ADVERTISEMENT

ರಿಜಿಸ್ಟರ್ ವಿವಾಹ- ಮತ್ತಷ್ಟು ಮಾಹಿತಿ

ನಿಮಗಿದು ತಿಳಿದಿರಲಿ

ಡಾ.ಗೀತಾ ಕೃಷ್ಣಮೂರ್ತಿ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ರಿಜಿಸ್ಟರ್ ವಿವಾಹವನ್ನು ಸಿವಿಲ್ ವಿವಾಹ ಎಂದೂ ಕರೆಯುತ್ತಾರೆ. ಇಂಥ ವಿವಾಹಕ್ಕೂ ವಿವಾಹದ ಷರತ್ತುಗಳ ಪಾಲನೆಯಾಗಲೇಬೇಕು, ಎಂದರೆ, ವಿವಾಹವಾಗಲು ಬಯಸುವ ಹುಡುಗ ೨೧ ವರ್ಷ ವಯಸ್ಸನ್ನು ಮತ್ತು ಹುಡುಗಿ ೧೮ ವರ್ಷ ವಯಸ್ಸನ್ನು ಪೂರೈಸಿರಬೇಕು, ಈಗಾಗಲೇ ಮದುವೆಯಾಗಿದ್ದರೆ ಪತಿ ಅಥವಾ ಪತ್ನಿ ಜೀವಂತವಿರಬಾರದು, ಇಬ್ಬರೂ ಮಾನಸಿಕ ಆರೋಗ್ಯವನ್ನು ಹೊಂದಿರಬೇಕು, ಹಾಗೂ ಇಬ್ಬರೂ ನಿಷೇಧಿತ ಸಂಬಂಧಿಗಳಾಗಿರಕೂಡದು.

ವಿವಾಹವಾಗಲು ಬಯಸಿ ಸಲ್ಲಿಸುವ ಅರ್ಜಿಗೆ ಇಬ್ಬರೂ ಸಹಿ ಮಾಡಿರಬೇಕು ಮತ್ತು ಅವರಲ್ಲಿ ಒಬ್ಬರಾದರೂ ಹಾಗೆ ಅರ್ಜಿಯನ್ನು ಸಲ್ಲಿಸಿದ ದಿನಾಂಕಕ್ಕೆ ಹಿಂದಿನ ಕನಿಷ್ಠ ಒಂದು ತಿಂಗಳಿನಿಂದ ವಿವಾಹಾಧಿಕಾರಿಯ ಅಧಿಕಾರವ್ಯಾಪ್ತಿಯ ಪ್ರದೇಶದಲ್ಲಿ ವಾಸಿಸುತ್ತಿರಬೇಕು.

ಅರ್ಜಿ ಸಲ್ಲಿಸಿದ ನಂತರ ಅದನ್ನು ಒಂದು ತಿಂಗಳು ಸಾರ್ವಜನಿಕರ ತಿಳಿವಳಿಕೆಗಾಗಿ ಸೂಚನಾ ಫಲಕದ ಮೇಲೆ ಪ್ರದರ್ಶಿಸಲಾಗುತ್ತದೆ.  ಯಾರಿಗಾದರೂ ಈ ವಿವಾಹದ ಬಗ್ಗೆ ಆಕ್ಷೇಪಣೆಯಿದ್ದರೆ ಅವರು ಈ ಅವಧಿಯಲ್ಲಿ ತಮ್ಮ ಆಕ್ಷೇಪಣೆಯನ್ನು ವಿವಾಹಾಧಿಕಾರಿಗೆ ಸಲ್ಲಿಸಬಹುದು. ಈ ಆಕ್ಷೇಪಣೆಗಳು  ವಧೂ ವರರು ಪೂರೈಸಿರಬೇಕಾದ ಷರತ್ತುಗಳನ್ನು ಪೂರೈಸಿಲ್ಲ ಎಂಬ ಬಗ್ಗೆ ಆಗಿರಬಹುದು, ಎಂದರೆ, ಹುಡುಗನಿಗೆ ೨೧ ವರ್ಷ ವಯಸ್ಸಾಗಿಲ್ಲ ಅಥವಾ ಹುಡುಗಿ ೧೮ ವರ್ಷಗಳನ್ನು ಪೂರೈಸಿಲ್ಲ, ಅಥವಾ ವಧು ಅಥವಾ ವರ ಮದುವೆಗೆ ಒಪ್ಪಿಗೆ ಕೊಡುವ ಮನಃಸ್ಥಿತಿಯಲ್ಲಿ ಇಲ್ಲ ಅಥವಾ ಅವರ ಒಪ್ಪಿಗೆಯನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ಅಥವಾ ಅವರು ನಿಷೇಧಿತ ಸಂಬಂಧಿಗಳು ಎಂದು ಅಥವಾ ವಧು ಅಥವಾ ವರನಿಗೆ ಈಗಾಗಲೇ ಮದುವೆಯಾಗಿದ್ದು ಗಂಡ\ಹೆಂಡತಿ ಬದುಕಿದ್ದಾನೆ\ಳೆ ಎಂದು ಆಗಿರಬಹುದು. ಅಥವಾ ಇನ್ನಾವುದೇ ರೀತಿಯಲ್ಲಿ ಮೋಸ ಮಾಡಲಾಗುತ್ತಿದ್ದರೆ ಆ ಬಗ್ಗೆ ಇರಬಹುದು.

ಮೂವತ್ತು ದಿನಗಳ ಅವಧಿ ಮುಕ್ತಾಯವಾದ ನಂತರ, ಈ ವಿವಾಹವನ್ನು ನೋಂದಣಿ ಮಾಡಲು ಯಾವುದೇ ಆಕ್ಷೇಪಣೆ ಬರದೇ ಇದ್ದರೆ ಅಥವಾ ಆಕ್ಷೇಪಣೆಯನ್ನು ಸಲ್ಲಿಸಿದ್ದು ಆ ಆಕ್ಷೇಪಣೆಯಲ್ಲಿ ಹುರುಳಿಲ್ಲವೆಂದು ವಿವಾಹಾಧಿಕಾರಿಗೆ ಮನದಟ್ಟಾದರೆ, ಅಥವಾ ಅಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಅದನ್ನು ಹಿಂದಕ್ಕೆ ಪಡೆದರೆ, ವಿವಾಹವನ್ನು ನೋಂದಣಿ ಮಾಡುತ್ತಾರೆ. ಅಥವಾ ವಿಚಾರಣೆಯ ನಂತರ ಆಕ್ಷೇಪಣೆಯನ್ನು ಎತ್ತಿ ಹಿಡಿದರೆ, ವಿವಾಹವನ್ನು ನೋಂದಾಯಿಸಲು ನಿರಾಕರಿಸುತ್ತಾರೆ.

ಆಕ್ಷೇಪಣೆ ಸಲ್ಲಿಸಿದ ಮೂವತ್ತು ದಿನಗಳೊಳಗೆ ವಿವಾಹಾಧಿಕಾರಿ ತಮ್ಮ ತೀರ್ಮಾನವನ್ನು ಪ್ರಕಟಿಸಬೇಕು. ನೋಂದಣಿ ಮಾಡಲು ನಿರಾಕರಿಸಿದ್ದಲ್ಲಿ, ತೀರ್ಮಾನ ಪ್ರಕಟವಾದ ೩೦ ದಿನಗಳೊಳಗೆ ವಧು ಅಥವಾ ವರ ಅಥವಾ ಇಬ್ಬರೂ  ಸಿವಿಲ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸ ಬಹುದು. ಮತ್ತು ಈ ಬಗ್ಗೆ ಸಿವಿಲ್ ನ್ಯಾಯಾಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.
(ಮುಂದಿನ ವಾರ-: ಶೂನ್ಯ ವಿವಾಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.