ADVERTISEMENT

ಬರುತ್ತಿದೆ ‘ಪ್ರಾಸ್ಟೇಟ್‌ ಕ್ಯಾನ್ಸರ್‌’

ರಮೇಶ ಕೆ
Published 15 ಆಗಸ್ಟ್ 2014, 19:30 IST
Last Updated 15 ಆಗಸ್ಟ್ 2014, 19:30 IST

ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಅಮೆರಿಕದಲ್ಲಿ ಚರ್ಮ ಕ್ಯಾನ್ಸರ್‌ ನಂತರ ಹೆಚ್ಚು ಬಲಿಯಾಗುತ್ತಿರುವುದು ಈ ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ. ಅಲ್ಲಿ ಆರು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುತ್ತಿದೆ. ಭಾರತದಲ್ಲೂ ಕಳೆದ ಹದಿನೈದು ವರ್ಷಗಳಿಂದ ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರು ಕಂಡು ಬರುತ್ತಿರುವುದು ವೃದ್ಧರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರತೀಯರಲ್ಲಿ ವಯಸ್ಸಾಗುತ್ತಿದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಜೊತೆಗೆ ಇಂಥ ಕಾಯಿಲೆಗಳು ಪ್ರವೇಶ ಮಾಡುತ್ತಿರುವುದು ಭಯ ಹುಟ್ಟಿಸುವಂತ ಸಂಗತಿಯಾಗಿದೆ. ವ್ಯಾಯಾಮವಿಲ್ಲದ ಜೀವನ, ಆನುವಂಶಿಕವಾಗಿ, ಅತೀಯಾದ ಮಾಂಸಾಹಾರ ಸೇವನೆಯಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ.

ಪ್ರಾಸ್ಟೇಟ್‌ ಕ್ಯಾನ್ಸರ್‌ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಎರಡು ಹಂತಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಮೂರನೇ ಹಂತ ತಲುಪಿದಾಗ ಕಂಡು ಬರುತ್ತದೆ. ಪದೇಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕಾಲು ನೋವು ಬರುವುದು ಈ ರೋಗದ ಲಕ್ಷಣಗಳಾಗಿವೆ. ಅಮೆರಿಕದಲ್ಲಿ 1ಮತ್ತು 2ನೇ ಹಂತ ತಲುಪಿದರೆ ಸಾಕು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.

ಈ ಕಾಯಿಲೆ 60 ವರ್ಷ ಮೇಲ್ಪಟ್ಟ ಶೇ. 40ರಿಂದ 45 ರಷ್ಟು ಮಂದಿಯಲ್ಲಿ ಕಂಡು ಬರುವ ಸಾಧ್ಯತೆ ಇದೆಯಂತೆ. ಭಾರತದಲ್ಲಿ 1ಮತ್ತು 2ನೇ ಹಂತ ತಲುಪಿದಾಗ ವೈದ್ಯರ ಬಳಿ ಬರುವವರ ಪ್ರಮಾಣ ಶೇ. 20ರಷ್ಟಿದ್ದರೆ, 3 ಮತ್ತು 4ನೇ ಹಂತ ತಲುಪಿದಾಗ ಬರುವವರ ಸಂಖ್ಯೆ ಶೇ. 80ರಷ್ಟಿದೆ. ಇಂಥ ಸಂದರ್ಭಗಳಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಕಡಿಮೆ ಇರುತ್ತದೆ. 3ನೇ ಹಂತ ತಲುಪಿದಾಗ ಶಸ್ತ್ರಚಿಕಿತ್ಸೆ ಅಥವಾ ರೇಡಿಯೇಷನ್‌ ಮೂಲಕ ಕಾಯಿಲೆ ಗುಣಪಡಿಸಬಹುದು. ಐವತ್ತು ವರ್ಷ ದಾಟಿದ ಪ್ರತಿಯೊಬ್ಬ ಪುರುಷ ತಜ್ಞ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು. ಪಿ.ಎಸ್‌.ಎ. (Prostate Specific Antigen) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ರೋಗ ಪತ್ತೆ ಹಚ್ಚಬಹುದು ಎನ್ನುತ್ತಾರೆ ವೈದ್ಯರು.

‘ಈ ಪ್ರಾಸ್ಟೇಟ್‌ ಪುರಷರಿಗೆ ಮುಖ್ಯವಾದ ಗ್ರಂಥಿಯಾಗಿದೆ. ಇದರಿಂದ ಉತ್ಪತಿಯಾಗುವ ದ್ರವಕ್ಕೆ ವೀರ್ಯಾಣುಗಳನ್ನು ಸಂರಕ್ಷಿಸುವ ಗುಣವಿದೆ. ಪ್ರಾಸ್ಟೇಟ್‌ ಕ್ಯಾನ್ಸರ್‌ 1 ಮತ್ತು 2ನೇ ಹಂತದಲ್ಲಿರುವ ರೋಗಿಗಳಿಗೆ ರ್‌್ಯಾಡಿಕಲ್‌ ಪ್ರೊಸ್ಟಾಟೆಕ್ಟಮಿ ಚಿಕಿತ್ಸೆ, ಅಥವಾ ರೇಡಿಯೇಷನ್‌ ಮೂಲಕ ಗುಣಪಡಿಸಬಹುದು. 3 ನೇ ಹಂತ ತಲುಪಿದ್ದರೆ ಸರ್ಜರಿ ಹಾಗೂ ರೇಡಿಯೇಷನ್‌ ಎರಡೂ ಮಾಡಿಸಬೇಕಾಗುತ್ತದೆ. 4ನೇ ಹಂತದಲ್ಲಿದ್ದರೆ ಹಾರ್ಮೋನ್ ಥೆರಪಿ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು. ಜೊತೆಗೆ ಕಿಮೋಥೆರಪಿಯನ್ನೂ ಮಾಡಬೇಕುತ್ತದೆ. ನಾಲ್ಕು ಹಂತ ದಾಟಿದವರು ನಾಲ್ಕರಿಂದ ಐದು ವರ್ಷ ಬದುಕಬಹುದು’ ಎನ್ನುತ್ತಾರೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್ನಿನ ಅಧ್ಯಕ್ಷ ಎಸ್‌.ಕೆ. ರಘುನಾಥ್‌.

ಬೆಂಗಳೂರಿನಲ್ಲಿ ಒಂದು ಲಕ್ಷ ಜನರಲ್ಲಿ ಎಂಟು ಮಂದಿಗೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಲಕ್ಷಣ ಕಂಡು ಬರುತ್ತಿದೆಯಂತೆ. ಇತ್ತೀಚೆಗೆ ಬೆಂಗಳೂರಿನ
ಲೀ ಮೆರಿಡಿಯನ್‌ ಹೋಟೆಲ್‌ನಲ್ಲಿ ಬೆಂಗಳೂರು ಯೂರಾಲಜಿಕಲ್‌ ಸೊಸೈಟಿ ಸಹಯೋಗದೊಂದಿಗೆ ಗ್ಲೋಬಲ್‌ ಪ್ರಾಸ್ಟೇಟ್‌ ಡಿಸೀಸ್‌ ಫೌಂಡೇಷನ್‌ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ‘ಪ್ರಾಸ್ಟೇಟ್‌ ಕ್ಯಾನ್ಸರ್‌’ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ರೋಗ ತಡೆಗಟ್ಟುಲು ಕೈಗೊಳ್ಳಬೇಕಾದ ಕ್ರಮಗಳು ಮಾಂಸಾಹಾರ ಕಡಿಮೆ ಮಾಡುವುದು, ಅರಿಶಿಣ ಬಳಸಿದ ಆಹಾರ ಸೇವನೆ, ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ವ್ಯಾಯಾಮ, ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು ಹಾಗೂ ಧೂಮಪಾನ ಮಾಡಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.