ADVERTISEMENT

ಮಾರಕವಾಗುತ್ತಿದೆ ಆ್ಯಂಟಿಬಯಾಟಿಕ್‌ಗಳ ಬಳಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಮಾರಕವಾಗುತ್ತಿದೆ ಆ್ಯಂಟಿಬಯಾಟಿಕ್‌ಗಳ ಬಳಕೆ
ಮಾರಕವಾಗುತ್ತಿದೆ ಆ್ಯಂಟಿಬಯಾಟಿಕ್‌ಗಳ ಬಳಕೆ   

ವಿಶ್ವಸಂಸ್ಥೆಯ ಅಂದಾಜಿನಂತೆ ಪ್ರತಿವರ್ಷ ಸೋಂಕುರೋಗ ತಗುಲಿ, ಆ್ಯಂಟಿಬಯಾಟಿಕ್ ಔಷಧ ತೆಗೆದುಕೊಂಡರೂ, ಅದು ಕೆಲಸ ಮಾಡದೆ ಏಳು ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಇದು 2050ಕ್ಕೆ 30 ಕೋಟಿ ತಲುಪಲಿದೆ ಎನ್ನುವುದು ನಿಜಕ್ಕೂ ಆತಂಕಕಾರಿ. ಆ್ಯಂಟಿಬಯಾಟಿಕ್ ಔಷಧಗಳು ಕಳೆದ ಒಂದು ಶತಮಾನದಲ್ಲಿ ಕೋಟ್ಯಂತರ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿರುವುದು ಸತ್ಯ.

ಆದರೆ ಇಂದು ರೋಗಾಣುಗಳು ನಮ್ಮ ಆ್ಯಂಟಿಬಯಾಟಿಕ್ ಔಷಧಗಳಿಗೆ ಒಗ್ಗಿ ಅವುಗಳನ್ನು ಛಿದ್ರ ಮಾಡಿ ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಪಡೆದಿವೆ. ಸೋಂಕುರೋಗದ ವಿರುದ್ಧ ನಾವು ಇಂದು ನಮ್ಮ ಕೈಯಲ್ಲಿದ್ದ ಸಮರ ಸಾಮಗ್ರಿಯನ್ನು ಮೊಂಡುಗೊಳಿಸಿಕೊಂಡಿದ್ದೇವೆ. ಇದಕ್ಕೆ ಹಲವು ಕಾರಣಗಳಿವೆ. ಇಂದು ಉಪಯೋಗಿಸಲ್ಪಡುತ್ತಿರುವ ಶೇ.50ರಷ್ಟು ಆ್ಯಂಟಿಬಯಾಟಿಕ್‌ಗಳು ಅನವಶ್ಯಕವಾದುದ್ದಾಗಿವೆ. ಅಲ್ಪಾವಧಿಯಲ್ಲಿ ಸಹಜವಾಗಿ ಬಂದು ಹೋಗುವ ಕಾಯಿಲೆಗಳಿಗೂ ಮತ್ತು ಸಂಬಂಧಪಡದ ವೈರಸ್ ಸೋಂಕಿನ ಕಾಯಿಲೆಗಳಿಗೂ ಆ್ಯಂಟಿಬಯಾಟಿಕ್‌ಗಳ ಬಳಕೆಯಾಗುತ್ತಿವೆ. ‘ಕೆಲವು ಸೋಂಕುಗಳಿಗೆ ಔಷಧ ತೆಗೆದುಕೊಂಡರೆ ಒಂದು ವಾರದಲ್ಲಿ ವಾಸಿಯಾದರೆ, ತೆಗೆದುಕೊಳ್ಳದಿದ್ದರೆ ಏಳು ದಿನದಲ್ಲಿ ವಾಸಿಯಾಗುತ್ತವೆ’ – ಎನ್ನುವುದುಂಟು.

ನಮ್ಮಲ್ಲಿ ಔಷಧದ ಅಂಗಡಿಗಳಲ್ಲಿ ಯಾವುದೇ ವೈದ್ಯರ ಚೀಟಿ ಇಲ್ಲದೆ ಹಾಗೆಯೇ ಆಂಟಿಬಯಾಟಿಕ್‌ಗಳನ್ನು ಕೊಳ್ಳಬಹುದು. ವಿದೇಶಗಳಲ್ಲಿ ಕೊಳ್ಳುವುದು ಹೋಗಲಿ, ಅವಧಿ ಮುಗಿದ ಬೇಡವಾದ ಆಂಟಿಬಯಾಟಿಕ್‌ಗಳನ್ನು ಸುಮ್ಮನೆ ಕಸಕ್ಕೂ ಹಾಕುವಂತಿಲ್ಲ. ಔಷಧದ ಅಂಗಡಿಗಳಲ್ಲಿ ಅದಕ್ಕಾಗಿ ನಿಗದಿಪಡಿಸಿದ ಪೆಟ್ಟಿಗೆಯಲ್ಲಷ್ಟೆ ಹಾಕಬೇಕು. ಕಾರಣ, ಇವೇನಾದರೂ ಪರಿಸರಕ್ಕೆ ಸೇರಿದರೆ ಅಲ್ಲಿ ಸೋಂಕು ರೋಗಾಣುಗಳು ಅವುಗಳಿಗೆ ಒಗ್ಗಿ ಪಳಗಿ, ನಮಗೆ ಕಾಯಿಲೆ ಬಂದಾಗ ಅದೇ ಔಷಧಗಳನ್ನು ಕೊಟ್ಟಾಗ ಅವು ಕೆಲಸ ಮಾಡದಂತಾಗಬಹುದು ಎಂಬ ಎಚ್ಚರಿಕೆ. ಆದರೆ ನಮ್ಮಲ್ಲಿ ಇಂದು ಆ್ಯಂಟಿಬಯಾಟಿಕ್‌ಗಳನ್ನು ಔಷಧಗಳಾಗಿ ಬಳಸುವುದು ಶೇ.20ರಷ್ಟು ಮಾತ್ರ.

ADVERTISEMENT

ಇನ್ನು ಶೇ.80ರಷ್ಟು ಆ್ಯಂಟಿಬಯಾಟಿಕ್‌ಗಳು ಉಪಯೋಗವಾಗುತ್ತಿರುವುದು ಸೀಗಡಿಮೀನು, ಕೋಳಿ, ಹಂದಿ, ಜೇನು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ. ಅಷ್ಟೇ ಅಲ್ಲ, ನಾವು ನಿತ್ಯ ಬಳಸುವ ಸೋಪು, ಶ್ಯಾಂಪು ಮತ್ತು ಹಲ್ಲುಜ್ಜುವ ಪೇಸ್ಟ್‌ನಲ್ಲಿಯೂ ‘ಟ್ರೈಕ್ಲೋಸಾನ್’ ಎಂಬ ಆ್ಯಂಟಿಬಯಾಟಿಕನ್ನು ಸೇರಿಸಲಾಗಿರುತ್ತದೆ. ಹೆಸರಾಂತ ಆಯುರ್ವೇದದ ಸೌಂದರ್ಯವರ್ಧಕ ಪದಾರ್ಥಗಳಲ್ಲಿಯೂ ಇಂದು ಆ್ಯಂಟಿಬಯಾಟಿಕ್‌ಗಳನ್ನು ಸೇರಿಸುತ್ತಿರುವುದು ದುರಂತವೇ ಸರಿ. ಈ ಸಮಸ್ಯೆಯ ಗಾಂಭೀರ್ಯವನ್ನು ಅರಿತು ವಿಶ್ವಸಂಸ್ಥೆಯೇ ವಿಶೇಷ ಸಭೆ ನಡೆಸಿ, ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಡಾ. ಮಾರ್ಟಿನ್ ಬ್ಲೇಸರ್ ಅವರ ಹೆಸರಾಂತ ಪುಸ್ತಕ ‘ಮಿಸ್ಸಿಂಗ್ ಮೈಕ್ರೋಬ್ಸ್‌’ನಲ್ಲಿ ಆ್ಯಂಟಿಬಯಾಟಿಕ್‌ಗಳ ದುರ್ಬಳಕೆಯಿಂದ ನಮ್ಮ ಆರೋಗ್ಯ–ಪರಿಸರಗಳು ಹೇಗೆ ಹದಗೆಟ್ಟಿದೆ ಎನ್ನುವುದನ್ನು ವಿವರಿಸಿದ್ದಾರೆ.

ಕರುಳಿನೊಂದಿಗೆ ಶತಶತಮಾನಗಳಿಂದ ಪರಸ್ಪರ ಅವಲಂಬಿತರಾಗಿ ಬದುಕಿಕೊಂಡಿದ್ದ ಎಷ್ಟೋ ಸೂಕ್ಷ್ಮಜೀವಿಗಳನ್ನು ನಾವಿಂದು ನಾಶ ಮಾಡಿದ್ದೇವೆ. ಅದರ ಪರಿಣಾಮ ಬೊಜ್ಜುರೋಗದಿಂದ ಹಿಡಿದು ಅನೇಕ ಜೀವನಶೈಲಿಯ ಕಾಯಿಲೆಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದು ಮೀನು ಮತ್ತು ಮಾಂಸಗಳಲ್ಲಿ ‘ಕೊಲಿಸ್ಟಿನ್’ ಎಂಬ ಕೊನೆಯ ಹಂತದಲ್ಲಿ ಬಳಸಬಹುದಾದ ಆ್ಯಂಟಿಬಯಾಟಿಕ್‌ಗಳ ಅಂಶಗಳು ಕಂಡುಬರುತ್ತಿವೆ. ಎಂದರೆ  ಇಂತಹ ಕಟ್ಟಕಡೆಗೆ ಬಳಸಬಹುದಾದ ಆ್ಯಂಟಿಬಯಾಟಿಕ್‌ಗಳು ಮೀನು ಮತ್ತು ಮಾಂಸದ ಅಧಿಕ ಇಳುವರಿಗಾಗಿ ಉಪಯೋಗವಾಗುತ್ತಿವೆ. ಅವುಗಳ ಅಂಶ ನಮ್ಮ ದೇಹವನ್ನೂ ಸೇರಿ ‘ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್’ ಬರಲು ಕಾರಣವಾಗಿವೆ.

ಪ್ರಾಣಿಗಳ ಮಲವು ಗೊಬ್ಬರರೂಪದಲ್ಲಿ ಹೊಲ–ಗದ್ದೆಗಳನ್ನು ಸೇರಿ ಹಣ್ಣು–ತರಕಾರಿಗಳಲ್ಲಿಯೂ ಅದರ ಅಂಶ ನಮ್ಮನ್ನು ತಲುಪುತ್ತಿವೆ. ಸೂಕ್ಷ್ಮಜೀವಿಗಳು ಆ್ಯಂಟಿಬಯೋಟಿಕ್‌ಗಳಿಗೆ ಒಗ್ಗಿಕೊಳ್ಳುತ್ತಿವೆ. ಅಂಟಾರ್ಟಿಕದಲ್ಲಿಯೂ ‘ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್ ಜೀನ್ಸ್‌’ಗಳು ಪತ್ತೆಯಾಗಿವೆ. ಕೆಲವು ಸೋಂಕುರೋಗಗಳಿಗೆ ಯಾವುದೇ ಆ್ಯಂಟಿಬಯಾಟಿಕ್‌ಗಳು ಕೆಲಸ ಮಾಡದೆ ಹೊಸ ದಾರಿಗಾಗಿ ಹುಡುಕಲಾಗುತ್ತಿದೆ. ‘ಕ್ಲಾಸ್ಟ್ರೀಡಿಯಮ್ ಡಿಫಿಸಿಲಿ’ ಎಂಬ ರೋಗಾಣು ಹೊಟ್ಟೆಗೆ ತಗುಲಿದಾಗ ಅದನ್ನು ವಾಸಿ ಮಾಡಲು ಈಗ ಇನ್ನೊಬ್ಬ ಆರೋಗ್ಯವ್ಯಕ್ತಿಯ ಮಲವನ್ನು ಹೊಟ್ಟೆಗೆ ಸೇರಿಸುವುದೇ (stool transplant) ಸೂಕ್ತ ಪರಿಹಾರವೆಂದು ಈಗ ಅನೇಕ ಆಸ್ಪತ್ರೆಗಳಲ್ಲಿ ಇದನ್ನೇ ಮಾಡಲಾಗುತ್ತಿದೆ.

ಒಳ್ಳೆಯ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿದ್ದಾಗ ಕೆಟ್ಟ ರೋಗಾಣುಗಳು ಬರದಂತೆ ನೋಡಿಕೊಳ್ಳುತ್ತವೆ. ಸೋಂಕನ್ನು ತಗುಲಿಸುವ ರೋಗಾಣುಗಳ ಸಂಖ್ಯೆ ಜೀವಜಗತ್ತಿನಲ್ಲಿ ಅತಿ ವಿರಳ. ಒಳ್ಳೆಯ ಆರೋಗ್ಯಕ್ಕೆ ಪೂರಕವಾದ ಸೂಕ್ಷ್ಮಜೀವಿಗಳು ರೋಗಾಣುಗಳು ತಾವೇ ಆ್ಯಂಟಿಬಯಾಟಿಕ್‌ಗಳನ್ನು ಉತ್ಪಾದಿಸಿ ಕೊಲ್ಲುತ್ತವೆ. ಇದಕ್ಕೆ ಪೂರಕವಾಗಿ ನಾರಿನ ಆಹಾರಪದಾರ್ಥ ಸೇವನೆಯಿಂದ ಮತ್ತು ಅನವಶ್ಯಕ ಆ್ಯಂಟಿಬಯಾಟಿಕ್ ನಿಯಂತ್ರಣದಿಂದ ನಮ್ಮ ದೇಹವನ್ನೇ ನಾವು ಭದ್ರಕೋಟೆಯನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಮ್ಮ ಔಷಧವೇ ನಮಗೆ ಮಾರಕವಾಗಿ ಪರಿಣಮಿಸುತ್ತದೆ.

***

ಆ್ಯಂಟಿಬಯಾಟಿಕ್‌ಗಳನ್ನು ಅನವಶ್ಯಕವಾಗಿ ಬಳಸದಿರುವುದೇ ಅದರ ಮೊದಲ ಸದ್ಬಳಕೆ. ಕಾಯಿಲೆ ಬಂದಾಗ ಕೊಡಬೇಕಾಗಿರುವ ಔಷಧಗಳನ್ನು ಹಣ್ಣು–ತರಕಾರಿ ಮತ್ತು ಪ್ರಾಣಿಗಳಲ್ಲಿ ಅಧಿಕ ಇಳುವರಿ ಮತ್ತು ತೂಕಕ್ಕಾಗಿ ಬಳಸುವುದು ಮಾರಕ. ನ್ಯಾಷನಲ್ ಲಾ ಕಮಿಷನ್ ಕೂಡ ತಡಮಾಡದೆ ಈ ಮಾರಕ ಬೆಳವಣಿಗೆಯನ್ನು ತಡೆಯಬೇಕೆಂದು ಸೂಚಿಸಿದೆ.

ಕೆ. ಸಿ. ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.