ADVERTISEMENT

ಮೂರ್ಛೆ ರೋಗ ಶಾಪವಲ್ಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 10:18 IST
Last Updated 30 ನವೆಂಬರ್ 2012, 10:18 IST

25ರ ಆರೋಗ್ಯವಂತ ಯುವಕ ಇದ್ದಕ್ಕಿದ್ದಂತೆ ಎಲ್ಲರ ಮುಂದೆ ಬಿದ್ದು, ಕೈಕಾಲು ನಡುಗುತ್ತಾ, ಬಾಯಿಂದ ನೊರೆ ಬರಲು ಶುರುವಾದಾಗ ಎಲ್ಲರಿಗೂ ಗಾಬರಿ, ಆತಂಕ.

50 ವರ್ಷದ ವ್ಯಕ್ತಿಯೊಬ್ಬರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಇದೇ ರೀತಿಯ ಅನುಭವ. 
ಮತ್ತೊಬ್ಬ ಆರೋಗ್ಯವಂತ ಮಹಿಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೂರ್ಛೆ ಹೋಗಿ, ಎದುರಿಗಿದ್ದ ಯಂತ್ರದಲ್ಲಿ ಕೈ ಸಿಕ್ಕಿಕೊಂಡು ಕತ್ತರಿಸಿಯೇ ಹೋಯಿತು.

ಮೇಲಿನ ಉದಾಹರಣೆಗಳೆಲ್ಲ ಅಪಸ್ಮಾರ, ಫಿಟ್ಸ್, ಮೂರ್ಛೆ ರೋಗ, ಎಪಿಲೆಪ್ಸಿ, ಸನ್ನಿ ಎಂದೆಲ್ಲ ಕರೆಸಿಕೊಳ್ಳುವ ರೋಗದ ಲಕ್ಷಣಗಳು. ಈ ರೋಗ ಅನಾದಿ ಕಾಲದಿಂದಲೂ ಜಗತ್ತಿಗೆ ಚಿರಪರಿಚಿತ. ಜಗತ್ತಿನಾದ್ಯಂತ 50 ದಶಲಕ್ಷಕ್ಕೂ ಹೆಚ್ಚು ಜನ ಈ ತೊಂದರೆಗೀಡಾಗಿದ್ದು, ಪ್ರತಿ ನೂರು ಜನರಲ್ಲಿ ಒಬ್ಬರು ಮೂರ್ಛೆ ರೋಗದಿಂದ ಬಳಲುತ್ತಾರೆ ಎನ್ನಲಾಗಿದೆ. ಎಲ್ಲ ಪ್ರಾಯದವರಿಗೂ, ಯಾವುದೇ ಲಿಂಗಭೇದವಿಲ್ಲದೆ ಈ ರೋಗ ಬರಬಹುದು.

ಮೂರ್ಛೆ ರೋಗ ಎಂದರೇನು?

ವಾಸ್ತವದಲ್ಲಿ ಮೂರ್ಛೆ ರೋಗ ಒಂದು ಪ್ರತ್ಯೇಕ ರೋಗವೇ ಅಲ್ಲ. ಅದು ಮೆದುಳಿನ ರೋಗದ ಲಕ್ಷಣ! ಇಂಗ್ಲಿಷ್‌ನಲ್ಲಿ ಎಪಿಲೆಪ್ಸಿ ಎಂಬ ಪದ ಮೂಲತಃ ಗ್ರೀಕ್ ಭಾಷೆಯದ್ದು. ಇದು ವೆುದುಳಿನ ನರಗಳ ಚಟುವಟಿಕೆಯಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಆಗುವ ಒಂದು ಪ್ರಕಾರದ ತೊಂದರೆ. ಶೇ 33ರಷ್ಟು ಜನರಲ್ಲಿ ಮಾತ್ರ ಈ ರೋಗಕ್ಕೆ ಕಾರಣ ಗುರುತಿಸಬಹುದು.

ಅಂತಹ ಕೆಲವು ಕಾರಣಗಳೆಂದರೆ ತಲೆಗೆ ಪೆಟ್ಟಾಗಿರುವುದು, ಮೆದುಳಿನ ಗಡ್ಡೆ (ಬ್ರೆಯ್ನ ಟ್ಯೂಮರ್ ಉದಾ: ಮೆನಿಂಜಿಯೋಮ) ವೆುದುಳಿನ ಸೋಂಕು, ಅದರಲ್ಲೂ ಸಿಸ್ಟಿಸರ್ಕೋಸಿಸ್ ಅಂದರೆ ಮರಿ ಲಾಡಿ ಹುಳುವಿನ ಸೋಂಕು, ಹೆರಿಗೆಯ ಸಮಯದಲ್ಲಾಗುವ ಪೆಟ್ಟು ಮುಂತಾದವು.

ಮೂರ್ಛೆ ರೋಗವನ್ನು ಆಂಗ್ಲ ಭಾಷೆಯಲ್ಲಿ ಸೀಷರ್ಸ್‌ ಅಥವಾ ಕನ್ವಲ್ಶನ್, ಎಪಿಲೆಪ್ಟಿಕ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ಒಂದು ಸಲ ಫಿಟ್ಸ್ ಬಂತೆಂದರೆ ಎಲ್ಲರಿಗೂ ಅಪಸ್ಮಾರವಿದೆ ಎಂದರ್ಥವಲ್ಲ.

ಕೆಲವು ಮಕ್ಕಳಲ್ಲಿ ಜ್ವರದ ತಾಪಮಾನ ಹೆಚ್ಚಾದಾಗ ಕೈಕಾಲು ಅದುರುವುದರ ಜೊತೆಗೆ ಮೂರ್ಛೆ ರೋಗದ ಲಕ್ಷಣಗಳು ಕಂಡು ಬರುತ್ತವೆ. ಇದನ್ನು ಫಬ್ರೈಲ್ ಕನ್ವಲ್ಶನ್ಸ್ ಎನ್ನುತ್ತೇವೆ. ಇದು ನಿಜವಾದ ಮೂರ್ಛೆ ರೋಗ ಅಲ್ಲ.

ಮೂರ್ಛೆ ರೋಗಿಗಳೆಲ್ಲರಿಗೂ ಒಂದೇ ರೀತಿಯ ರೋಗ ಲಕ್ಷಣಗಳಿರುವುದಿಲ್ಲ. ಇದರಲ್ಲಿ ಹಲವು ವಿಧಗಳು ಅಥವಾ ಪ್ರಕಾರಗಳಿವೆ. ಅದಕ್ಕೆ ತಕ್ಕಂತೆ ರೋಗ ಲಕ್ಷಣಗಳೂ ವಿಭಿನ್ನ!

ಸರಳ ಪಾರ್ಶ್ವ ಮೂರ್ಛೆ

ಇದು ವೆುದುಳಿನ ಒಂದು ಭಾಗಕ್ಕಷ್ಟೇ ಸೀಮಿತವಾಗಿರುತ್ತದೆ. ರೋಗಿಗೆ ಬೇಸರ ಅಥವಾ ಖುಷಿಯ, ಏನೇನೋ ಶಬ್ದ ಕೇಳಿದ ಅನುಭವ ಆಗಬಹುದು.  ಒಂದು ನಿಮಿಷದ ಅವಧಿಯಷ್ಟೇ ಇರಬಹುದಾದ ಚಿಹ್ನೆಗಳು, ಅಂದರೆ ಒಂದೇ ಕಡೆ ಎವೆಯಿಕ್ಕದೇ ದೃಷ್ಟಿಸುವುದು, ಏನೋ ತಿನ್ನುವಂತೆ ಬಾಯಿಯ ಚಲನೆ, ಗಂಟಲಿನಿಂದ ಒಂದು ರೀತಿಯ ಶಬ್ದ ಬರುವುದು, ತುಟಿಗಳ ಚಲನೆ ಮುಂತಾದವು.

ಮೆದುಳಿನ ಯಾವ ಭಾಗದಲ್ಲಿ ಇದು ಆರಂಭವಾಗುತ್ತದೆ ಎಂಬುದನ್ನು ಅನುಸರಿಸಿ ಇದನ್ನು ಟೆಂಪೊರಲ್ ಲೋಬ್ ಎಪಿಲೆಪ್ಸಿ, ಫ್ರಾಂಟಲ್ ಲೋಬ್ ಎಪಿಲೆಪ್ಸಿ ಎಂದೆಲ್ಲ ಕರೆಯುತ್ತಾರೆ.

ಮಿಶ್ರ ಪಾರ್ಶ್ವ ಮೂರ್ಛೆ

ಈ ರೋಗಿಗಳಿಗೆ ಕೈ ಕಾಲುಗಳಷ್ಟೇ ಅದುರುತ್ತವೆ, ಕಣ್ಣು ಪಟಪಟ ಹೊಡೆದುಕೊಳ್ಳುತ್ತದೆ, ಇಲ್ಲದಿದ್ದರೆ ಅವರು ಸುಮ್ಮನೆ ನಿಂತಲ್ಲೇ ಸುತ್ತುತ್ತಾ ಇರುತ್ತಾರೆ.  ಅಂದರೆ ಆ ವ್ಯಕ್ತಿಗೆ ತನ್ನ ಚಲನೆಯ ಮೇಲೆ ನಿಯಂತ್ರಣ ಇರುವುದಿಲ್ಲ.

ಸಾಮಾನ್ಯ ರೀತಿಯ ಮೂರ್ಛೆಗಳೆಂದರೆ ಜನರಲೈಸ್ಡ್ ಟೋನಿಕ್ ಕ್ಲೋನಿಕ್, ಮಯೋಕ್ಲೋನಿಕ್, ಆಬ್ಸೆನ್ಸ್ ಹಾಗೂ ಏಟೋನಿಕ್ ಮೂರ್ಛೆ. ತಕ್ಷಣ ಎಚ್ಚರ ಕಳೆದುಕೊಳ್ಳುವುದು, ಒಂದೇ ಕಡೆ ದೃಷ್ಟಿ ನೆಟ್ಟಿರುವುದು, ಒಂದು ಕೈ ಅಥವಾ ಒಂದು ಕಾಲಷ್ಟೇ ಅದುರುವುದು, ಇದ್ದಕ್ಕಿದ್ದಂತೆ ಕುಸಿದು

ಬೀಳುವುದು, ಕೈಕಾಲುಗಳಲ್ಲಿ ಬಿಗಿತ, ಸೆಟೆದುಕೊಳ್ಳುವುದು, ನಂತರ ಕಾಲುಗಳು- ಮುಖ ಜಗ್ಗಿದಂತಾಗುವುದು ಇವೇ ಮೊದಲಾದವು ವಿವಿಧ ರೀತಿಯ ಮೂರ್ಛೆ ರೋಗದ ಲಕ್ಷಣಗಳು.
ಇದ್ದಕ್ಕಿದ್ದಂತೆ, ಕೆಲ ನಿಮಿಷ ಪ್ರಜ್ಞೆ ತಪ್ಪಿ, ದೇಹದಲ್ಲುಂಟಾಗುವ ವಿಭಿನ್ನ ರೀತಿಯ ಕಂಪನಕ್ಕೆ ಫಿಟ್ಸ್ ಎನ್ನುತ್ತೇವೆ. ಫಿಟ್ಸ್‌ಗೆ ಹಲವಾರು ಕಾರಣಗಳುಂಟು.

ಮೆದುಳಿನ ಕಾರಣಗಳು

ಮಗು ಹುಟ್ಟುವ ಮುಂಚೆ, ಹುಟ್ಟುವಾಗ ಅಥವಾ ನಂತರ ಉಂಟಾಗುವ ಪೆಟ್ಟು, ಸಣ್ಣ ಮಕ್ಕಳಲ್ಲಿ ವಿಪರೀತ ಜ್ವರ ಅಥವಾ ದೇಹದಲ್ಲಿನ ನೀರಿನಂಶ ಕಡಿಮೆಯಾದಾಗ (ಡಿಹೈಡ್ರೇಶನ್), ಮೆದುಳಿನ ಸೋಂಕು, ವಿಷ ಸೇವನೆ, ವೆುದುಳಿಗೆ ಹರಡಿದ ಮಲೇರಿಯಾ, ವೆುದುಳಿನಲ್ಲಿರುವ ಗಡ್ಡೆ (ಕ್ಯಾನ್ಸರ್

ಅಥವಾ ಇತರ ತೆರನಾದ ಗಡ್ಡೆ) ವೆುದುಳಿನ ಟಿ.ಬಿ ಕಾಯಿಲೆ, ಮೆದುಳಿನಲ್ಲಿ ಹುದುಗಿದ ಲಾಡಿ ಹುಳುವಿನ ಲಾರ್ವ (ಸಿಸ್ಟಿಸರ್‌ಕೋಸಿಸ್), ವೆುದುಳಿಗೆ ಹರಡಬಹುದಾದ ಇತರೆ ಸೋಂಕುಗಳಿಂದಾದ      ಸಿಸ್ಟ್‌ಗಳು ಉದಾ: ಹೈಡಾಟಿಡ್ ಎಂಬ ರೋಗ.

ತಪ್ಪು ಕಲ್ಪನೆಗಳಿಗೆ ವಿದಾಯ ಹೇಳೋಣ

*ಮೂರ್ಛೆ ರೋಗ ಪೂರ್ವಜನ್ಮ ಕರ್ಮದ ಫಲವಲ್ಲ
*ಇದು ದೆವ್ವ, ಭೂತ ಚೇಷ್ಟೆಯಲ್ಲ
*ಮಾಟ, ಮಂತ್ರ, ಮದ್ದುಗಳ ಪರಿಣಾಮವಲ್ಲ
*ಸಾಂಕ್ರಾಮಿಕ ರೋಗವಲ್ಲ, ಒಬ್ಬರಿಂದೊಬ್ಬರಿಗೆ ಹರಡುವುದಿಲ್ಲ

*ವಂಶಪಾರಂಪರ‌್ಯವಾಗಿ ಬರುವುದಿಲ್ಲ
*ಇದು ಮಾನಸಿಕ ರೋಗವಲ್ಲ
*ಫಿಟ್ಸ್ ಬರುವ ಮಗುವನ್ನು ಶಾಲೆಗೆ ಕಳುಹಿಸಬಹುದು, ಅಂತಹ ಮಕ್ಕಳಿಗೆ ಎಲ್ಲರಂತೆಯೇ ಕಲಿಯುವ ಸಾಮರ್ಥ್ಯ ಇರುತ್ತದೆ

*ಮೂರ್ಛೆ ರೋಗಿಗಳು ದಾಂಪತ್ಯ ಜೀವನಕ್ಕೆ ಕಾಲಿಡಬಹುದು
*ಮದುವೆ ಮಾಡುವುದರಿಂದ ಸಮಸ್ಯೆ ತಾನೇತಾನಾಗಿ ನಿವಾರಣೆಯಾಗುವುದಿಲ್ಲ
*ಫಿಟ್ಸ್ ಇರುವ ಮಹಿಳೆಗೆ ಮಕ್ಕಳಾಗುತ್ತವೆ, ಮಗುವಿಗೆ ಹಾಲುಣಿಸಬಹುದು

ಮೂರ್ಛೆ ರೋಗಕ್ಕೆ ಚಿಕಿತ್ಸೆ ಹೇಗೆ?
(ನಿರೀಕ್ಷಿಸಿ ಮುಂದಿನ ಸಂಚಿಕೆಯಲ್ಲಿ)

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.