ADVERTISEMENT

ಲೆಕ್ಕದ ಕನ್ನಡಿಯಲ್ಲಿ ತಂಬಾಕು ತೀವ್ರತೆ

ನಾಳೆ ವಿಶ್ವ ತಂಬಾಕು ವಿರೋಧಿ ದಿನ

ಡಾ.ಗುರುಲಿಂಗಪ್ಪ ಅಂಕದ
Published 29 ಮೇ 2015, 19:30 IST
Last Updated 29 ಮೇ 2015, 19:30 IST

‘ಧೂಮಪಾನ ನಿಷೇಧಿಸಿದೆ’, ‘ತಂಬಾಕು ಕೊಲ್ಲುತ್ತದೆ’ ಎಂಬ ಸೂಚನಾ ಫಲಕಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ‘ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂದು ಸಿಗರೇಟು, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಪ್ಯಾಕೇಟಿನ ಮೇಲೆ ಓದುತ್ತೇವೆ ಜೊತೆಗೆ ಶ್ವಾಸಕೋಶಗಳ ಹಾಳಾದ ಚಿತ್ರ, ಚೇಳಿನ-ಅಸ್ಥಿಪಂಜರದ ಚಿತ್ರ ಹೀಗೆ ಹಲವಾರು ಭಯಾನಕ ಚಿತ್ರಗಳನ್ನೂ ಕಾಣುತ್ತೇವೆ. ಇದರ ಅರ್ಥ ತಂಬಾಕು ಸೇವನೆ ಚೇಳಿನ ವಿಷಕ್ಕಿಂತಲೂ ಹೆಚ್ಚು ವಿಷಕಾರಿ ಎಂದು ತಿಳಿದೂ ಜನರು ಇದಕ್ಕೆ ದಾಸರಾಗಿರುವುದು ನಿಜಕ್ಕೂ ವಿಷಾದನೀಯ.

ಇನ್ನು ತಂಬಾಕು ಸಂಬಂಧಿ ಅಂಕಿಅಂಶಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುವದು-
* ವಿಶ್ವದಾದ್ಯಂತ ತಡೆಗಟ್ಟಬಹುದಾದ ಕಾಯಿಲೆ ಮತ್ತು ಮರಣಗಳ ಕಾರಣಗಳಲ್ಲಿ ತಂಬಾಕು ಸೇವನೆಯು ಏಕೈಕ ಪ್ರಮುಖ ಕಾರಣವಾಗಿದೆ.

* ಪ್ರತೀ ವರ್ಷ ವಿಶ್ವದಾದ್ಯಂತ 55 ಲಕ್ಷಕ್ಕೂ ಹೆಚ್ಚು ಜನ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ.

* ಪ್ರತೀ ವರ್ಷ ಭಾರತದಲ್ಲಿ 10 ಲಕ್ಷ ಜನ  ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ.

* ಇದು ಏಡ್ಸ್, ಕ್ಷಯ ಹಾಗೂ ಮಲೇರಿಯಾ ಈ ಮೂರು ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನರಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ.

* ತಂಬಾಕಿನಿಂದ ಸಾವನ್ನಪ್ಪುವವರ ಪೈಕಿ ಶೇ.80 ರಷ್ಟು ಜನ ಗ್ರಾಮೀಣ ಭಾಗದವರು ಎಂಬುದು ಆಘಾತಕಾರಿ ಸಂಗತಿ.

* ಭಾರತದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಂಬಾಕಿನಿಂದ ಬರುವ ಕ್ಯಾನ್ಸರ್‌ನ ಪ್ರಮಾಣ ಕ್ರಮವಾಗಿ ಶೇ. 56.4 ಮತ್ತು ಶೇ. 44.6 ಆಗಿದೆ.
* ಭಾರತದ ಪ್ರತೀ 100 ಕ್ಯಾನ್ಸರ್ ಪ್ರಕರಣಗಳಲ್ಲಿ 40 ತಂಬಾಕು ಸೇವನೆಗೆ ಸಂಬಂಧಿಸಿದ್ದಾಗಿವೆ.

* ಸುಮಾರು ಶೇ. 95ರಷ್ಟು ಬಾಯಿ ಕ್ಯಾನ್ಸರ್‌ಗೆ ಕಾರಣ ತಂಬಾಕು ಸೇವನೆಯಾಗಿದೆ.

* ತಂಬಾಕು ಸೇವಿಸುವವರು ತಂಬಾಕು ಸೇವಿಸದವರಿಗಿಂತ 10 ವರ್ಷ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ.

ಭಾರತದಲ್ಲಿ ತಂಬಾಕಿನ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.

* ಬೀಡಿ, ಸಿಗರೇಟ್, ಗುಟ್ಕಾ ಇವು ಧೂಮಪಾನ ರೂಪದಲ್ಲಿ ತಂಬಾಕು ಸೇವನೆಯ ವಿಧಗಳು. ಇವುಗಳಲ್ಲಿ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಮತ್ತು 60 ಕ್ಯಾನ್ಸರ್ ಕಾರಕ ವಸ್ತುಗಳಿವೆ. ಉದಾಹರಣೆಗೆ-ಅಮೋನಿಯಾ, ಅರ್ಸೆನಿಕ್, ಕಾರ್ಬನ್ ಮೊನಾಕ್ಸೈಡ್, ಹೈಡ್ರೋಜನ್, ನ್ಯಾಪ್ತಲಿನ್, ನಿಕೋಟಿನ್, ಟಾರ್ ಮುಂತಾದವು.

* ಇನ್ನು ಧೂಮರಹಿತ ಉತ್ಪನ್ನಗಳಾದ ಅಗಿಯುವಂತಹ ಜರ್ದಾ, ಖೈನೀ, ಗುಟ್ಕಾ, ತಂಬಾಕುಯುಕ್ತ ಪಾನ್‌ ಮಸಾಲ, ಮಾವಾ ಇತ್ಯಾದಿಗಳಲ್ಲಿ ನಿಕೋಟಿನ್, ಫಾರ್ಮಾಲ್ಡಿಹೈಡ್, ಮೆಂಥಾಲ್, ಕ್ಯಾಡ್ಮಿಯಮ್ ಮತ್ತು ಸತುಗಳಿರುತ್ತವೆ.

ಮೊದಮೊದಲು ಕೇವಲ ಶೋಕಿಗಾಗಿ ಸಿಗರೇಟ್, ಗುಟ್ಕಾ, ತಂಬಾಕು ಸೇವನೆ ಪ್ರಾರಂಭವಾಗಿ ನಂತರ ಅವು ಚಟವಾಗಿ ಪರಿಣಮಿಸಿ ಬಿಡಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪುವರು. ಅತಿಯಾಗಿ ತಂಬಾಕು ಸೇವಿಸುವವರು ಇತರರಿಗಿಂತ ಹೆಚ್ಚು ಚಹಾ, ಕಾಫಿ ಮಧ್ಯ ಸೇವಿಸುತ್ತಾರೆ. ಇಂಥವರಿಗೆ ವ್ಯಾಯಾಮ ಮಾಡಲಾಗು ವದಿಲ್ಲ, ಮಾಡಿದರೂ ಬೇಗ ಸುಸ್ತಾಗುತ್ತಾರೆ, ಉಸಿರಾಟದ ತೊಂದರೆ, ಓಡುವಾಗ ಆಟವಾಡುವಾಗ ಬಳಲುತ್ತಾರೆ. ಯುವಕರು ಮತ್ತು ಮಧ್ಯವಯಸ್ಕರು ಖಿನ್ನತೆಗೆ ತುತ್ತಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ‘ಒಬ್ಬ ತಾಯಿ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದರೆ ಮಗು ಕೂಡಲೇ ಹೇಗೆ ಚಡಪಡಿಸುತ್ತದೋ ಹಾಗೆ ತಂಬಾಕು ಸೇವನೆ ನಿಲ್ಲಿಸಿದ ಮನುಷ್ಯ ಚಡಪಡಿಸುತ್ತಾನೆ’.

ಸಿಗರೇಟ್ ಸೇದುವುದರಿಂದ ಮತ್ತು ತಂಬಾಕು ಅಗಿಯುವದರಿಂದ ಏನೋ ಒಂಥರಾ ಖುಷಿ-ಕಿಕ್ ಕೊಟ್ಟು ಮೆದುಳು ಚುರುಕುಗೊಂಡಂತೆ ಭಾಸ ವಾಗುವುದು. ವಿಚಾರಶಕ್ತಿ ತುಂಬಾ ರಚನಾತ್ಮಕವಾಗಿ ಸಾಗುವುದು. ಇದರಿಂದ ಇನ್ನಷ್ಟು ಸೇವಿಸುವಂತೆ ಪ್ರಚೋದಿಸುತ್ತದೆ.

ಸಿಗರೇಟ್-ತಂಬಾಕು ಸೇವನೆಯ ನಂತರ ವ್ಯಕ್ತಿಯ ರಕ್ತದೊತ್ತಡ ಹಠಾತ್ತಾಗಿ ಸ್ವಲ್ಪ ಹೆಚ್ಚಾಗುವುದು ಆದರೆ ದೇಹದ ಎಲ್ಲ ರಕ್ತ ನಾಳಗಳಲ್ಲಿರುವ ರಕ್ಷಣಾ ಪೊರೆಗೆ ಧಕ್ಕೆ ಬಂದಿರುತ್ತದೆ. ಇದರಿಂದ ವಿಶೇಷವಾಗಿ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿ ಕಾಲಿನಲ್ಲಿ ಗ್ಯಾಂಗ್ರೀನ್ (ಸ್ಮೋಕರ್ಸ್ ಗ್ಯಾಂಗ್ರೀನ್) ಆಗುವ ಸಾಧ್ಯತೆ ಹೆಚ್ಚಾಗುವದು. ರಕ್ತದಲ್ಲಿರುವ ಒಳ್ಳೆಯ ಕೊಬ್ಬಿನಾಂಶವನ್ನು ತಂಬಾಕು ಕಡಿಮೆ ಮಾಡುತ್ತದೆ. ಸಿಗರೇಟ್-ತಂಬಾಕು ಸೇವನೆ ಹೆಚ್ಚಾದಂತೆ ಹೃದಯದ ಕಾಯಿಲೆಗಳು, ಕೆಮ್ಮು, ಅಸ್ತಮಾ, ಕ್ಷಯ, ಲಕ್ವ ಮತ್ತು ಮುಖ್ಯವಾಗಿ ಕ್ಯಾನ್ಸರ್ ರೋಗಗಳ ಸಾಧ್ಯತೆ ಹೆಚ್ಚಾಗುವುದು. ಸಾವು ಇತರರಿಗಿಂತ 2-4 ಪಟ್ಟು ಬೇಗನೆ ಸಂಭವಿಸುವುದು. ಇನ್ನು ಮಹಿಳೆಯರಲ್ಲಿ ಅಂಡಗಳ ಫಲವತ್ತತೆಯಲ್ಲಿ ಕ್ಷೀಣತೆ, ಗರ್ಭಪಾತ, ಕಡಿಮೆ ತೂಕದ ಶಿಶು ಜನನ, ಗರ್ಭಕಂಠದ ಕ್ಯಾನ್ಸರ್ ಕಂಡುಬರುತ್ತವೆ.

ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಇವೇ ಮೊದಲಾದ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುತ್ತವೆ. ಸಾಮಾನ್ಯವಾಗಿ ಧೂಮಪಾನ ಮಾಡುವವರು ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ  ತುತ್ತಾಗುತ್ತಾರೆ ಎಂಬ ಭೀತಿ ಜನರಲ್ಲಿದೆ. ಇದು ಸತ್ಯವಾದರೂ ಎಲ್ಲ ಧೂಮಪಾನಿಗಳೂ ಶ್ವಾಸಕೋಶದ ಕ್ಯಾನ್ಸರ್‌ಗೆ  ತುತ್ತಾಗುತ್ತಾರೆ ಎಂದಲ್ಲ.

ಸಂಶೋಧನೆಗಳ ಪ್ರಕಾರ ಸಿಗರೇಟ್ ಸೇದುವವರಿಗೆ ಈ ವ್ಯಾಧಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದು ಗೊತ್ತಾಗಿದೆ. ನಾನು ಸಿಗರೇಟ್ ಸೇದುವದಿಲ್ಲ ಎಂದು ನಿಶ್ಚಿಂತರಾದರೆ ಸಾಲದು! ಕುಟುಂಬದಲ್ಲಿರುವ ಒಬ್ಬ ಧೂಮಪಾನಿಯಿಂದ ಇತರ ಸದಸ್ಯರಿಗೂ ತೊಂದರೆ ತಪ್ಪಿದ್ದಲ್ಲ. ಪ್ರತೀ ದಿನ 2 ಪ್ಯಾಕ್ ಧೂಮಪಾನ ಮಾಡುವ ವ್ಯಕ್ತಿಯೊಂದಿಗೆ ಜೀವಿಸುವ ವ್ಯಕ್ತಿಯೂ ಪರೋಕ್ಷವಾಗಿ ದಿನಕ್ಕೆ 3 ಸಿಗರೇಟ್ ಸೇದಿದಂತಾಗುತ್ತದೆ. ಪರೋಕ್ಷ ಧೂಮಪಾನ ಮಾಡಿದವರ ಮೂತ್ರ ಪರೀಕ್ಷೆಯಿಂದ ಅವರ ಮೂತ್ರದಲ್ಲಿ ನಿಕೋಟಿನ್ ಅಂಶ ಕಂಡುಬಂದಿದೆ. ಈ ಪರೋಕ್ಷ ಧೂಮಪಾನಿಗಳಿಗೆ ‘ಪ್ಯಾಸೀವ್ ಸ್ಮೋಕರ್ಸ್’ ಎನ್ನುವರು.

ಜನಸಾಮಾನ್ಯರನ್ನು ತಂಬಾಕಿನ ದುಷ್ಪರಿಣಾಮ ಗಳಿಂದ ರಕ್ಷಿಸಲು ಭಾರತ ಸರ್ಕಾರವು ಒಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿ ಕೆಳಕಂಡವು ಅಪರಾಧವಾಗುತ್ತವೆ-

ಸಾರ್ವಜನಿಕ ಪ್ರದೇಶ ಹಾಗು ಕೆಲಸ ಮಾಡುವ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ತಂಬಾಕು ಉತ್ಪನ್ನಗಳ ಜಾಹೀರಾತು ನೀಡುವುದು, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು, ಶಾಲಾ ಕಾಲೇಜುಗಳ 100 ಅಡಿ ವ್ಯಾಪ್ತಿಯಲ್ಲಿ  ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು, ತಂಬಾಕು ಉತ್ಪನ್ನಗಳ ಮೇಲೆ ಚಿತ್ರಗಳಿಂದ ಕೂಡಿದ ಎಚ್ಚರಿಕೆಯನ್ನು ಹಾಕದೇ ಇರುವುದು.

ಧೂಮಪಾನ ತ್ಯಜಿಸುವುದರಿಂದ ಆಗುವ ಲಾಭಗಳು
ಧೂಮಪಾನ ಬಿಟ್ಟ 2 ಗಂಟೆಗಳ ನಂತರ-ದೇಹದಿಂದ ನಿಕೋಟಿನ್ ಅಂಶ ಮರೆಯಾಗುತ್ತದೆ, 12 ಗಂಟೆ ನಂತರ-ಕಾರ್ಬನ್ ಮೊನಾಕ್ಸೈಡ್ ದೇಹದಿಂದ ಮರೆಯಾಗಿ ಶ್ವಾಸಕೋಶದ ಚಟುವಟಿಕೆ ಹೆಚ್ಚಾಗುತ್ತದೆ, 2 ತಿಂಗಳ ನಂತರ-ಶ್ವಾಸಕೋಶ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಂಗಾಂಗಗಳಿಗೆ ರಕ್ತ ಚಲನೆ ವೃದ್ಧಿಸುತ್ತದೆ. 12 ತಿಂಗಳ ನಂತರ ಧೂಮಪಾನ ಮುಂದುವರೆಸಿದ ವ್ಯಕ್ತಿಗೆ ಉಂಟಾಗುವ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತವೆ. 10 ವರ್ಷಗಳ ನಂತರ- ಧೂಮಪಾನ ಮುಂದುವರೆಸಿದ ವ್ಯಕ್ತಿಗೆ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತವೆ. 15 ವರ್ಷಗಳ ನಂತರ-ಧೂಮಪಾನ ಮಾಡದೇ ಇರುವ ವ್ಯಕ್ತಿಗೆ ಇರುವಷ್ಪೇ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಇರುತ್ತದೆ.

ತಂಬಾಕು ನಿರ್ಮೂಲನೆ ಖಂಡಿತ ಸಾಧ್ಯ. ನಿಮಗೆ ಬೇಕಾಗಿರುವುದು ನಿಮ್ಮ ಮನೋದೃಢತೆ, ಅಚಲ ನಿರ್ಧಾರ ಹಾಗೂ ಮನೋವೈದ್ಯರ ಸಹಾಯ ಹಸ್ತ. ಶೇ.70-80 ಜನರು ತಂಬಾಕು-ಸಿಗರೇಟ್ ಸೇವನೆ ಬಿಡಲು ಪ್ರಯತ್ನಿಸುತ್ತಾರೆ ಆದರೆ ವೈದ್ಯರ ಮತ್ತು ಆಪ್ತಸಮಾಲೋಚಕರ ಮಾರ್ಗದರ್ಶನವಿಲ್ಲದೇ ಅವರ ಪ್ರಯತ್ನ ವಿಫಲವಾಗುವುದು. ಇದಕ್ಕಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ‘ಜಿಲ್ಲಾ ತಂಬಾಕು ನಿಯಂತ್ರಣ ಘಟಕ’ ಸ್ಥಾಪಿಸಲಾಗಿದೆ. ಇಲ್ಲಿ ತಂಬಾಕು ಸೇವನೆ ಬಿಡಲು ಸಿದ್ಧವಿರುವವರಿಗೆ ತಂಬಾಕಿನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು, ಸಂಸಾರದ ಆರ್ಥಿಕ ಪರಿಸ್ಥಿತಿ ಹದಗೆಡುವ ಬಗ್ಗೆ ತಿಳಿಹೇಳಲಾಗುವುದು ಮತ್ತು ಅಗತ್ಯವಿದ್ದರೆ ಮನೋವೈದ್ಯರಿಂದ ಔಷಧೋಪಚಾರ ವನ್ನೂ ಮಾಡಲಾಗುವುದು. ತಂಬಾಕು-ಸಿಗರೇಟ್ ಬಿಡಲಿಚ್ಫಿಸುವವರು ಈ ತಂಬಾಕು ನಿಯಂತ್ರಣ ಘಟಕದ ಸದುಪಯೋಗ ಪಡೆದುಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವ ನಿಕೋಟಿನ್ ಗಮ್, ಮಾತ್ರೆಗಳು, ಪ್ಯಾಚ್‌ಗಳೂ ನಿಮಗೆ ಸಹಾಯ ಮಾಡಬಲ್ಲವು. ವೈದ್ಯರ ಸಲಹೆ, ಮನೋವಿಶ್ಲೇಷಣೆ, ಖಿನ್ನತೆ ನಿವಾರಣಾ ಔಷಧಿಗಳು ನಿಮ್ಮ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಇದಕ್ಕೆ ನೀವು ಮಾಡಬೇಕಾದದ್ದು ದೃಢನಿರ್ಧಾರ, ಯಾವುದೇ ಬಗೆಯ ತಂಬಾಕು, ಲೈಟರ್, ಬೆಂಕಿ ಪೊಟ್ಟಣ, ಆಶ್ ಟ್ರೇಗಳನ್ನು ನಾಶಪಡಿಸಿರಿ ಇನ್ನು ಅವುಗಳ ಅವಶ್ಯಕತೆ ನಿಮಗಿಲ್ಲ. ನಿಮಗೆ ಧೂಮಪಾನ ಮಾಡಲು ಪ್ರಚೋದಿಸುವ ಸಂಗತಿಗಳನ್ನು (ಸಿಗರೇಟ್ ಅಂಗಡಿ, ಧೂಮಪಾನ ಮಾಡುವವರನ್ನು ನೋಡುವುದು) ಗುರುತಿಸಿ ಅವುಗಳಿಂದ ದೂರವಿರಿ.

ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ 14ನೇ ವಯಸ್ಸಿಗೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ತಂಬಾಕಿನ ದುಷ್ಪರಿಣಾಮಗಳನ್ನು ಚರ್ಚಿಸಬೇಕು, ಮಾಧ್ಯಮ ಜಾಹಿರಾತುಗಳಿಗೆ ಮಕ್ಕಳು ಬೇಗನೆ ಆಕರ್ಷಿತರಾಗುತ್ತಾರೆ. ಆದ್ದರಿಂದ ಅದರ ಸತ್ಯಾಂಶಗಳನ್ನು ಪೋಷಕರೇ ನೇರವಾಗಿ ತಿಳಿಸಿ ಹೇಳಬೇಕು.

ಈ ಧೂಮಪಾನಿಗಳು ತಮ್ಮ ಜೊತೆಗೆ ಇತರರ ಆರೋಗ್ಯವನ್ನೂ ಹಾಳುಮಾಡುತ್ತಿದ್ದಾರೆ. ಜನನಿಬಿಡ ಪ್ರದೇಶಗಳಾದ ಬಸ್‌ ನಿಲ್ದಾಣ, ಚಿತ್ರಮಂದಿರ, ಉದ್ಯಾನ, ಆಸ್ಪತ್ರೆ, ಶಾಲಾ, ಕಾಲೇಜು ಆವರಣದಲ್ಲಿ ಇವರು ನಿರಾತಂಕವಾಗಿ ಧೂಮಪಾನ ಮಾಡುತ್ತಿದ್ದಾರೆ. ಸರ್ಕಾರ ‘ಧೂಮಪಾನ ನಿಷೇಧಿಸಿದೆ’,  ‘ಧೂಮಪಾನ ದಂಡಕ್ಕೆ ಕಾರಣ’ ಎಂತೆಲ್ಲ ಸೂಚನಾ ಫಲಕಗಳನ್ನು ಹಾಕಿದರೂ ಪ್ರಯೋಜನವಾಗಿಲ್ಲ. ಕಾರಣ ಜನಸಾಮಾನ್ಯರಾದ ನಾವು ಕನಿಷ್ಟಪಕ್ಷ ‘ಇಲ್ಲಿ ಧೂಮಪಾನ ಮಾಡಬೇಡಿ’ ಎಂದು ವಿನಯಪೂರ್ವಕವಾಗಿ ಒಂದು ಮಾತನ್ನಾದರೂ ಹೇಳುವುದರಿಂದ ನೂರರಲ್ಲಿ ಒಬ್ಬರಾದರೂ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಿದರೆ ಅದು ಈ ಸಮಾಜಕ್ಕೆ ನಿಮ್ಮ ಕೊಡುಗೆಯೇ ಸರಿ.

ಕೊನೆಯದಾಗಿ, ಎಲ್ಲ ಬಗೆಯ ತಂಬಾಕು ಸೇವನೆ ಅಪಾಯಕಾರಿ. ನಾನು ಸುಡುತ್ತಿರುವ ಸಿಗರೇಟ್ ನನ್ನನ್ನೂ ನನ್ನ ಸುತ್ತಲ ಪ್ರಪಂಚವನ್ನೂ ಒಟ್ಟಿಗೆ ಸುಡುತ್ತದೆ, ಎಂಬ ಪುಟ್ಟದೊಂದು ಅರಿವು ಧೂಮಪಾನಿಗೆ ಇದ್ದರೆ ಸಾಕು.

ತಂಬಾಕು ರಹಿತ ಜೀವನ ಸುಖ-ಸಂತೋಷಗಳ ಆಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.