: ಒಂದು ಟೀಸ್ಪೂನ್‌ ವರ್ಜಿನ್‌ ಆಲಿವ್‌ ಆಯಿಲ್‌ಗೆ ಒಂದು ಟೀ ಸ್ಪೂನ್‌ ಸಕ್ಕರೆಯನ್ನು ಬೆರೆಸಿ, ಈ ಮಿಶ್ರಣವನ್ನು ಮೂರು ನಿಮಿಷಗಳ ಕಾಲ ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್‌ ಮಾಡಬೇಕು. ನಂತರ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.

ಓಟ್ಸ್‌ ಮತ್ತು ಜೇನು: ಒಂದು ಚಮಚ ಓಟ್ಸ್‌ ಮೀಲ್‌ ಕಾಳುಗಳ ನುಣಪಾದ ಪುಡಿಯನ್ನು ಎರಡು ಚಮಚ ಜೇನಿನೊಂದಿಗೆ ಬೆರೆಸಬೇಕು. ಈ ಮಿಶ್ರಣವನ್ನು ನುಣುಪಾಗುವಂತೆ ಕಲಿಸಿ, ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್‌ ಮಾಡಬೇಕು. ನಂತರ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆದುಕೊಂಡು, ಟವಲ್‌ನಿಂದ ಟ್ಯಾಪ್‌ ಮಾಡಿಕೊಂಡು ಒರೆಸಿಕೊಳ್ಳಬೇಕು.  ಚರ್ಮವು ತೀವ್ರತರನಾಗಿ ಒಣಗಿದ್ದರೆ ವಾರಕ್ಕೆರಡು ಸಲ ಈ ಲೇಪನವನ್ನು ಬಳಸಬಹುದು.
(ಮಾಹಿತಿಗೆ: 7676757575 ಮುಂದಿನ ವಾರ: ಸಾಮಾನ್ಯ ಚರ್ಮದವರಿಗೆ ಮತ್ತು ಎಣ್ಣೆ ಚರ್ಮದವರಿಗೆ ಟಿಪ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.