ADVERTISEMENT

ಮಗುವಿಗಾಗಿ ಮುಗಿಯದ ನಿರೀಕ್ಷೆ

ಅಂಕುರ 84

ಡಾ.ಬೀನಾ ವಾಸನ್
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಮಗುವಿಗಾಗಿ  ಮುಗಿಯದ ನಿರೀಕ್ಷೆ
ಮಗುವಿಗಾಗಿ ಮುಗಿಯದ ನಿರೀಕ್ಷೆ   

ನನಗಾಗ 30 ವರ್ಷ. ನಾನು ನನ್ನ ಸಂಗಾತಿಯನ್ನು ಒಂದು ಪದವಿ ಕಾಲೇಜಿನಲ್ಲಿ ಭೇಟಿಯಾಗಿದ್ದೆ. ಆದರೆ ನಮ್ಮಿಬ್ಬರ ಕೆಲಸಗಳು ಒಂದೇ ಊರಿನಲ್ಲಿ ಸಿಗದೇ ಇದ್ದ ಕಾರಣ, ಮೂರು ವರ್ಷಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಕಳೆಯಬೇಕಾಯಿತು. ನನ್ನ ಹೆತ್ತವರು ಮಗುವಿಗಾಗಿ ಒತ್ತಾಯಿಸುತ್ತಲೇ ಇದ್ದರು...

ಈಚೆಗೆ ಟೈಮ್ಸ್‌ ಮ್ಯಾಗ್ಜೀನ್‌ನ ಮುಖಪುಟದ ಮೇಲೆ ಒಬ್ಬ ಯಶಸ್ವಿ ಮಹಿಳೆಯು ಮಗು ಹೆರದೇ ಇರಲು ಕಾರಣವನ್ನು ಕೇಳಿ, ವಿಷಾದ ಹಾಗೂ ಪ್ರಾಯಶ್ಚಿತ್ತದ ಧ್ವನಿಯಲ್ಲಿ ತಮ್ಮ ತಪ್ಪುಗಳು ಹಾಗೂ ಕಹಿನಿರ್ಧಾರಗಳ ಬಗ್ಗೆ ಕತೆಯ ಎಳೆಗಳು ಬಿಚ್ಚಿಕೊಳ್ಳುತ್ತವೆ. ಈ ಲೇಖನವು ವಯಸ್ಸಿನೊಂದಿಗೆ ಫಲವಂತಿಕೆಯ ಸಾಮರ್ಥ್ಯ ಕುಸಿಯುವ ಕುರಿತಾಗಿತ್ತು. ಮಗು ಹೆರಲು ತೀರ ವಿಳಂಬವಾದ ಸಮಯ ಯಾವುದು ಎನ್ನುವುದು ಯು.ಕೆಯ ಆಬ್ಸರ್ವರ್‌ನ ಪ್ರಮುಖ ಲೇಖನವಾಗಿತ್ತು. ನ್ಯುಯಾರ್ಕ್‌ ಸಂಚಿಕೆಯಲ್ಲಿ ಬೇಬಿ ಪ್ಯಾನಿಕ್‌ ಎಂಬ ಮುಖಪುಟ ಲೇಖನವನ್ನೇ ಪ್ರಕಟಿಸಿದೆ.

ಈ ಎಲ್ಲ ಲೇಖನಗಳು ಒಂದು ಬಗೆಯ ಎಚ್ಚರಿಕೆಯ ಗಂಟೆ ಎನಿಸುವುದಿಲ್ಲವೇ?
ವೃತ್ತಿನಿರತ ಮಹಿಳೆಯರನ್ನು ಸಂದರ್ಶಿಸಿದಾಗ ಶೇ 42ರಷ್ಟು ಜನರು ನಲ್ವತ್ತರ ಅಂಚಿನಲ್ಲಿದ್ದರು. ಅವರಿಗೆ ಮಗುವಾಗಿರಲಿಲ್ಲ. ಮಗು ಮಾಡಿಕೊಳ್ಳದೇ ಇರುವುದರ ಬಗ್ಗೆ ಅವರಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು.

ದ ಅಮೆರಿಕನ್‌ ಸೊಸೈಟಿ ಫಾರ್‌ ರಿಪ್ರೊಡಕ್ಟಿವ್‌ ಮೆಡಿಸನ್‌ (ಎಸ್‌ಆರ್‌ಎಂ) ವಯಸ್ಸು ಹೆಚ್ಚಿದಂತೆಲ್ಲ ಫಲವಂತಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದೂ ಎಚ್ಚರಿಸಿದೆ.

ಇಂಥ ಲೇಖನಗಳನ್ನು ಓದಿದಾಗಲೆಲ್ಲ ಹೊಟ್ಟೆಯಲ್ಲಿ ತಳಮಳವಾಗುತ್ತದೆ. ಮನಸು ಭಾರವಾಗುತ್ತದೆ. ನಾನು ಈಗಾಗಲೇ ತಾಯ್ತನದ ಸುಖದಿಂದ ವಂಚಿತಳಾಗಿದ್ದೇನೆಯೇ ಎಂಬ ಆತಂಕ ಕಾಡುತ್ತದೆ. 35 ವರ್ಷಗಳ ನಂತರ ಮಗುವಿಗಾಗಿ ಯತ್ನಿಸುವವರು ವಿಫಲರಾಗುತ್ತಾರೆ ಎಂಬುದು ಫ್ರಾನ್ಸ್‌ನ 150 ವರ್ಷಗಳ ದಾಖಲೆಯೇ ಪುರಾವೆ ಒದಗಿಸುತ್ತದೆ. ನನಗೀಗಲೇ 35 ವರ್ಷ. ಎರಡು ಮಗು ಬೇಕೆನುವುದು ಕನಸಾಗಿಯೇ ಉಳಿಯುತ್ತದೆಯೇ? ನನಗೆ ಮಗುವಾಗದರೂ ಆಗಲಿದೆಯೇ?

ಇಂಥ ಪ್ರಶ್ನೆಗಳನ್ನಿರಿಸಿಕೊಂಡು ಹಲವಾರು ಮಹಿಳೆಯರು ನಮ್ಮ ಬಳಿ ಬರುತ್ತಾರೆ. ಬಂಜೆತನದ ಪಟ್ಟ ಹೊತ್ತು ಸಾಕಾಗಿರುತ್ತದೆ. ಒಂದು ಬಗು ಹೆರುವ ಆಸೆ, ನಿರೀಕ್ಷೆ ಅವರ ಕಂಗಳಲ್ಲಿ ಆತಂಕದೊಂದಿಗೇ ಮನೆ ಮಾಡಿರುತ್ತದೆ. ಮೊದಲ ಉದಾಹರಣೆಯನ್ನು ಗಮನಿಸಿದಾಗಲೂ ಇಂಥದ್ದೇ ಪ್ರಶ್ನೆ ಎದುರಾಗುತ್ತದೆ. ಸಂತಾನೋತ್ಪತ್ತಿಯ ಬಗ್ಗೆ ನಮ್ಮಲ್ಲಿ ಸೂಕ್ತವಾದ ಮಾಹಿತಿ ನೀಡಲಾಗುವುದಿಲ್ಲವೇ?

ಜಾಗತಿಕವಾಗಿ ತಾಯ್ತನದ ಟ್ರೆಂಡ್‌ ಬದಲಾಗುತ್ತಿದೆ. ವಿಳಂಬವಾದ ತಾಯ್ತನವನ್ನು ಹತ್ತು ವರ್ಷಗಳಿಂದಲೇ ಗುರುತಿಸಲಾಗುತ್ತಿದೆ. ಒಂದು ದಶಕದ ಹಿಂದೆ ಸಾಮಾನ್ಯವಾಗಿ ಮಹಿಳೆಯರು ತಮ್ಮ 25ರಿಂದ 29ನೇ ವಯಸ್ಸಿನಲ್ಲಿ ಮಗುವನ್ನು ಹೆರುತ್ತಿದ್ದರು. ಈಗದು 30ರಿಂದ 34ಕ್ಕೆ ಏರಿದೆ. ಆದರೆ ನಮಗೆ ಗೊತ್ತಿರಲೇಬೇಕಾದ ಕೆಲವು ಅಂಶಗಳಿವೆ.

ಮಹಿಳೆಯರಲ್ಲಿ ಫಲವಂತಿಕೆಯ ಗಡಿಯಾರ ಇಳಿಕೆಯಾಗುವುದು 27ರಿಂದಲೇ ಆರಂಭವಾಗುತ್ತದೆ. ಮಹಿಳೆಯರು ತಮ್ಮ 27ನೇ ವಯಸ್ಸಿಗೆ ಶೇ 10ರಷ್ಟು ಫಲವಂತಿಕೆಯ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತಾರೆ ಎಂದು ಅಧ್ಯಯನವೊಂದು ಸಾಬೀತು ಪಡಿಸಿದೆ.

ಸಾಮಾನ್ಯವಾಗಿ 20ರ ಅಂಚಿನಲ್ಲಿ ಮಹಿಳೆಯರು ತಮ್ಮ ಫಲವಂತಿಕೆಯ ಉತ್ತುಂಗವನ್ನು ತಲುಪಿರುತ್ತಾರೆ. 23ರಿಂದ 31ರವರೆಗಿನ ಅವಧಿ ಮಕ್ಕಳು ಹೆರಲು ಯೋಗ್ಯವಾಗಿರುತ್ತದೆ. 20ರ ನಂತರ ಫಲವಂತಿಕೆಯ ಶಕ್ತಿ ಕ್ಷೀಣಿಸಲಾರಂಭಿಸುತ್ತದೆ. 30ರ ನಂತರ ಅತಿ ವೇಗವಾಗಿ ಕ್ಷೀಣಿಸುತ್ತದೆ.

35ರ ವಯಸ್ಸಿನವರೆಗೆ ಪ್ರತಿ ವರ್ಷ ಶೇ 3ರಷ್ಟು ಇಳಿಕೆಯಾಗುತ್ತದೆ. 35ರನಂತರ ಈ ಇಳಿಕೆಯ ಪ್ರಮಾಣ ಇನ್ನೂ ಹೆಚ್ಚುತ್ತದೆ. 39ನೇ ವಯಸ್ಸಿನಲ್ಲಿ 31ರಲ್ಲಿದ್ದ ಫಲವಂತಿಕೆಯ ಶಕ್ತಿಯ ಶೇ 50ರಷ್ಟುನ್ನು ನೀವು ಕಳೆದುಕೊಂಡಿರುತ್ತೀರಿ. 39ರಿಂದ 42ರ ಅವಧಿಯಲ್ಲಿ ಇನ್ನೂ 50ರಷ್ಟು ಕಳೆದು ಹೋಗುತ್ತದೆ. ನಂತರ ಪ್ರತಿವರ್ಷವೂ ಗಣನೀಯವಾಗಿ ಇಳಿಕೆಯಾಗುತ್ತದೆ. ಆಗ ಗರ್ಭಿಣಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಲೇ ಹೋಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.