ADVERTISEMENT

ಅಕ್ಷರ ಗಣಪ

ಬಳಕೂರು ವಿ.ಎಸ್.ನಾಯಕ
Published 25 ಆಗಸ್ಟ್ 2014, 19:30 IST
Last Updated 25 ಆಗಸ್ಟ್ 2014, 19:30 IST

ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಲಂಬೋದರನಿಗೆ ವಿವಿಧ ರೂಪ ನೀಡಲು, ಇದರಲ್ಲಿಯೇ ತಮ್ಮ ಕಲೆಯ ಚಾಕಚಕ್ಯತೆ ಪ್ರದರ್ಶಿಸಲು ಕಲಾವಿದರಲ್ಲಿ ಎಗ್ಗಿಲ್ಲದ ಉತ್ಸಾಹ. ಮಣ್ಣಿನ ಗಣಪ, ಕಲ್ಲಿನ ಗಣಪ, ಕಂಚಿನ ಗಣಪ, ಮರದ ಗಣಪ ಹೀಗೆ ಹಲವಾರು ರೀತಿಯ ಗಣಪನನ್ನು ನೋಡಿದ್ದೇವೆ. ಆದರೆ ಇವೆಲ್ಲಕ್ಕಿಂತ ಭಿನ್ನವಾದ ಗಣಪ ಇಲ್ಲಿದ್ದಾನೆ.

ಯಾವುದೇ ಒಂದು ಹೆಸರು, ಶಬ್ದ, ವಾಕ್ಯ ಕೊಟ್ಟರೂ ಅದನ್ನು ಬಳಸಿಕೊಂಡೇ ಈ ಗಣಪ ಇಲ್ಲಿ ರೂಪುತಳೆಯುತ್ತಾನೆ. ಕೊಟ್ಟಿರುವ ಹೆಸರಿನಲ್ಲಿ ಅಕ್ಷರಗಳನ್ನು ಪೋಣಿಸಿ ಒಂದೇ ನಿಮಿಷದ ಒಳಗೆ ಗಣಪ ಅನಾವರಣಗೊಳ್ಳುತ್ತಾನೆ! ಈ ರೀತಿ ಅಪರೂಪದ ವಿಘ್ನವಿನಾಶಕ ಮೈದಳೆಯುವುದು ಬೆಂಗಳೂರಿನ ವೆಂಕಟೇಶ್ ಎಲ್ಲೋರ್ ಅವರ ಕೈಗಳಿಂದ.

ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ವೆಂಕಟೇಶ್‌ ಅವರು ಈಗಾಗಲೇ15ಸಾವಿರಕ್ಕೂ ಅಧಿಕ ಗಣಪತಿ ವೈವಿಧ್ಯವನ್ನು ತಯಾರಿಸಿದ್ದಾರೆ. ಇವರು ಚಿತ್ರ ಬಿಡಿಸಲು ಆರಂಭಿಸಿದರೆ ಒಂದೇ ಕ್ಷಣದಲ್ಲಿ ಹತ್ತಾರು ಬಗೆಯ ಗಣೇಶ ಸೃಷ್ಟಿಯಾಗುತ್ತಾನೆ.  ತಾಮ್ರ, ಕಂಚು, ಸ್ಟೀಲ್, ಬಂಗಾರ, ಕಲ್ಲು, ಉಸುಕಿನಿಂದ ಬಿಡಿಸಿರುವ ಚಿತ್ರಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿವೆ.

ಇವರ ಬಗ್ಗೆ ಒಂದಿಷ್ಟು...
ಬಾಲ್ಯದಿಂದಲೂ ಇವರಿಗೆ ಕಲೆಯಲ್ಲಿ ಆಸಕ್ತಿ. ಮೊದಮೊದಲು  ಚಿಕ್ಕ ಪುಟ್ಟ ಚಿತ್ರಗಳನ್ನು ಹವ್ಯಾಸವಾಗಿ ಬಿಡಿಸುತ್ತಿದ್ದರು ಅಷ್ಟೆ. 2004 ರಿಂದ  ಹೆಸರಿನಲ್ಲಿ ಗಣೇಶನ ಚಿತ್ರಗಳನ್ನು ಬಿಡಿಸಲು ಆರಂಭಿಸಿದರು. ಅಲ್ಲಿಂದ  ಇಲ್ಲಿಯವರೆಗೂ ಹಲವು ರೀತಿಯ ಗಣೇಶನ ಚಿತ್ರಗಳನ್ನು ಬಿಡಿಸುತ್ತಾ ಬಂದಿದ್ದಾರೆ ವೆಂಕಟೇಶ್.

ಪ್ರಸಿದ್ಧ ರಾಜಕಾರಣಿಗಳು, ಆಟಗಾರರು, ಸಂಗೀತಗಾರರು ಸೇರಿದಂತೆ ಎಲ್ಲ ಕ್ಷೇತ್ರದ ಗಣ್ಯಾತಿಗಣ್ಯರ ಹೆಸರುಗಳಲ್ಲಿ ಇರುವ ಅಕ್ಷರಗಳನ್ನು ಬಳಸಿಕೊಂಡು ಗಣಪತಿ ತಯಾರಿಸಿ ಅವರವರ ಅಭಿಮಾನಿಗಳಿಗೆ ನೀಡಿದ್ದಾರೆ ವೆಂಕಟೇಶ್. ಇವರ ಸಂಪರ್ಕಕ್ಕೆ 09341210007.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT