ADVERTISEMENT

ಪ್ರೀತಿಸುವುದಕ್ಕೆ ಏನು ಕಷ್ಟ?!

ಡಿ.ಎಂ.ಹೆಗಡೆ
Published 7 ಮಾರ್ಚ್ 2017, 19:30 IST
Last Updated 7 ಮಾರ್ಚ್ 2017, 19:30 IST
ಪ್ರೀತಿಸುವುದಕ್ಕೆ ಏನು ಕಷ್ಟ?!
ಪ್ರೀತಿಸುವುದಕ್ಕೆ ಏನು ಕಷ್ಟ?!   

ಇದೊಂದು ಪ್ರಶ್ನೆ ಇತ್ತೀಚಿಗೆ ಬಹಳ ಸಲ ಎದುರಾಗುತ್ತಿದೆ.

ನಮ್ಮ ಬಗ್ಗೆ ನಾವು ಏನಂದುಕೊಂಡಿರುತ್ತೇವೆ? ನಮ್ಮ ಬಗ್ಗೆ ನಮಗೇಕೆ ಅಷ್ಟೊಂದು ಉದಾಸೀನ? ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸದಿದ್ದರೆ ಮತ್ತೆ ಯಾರು ಅದರ ಬಗ್ಗೆ ಆಲೋಚಿಸಬೇಕು? ನಮ್ಮ ಆರೋಗ್ಯವನ್ನು ಸಾಧ್ಯವಾದಷ್ಟು ಸರಿಯಾಗಿ ನಾವು ತಾನೆ ನೋಡಿಕೊಳ್ಳಬೇಕು? ನಾವಲ್ಲದಿದ್ದರೆ ಬೇರೆ ಯಾರು ಅದನ್ನು ನೋಡಿಕೊಳ್ಳಬೇಕು? ಇಂಥವೇ ಹತ್ತೆಂಟು ಪ್ರಶ್ನೆಗಳು ಮನಸ್ಸಿನಾಳದಿಂದ ಪುಟಿದೇಳುತ್ತಿವೆ. ನಾವು ಉಳಿದವರನ್ನು ಎಷ್ಟು ಪ್ರೀತಿಸುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ನಾವು ಅಷ್ಟಿಷ್ಟಾದರೂ ಪ್ರೀತಿಸುತ್ತೀವಾ? ಅರೇ, ಎಂಥದ್ದು ಮಾರಾಯರೇ, ನಮ್ಮನ್ನು ನಾವು ಪ್ರೀತಿಸೋದಾ? ಅದು ಹೇಗೆ?

ನಾವು ನಮ್ಮ ದೇಹವನ್ನು ಬಾಡಿಗೆಮನೆಯಂತೆಯೋ, ಬೀದಿಬದಿಯ ದೀಪದ ಕಂಬದಂತೆಯೋ, ನಮ್ಮೂರಿನ ಬಸ್‌ಸ್ಟ್ಯಾಡಿನ ಗೋಡೆಯಂತೆಯೋ ನೋಡಿಕೊಳ್ಳುತ್ತಿರುತ್ತೇವೆ. ನಮ್ಮ ದೇಹ ಅದರ ಪಾಡಿಗೆ ಇದೆ. ಅದರೊಳಗೆ ಜೀವ ಉಸಿರಾಡುತ್ತಾ ಇದೆ. ನಾವು ನಮ್ಮ ಪಾಡಿಗೆ ಇರುತ್ತೇವೆ ಎನ್ನುವ ಮನಃಸ್ಥಿತಿಯಲ್ಲಿ ಇರುವವರೇ ಬಹಳ.

ADVERTISEMENT

ದೇಹ ನಶ್ವರ; ನಿಜ. ಆದರೆ ಬದುಕಿರುವವರೆಗೆ ನಾವು ನಮ್ಮ ಶರೀರಮಾಧ್ಯಮದ ಮೂಲಕವೇ ಬದುಕುತ್ತಿರುತ್ತೇವಲ್ಲ? ಬದುಕಿನ ಎಲ್ಲ ಅನುಭವಗಳನ್ನು ಅದರ ಮೂಲಕವೇ ಗ್ರಹಿಸುತ್ತ ಇರುತ್ತೇವಲ್ಲ.  ಹಾಗಿದ್ದ ಮೇಲೆ ನಶ್ವರವಾದ ಶರೀರವನ್ನು ಸರಿಯಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ತಾನೆ?

ನಮ್ಮ ಬೈಕಿಗೋ ಕಾರಿಗೋ ಮೊಬೈಲಿಗೋ ಏನೋ ತೊಂದರೆಯಾದರೆ ತಕ್ಷಣ ಅದನ್ನು ರಿಪೇರಿ ಮಾಡಿಸಲಿಕ್ಕೆ ಹೋಗುತ್ತೇವೆ. ಅದು ಸರಿಯಾಗುವವರೆಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಚಡಪಡಿಸುತ್ತೇವೆ. ಅದೇ ನಮ್ಮ ಶರೀರಕ್ಕೆ ಅಕಸ್ಮಾತ್ ಏನಾದರೂ ತೊಂದರೆಯದರೆ ಅದನ್ನು ತಕ್ಷಣ ಅಟೆಂಡ್ ಮಾಡುವುದಿಲ್ಲ. ಅದರ ಪಾಡಿಗೆ ಅದು ಸರಿಯಾಗುತ್ತದೆಯೇನೋ ಎಂದು ಕಾಯುತ್ತೇವೆ. ಕಾರು, ಬೈಕುಗಳು ಪಂಕ್ಚರ್‌ ಆದರೆ, ಪೆಟ್ರೋಲು ಖಾಲಿಯಾದರೆ, ಮತ್ತೇನಾದರೂ ತೊಂದರೆಯಾದರೆ ನಡುರಸ್ತೆಯಲ್ಲಿಯೇ ನಿಂತು ಬಿಡುತ್ತವೆ. ಆದರೆ ನಮ್ಮ ಶರೀರ ಹಾಗೆಲ್ಲ ಸಡನ್ನಾಗಿ ನಿಲ್ಲುವುದಿಲ್ಲ. ನೀರಡಿಕೆಯಾದರೂ, ಹಸಿವಾದರೂ ಸಾಕಷ್ಟು ಸಮಯ ತಡೆದುಕೊಳ್ಳುತ್ತದೆ. ತಕ್ಷಣಕ್ಕೆ ಅದು ನಮಗೆ ಕೈಕೊಡುವುದಿಲ್ಲ. ಹೊಟ್ಟೆ ಕೆಟ್ಟರೂ ತನ್ನಷ್ಟಕ್ಕೆ ತಾನೇ ಸರಿಯಾಗುತ್ತದೆ ಬಿಡು ಎಂದು ಮೂರು ದಿನ ಮುಂದೂಡುತ್ತೇವೆ. ಹಾಗಾಗಿಯೇ ನಾವು ನಮ್ಮ ಬೈಕು, ಕಾರಿಗೆ ಕೊಡುವಷ್ಟರಲ್ಲಿ ಹತ್ತಂಶದ ಕಾಳಜಿಯನ್ನೂ ನಮ್ಮದೇ ದೇಹದ ಆರೋಗ್ಯದ ಬಗ್ಗೆ ಕೊಡುವುದಿಲ್ಲ. ಶರೀರದ ಅಷ್ಟಿಷ್ಟು ತೊಂದರೆಗೆ ನಮ್ಮದು ನಿರ್ಲಕ್ಷ್ಯ. ಇನ್ನು ನಡೆಯಲಿಕ್ಕೆ ಆಗದಷ್ಟು ಕಾಲುನೋವು ಉಲ್ಬಣಿಸಿದಾಗ ಮಾತ್ರ, ಹೊಟ್ಟೆ ಕೆಟ್ಟು ಮೂರಾಬಟ್ಟೆಯಾದಾಗ ಮಾತ್ರ ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗುತ್ತೇವೆ.

ನಾವು ಬಹುತೇಕರು ಹೀಗೆಯೇ ಇರುವುದು.

ನಾವು ನಮ್ಮ ಕೈಗೆ ಕೊಟ್ಟಷ್ಟು ಕಾಳಜಿಯನ್ನು ನಮ್ಮದೇ ಕಾಲಿಗೆ ಕೊಡುವುದಿಲ್ಲ. ಬಲಗೈಗೆ ಕೊಟ್ಟಷ್ಟು ಮಹತ್ವವನ್ನು ಎಡಗೈಗೆ ಕೊಡುವುದಿಲ್ಲ.  ಕೈಬೆರಳುಗಳ ಉಗುರನ್ನು ಕತ್ತರಿಸಿಕೊಂಡಷ್ಟೇ ಆಸ್ತೆಯಿಂದ ಕಾಲುಬೆರಳುಗಳ ಉಗುರನ್ನು ಒಪ್ಪವಾಗಿ ಕತ್ತರಿಸಿಕೊಳ್ಳುವುದಿಲ್ಲ. ಮುಖಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಖಂಡಿತವಾಗಿಯೂ ಕುತ್ತಿಗೆಗೂ, ಹೊಟ್ಟೆಗೂ ಕೊಡುವುದಿಲ್ಲ.

ನಾವು ಬಹುತೇಕರು ಹೀಗೆಯೇ ಇರುವುದು.

ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು ಎನ್ನುವುದು ಗೊತ್ತಿಲ್ಲದೇ ಇರುವವರು ವಿರಳ. ಆದರೆ ಅಷ್ಟುನ್ನು ಕುಡಿಯುವವರು ಮಾತ್ರ ಮತ್ತೂ ವಿರಳ. ನೀರು ಕುಡಿಯದೇ ಮೂತ್ರಕೋಶದಲ್ಲಿ ಕಲ್ಲು ಬೆಳೆದು ಗಟ್ಟಿಯಾಗುತ್ತಿರುವಂತೆಯೇ ಸೀದಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವವರು ಬಹಳ.  ಇಲ್ಲಿ ನಮಗೆ ಜೀವನದಲ್ಲಿ ಶಿಸ್ತಿನ ಕೊರತೆ ಮತ್ತು ನಮ್ಮ ಬಗ್ಗೆ ನಮಗೆ ಗೌರವಾದರಗಳ ಕೊರತೆ ಕಾಣುತ್ತದೆ.

ನಾವು ಕೆಲವರು ಹೀಗೆಯೇ ಇರುವುದು.

ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಏಳಬೇಕು. ಎದ್ದಕೂಡಲೇ ನೀರು ಕುಡಿಯಬೇಕು. ವಾಕಿಂಗ್ ಹೋಗಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಬೆವರಿಳಿಯುವಂತೆ ಕೆಲಸ ಮಾಡಬೇಕು. ಸರಿಯಾಗಿ ಉಪಹಾರವನ್ನು ಸೇವಿಸಬೇಕು. ಮಧ್ಯಾಹ್ನ ಒಳ್ಳೆಯ ಊಟವನ್ನು ಮಾಡಬೇಕು.  ರಾತ್ರಿ ಬೇಗ ಊಟಮಾಡಬೇಕು. ಬೇಗ ಮಲಗಿ ಬೇಗ ಏಳಬೇಕು. ಒಳ್ಳೆಯ ಗೆಳೆಯರ ಸಹವಾಸದಲ್ಲಿ ಸಂತೋಷದಿಂದ ಮಾತನಾಡಬೇಕು. ಹೀಗೆ ತೀರಾ ಸಾಮಾನ್ಯವಾದ ಬಹಳಷ್ಟು ಸರಳ ಸಂಗತಿಗಳು ನಮಗೆಲ್ಲ ಗೊತ್ತಿದೆ. ಆದರೆ ಅವುಗಳನ್ನು ಅಷ್ಟೇ ಸರಳವಾಗಿ ಅಭ್ಯಾಸ ಮಾಡುವುದಕ್ಕಾಗದೇ ಸಂಕಟಪಡುತ್ತೇವೆ. ಸರಳವಾಗಿ ಬದುಕುವುದು, ಸತ್ಯವಾಗಿ ಬದುಕುವುದು ಬಹಳ ಕಷ್ಟ ಎಂದಿದ್ದಾರೆ ಹಿರಿಯರು.

ಮೊದಲು ನಮ್ಮನ್ನು ನಾವು ಒಪ್ಪಿಕೊಳ್ಳಬೇಕು. ನಮ್ಮನ್ನು ನಾವು ಗೌರವಿಸಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ನಮ್ಮನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಎಲ್ಲರೂ ಗೌರವಿಸುತ್ತಾರೆ. ಎಲ್ಲರೂ ಒಪ್ಪಿಕೊಳ್ಳುತ್ತಾರೆ! ಇದು ಸರಳ ಸತ್ಯ. ಇಷ್ಟರಿಂದಲೇ ಬಹಳಷ್ಟು ತೊಂದರೆಗಳು ನಿವಾರಣೆಯಾಗುತ್ತವೆ.

ನಮ್ಮನ್ನು ನಾವು ಪ್ರೀತಿಸುವುದೆಂದರೆ ಆತ್ಮರತಿಯಲ್ಲ! ಅಹಂಕಾರವಲ್ಲ. ನಮ್ಮನ್ನು ನಾವು ನೀಟಾಗಿ ಇಟ್ಟುಕೊಳ್ಳುವುದು. ನಮ್ಮ ಜೊತೆಗೆ ನಾವು ಸಂತೋಷದಿಂದ ಇರುವುದು. ನಮ್ಮ ಮನಸ್ಸಿನ ಮತ್ತು ಶರೀರದ ಬೇಕು – ಬೇಡಗಳನ್ನು ಗಮನಿಸುವುದು. ಅವುಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದು. ಇವುಗಳನ್ನು ನಾವು ನಮಗಾಗಿ ಮಾಡಿಕೊಳ್ಳಬೇಕು.

ಮನಸ್ಸು ಇದ್ದರೆ ಮಾರ್ಗ ಎನ್ನುತ್ತೇವಲ್ಲ. ಹಾಗೆಯೇ ನಮ್ಮನ್ನು ನಾವು ಪ್ರೀತಿಸಲಿಕ್ಕೆ ಏನು ತೊಂದರೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಪ್ರಶ್ನೆಗೆ ಸರಿಯಾದ ಉತ್ತರ ಮನಸ್ಸಿನಾಳದಿಂದ ಬರುತ್ತದೆ. ಅದನ್ನು ಪರಿಶೀಲಿಸಬೇಕು. ಅದನ್ನು ಒಪ್ಪಿಕೊಳ್ಳಬೇಕು. ಅದನ್ನು ಅನುಸರಿಸಬೇಕು.
ಸಂತೋಷದಿಂದ ಬದುಕಬೇಕು. ಯಾವುದರಿಂದ ಮನಸ್ಸಿಗೆ ಸಂತೋಷವೇ ಸಿಗುವುದಿಲ್ಲವೋ ಅವುಗಳಿಂದ ಮುಲಾಜಿಲ್ಲದೇ ಹೊರಗೆ ಬರಬೇಕು. ನಮ್ಮ ಜೀವನ. ನಮಗಾಗಿ ಇರುವುದು. ಇದನ್ನು ನಮಗಾಗಿ ಮತ್ತು ನಮ್ಮವರ ನೆಮ್ಮದಿಗಾಗಿ ಬದುಕಬೇಕು. ನಮ್ಮನ್ನು ನಾವು ಸಂಪೂರ್ಣವಾಗಿ ಪ್ರೀತಿಸುವುದನ್ನು ರೂಢಿಸಿಕೊಂಡಾಗ ಮಾತ್ರ ನಮ್ಮವರನ್ನೂ ನಾವು ಅಷ್ಟೇ ಗಾಢವಾಗಿ ಪ್ರೀತಿಸಬಹುದು. ಆಗ ಜೀವನ ಸಂತೋಷದಿಂದ ಇರಲಿಕ್ಕೆ ಸಾಧ್ಯ!

(ಲೇಖಕರು ಆಪ್ತಸಮಾಲೋಚಕ ಮತ್ತು ತರಬೇತುದಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.