ADVERTISEMENT

ಹಾರೈಕೆಯಲ್ಲಿ ಮಿಂದೇಳಿ...

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 3 ಜನವರಿ 2017, 19:30 IST
Last Updated 3 ಜನವರಿ 2017, 19:30 IST
ಹಾರೈಕೆಯಲ್ಲಿ ಮಿಂದೇಳಿ...
ಹಾರೈಕೆಯಲ್ಲಿ ಮಿಂದೇಳಿ...   

ನಿಮ್ಮ ಸುತ್ತಲೂ ಹಾರೈಕೆ ತುಂಬಿಕೊಂಡಿದೆ. ನೀವು ಹಾರೈಕೆಯಲ್ಲಿಯೇ ಮುಳುಗಿದ್ದೀರಿ. ಅದು ಹೇಗೆಂದು ನೋಡೋಣ. ಅನ್ವೇಷಕನೊಬ್ಬ ಸುದೀರ್ಘ ಯಾತ್ರೆ ಮುಗಿಸಿ ಬಯಲುಸೀಮೆಯ ತನ್ನ ಊರಿಗೆ ಮರಳಿದ. ದಟ್ಟವಾದ ಮಳೆ ಕಾಡಿನ ಬಗ್ಗೆ ತಿಳಿದುಕೊಳ್ಳಲು ಆ ಊರಿನ ಜನ ಕಾತರರಾಗಿದ್ದರು. ಹಕ್ಕಿಗಳ ಕೂಜನ, ಕಾಡು ಹೂಗಳ ಸೌಂದರ್ಯ, ಸ್ಫಟಿಕ ಶುದ್ಧ ನೀರಿನ ನದಿಯಲ್ಲಿ ಈಜಿ ಬಂದಿದ್ದ ಆತನ  ಹೃದಯ ಸಂತಸದಿಂದ ಬಿರಿಯುತ್ತಿತ್ತು. ಮಳೆಕಾಡಿನ ಬಗ್ಗೆ ವರ್ಣಿಸಲು ಆತನಲ್ಲಿ ಪದಗಳೇ ಇರಲಿಲ್ಲ.

ಆ ಕಾಡನ್ನು ನೀವೇ ಹುಡುಕಿಕೊಳ್ಳಿ ಎಂದು ಆತ ಎಲ್ಲರಿಗೂ ಹೇಳಿದ. ಆ ಕಾಡಿಗೆ ಹೋಗುವ ದಾರಿಯ ನಕ್ಷೆಯನ್ನು ಬರೆದುಕೊಟ್ಟ. ನಕ್ಷೆ ಸಿಕ್ಕವರೆಲ್ಲ ಅದರ ಪ್ರತಿ ಮಾಡಿಸಿ ಕೆಲವರಿಗೆ ಹಂಚಿದರು. ಆ ಕಾಡಿನ ಬಗ್ಗೆ ತಾವೇ ತಜ್ಞರೆನ್ನುವಂತೆ ವರ್ತಿಸತೊಡಗಿದರು. ಆದರೆ, ಯಾರೊಬ್ಬರೂ ಹಕ್ಕಿಗಳ ಕೂಗು ಆಲಿಸಿರಲಿಲ್ಲ. ಕಾಡು ಕುಸುಮಗಳ ಪರಿಮಳ ಆಘ್ರಾಣಿಸಿರಲಿಲ್ಲ.

ತಮಗೆ ಕಾಡಿನ ಬಗ್ಗೆ ಮಾಹಿತಿ ಇದೆ ಎನ್ನುವ ಒಂದೇ ಕಾರಣಕ್ಕೆ ಅವರೆಲ್ಲ ಅಹಂಕಾರದಿಂದ ವರ್ತಿಸತೊಡಗಿದ್ದರು.  ಈ ಅಹಂಕಾರವೇ ನಮ್ಮೆಲ್ಲರನ್ನೂ ನಾಶಮಾಡುತ್ತದೆ.ಅಹಂಕಾರ ಅಥವಾ ಇಗೊ (ego) ನಿಮ್ಮನ್ನು ಒಮ್ಮೆಲೇ ಮೇಲಕ್ಕೆ ಏರಿಸುತ್ತದೆ. ಜಗತ್ತಿನ ತುತ್ತತುದಿಯಲ್ಲಿ ನೀವು ಇದ್ದಂತೆ ಭಾಸವಾಗುತ್ತದೆ. ಯಾವುದೇ ಪ್ರಶಂಸೆ ಸಿಕ್ಕದೇ ಇದ್ದಾಗ ಒಮ್ಮೆಲೇ ನೀವು ಕೆಳಕ್ಕೆ ಕುಸಿಯುತ್ತಿರಿ.

ನಿಮ್ಮ ಮನಸ್ಸು, ಹೃದಯ ಬಾಡಿಹೋಗುತ್ತದೆ. ನಿಮ್ಮ ಅಹಂಕಾರವನ್ನು ಪಳಗಿಸಿಕೊಳ್ಳುವುದು ಬುದ್ಧಿವಂತಿಕೆ. ಅಮೃತ­ಶಿಲೆಯ ತುಂಡನ್ನು ಶಿಲ್ಪಿಯೊಬ್ಬ ಸುಂದರ ಶಿಲ್ಪವಾಗಿ ಕೆತ್ತಿದಂತೆ ನಿಮ್ಮ ಅಹಂಕಾರಕ್ಕೂ ಬುದ್ಧಿಮಾತು ಬೇಕಾಗುತ್ತದೆ. ಕೆಲವು ಆಧ್ಯಾತ್ಮಿಕ ಸತ್ಯಗಳನ್ನು ಅರಿಯಬೇಕಾಗುತ್ತದೆ.

ಬೇರೆಯವರಿಗೆ ನೀವೇನು ಮಾಡಿದಿರಿ ಎನ್ನುವ ಬಗ್ಗೆ ಹೆಚ್ಚು ಹೆಮ್ಮೆಪಡಬೇಡಿ. ಆದರೆ, ಇತರರು ನಿಮಗೇನು ಮಾಡಿದ್ದಾರೆ, ಎಷ್ಟು ಪ್ರೀತಿ, ಬೆಂಬಲ ನೀಡಿದ್ದಾರೆ  ಎನ್ನುವುದನ್ನು ಅರಿಯಿರಿ. ನಿಮ್ಮ ಕುಟುಂಬದವರೋ, ಸ್ನೇಹಿತರೋ, ಸಹೋದ್ಯೋಗಿಗಳೋ ನಿಮಗೆ ತೋರಿಸಿದ ಪ್ರೀತಿ, ಬೆಂಬಲಗಳು ಕೇವಲ ಅನಿವಾರ್ಯವಾಗಿ ಮಾಡಿದ್ದಲ್ಲ. ಅವೆಲ್ಲ ಇಡೀ ವಿಶ್ವಶಕ್ತಿಯೇ ನಿಮಗೆ ಒದಗಿಸಿದ ಬೆಂಬಲ. ನೀವು ಹಾರೈಕೆಯಲ್ಲಿಯೇ  ಮುಳುಗಿದ್ದೀರಿ.

* ಭೂಮಿಯ ಮೇಲಿನ ಸಮಸ್ತ ಜೀವಜಂತುಗಳಿಗೆ ಶಕ್ತಿ ನೀಡುವ ಸೂರ್ಯನ ಕಿರಣಗಳಿಗೆ ಎಲ್ಲವನ್ನೂ ಗುಣಪಡಿಸುವ ಶಕ್ತಿಯೂ ಇದೆ.
ಪುಟ್ಟ ಬಾಲಕಿಯೊಬ್ಬಳ ಕಣ್ಣಿನಲ್ಲಿ ಗಡ್ಡೆಗಳು ಬೆಳೆದು ಆಕೆ ಅಂಧಳಾಗಿದ್ದಳು. ಶಸ್ತ್ರಚಿಕಿತ್ಸೆಯೂ ಸೇರಿದಂತೆ ಎಲ್ಲ ಬಗೆಯ ಔಷಧದಿಂದಲೂ ಆಕೆಯನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ.

ಕಡೆಗೆ ಆಕೆಯ ವೈದ್ಯರು ಪ್ರಕೃತಿಚಿಕಿತ್ಸೆಯನ್ನು ಆರಂಭಿಸಿದರು. ಆಕೆಗೆ ಚೆನ್ನಾಗಿ ಪೌಷ್ಟಿಕಾಂಶಭರಿತ ಆಹಾರವನ್ನು ನೀಡಿದರು. ತಾನು ಗುಣಮುಖವಾದಂತೆ ಊಹಿಸಿಕೊಳ್ಳುವಂತೆ ಆಕೆಗೆ ತಿಳಿಸಿದರು. ನಿತ್ಯವೂ ಹಲವು ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ನಿಲ್ಲುವಂತೆ ತಿಳಿಸಿದರು. ಕೆಲವೇ ತಿಂಗಳಲ್ಲಿ ಆಕೆಯ ಗಡ್ಡೆಗಳೆಲ್ಲ ಕರಗಿ ದೃಷ್ಟಿಯೂ ಮರಳಿತು.

* ವಿಶ್ರಾಂತಿ ಎನ್ನುವುದು ಮತ್ತೊಂದು ಮಾಂತ್ರಿಕ ಶಕ್ತಿ. ಸಾವಿರದ ಒಂದು, ಸಾವಿರದ ಎರಡು ಎಂದು ಹೇಳಿಕೊಳ್ಳುತ್ತ ನಿಧಾನವಾಗಿ ಉಸಿರಾಡಿ. ಆ ಸಂಖ್ಯೆಗಳ ಲಯದೊಂದಿಗೆ ನಿಮ್ಮ ಉಸಿರಾಟವೂ ಮಿಳಿತಗೊಳ್ಳಲಿ. ವಿಶ್ರಾಂತಿಯನ್ನು ಪಡೆದಾಗ ನಿಮ್ಮ ರಕ್ತದೊತ್ತಡ ಕುಸಿಯುತ್ತದೆ. ಮೆದುಳಿನ ರಕ್ತಸಂಚಾರ ಹೆಚ್ಚುತ್ತದೆ. ಮೆದುಳಿನ ಅಲೆಗಳು ಕ್ರಮಬದ್ಧವಾಗುತ್ತವೆ. ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.

* ನಿಮಗೆ ಯಾವುದರ ಬಗ್ಗೆಯಾದರೂ ಆಸಕ್ತಿಯಿದ್ದಲ್ಲಿ ಆ ಆಸಕ್ತಿ, ಹವ್ಯಾಸವನ್ನು ಕೈಬಿಡಬೇಡಿ. ಆ ಹವ್ಯಾಸವನ್ನು ಬಿಡಲು ನಿಮಗೆ ನೂರಾರು ಕಾರಣಗಳು ಸಿಗಬಹುದು. ಆದರೆ, ಅದಕ್ಕೆ ಅಂಟಿಕೊಳ್ಳಲು ನಿಮಗೆ ಒಂದೇ ಒಂದು ಕಾರಣ ಸಿಕ್ಕರೂ ಅದಕ್ಕೆ ಅಂಟಿಕೊಳ್ಳಿ.  ಹವ್ಯಾಸ ಅಥವಾ ಆಸಕ್ತಿ ಅಂದರೆ ನಿಮ್ಮ ಬಿಡುವಿನ ಸಮಯದಲ್ಲಿ ಮಾಡುವುದಲ್ಲ. ನಿಮ್ಮೆಲ್ಲ ಪ್ರತಿಭೆ, ಶಕ್ತಿಯನ್ನು ವ್ಯಕ್ತಪಡಿಸಲು ಇರುವ ದಾರಿ ಅದು.

* ಸಂತನೊಬ್ಬ ತನ್ನ ಬಗ್ಗೆ ಹೇಳಿಕೊಂಡ ಈ ಕಥೆಯನ್ನು ಓದಿ.
‘ನಾನು ಯುವಕನಾಗಿದ್ದಾಗ ಇಡೀ ಜಗತ್ತನ್ನೇ ಸರಿಪಡಿಸಬೇಕು, ಜಗತ್ತನ್ನೇ ಬದಲಿಸಬೇಕು ಎನ್ನಿಸುತ್ತಿತ್ತು. ಅರ್ಧ ಆಯುಸ್ಸು ಕಳೆದಾಗ ನಾನು ಏನೂ ಮಾಡಲಿಲ್ಲ ಅನ್ನಿಸಿತು.ನನ್ನ ಸಂಪರ್ಕಕ್ಕೆ ಬಂದವರು, ನನ್ನ ಕುಟುಂಬದವರು ಬದಲಾಗಲಿ. ನನ್ನಿಂದ ಒಂದಾದರೂ ಆತ್ಮ ಬದಲಾಗಲಿ ಎಂದು ಆಗ ನಾನು ಅಂದುಕೊಳ್ಳತೊಡಗಿದೆ.

ಈಗ ನನಗೆ ವಯಸ್ಸಾಗಿದೆ. ಕನಿಷ್ಠ ನಾನಾದರೂ ಬದಲಾಗಬೇಕು ಎನಿಸಿದೆ. ಆರಂಭದಿಂದ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ನಾನೂ ಬದಲಾಗಿರುತ್ತಿದ್ದೆ.  ನನ್ನ ಜೀವನವು ವ್ಯರ್ಥವಾಗಿ ಕಳೆಯುತ್ತಿರಲಿಲ್ಲ.

ಪ್ರೀತಿಯ ಓದುಗನೇ ಯಾರ ಜೀವನವೂ ವ್ಯರ್ಥವಲ್ಲ. ನಿಮ್ಮ ಪ್ರೀತಿ, ಕ್ರಿಯೆ ಮತ್ತು ಹಾರೈಕೆಯಿಂದ ನಿಮ್ಮ ಸುತ್ತಲಿನ ವಾತಾವರಣವನ್ನು ಬದಲಿಸಿಕೊಳ್ಳಿ. ಹಾರೈಕೆಯಲ್ಲಿ ಮಿಂದೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.