ADVERTISEMENT

ಮಿತವ್ಯಯ ಎಂಬ ಜಾಣ್ಮೆ

ದುಂದುಗಾರಿಕೆ ಚಟವೇ ಹೊರತು ಅದು ಅನಿವಾರ್ಯವಲ್ಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST
ಇಂದಿನ ಕಾಲವನ್ನು ‘ಕೊಳ್ಳುವ ಕಾಲ’, ‘ಭೋಗವೇ ಬದುಕು’ ಎನ್ನುವ ಕಾಲ ಎನ್ನಬಹುದು. ಇದನ್ನೇ ‘ಕೊಳ್ಳುಬಾಕುತನ’ ಎನ್ನುವುದು. ಇಂದಿನ ಆರ್ಥಿಕ ‘ವ್ಯವಸ್ಥೆ’ಗಳು ಕೂಡ ಇದನ್ನೇ ಪ್ರೋತ್ಸಾಹಿಸುತ್ತವೆ. ಅವು ಸಾಲದ ಆಮಿಷವನ್ನು ತೋರಿಸುತ್ತವೆ; ನಾಳೆಯ ಸಂಪಾದನೆಯನ್ನು ಇಂದೇ ಖರ್ಚು ಮಾಡುವಂತೆ ಹುರಿದುಂಬಿಸುತ್ತವೆ.

ಕೈಯ್ಯಲ್ಲಿ ದುಡ್ಡು ಇಲ್ಲದಿದ್ದರೂ ಬೇಕಾದ ವಸ್ತುಗಳನ್ನು ಪಡೆಯಲು ಸಾಧ್ಯ ಎಂಬಂಥ ಅವಕಾಶ ಇದ್ದಾಗ ಸುಮ್ಮನಿರಲು ಸಾಧ್ಯವೆ? ಸಾಲವನ್ನು ಮಾಡುತ್ತೇವೆ; ಸುಖವನ್ನು ಪಡೆಯಬಹುದು ಎಂಬ ಕನಸಿನಲ್ಲಿ ಬೇಡದ ವಸ್ತುಗಳನ್ನೂ ಇರದ ಕಾಸಿನಲ್ಲಿ ಕೊಂಡು ಸಾಲದ ಮಕ್ಕಳಾಗುತ್ತವೆ. ಸಾಲವನ್ನು ತೀರಿಸಲು ಜೀವನದುದ್ದಕ್ಕೂ ಹೋರಾಟ ಮಾಡಬೇಕಾಗುತ್ತದೆ;
 
ನಾವು ದುಡಿಯುವುದೆಲ್ಲ ಸಾಲದ ಪಾವತಿಗೇ ಎಂದಾಗುತ್ತದೆ ನಮ್ಮ ಪಾಡು. ಸುಖ ಎಲ್ಲಿದ್ದೀತು? ಇದು ನಮ್ಮ ಇಂದಿನ ಸಮಸ್ಯೆ ಅಲ್ಲವೆನಿಸುತ್ತದೆ. ಮನುಷ್ಯನಿಗೆ ದುರಾಸೆ ಹುಟ್ಟಿದ ದಿನದಿಂದಲೂ ಈ ಸಮಸ್ಯೆ ಇದೆಯೆನಿಸುತ್ತದೆ; ಅಥವಾ ಮನುಷ್ಯನಲ್ಲಿ ತೋರಿಕೊಂಡ ದುರಾಸೆಯೇ ಈ ಸಮಸ್ಯೆಗೆ ಮೂಲ ಎನ್ನಲೂಬಹುದು. ಸಂಸ್ಕೃತದ ಸುಭಾಷಿತವೊಂದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು:
 
ಇದಮೇವ ಹಿ ಪಾಂಡಿತ್ಯಂ ಚಾತುರ್ಯಮಿದಮೇವ ಹಿ |
ಇದಮೇವ ಸುಬುದ್ಧತ್ತ್ವಮಾಯಾದಲ್ಪತರೋ ವ್ಯಯಃ ||
‘ಪಾಂಡಿತ್ಯ ಎಂದರೆ ಇದೇ; ಜಾಣ್ಮೆ ಎಂದರೆ ಇದೇ; ಬುದ್ಧಿವಂತಿಕೆ ಎಂದರೂ ಇದೇ – ಆದಾಯಕ್ಕಿಂತ ಕಡಿಮೆಯಾಗಿ ವ್ಯಯ ಮಾಡುವುದು.’
 
‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ನಮಗೆ ಗೊತ್ತಿದೆ. ನಮ್ಮಲ್ಲಿ ಎಷ್ಟು ಸಂಪನ್ಮೂಲತೆ ಇದೆಯೋ ಅದಕ್ಕೆ ತಕ್ಕ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕೆಂಬುದು ಇದರ ಧ್ವನಿ. ಇಂದು ದುಡಿದುದೆಲ್ಲವನ್ನೂ ಇಂದೇ ಖರ್ಚು ಮಾಡಿದರೆ ನಾಳೆ ಕಷ್ಟ ಎದುರಾದರೆ ಆಗ ಮಾಡುವುದೇನು? ಇಂತ ಆಲೋಚನೆ ನಮ್ಮಲ್ಲಿ ಉಂಟಾಗಬೇಕು.
 
ದುಂದುಗಾರಿಕೆ ಚಟವೇ ಹೊರತು ಅದು ಅನಿವಾರ್ಯವಾಗಿರಲಾರದು. ಆದುದರಿಂದ ನಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನಾದರೂ ಕೂಡಿಡುವ ಬುದ್ಧಿಯನ್ನು ನಾವು ಸಂಪಾದಿಸಿಕೊಳ್ಳಬೇಕು. ಇರುವುದೆಲ್ಲವೂ ಇಂದೇ ತಿಂದು ತೇಗಿದರೆ ನಾಳೆ ಪರರ ಮುಂದೆ ಕೈಯೊಡ್ಡಿ, ತಲೆ ಬಗ್ಗಿಸಿ ನಿಲ್ಲಬೇಕಾಗುತ್ತದೆ. ಅಂಥದೊಂದು ಪರಿಸ್ಥಿತಿ ಎದುರಾಗದಿರಲು ಮಿತವ್ಯಯ ಎನ್ನುವ ಪಾಂಡಿತ್ಯವನ್ನೂ ಜಾಣ್ಮೆಯನ್ನೂ ಬುದ್ಧಿವಂತಿಕೆಯನ್ನೂ ಸಂಪಾದಿಸಬೇಕು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.