ADVERTISEMENT

ಸಾವಿರ ಮಲ್ಲಿಗೆಗಳು ನಿಮ್ಮೊಳಗೆ ಅರಳಲಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಸಿಟ್ಟು ಎನ್ನುವುದು ನಿಮ್ಮೊಳಗಿನ ಭೂಕಂಪ. ಅದು ಭಾರಿ ಕೋಲಾಹಲವನ್ನೇ ಸೃಷ್ಟಿಸುತ್ತದೆ. ಸಿಟ್ಟು ನಿಮ್ಮೊಳಗಿನ ಯುದ್ಧ, ಇದು ಎಲ್ಲವನ್ನೂ ನಾಶಗೊಳಿಸುತ್ತದೆ. ಸಿಟ್ಟಿನೊಳಗೆ ಇದ್ದಾಗ ಶಾಂತಿ, ಸೌಹಾರ್ದ, ಸಂತಸ, ಪ್ರೀತಿ, ಮಾಧುರ್ಯ ಇತ್ಯಾದಿ ಅದ್ಭುತವಾದ ಮುತ್ತುಗಳು ನಾಶವಾಗಿರುತ್ತವೆ. ಅಲ್ಲದೇ, ಸಿಟ್ಟು ನಮ್ಮೊಳಗಿನ ಕುರೂಪ, ಸಣ್ಣತನ ಮತ್ತು ಕ್ರೌರ್ಯವನ್ನು ಹೊರತರುತ್ತದೆ. ಸುಂದರವಾದ ಹೂವಿನ ಪಕಳೆಗಳನ್ನು ಸಿಟ್ಟಿನಿಂದ ಸುಲಭವಾಗಿ ಹರಿದುಹಾಕಬಹುದು. ಆದರೆ, ಸುಗಂಧಬರಿತವಾದ, ಸೂಕ್ಷ್ಮ ಬಣ್ಣಗಳುಳ್ಳ ಹೂವನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ. ಸೃಜನಶೀಲತೆ ಸಿಟ್ಟಿಗೆ ವಿರುದ್ಧವಾದದ್ದು  ಎಂದು ಅದಕ್ಕಾಗಿಯೇ ನಾನು ಹೇಳುತ್ತೇನೆ.

ಸುಂದರವಾದದ್ದು, ವಿಶೇಷ ವಾದದ್ದು, ಸೂಕ್ಷ್ಮವಾಗಿರುವುದು ಮತ್ತು ವಿಶಿಷ್ಟವಾದದ್ದನ್ನು ಸೃಷ್ಟಿಸಬೇಕಾದಲ್ಲಿ ನೀವು ಸಿಟ್ಟಿಗೇಳಲು ಸಾಧ್ಯವೇ ಇಲ್ಲ. ಸೃಜನಶೀಲತೆ ನಿಮ್ಮೊಳಗಿರುವ ಅತ್ಯಂತ ಶ್ರೇಷ್ಠ ಗುಣಗಳನ್ನು ಹೊರಹಾಕುತ್ತದೆ. ಸೃಜನಶೀಲರಾಗಿ ಇರುವಾಗ ನಿಮ್ಮೊಳಗೆ ಇರುವ ಸಿಟ್ಟು, ಸ್ವಾರ್ಥ, ಭಯ ಹಾಗೂ ಇತರರ ಮೇಲೆ ಅಧಿಕಾರ ಸಾಧಿಸುವ ಗುಣ ಎಲ್ಲವೂ ಪರಿಶುಭ್ರ ಸ್ಫಟಿಕವಾಗಿ ಪರಿವರ್ತನೆಯಾಗುತ್ತದೆ.

ನೀವು ಯಾವುದನ್ನಾದರೂ ಸೃಷ್ಟಿಸುತ್ತಿರುವಾಗ ನಿಮ್ಮ ಬಗೆಗಿನ ನಿಮ್ಮ ಪರಿಕಲ್ಪನೆ ಹಾಗೂ ಇತರರ ಬಗೆಗೆ ಇರುವ ಪರಿಕಲ್ಪನೆಗಳೆಲ್ಲ  ತಲೆಕೆಳಗಾಗುತ್ತವೆ. ಪ್ರತಿಯೊಂದು ಪದವನ್ನು, ಮಾತನಾಡುವ ಧಾಟಿಯನ್ನು ಹಾಗೂ ಸನ್ನಿವೇಶವನ್ನು ತಪ್ಪಾಗಿ ಅರ್ಥೈಸುವುದನ್ನು ನೀವು ನಿಲ್ಲಿಸುತ್ತೀರಿ. ನೀವು ಬುದ್ಧಿವಂತರಾದರೆ ನಿಮ್ಮೊಳಗಿನ ಸೃಜನಶೀಲತೆಯನ್ನು ನಿತ್ಯದ ಬದುಕನ್ನು ಸುಂದರವಾಗಿಸಲು ಬಳಸಿಕೊಳ್ಳುತ್ತೀರಿ. ನಿಮ್ಮ ಕೆಲಸ, ಹವ್ಯಾಸ ಅಥವಾ ಸಂಬಂಧಗಳಲ್ಲಿ ಸೌಂದರ್ಯ ಸೃಷ್ಟಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.

ಪಾಬ್ಲೊ ಕ್ಯಾಸಲ್ಸ್‌ ಎಂಬ ಅದ್ಭುತವಾದ ಸಂಗೀತಗಾರನ ಬಗ್ಗೆ ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತನಾಗುತ್ತೇನೆ. ಅನಾರೋಗ್ಯ ಪೀಡಿತನಾದ, ವೃದ್ಧನಾದ ಪಾಬ್ಲೊ ತನ್ನ ಮೆಚ್ಚಿನ ಸೆಲ್ಲೊ (ವಾದ್ಯ) ನುಡಿಸುವಾಗಲೆಲ್ಲ ತಾರುಣ್ಯಕ್ಕೆ ಮರಳುತ್ತಿದ್ದ. ಅಥ್ರೈಟಿಸ್‌ನಿಂದ ಜಡ್ಡುಗಟ್ಟಿದ್ದ ಆತನ ಬೆರಳುಗಳೆಲ್ಲ ಆ ಉಪಕರಣದ ಮೇಲೆ ಮಾಂತ್ರಿಕವಾಗಿ ಚಲಿಸುತ್ತಿದ್ದವು. ಅದರ ಎಳೆಗಳನ್ನು ಲಯಬದ್ಧವಾಗಿ ಮೀಟಿ  ಸುಮಧುರ ನಿನಾದ ಹೊರಡಿಸುತ್ತಿದ್ದವು. ಶ್ವಾಸಕೋಶದ ಕಾಯಿಲೆಯಿಂದ ಕಂಗೆಟ್ಟಿದ್ದ ಆತನ ಭಾರವಾದ ಉಸಿರು ಆಳವಾಗುತ್ತಿತ್ತು. ಸೃಜನಶೀಲತೆಯಿಂದಾಗಿ ಆತನಲ್ಲಿ ಹೂವೊಂದು ಅರಳುತ್ತಿತ್ತು.

ನಿಮ್ಮೊಳಗಿನ ನಿತ್ಯದ ಬದುಕಿನಲ್ಲಿಯೂ ಹೂವು ಅರಳಲು ಅವಕಾಶ ಮಾಡಿಕೊಡಬೇಕು. ತಮ್ಮ ಕಚೇರಿ ಕೆಲಸದಲ್ಲಿ ಹತಾಶೆಯಾದಾಗ ಗಂಡಸರೆಲ್ಲ ತಮ್ಮ ಹೆಂಡತಿ, ಮಕ್ಕಳ ಮೇಲೆ ಆ ಹತಾಶೆ ಹೊರಹಾಕುವ ಸಂಗತಿ ಹೊಸದೇನಲ್ಲ. ಜಗತ್ತಿನಾದ್ಯಂತ  ಎಲ್ಲ ದೇಶದ ಗಂಡಸರಲ್ಲೂ ಈ ನಡವಳಿಕೆ ಕಂಡುಬರುತ್ತದೆ. ನೀವು ಅಷ್ಟೊಂದು ಮೂರ್ಖರಾಗಬೇಕೇ? ನಿಮ್ಮ ಪ್ರೀತಿಪಾತ್ರರ ಹೃದಯದೊಳಗಿನ ಸುಂದರ ಮಲ್ಲಿಗೆಗಳನ್ನು ಹೊಸಕಿಹಾಕಬೇಕೆ? ಸೃಜನಶೀಲರಾಗಿ.. ನಿಮ್ಮ ಮನೆಯೊಳಗೆ ಸಾವಿರಾರು ಮಲ್ಲಿಗೆಗಳು ಅರಳಲಿ.

ಕೆಲಸದ ನಂತರ  ಮನೆಯೊಳಗೆ ಪ್ರವೇಶಿಸುವಾಗ ನಿಮ್ಮ ಚೈತನ್ಯವನ್ನು ನಿರಾಸೆಯ ಸಂಕೋಲೆಗಳಿಂದ ಹೊರತನ್ನಿ. ಕಚೇರಿಯಲ್ಲಿ ಯಾರಾದರೂ ನೋವುಂಟು ಮಾಡಿದ್ದಲ್ಲಿ, ಅವರ ಹೆಸರನ್ನು ಗಟ್ಟಿಯಾಗಿ ಉಚ್ಚರಿಸಿ, ರಾಮ್‌ ನಿನ್ನನ್ನು ಕ್ಷಮಿಸಿದ್ದೇನೆ, ರಾಮ್‌ ನಿನ್ನನ್ನು ಕ್ಷಮಿಸಿದ್ದೇನೆ ಎಂದು ನೂರು ಸಲ ಗಟ್ಟಿಯಾಗಿ ಹೇಳಿಕೊಳ್ಳಿ. ಯಾವುದಾದರೂ ಸನ್ನಿವೇಶ ನಿಮಗೆ ವಿರುದ್ಧವಾಗಿದ್ದಲ್ಲಿ ಇದಕ್ಕಿಂತ ದೊಡ್ಡದಾಗಿ ರುವುದು ಮತ್ತೇನೋ ಘಟಿಸಲಿದೆ. ಈ ಸನ್ನಿವೇಶ ನನಗೇನೋ ಕಲಿಸಲಿದೆ ಮತ್ತು ಆನಂತರ ಅದು ಬದಲಾಗಿಬಿಡುತ್ತದೆ  ಅಂದುಕೊಳ್ಳಿ. ಇಂತಹ ಸೌಹಾರ್ದ ಸೃಷ್ಟಿಸಿಕೊಂಡಾಗ ಮನೆಯೊಳಗೆ ಪ್ರೀತಿ, ಬೆಂಬಲ, ಸಾಂಗತ್ಯ, ಶಾಂತಿ ಎಲ್ಲವೂ ದೊರಕುತ್ತವೆ.

ಸೌಹಾರ್ದ ಸೃಷ್ಟಿಸಿಕೊಳ್ಳಲು ನಾವು ಕೆಲವೊಮ್ಮೆ ಸತತವಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದಾಗಲೆಲ್ಲ ಈ ವಾಕ್ಯಗಳನ್ನು ನೆನಪಿಸಿಕೊಳ್ಳಿ.

‘ಈ ಹೊಸ ದಿನ ವಿಶ್ವಶಕ್ತಿಯ ಸೃಜನಶೀಲತೆಯಿಂದಾಗಿ ನನಗೆ ಕೊಡಲಾಗಿದೆ. ಈ ಉಡುಗೊರೆಗಾಗಿ ನಾನು ಕೃತಜ್ಞನಾಗಿದ್ದೇನೆ/ಳೆ. ನನ್ನೆದುರು ಎರಡು ಆಯ್ಕೆಗಳಿವೆ. ಸಿಟ್ಟಾಗುವುದು ಅಥವಾ ಸಿಟ್ಟಾಗದೇ ಇರುವುದು. ಸೌಹಾರ್ದ ಸೃಷ್ಟಿಸಿಕೊಳ್ಳುವುದು ಅಥವಾ ಸೌಹಾರ್ದ ಸೃಷ್ಟಿಸಿಕೊಳ್ಳದೇ ಇರುವುದು.’  ನಾನು, ಸೌಹಾರ್ದವನ್ನೇ ಸೃಷ್ಟಿಸಿಕೊಳ್ಳುತ್ತೇನೆ ಎಂದುಕೊಳ್ಳಿ.

ನೀವು ಇಂತಹ ಸ್ಪಷ್ಟ ನಿರ್ಧಾರ ತೆಗೆದುಕೊಂಡಾಗ ಅದನ್ನು ಅನುಸರಿಸುತ್ತೀರಿ ಮತ್ತು ನಿಮ್ಮ ಹಾದಿ ಸ್ಪಷ್ಟವಾಗುತ್ತ ಹೋಗುತ್ತದೆ. ಹಳೆಯ ಚಾಳಿಗೆ ಕಟ್ಟುಬಿದ್ದು, ಯಾವಾಗಲಾದರೂ ಸಿಟ್ಟಿಗೆದ್ದಾಗ  ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಎಂದುಕೊಳ್ಳಿ. ನಿಮಗೆ ಹಾಗೂ ನಿಮ್ಮೊಳಗೆ ಸಿಟ್ಟು ಮೂಡಿಸಿರುವ ವ್ಯಕ್ತಿಯತ್ತ ಹಾರೈಕೆಯ ಕಿರಣಗಳನ್ನು ನಿಮ್ಮೊಳಗಿನಿಂದ ಹಾಯಿಸಿ.

***
ದೈವಿಕತೆಯ ಮಧು ನಿಮ್ಮಲ್ಲಿರುತ್ತದೆ
ಬಹುತೇಕ ಸಂತರು ಇಂತಹ ಸೌಹಾರ್ದವನ್ನು ಸೃಷ್ಟಿಸಿಕೊಂಡಿರುತ್ತಾರೆ. ಸಂತ ಏಕನಾಥ ಅವರಲ್ಲೊಬ್ಬರು. ಅವರು ಸಿಟ್ಟಿಗೆದ್ದಿದ್ದನ್ನು ಯಾರೂ ನೋಡಿದ್ದೇ ಇಲ್ಲ. ನಸುಕಿನಲ್ಲಿ ಚಳಿ ಕೊರೆಯುತ್ತಿರುವಾಗಲೇ ಅವರು ನದಿಗೆ ಹೋಗಿ ಸ್ನಾನ ಮಾಡುತ್ತಿದ್ದರು. ಸಂತರ ತಾಳ್ಮೆಗೆಡಿಸಬೇಕು ಎಂದುಕೊಂಡು ಕೆಲ ದುಷ್ಟರು ಯುವಕನೊಬ್ಬನಿಗೆ ಹಣ ನೀಡಿದರು. ಏಕನಾಥರು ನದಿಯಿಂದ ಸ್ನಾನ ಮಾಡಿ ವಾಪಸಾಗುತ್ತಿದ್ದಾಗ ಆ ಯುವಕ ಅವರ ಮುಖದ ಮೇಲೆ ಏಂಜಲು ಉಗಿದ.

ಸ್ವಲ್ಪವೂ ತಾಳ್ಮೆಗೆಡದೇ ಅವರು ನದಿಗೆ ಹೋಗಿ ಮತ್ತೆ ಸ್ನಾನ ಮಾಡಿಬಂದರು. ಮತ್ತೆ, ಮತ್ತೆ ಆತ ಹೀಗೆಯೇ  ಮಾಡಿದ. ಸಂತರು ತಾಳ್ಮೆಯಿಂದ ಸ್ನಾನ ಮಾಡಿಕೊಂಡು ಬರುತ್ತಿದ್ದರು. 108ನೇ ಸಲ ಆ ಯುವಕ ಕುಸಿದ. ಹೀಗೆ ಮಾಡಲು ತನಗೆ ಹಣ ನೀಡಲಾಗಿದೆ, ಕ್ಷಮಿಸಿ ಎಂದ. ಕ್ಷಮಿಸುವುದೇನು? ಇದು ಎಂತಹ ಸುಂದರ ದಿನ. ನಾನು ನಿನಗೆ ಕೃತಜ್ಞನಾಗಿದ್ದೇನೆ. 108 ಸಲ ಸ್ನಾನ ಮಾಡುವ ಅವಕಾಶ ದೊರಕಿತಲ್ಲ ಎಂದು ಸಂತರು ಉತ್ತರಿಸಿದರು..!

ಹೂವಿನಲ್ಲಿ ಮಕರಂದ ಇರುವಂತೆ, ಹಣ್ಣಿನಲ್ಲಿ ರಸ ಇರುವಂತೆ ದೈವಿಕತೆಯ ಮಧು ನಿಮ್ಮಲ್ಲಿ ಇರುತ್ತದೆ. ಅದು ನಿಮ್ಮಿಂದ ಹೊರಹೊಮ್ಮುತ್ತಲೇ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT