ADVERTISEMENT

ಸ್ವಚ್ಛತೆಗೆ ನೀಡಿ ಆದ್ಯತೆ!

ಡಾ .ಕೆ.ಎಸ್.ಚೈತ್ರಾ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಸ್ವಚ್ಛತೆಗೆ ನೀಡಿ ಆದ್ಯತೆ!
ಸ್ವಚ್ಛತೆಗೆ ನೀಡಿ ಆದ್ಯತೆ!   

ಮನೆ ಎಂಬುದು ನಮಗೆ ರಕ್ಷಣೆ, ಭದ್ರತೆ, ಸುರಕ್ಷಿತ ಭಾವ ನೀಡುವ ತಾಣ. ನಾವು ನಾವಾಗಿ ವಾಸಿಸುವ ನೆಮ್ಮದಿಯ ನೆಲೆ. ಆದರೆ ಕಣ್ಣಿಗೆ ಕಾಣದ ಲಕ್ಷಾಂತರ ಸೂಕ್ಷ್ಮಾಣುಜೀವಿಗಳು ನಮ್ಮೊಂದಿಗೆ ವಾಸಿಸುತ್ತವೆ. ಸಾಮಾನ್ಯವಾಗಿ ದಿನವೂ ಮನೆಯನ್ನು ಗುಡಿಸಿ ಒರೆಸಿ  ಶುಚಿಯಾಗಿಸಿದ್ದೇವೆ ಎಂಬ ಹೆಮ್ಮೆ ನಮಗೆ.

ಆದರೆ  ವಾಸ್ತವದಲ್ಲಿ ರೋಗ ಉಂಟುಮಾಡುವ  ವೈರಾಣು ಮತ್ತು ಬ್ಯಾಕ್ಟೀರಿಯಾಗಳು ನಾವು ಊಹಿಸಿರದ ಕಡೆ ಅಡಗಿ, ಬೆಳೆದು ನಾನಾ ರೋಗಗಳಿಗೆ ಕಾರಣವಾಗುತ್ತವೆ. ವಿಜ್ಞಾನಿಗಳು ಹಲವು ಅಧ್ಯಯನಗಳ ನಂತರ    ಮನೆಯಲ್ಲಿ ಅತಿ ಹೆಚ್ಚು ಸೂಕ್ಷ್ಮಾಣುಜೀವಿಗಳು ಕಂಡುಬರುವ ಸ್ಥಳ/ವಸ್ತುಗಳನ್ನು ಗುರುತಿಸಿದ್ದಾರೆ.

ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಜಾಗಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಜಾಗಗಳು ಯಾವುವೆಂದರೆ:

ಅಡುಗೆಮನೆ
ಮನೆಯವರಿಗೆಲ್ಲ  ಆಹಾರ ತಯಾರಾಗುವ  ಅಡುಗೆಮನೆಯಲ್ಲಿ ಕತ್ತರಿಸು, ಹೆಚ್ಚು, ಬೇಯಿಸು, ತೊಳೆ  – ಹೀಗೆ ನಡೆಯುವ ಕೆಲಸಗಳು ನೂರಾರು. ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬೇಕಾಗಿರುವುದರಿಂದ  ಅಡುಗೆಮನೆಯು ಮನೆಯ ಅತ್ಯಂತ ಚಟುವಟಿಕೆಯ ತಾಣ ಮಾತ್ರವಲ್ಲ, ಕೊಳಕಾದ ಜಾಗವೂ ಆಗಬಹುದು.

ತರಕಾರಿ ಕತ್ತರಿಸಲು ಬಳಸುವ ಕಟ್ಟಿಂಗ್ ಬೋರ್ಡ್, ಒರೆಸುವ ಬಟ್ಟೆ/ಸ್ಪಾಂಜ್, ಗ್ಯಾಸ್‌ನ ಹಿಡಿಕೆಗಳಲ್ಲಿ ಸೂಕ್ಷ್ಮಾಣುಜೀವಿಗಳು ಅತಿ ಹೆಚ್ಚಾಗಿರುತ್ತವೆ. ಇದನ್ನು ತಡೆಯಲು ಆಗಾಗ ಬಿಸಿನೀರಿನಲ್ಲಿ ಸ್ವಚ್ಛಗೊಳಿಸುವುದರ ಜೊತೆ  ಒರೆಸುವ ಬಟ್ಟೆ ಬದಲಿಸಬೇಕು.

ಸಿಂಕ್
ಆಹಾರವನ್ನು ತಿಂದ ನಂತರ ರಾಶಿ ಪಾತ್ರೆಗಳನ್ನು ಗುಡ್ಡೆ ಹಾಕಿಡುವುದು ಸಿಂಕ್‌ನಲ್ಲಿ. ಅನೇಕ ಬಾರಿ ಗಂಟೆಗಟ್ಟಲೇ  ತಿಂದ  ನಂತರದ ಪಾತ್ರೆಗಳು ಸಿಂಕ್‌ನಲ್ಲಿ ಹಾಗೇ ಇದ್ದು ಒಣಗುತ್ತವೆ. ನೆನೆಸಿಟ್ಟ ಅಥವಾ ಹಾಗೇ ಬಿಟ್ಟ  ಪಾತ್ರೆಗಳಲ್ಲಿನ ಅಳಿದುಳಿದ ಆಹಾರ, ಸೂಕ್ಷ್ಮಾಣುಜೀವಿಗಳು ಅಭಿವೃದ್ಧಿ ಹೊಂದಲು ಪ್ರಶಸ್ತ ತಾಣ.

ಇ ಕೊಲೈ, ಸಾಲ್ ಮೊನೆಲ್ಲಾ ಮುಂತಾದ ರೋಗಾಣುಗಳು ಅಡುಗೆಮನೆಯ ಇತರ ಆಹಾರ ಪದಾರ್ಥಗಳಿಗೆ ಅಥವಾ ನಮ್ಮ ಕೈಗಳಿಗೆ ಹರಡಿ ರೋಗದ ಆರಂಭವಾಗುತ್ತದೆ. ಇದನ್ನು ತಡೆಯಲು ಸಿಂಕ್‌ನಲ್ಲಿ ಆಹಾರ ಇರದಂತೆ ಎಚ್ಚರ ವಹಿಸಬೇಕು. ವಾರಕ್ಕೊಮ್ಮೆಯಾದರೂ ಬ್ಲೀಚ್ ಮತ್ತು ನೀರಿನ ಮಿಶ್ರಣವನ್ನು ಸಿಂಕ್ ಹಾಗೂ  ಪೈಪ್‌ನೊಳಗೆ ಹಾಕಿ ಶುಚಿಗೊಳಿಸಬೇಕು.

ಹಲ್ಲುಜ್ಜುವ ಬ್ರಷ್
ದಿನಕ್ಕೆರಡು ಬಾರಿ ಹಲ್ಲುಜ್ಜಿದ ನಂತರ ಬ್ರಷ್‌ ಅನ್ನು ನೀರಿನಲ್ಲಿ ತೊಳೆದು ಲೋಟದಲ್ಲಿ ಇಡುವುದು ಸಾಮಾನ್ಯ ರೂಢಿ. ಆದರೆ ಒಣಗದ, ಇನ್ನೂ ತೇವಾಂಶ ಇರುವ ಬ್ರಷ್, ಸೂಕ್ಷ್ಮಾಣುಜೀವಿಗಳು ವಾಸಿಸಲು ಅತ್ಯುತ್ತಮ ಜಾಗ.

ಇದರೊಂದಿಗೆ ಶೌಚಾಲಯವೂ ಹತ್ತಿರವಿದ್ದಲ್ಲಿ ಅಲ್ಲಿಂದ ಬ್ರಷ್‌ನ ಮೇಲೆ ರೋಗಾಣುಗಳು ಸಂಗ್ರಹವಾಗುವ ಸಾಧ್ಯತೆ ಇದೆ. ಆದ್ದರಿಂದ ಹಲ್ಲುಜ್ಜುವ ಜಾಗದಿಂದ ಶೌಚಾಲಯ ದೂರವಿರಬೇಕು. ಹಲ್ಲುಜ್ಜಿದ ನಂತರ  ಆದಷ್ಟೂ ನೀರನ್ನು ಕೊಡವಿ ತೆಗೆಯಬೇಕು. ಪೂರ್ತಿ ಒಣಗಲು ಗಾಳಿ ಆಡುವ ಸ್ಥಳದಲ್ಲಿ ಬ್ರಷ್‌ ಇಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಬದಲಿಸಬೇಕು.

ಟಿ.ವಿ ರಿಮೋಟ್-ಕಂಪ್ಯೂಟರ್ ಕೀಗಳು
ಟಿ.ವಿ, ಕಂಪ್ಯೂಟರ್‌ಗಳಿಲ್ಲದೆ ನಾವಿಲ್ಲ ಎನ್ನುವ ಕಾಲದಲ್ಲಿ ನಾವಿದ್ದೇವೆ. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ರಿಮೋಟ್ ಹಿಡಿದು ಚಾನಲ್ ಬದಲಿಸುವುದು, ಕಂಪ್ಯೂಟರ್ ಕೀ ಒತ್ತಿ ಬ್ರೌಸ್ ಮಾಡುವುದು ದಿನಚರಿಯಾಗಿದೆ.

ಆದರೆ ಊಟ, ಕೆಮ್ಮು, ಸೀನು, ಮಾತು – ಹೀಗೆ ಎಲ್ಲವನ್ನೂ ಇದರ ಎದುರಿಗೇ ಮಾಡುವುದರಿಂದ ರೋಗಾಣುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇರುವುದಷ್ಟೇ ಅಲ್ಲ ಒಬ್ಬರಿಂದ ಒಬ್ಬರಿಗೆ ಸೋಂಕು ಬಲು ಬೇಗ ಹರಡುತ್ತದೆ.

ಹೀಗಾಗಿ ಆಗಾಗ್ಗೆ ಬ್ಲೀಚ್ ಇರುವ ತೇವಯುಕ್ತ ಪೇಪರ್ ಬಳಸಿ ಟಿ.ವಿ ರಿಮೋಟ್-ಕಂಪ್ಯೂಟರ್ ಕೀಗಳನ್ನು ಸ್ವಚ್ಛಗೊಳಿಸಬೇಕು. ಅದಕ್ಕಿಂತ ಮುಖ್ಯವಾಗಿ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ನೆಗಡಿ-ಕೆಮ್ಮು ಇರುವಾಗ ಆದಷ್ಟೂ ರಿಮೋಟ್-ಕಂಪ್ಯೂಟರ್ ಕೀಗಳನ್ನು ಮುಟ್ಟದಿರುವುದೇ ಒಳ್ಳೆಯದು.

ಬಾಗಿಲ ಹಿಡಿಕೆಗಳು
ಹೊರಗಿನಿಂದ ಯಾರೇ ಒಳ ಬಂದರೂ, ಒಳಗಿನಿಂದ ಹೊರ ಹೋದರೂ ಬಾಗಿಲು ತೆರೆಯಲು /ಮುಚ್ಚಲು ಕೈಯಲ್ಲಿ ಹಿಡಿದು ತಿರುಗಿಸುವುದು ಬಾಗಿಲ ಹಿಡಿಕೆಗಳು. ಎಲ್ಲರೂ ಪದೇ ಪದೇ ಉಪಯೋಗಿಸುವುದರಿಂದ ಸಹಜವಾಗಿಯೇ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಬಹಳ.

ಇವುಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸುವ ದ್ರಾವಣ ಮತ್ತು ಬಿಸಿನೀರಿನಿಂದ ಒರೆಸಬೇಕು.

ದಿಂಬು ಮತ್ತು ಟವೆಲ್‌ಗಳು
ಸುಖನಿದ್ದೆಗೆ ಸಹಾಯವಾಗುವ ದಿಂಬು ನಮ್ಮ ತಲೆಗೆ ಮಾತ್ರವಲ್ಲ ಅದರಲ್ಲಿರುವ ಕಸ, ಎಣ್ಣೆ, ದೂಳು ಎಲ್ಲದಕ್ಕೂ ಮನೆ. ಮೈ ಒರೆಸಿಕೊಳ್ಳುವ ಟವೆಲ್‌ಗಳು ದೇಹ ಒರೆಸುವುದರ ಜೊತೆ ಸೂಕ್ಷ್ಮಾಣುಜೀವಿಗಳನ್ನು – ಸ್ನಾನದ ನೀರಿನ ತೇವಾಂಶವನ್ನು ಹೀರುತ್ತವೆ.

ಇವುಗಳನ್ನು ಸರಿಯಾಗಿ ತೊಳೆಯದೇ, ಬಿಸಿಲಿನಲ್ಲಿ ಒಣಗಿಸದೇ ಇದ್ದಾಗ ರೋಗಾಣುಗಳಿಗೆ ನೆಮ್ಮದಿಯ ಗೂಡಾಗುತ್ತದೆ. ಈ ಕಾರಣಕ್ಕಾಗಿ ದಿಂಬು ಮತ್ತು ಟವೆಲ್‌ಗಳನ್ನು ಹಂಚಿಕೊಳ್ಳದೇ ಪ್ರತ್ಯೇಕವಾಗಿ ಉಪಯೋಗಿಸಿ, ಶುಚಿಯಾಗಿಟ್ಟುಕೊಳ್ಳಬೇಕು. ವಾರಕ್ಕೊಮ್ಮೆ ಸೋಪಿನ ಪುಡಿ - ಬಿಸಿನೀರಿನಲ್ಲಿ ತೊಳೆದು ಚೆನ್ನಾಗಿ ಬಿಸಿಲಿನಲ್ಲಿ ಒಣಗಲು ಬಿಡಬೇಕು.

ಎಷ್ಟೇ ಶುಚಿಯಾಗಿಟ್ಟುಕೊಂಡರೂ - ಜಾಗ್ರತೆ ವಹಿಸಿದರೂ, ಕಣ್ಣಿಗೆ ಕಾಣದ ಸೂಕ್ಷ್ಮಾಣುಜೀವಿಗಳು ಎಲ್ಲೆಲ್ಲೂ ಇರುತ್ತವೆ.  ಸಮಾಧಾನದ ಸಂಗತಿಯೆಂದರೆ ಇವುಗಳಲ್ಲಿ ಹೆಚ್ಚಿನವು ಹಾನಿಕಾರಕವಲ್ಲ.

ಕೆಲವು ಆರೋಗ್ಯಕ್ಕೆ ಒಳ್ಳೆಯದೂ  ಆಗಿದೆ. ಹಾಗೇ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಹಾಗೆಂದು ಸ್ವಚ್ಛತೆಯನ್ನು ಕಡೆಗಣಿಸುವಂತಿಲ್ಲ. ರೋಗಾಣುಗಳನ್ನು ಪ್ರತಿಬಂಧಿಸಲು ಸರಳ ಉತ್ತಮ ಮಾರ್ಗ, ಕೈಗಳನ್ನು ತಿಕ್ಕಿ ತೊಳೆಯುವುದು.

ಏಕೆಂದರೆ ಕೈಗಳಿಂದ ರೋಗಾಣುಗಳು ಬಾಯಿ,ಕಣ್ಣು, ಮೂಗು,ಕಿವಿ – ಹೀಗೆ ಎಲ್ಲ ಕಡೆ ಮತ್ತು ಇತರರಿಗೆ ಹರಡುತ್ತದೆ. ಹಾಗಾಗಿ ನಿಯಮಿತವಾಗಿ ಇಪ್ಪತ್ತು ಸೆಕೆಂಡುಗಳ ಕಾಲ ಸಾಬೂನು, ನೀರು ಬಳಸಿ ಕೈ ತೊಳೆಯುವುದು ಅತಿ ಮುಖ್ಯ.

ನೆನಪಿನಲ್ಲಿಡಬೇಕಾದ ಅಂಶವೆಂದರೆ ಕೈಗಳನ್ನು ಚೆನ್ನಾಗಿ ತಿಕ್ಕಬೇಕು, ಏಕೆಂದರೆ ಘರ್ಷಣೆಯು ರೋಗಾಣುಗಳನ್ನು  ದೂರವಿಡುತ್ತದೆ. ಸ್ವಚ್ಛ ಮನೆಯಿಂದ ಸ್ವಸ್ಥ ದೇಹ ಮತ್ತು ಉತ್ತಮ ಆರೋಗ್ಯ!                                                                                                                  
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.