ADVERTISEMENT

ಬೆರಳತುದಿಯಲ್ಲಿ ಆರೋಗ್ಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಬೆರಳತುದಿಯಲ್ಲಿ ಆರೋಗ್ಯ ಮಾಹಿತಿ
ಬೆರಳತುದಿಯಲ್ಲಿ ಆರೋಗ್ಯ ಮಾಹಿತಿ   
ಅದೊಂದು ಕಾಲವಿತ್ತು... ಮನೆಯಲ್ಲಿ ಗರ್ಭಿಣಿ ಅಂತ ಗೊತ್ತಾದರೆ ಸಾಕು, ಎಲ್ಲರೂ ಒಂದೊಂದು ಸಲಹೆಯನ್ನು ನೀಡುವವರೇ. ಏನುಣ್ಣಬೇಕು, ಏನುಣ್ಣಬಾರದು? ಯಾವಾಗ ಮಲಗಬೇಕು? ಹೆಂಗೆ ಮಲಗಬೇಕು? ಅವರಿಗೇನಾಗಿತ್ತು... ಇನ್ಯಾರಿಗೋ ಏನಾಗಿತ್ತು? ಬೆಳಗಿನ ಸುಸ್ತಿಗೆ ಒಣದ್ರಾಕ್ಷಿ ಒಳ್ಳೆಯದೋ, ತಣ್ಣನೆಯ ಹಾಲು ಒಳ್ಳೆಯದೋ... ಮೊದಲ ಮೂರನೆಯ ತಿಂಗಳಿನಲ್ಲಿ ಏನಾಗುತ್ತದೆ ನಂತರ ಏನಾಗುತ್ತದೆ..?
 
ಈಗಲೂ ಪರಿಸ್ಥಿತಿಗಳೇನೂ ಅಷ್ಟು ಬದಲಾಗಿಲ್ಲ. ಬದಲಾಗಿರುವುದು ಹೊಸತಾಗಿ ಅಮ್ಮನಾಗುತ್ತಿರುವವರಿಗೆ ಸಿಗುತ್ತಿರುವ ಮಾಹಿತಿಗಳು.
 
ಇವೆಲ್ಲವೂ ಸಂಪೂರ್ಣ ವೈಜ್ಞಾನಿಕವಾಗಿರುತ್ತವೆ. ಓದು ಬರಹ ಬಲ್ಲವರು ಗೂಗಲ್‌ನ ಸಹಾಯದಿಂದ ಪ್ರತಿಯೊಂದನ್ನೂ ಹುಡುಕಿಕೊಳ್ಳುತ್ತಾರೆ. ಓದಿಕೊಳ್ಳುತ್ತಾರೆ. ಯಾವ ವಾರದಲ್ಲಿ ಮಗು ಕಣ್ಣು ಬಿಡುತ್ತದೆ? ಹೊರಗಿನ ಶಬ್ದಗಳಿಗೆ ಸ್ಪಂದಿಸುತ್ತದೆ? – ಎಂಬೆಲ್ಲ ಮಾಹಿತಿಯನ್ನು ಓದಿ ಸಂಭ್ರಮಿಸುತ್ತಾರೆ. 
 
ಈ ಮಾಹಿತಿಯ ಪೂರ ಈಗ ಅನಿಮೇಟೆಡ್‌ ಸರಣಿಯಾಗಿಯೂ ಹೊರಬಂದಿದೆ. ಸ್ಮಾರ್ಟ್‌ ಫೋನ್‌ ಇದ್ದರೆ ಸಾಕು... www.youtube.com/c/medhealthtv ಲಿಂಕ್‌ ಹಾಕಿ ನೋಡಿ.. ಇಲ್ಲಿ ಗರ್ಭಾವಸ್ಥೆಯ ಪ್ರಮುಖ ಹಂತಗಳನ್ನು ಅನಿಮೇಟೆಡ್‌ ಸಿರೀಸ್‌ನಲ್ಲಿ ತೋರಿಸಲಾಗಿದೆ. 
 
ಇದನ್ನು ನಿರ್ಮಾಣ ಮಾಡಿದವರು ಡಾ. ಪದ್ಮಾ ರಾಮಮೂರ್ತಿ. ಬೆಂಗಳೂರಿನ ಬ್ಲಾಸಿಮಿ ವೆಲ್‌ನೆಸ್‌ನ ನಿರ್ದೇಶಕಿ. ವೃತ್ತಿಯಿಂದ ವೈದ್ಯೆಯಾಗಿರುವ ಪದ್ಮಾ, ‘ಗರ್ಭಿಣಿಯರಿಗೆ ಅಷ್ಟೇ ಅಲ್ಲ, ರೋಗಿಗಳಿಗೂ ಅವರ ಪರಿಸ್ಥಿತಿ ಏನೂಂತ ಪರಿಪೂರ್ಣವಾಗಿ ಅರ್ಥವಾಗಿರಬೇಕು. ಅರಿವಿನಿಂದ ಆತಂಕ ದೂರವಾಗುತ್ತದೆ. ಆತಂಕವಿಲ್ಲದಿದ್ದರೆ ಅರ್ಧ ಚಿಕಿತ್ಸೆ ಮುಗಿದಂತೆಯೇ. ಆದರೆ ಪ್ರತಿ ರೋಗಿಗೂ ಅಥವಾ ವೈದ್ಯರ ಬಳಿ ಬರುವುದೇ ಒಂದು ಕೆಲಸವೆನಿಸುತ್ತದೆ. ರೋಗಿ ಮತ್ತು ವೈದ್ಯರ ನಡುವಿನ ಅನುಪಾತವೂ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರಿಗೂ ಅವರ ಆರೋಗ್ಯಸ್ಥಿತಿಯ ಕುರಿತು ಚರ್ಚಿಸುವುದು ಅಸಾಧ್ಯವಾಗಿದೆ. ಕೆಲವು ವೈದ್ಯರಿಗೆ ಅಷ್ಟೊಂದು ವ್ಯವಧಾನವಾಗಲೀ, ಸಮಯವಾಗಲೀ ಇರುವುದಿಲ್ಲ. ಇದು ವೈದ್ಯ ಮತ್ತು ರೋಗಿಗಳ ನಡುವಿನ ಅಂತರ ಹೆಚ್ಚಿಸುತ್ತದೆ. ಮಾಹಿತಿಯ ಕೊರತೆಯಿಂದಾಗಿ ಇಲ್ಲ ಸಲ್ಲದ ಅನುಮಾನಗಳು, ಆತಂಕಗಳೂ ಹೆಚ್ಚುತ್ತವೆ’ ಎನ್ನುತ್ತಾರೆ. 
 
ಡಾ. ಪದ್ಮಾ ರಾಮಮೂರ್ತಿ ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಕೆಲವು ಮಾಹಿತಿಯುಳ್ಳ ಅನಿಮೇಟೆಡ್‌ ಸರಣಿಗಳನ್ನು ಸಿದ್ಧಪಡಿಸಿದ್ದಾರೆ. ಗರ್ಭಾವಸ್ಥೆಯ ಪ್ರತಿತಿಂಗಳ ವಿವರ, ಸುದೀರ್ಘಕಾಲೀನ ನೋವು, ಕೀಲುನೋವು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಈ ಅಂತರವನ್ನು ಕಡಿಮೆ ಮಾಡುತ್ತದೆ ಎನ್ನುವುದು ಅವರ ನಂಬಿಕೆ.
 
ಇದೀಗ ಸ್ಮಾರ್ಟ್‌–ಫೋನ್‌ಗಳ ಜಮಾನಾ ಆಗಿರುವುದರಿಂದ ಎಲ್ಲರಿಗೂ ಬಹುಬೇಗ ಈ ಮಾಹಿತಿ ದಕ್ಕುತ್ತದೆ. ಒಮ್ಮೆ  www.youtube.com/c/medhealthtv ಲಿಂಕ್‌ ಅನ್ನು ನೋಡಿಕೊಂಡು ಅಲ್ಲಿ ಸಬ್‌ಸ್ಕ್ರೈಬ್‌ ಮಾಡುವ ಮೂಲಕ ಈ ಮಾಹಿತಿಯ ಹರಿವಿನೊಂದಿಗೆ ನೀವು ಬೆಸೆಯಬಹುದು. ಏನಾದರೂ ಸಂಶಯಗಳಿದ್ದರೆ ಅಲ್ಲಿ ಕಮೆಂಟ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.