ADVERTISEMENT

ಮನಸ್ಸು, ಹೃದಯ ಶಾಂತವಾಗಲಿ...

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2016, 19:30 IST
Last Updated 20 ಡಿಸೆಂಬರ್ 2016, 19:30 IST
ಮನಸ್ಸು, ಹೃದಯ ಶಾಂತವಾಗಲಿ...
ಮನಸ್ಸು, ಹೃದಯ ಶಾಂತವಾಗಲಿ...   

ಹೊಸ ವರ್ಷ ಹಳೆಯದಕ್ಕೆ ಜಾಗ ಮಾಡಿಕೊಡುತ್ತಿದ್ದಂತೆ ಅನಾರೋಗ್ಯವೆಲ್ಲ ಕಳೆದು ಆರೋಗ್ಯ ನಿಮ್ಮಲ್ಲಿ ನಳನಳಿಸಲಿ,  ನಿಮ್ಮ ಆತ್ಮಚೈತನ್ಯ ಮತ್ತಷ್ಟು ಪುಟಿದೇಳಲಿ ಎಂದು ಹಾರೈಸುತ್ತಿದ್ದೇನೆ.

ಎಲ್ಲ ನೋವು ಕರಗಿಹೋಗಿ ನಿರಾಳತೆ ಆವರಿಸಲಿ. ಉದಾಸೀನ ಧೋರಣೆ ಮರೆಯಾಗಿ  ಮನಸ್ಸು ಮತ್ತಷ್ಟು ಶಾಂತವಾಗಲಿ. ಕುಹಕದ ಮಾತುಗಳು ಪ್ರೀತಿ ತುಂಬಿದ ಮಾತುಗಳಾಗಿ ಬದಲಾಗಲಿ.

ಭೌತಿಕ, ಮಾನಸಿಕ, ಆಧ್ಯಾತ್ಮಿಕ   ದಾರಿದ್ರ್ಯ ಕಳೆದು ಸಂಪತ್ತು, ಅರಿವು ಮತ್ತು ವೈಶಾಲ್ಯ ನಮ್ಮನ್ನು ಆವರಿಸಲಿ. ಹಳೆಯದು ಮತ್ತು ಹೊಸದರ ನಡುವಣ ಸೇತುವೆಯ ಮೇಲೆ ಸಮತೋಲನ ಮತ್ತು ಘನತೆಯಿಂದ ನಿಲ್ಲೋಣ. ಹೊಸವರ್ಷ ಸ್ವಾಗತಿಸಲು ಕೆಲವು ಕಿವಿಮಾತುಗಳು ಇಲ್ಲಿವೆ:

* ‘ನನ್ನ ಜೀವನದಲ್ಲಿ ಆಗುವ ಘಟನೆಗಳನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಏನೇ ಆದರೂ ಹೇಗೆ ಪ್ರತಿಕ್ರಿಯಿಸುತ್ತೇನೆ ಎನ್ನುವುದು ನನ್ನ ಕೈಯಲ್ಲೇ ಇದೆ’– ಎಂದು ಹೇಳಿಕೊಳ್ಳಿ.
ಯಾವುದಕ್ಕೂ ಪ್ರತಿರೋಧ ತೋರದೇ ಸಂಯಮದಿಂದ ಪ್ರತಿಕ್ರಿಯಿಸುವುದರಲ್ಲಿ ನಮ್ಮ ನಿಜವಾದ ಶಕ್ತಿ ಅಡಗಿದೆ. ಆಗ ಸಹಜ ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೇ ಯಾವುದೇ ಸಮಸ್ಯೆಯನ್ನಾದರೂ ಹಿಂಜರಿಕೆಯಿಲ್ಲದೇ ಎದುರಿಸಬಹುದು.

ನನ್ನ ಸ್ನೇಹಿತೆ ‘ರಿತಿ’ಯ ಬದುಕು ಸಂಕಷ್ಟದಲ್ಲಿ ಸಿಲುಕಿತ್ತು. ಆಕೆ ‘ಯೋಗನಿದ್ರಾ’ ಧ್ಯಾನವನ್ನು ಮಾಡಲಾರಂಭಿಸಿದಳು. ಒಂದು ವಾರದಲ್ಲೇ ಆಕೆಗೆ ತಾನು ಕೋಪದ ಸುಳಿಗೆ ಸಿಲುಕುವುದು ಸರಿಯಲ್ಲ ಎಂದು ಅರಿವಾಗತೊಡಗಿತು. ಎಂತಹ ಅರಿವು ಇದು..! ಎಷ್ಟೋ ಸಂಕಷ್ಟಗಳು, ಗದ್ದಲಗಳು, ಗೊಂದಲಗಳು ಮುಗಿದಮೇಲೆ ಇದ್ದಕ್ಕಿದಂತೆ ಒಂದು ದಿನ ಇಂತಹ ಅರಿವು ಮೂಡುತ್ತದೆ.

ಮನಸ್ಸು ಅಂದರೆ ಮಾರುಕಟ್ಟೆಯ ಗದ್ದಲದಲ್ಲಿ ಕಳೆದುಹೋದ ಮಗುವಿನಂತೆ ಇರುತ್ತದೆ. ಸುರಕ್ಷಿತವಾದ, ಸುಭದ್ರ ಪರಿಸರಕ್ಕೆ ಮನಸ್ಸನ್ನು ಕೊಂಡೊಯ್ಯುವುದು ಧ್ಯಾನ. ಹೌದು, ದಯವಿಟ್ಟು ಧ್ಯಾನ ಮಾಡಿ. ನಿಮಗೆ, ನಿಮ್ಮ ಮನಸ್ಸಿಗೆ ಅಂತಹ ಪ್ರಶಾಂತಸ್ಥಿತಿ ಬೇಕಿರುತ್ತದೆ.

* ಸುಖಾಸುಮ್ಮನೆ ದಣಿಯುವುದು ಮತ್ತು ಅರ್ಥಪೂರ್ಣ ಕೆಲಸ ಮಾಡಿ ಮೈಮರಿದು ದುಡಿಯುವುದರ ನಡುವೆ ವ್ಯತ್ಯಾಸವಿದೆ. ನನ್ನನ್ನು ಒತ್ತಡಕ್ಕೀಡುಮಾಡುವ, ನನ್ನ ಶಕ್ತಿಯನ್ನೆಲ್ಲ ಬಸಿಯುವ ಚಟುವಟಿಕೆಗಳಿಗೆ ನಾನು ದೃಢವಾಗಿ ಇಲ್ಲ ಎಂದೇ ಹೇಳುತ್ತೇನೆ. ನನಗೆ ಅತಿ ಅಗತ್ಯವಾದ, ನನ್ನಲ್ಲಿ ಸ್ಫೂರ್ತಿ ತುಂಬುವ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತೇನೆ. ಹೀಗೆ ಮಾಡಿದಾಗ ನಿಮ್ಮ ಬದುಕು  ಬೇರೆಯದ್ದೇ ಆದ ರೀತಿಯಲ್ಲಿ ಸಾಗುತ್ತದೆ. ನೀವು ಮನಸ್ಸಿನಿಂದ ಮುಕ್ತಿ ಪಡೆಯುತ್ತೀರಿ..!
ಮನಸ್ಸು ಎಂದರೆ ಇತರರಿಂದ ಎರವಲು ಪಡೆದ ಆಲೋಚನೆಗಳು ಮತ್ತು ವಿಚಾರಗಳು. ಅದಕ್ಕಾಗಿಯೇ ನಿರೀಕ್ಷೆ ಮತ್ತು ಒತ್ತಡದ ಭಾರ ನಿಮ್ಮನ್ನು ಕಾಡುತ್ತದೆ. ಅದರಿಂದ ಬಿಡುಗಡೆ ಪಡೆದಾಗ ನಿಮ್ಮಲ್ಲಿ ಸ್ಪಷ್ಟತೆ ಮೂಡುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮೊಳಗೆ ಆ ಜೀವಚೈತನ್ಯ ಮಕ್ತವಾಗಿ ಹರಿಯತೊಡಗಿದೊಡನೆ ನಿಮ್ಮ ಮಾತು, ನಿಮ್ಮ ಹಾವಭಾವ ಎಲ್ಲವೂ ಬದಲಾಗುತ್ತವೆ. ಸಕಾರಾತ್ಮಕ ಕಂಪನಗಳು ನಿಮ್ಮಿಂದ ಹೊರಹೊಮ್ಮುತ್ತವೆ.

ನಿಮ್ಮ ಬದುಕಿಗೆ ಪ್ರಸ್ತುತ ಯಾವುದೇ ಅರ್ಥ ನೀಡದ ಮೂರು ಅಭ್ಯಾಸಗಳನ್ನು ಬಿಟ್ಟುನೋಡಿ. ಮನೆಯ ಬೀರುಗಳಲ್ಲಿ  ವರ್ಷಗಳಿಂದ  ಬಳಸದೇ ಇರುವ ಬಟ್ಟೆ–ಬರೆಗಳನ್ನು, ಸಾಮಾನು–ಸಲಕರಣೆಗಳನ್ನು ತೆಗೆದುಹಾಕಿ... ಎಷ್ಟೊಂದು ನಿರಾಳತೆ ಮೂಡುತ್ತದೆ ನೋಡಿ. ಕಿರಿಕಿರಿ ಹುಟ್ಟಿಸುವ ಜನ ಮತ್ತು ಒತ್ತಡ ತುಂಬಿದ  ಚಟುವಟಿಕೆಗಳಿಂದ ದೂರವಿದ್ದಾಗ ಸರಳ–ಸುಲಭ ಬದುಕು ನಿಮ್ಮದಾಗುತ್ತದೆ.

* ನಾನು ಎಲ್ಲೇ ಇದ್ದರೂ ಶಾಂತಿ ನೀಡುತ್ತೇನೆ. ನಾನು ಮನೆಯಲ್ಲಿ, ಕಚೇರಿಯಲ್ಲಿ ಶಾಂತಿ ಕಾಪಾಡಿಕೊಳ್ಳುತ್ತೇನೆ. ಶಾಂತಿಯನ್ನೇ ನನ್ನ ಮನೆಯಾಗಿಸಿಕೊಳ್ಳುತ್ತೇನೆ’ ಎಂದು ಹೇಳಿ.
ಶಾಂತಿಯೇ ನಿಮ್ಮ ಮನೆಯಾದಾಗ ನೀವು ಎಲ್ಲೇ ಹೋಗಲಿ, ಈ ಶಾಂತಭಾವ ನಿಮ್ಮನ್ನು ಆವರಿಸಿರುತ್ತದೆ. ಬಹುತೇಕರು ನಾನು ಈ ಕೆಲಸ ಮಾಡುತ್ತೇನೆ. ಆಮೇಲೆ ವಿಶ್ರಾಂತಿ ಪಡೆಯುತ್ತೇನೆ ಎನ್ನುತ್ತಾರೆ.

ಒಂದಾದ ಮೇಲೆ ಒಂದರಂತೆ ಕೆಲಸ ಮಾಡುತ್ತಲೇ ಇರುತ್ತಾರೆ. ಆಗ ವಿಶ್ರಾಂತಿ ಎನ್ನುವುದು ಮರೀಚಿಕೆಯಾಗುತ್ತದೆ. ಬದುಕು  ಎಂದರೆ ಕೆಲಸ ಮಾಡುವುದು, ಸಾಧಿಸುವುದು, ಗುರಿ ಮುಟ್ಟುವುದು ಮಾತ್ರವಲ್ಲ ಎಂದು ಅರಿವಾದ ದಿನ ನಿಮ್ಮೊಳಗೆ ಅಪೂರ್ವ ಶಾಂತಿ ಮೂಡುತ್ತದೆ. ನಿಮ್ಮ ಮನೋಭಾವ ಬದಲಿಸಿಕೊಳ್ಳಿ. ನಾನು ಕೆಲಸ ಮಾಡುವುದಕ್ಕೆಂದೇ ಹುಟ್ಟಿದವನು ಎಂದುಕೊಳ್ಳಬೇಡಿ. ನಾನು ಶಾಂತಿಸ್ಥಾಪಕ ಎಂದುಕೊಳ್ಳಿ.

* ನಿತ್ಯವೂ ನನ್ನ ಆರೋಗ್ಯ ಕಾಪಾಡಿಕೊಳ್ಳುತ್ತೇನೆ. ಸದೃಢ ದೇಹ ಕಾಪಾಡಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳಿ. ನಿನ್ನೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಹಳಹಳಿಸಬೇಡಿ. ಇಂದು  ಕೂಡಲೇ ವ್ಯಾಯಾಮ ಆರಂಭಿಸಿ.
ಯಾರ ಮೇಲಾದರೂ ರಕ್ತ ಕುದಿಯುವಷ್ಟು ಸಿಟ್ಟು ಬಂದಾಗ ನಿಮ್ಮ ರಕ್ತ ಹೆಪ್ಪುಗಟ್ಟಬಹುದು. ಅದನ್ನು ಅರಿತುಕೊಳ್ಳಿ. ನಿಮ್ಮ ಎದುರಿಗಿರುವ ವ್ಯಕ್ತಿ ಸಹ ಸಂತಸಕ್ಕಾಗಿ, ಶಾಂತಿಗಾಗಿ ನಿಮ್ಮಷ್ಟೇ ಹಾತೊರೆಯುತ್ತಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮೊಳಗಿನ ನಕಾರಾತ್ಮಕ ಭಾವವೆಲ್ಲ ಕರಗಿಹೋಗಲಿ. ಕರುಣೆ, ಕ್ಷಮೆಯ ಕಿರಣಗಳು  ನಿಮ್ಮೊಳಗಿನಿಂದ ಹೊರಹೊಮ್ಮಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.