ADVERTISEMENT

ಅಡಿಕೆ ಹಾಳೆಗೀಗ ಸುಂದರಾವತಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಅಡಿಕೆ ಹಾಳೆಗೀಗ ಸುಂದರಾವತಾರ
ಅಡಿಕೆ ಹಾಳೆಗೀಗ ಸುಂದರಾವತಾರ   

* ಶ್ರೀ ಪಡ್ರೆ

ಡಿಕೆ ಹಾಳೆಯ ಪರಿಸ್ನೇಹಿ ಊಟದ ತಟ್ಟೆಗಳು ಜಗತ್ತಿನಾದ್ಯಂತ ಒಲವು ಪಡೆದಿವೆ. ಕರ್ನಾಟಕ, ಕೇರಳದ ಹಲವೆಡೆ ಅಡಿಕೆ ಹಾಳೆ ತಟ್ಟೆ ನಿರ್ಮಿಸುವ ನೂರಾರು ಘಟಕಗಳು ನಡೆಯುತ್ತಿವೆ.

ಅಡಿಕೆ ತೋಟದಲ್ಲಿ ಬೆಳೆದು ಕೃಷಿಕರ ಮನೆಗಳಲ್ಲಿ ಒಂದೆರಡು ಉಪಯೋಗದ ನಂತರ ಮಣ್ಣಾಗುತ್ತಿದ್ದ ಕಚ್ಚಾವಸ್ತುವಿದು. ಈಗ ನೋಡಿ, ವಿಮಾನವೇರಿ ಬರ್ಲಿನ್ನಿಗೋ, ಸಿಡ್ನಿಗೋ, ದೇಶವಿದೇಶದ ತಾರಾ ಹೋಟೆಲುಗಳಿಗೋ ತಲುಪುತ್ತಿದೆ. ಅಲ್ಲಿನ ಮಹತ್ವದ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ತುತ್ತು ಕೊಟ್ಟ ನಂತರವೇ ಬದುಕು ಮುಗಿಸುತ್ತದೆ.

ADVERTISEMENT

ಎಲ್ಲಾ ಸರಿಹೋದರೆ, ಮುಂದೊಂದು ದಿನ ಹಾಳೆ ಬೇರೆಯೇ ಅವತಾರದಲ್ಲಿ ವಿಮಾನಯಾನ ಮಾಡುವ ಸಾಧ್ಯತೆಯಿದೆ. ಅಲ್ಲಿನ ಗಣ್ಯರ ಮನೆ, ಮೇಜು, ಶೋಕೇಸು ಅಲಂಕರಿಸುವಷ್ಟು ಸುಂದರ ಕಲಾಕೃತಿಯನ್ನು ಕನ್ನಾಡ ಉದ್ಯಮಿಯೊಬ್ಬರು ತಯಾರಿಸತೊಡಗಿದ್ದಾರೆ.

ಭಟ್ಕಳದ ‘ಉಶೀರ ಉದ್ದಿಮೆ’ ಲಾವಂಚದ ಕಲಾಕೃತಿಗಳ ಹರಿಕಾರ. ಬೆಳ್ಳಿಹಬ್ಬ ಅನತಿ ದೂರದಲ್ಲಿರುವ ಸಂಸ್ಥೆ. ಉದ್ದಿಮೆಯ ರೂವಾರಿ ಎಂ.ಡಿ.ಮ್ಯಾಥ್ಯೂ ಅವರ ಮನೆಗೆ ಹೋಗಿ ನೋಡಿ. ಪಡಸಾಲೆಯ ಮೂಲೆಯಲ್ಲಿ ಅಡಿಕೆ ಹಾಳೆ ಗಣಪತಿ ದೇವರ ಉಬ್ಬುಕೃತಿಗಳು ಥಟ್ಟನೆ ಗಮನ ಸೆಳೆದಾವು.

‘ತಡೀರಿ. ಇದೆಲ್ಲಾ ಅರ್ಧ ಅರ್ಧ ಕೆಲಸ ಆಗಿದ್ದು. ಫಿನಿಶ್ ಆದದ್ದು ಆಚೆ ಕಡೆ ಇದೆ. ತೋರಿಸುತ್ತೇನೆ’, ಮ್ಯಾಥ್ಯೂ ಹೇಳುತ್ತಾರೆ. ಇವರು ಹಾಳೆಯ ಹಲವು ಉಬ್ಬು ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಗಣೇಶ, ಯಕ್ಷಗಾನ, ಕಥಕ್ಕಳಿ - ಇತ್ಯಾದಿ. ಎಲ್ಲವೂ ಸೊಗಸಾಗಿಯೇ ಇದ್ದರೂ ವಿಶೇಷ ಗಮನ ಸೆಳೆದದ್ದು ಗಣೇಶ.

ಅಡಿಕೆ ಹಾಳೆಯಿಂದ ಉಬ್ಬು ಕಲಾಕೃತಿ ಮಾರುಕಟ್ಟೆಗೆ ಬರುತ್ತಿರುವುದು ಇದೇ ಮೊದಲು. ಅಡಿಕೆ ಬೆಳೆಗಾರರ ಉದ್ದಿಮೆಗಳು, ನಮ್ಮ ಅಡಿಕೆ ಮಾರಾಟ ಸಂಸ್ಥೆಗಳು ಸಮಾರಂಭ ನಡೆಸುವಾಗ, ಗಣ್ಯರು ಭೇಟಿ ಕೊಡುವಾಗ ಸ್ಮರಣಿಕೆ ಕೊಡಲು ಈ ಥರದ ಕೃತಿ ಬಳಸಿಕೊಳ್ಳಬಹುದು.

‘ಈಗಿನ್ನೂ ಶುರು ಮಾಡಿದ್ದೇವೆ, ಅಷ್ಟೇ. ಪ್ರಯೋಗ ಮಾಡುತ್ತಾ ಇದ್ದೇವೆ. ಮಾಡಿದ ವಸ್ತುವನ್ನು ನೋಡುತ್ತಾ ನೋಡುತ್ತಾ ಇದ್ದ ಹಾಗೆ ಅದರಲ್ಲಿ ಕುಂದುಕೊರತೆ ಇದ್ದರೆ ತಿಳಿಯುತ್ತದೆ. ಎಲ್ಲಿ, ಹೇಗೆ ಸುಧಾರಣೆ ಮಾಡಬಹುದು ಎನ್ನುವುದು ಹೊಳೆಯುತ್ತದೆ. ಗ್ರಾಹಕರು ಇಷ್ಟಪಟ್ಟರೆ ಇಂಥ ನೂರಾರು ಐಟಮ್ ತಯಾರಿಸುತ್ತೇವೆ. ಐಡಿಯಾಗಳೆಲ್ಲಾ ತಲೆಯೊಳಗೆ ಇವೆ’, ಮ್ಯಾಥ್ಯೂ ವಿವರಿಸುತ್ತಾ ಇದ್ದಾಗ ಒಂದು ಗಣಪನ ಕೃತಿ ಎತ್ತಿಕೊಂಡು ಚಿತ್ರೀಕರಿಸಲು ಕಟ್ಟಡದ ಹೊರಭಾಗಕ್ಕೆ ನಡೆದೆ.

ಒಳಗೊಬ್ಬಳು ಹುಡುಗಿ ಈ ಥರದ ಗಣಪಂದಿರನ್ನು ಶೃಂಗರಿಸುತ್ತಿದ್ದಳು. ಬಣ್ಣ ಬಣ್ಣದ ಬಟ್ಟೆ ಚೂರು, ಪಳಪಳ ಮಣಿಗಳನ್ನು ಸೇರಿಸಿ ಅಂಟಿಸುತ್ತಿದ್ದಳು. ನನಗೇಕೋ ನಾನು ಕೈಗೆತ್ತಿಕೊಂಡ ನಿರಾಭರಣ, ಬಣ್ಣ ಹೊದೆದುಕೊಳ್ಳದ ಏಕದಂತನೇ ಸುಂದರವಾಗಿ ಕಂಡ. ಅದೇ ಮಾತನ್ನು ಮ್ಯಾಥ್ಯೂ ಅವರಿಗೂ ಹೇಳಿದೆ. ‘ಬರೇ ಉಬ್ಬು ಚಿತ್ರವಾಗಿಸಿ ಒಂದು ಆಕರ್ಷಕ ಬಣ್ಣದ ಅಂಚು ಕಟ್ಟಿ ಕೊಟ್ಟರೆ ಸಾಕು, ಇದು ಗ್ರಾಹಕರನ್ನು ಸೆಳೆಯಬಹುದು. ಹಾಳೆಯ ಪರಿಚಯ ಅಷ್ಟಾಗಿ ಇಲ್ಲದ ಉತ್ತರ ಭಾರತೀಯರನ್ನು ಹೆಚ್ಚು ಸೆಳೆಯಬಹುದು’ ಎಂದು ಸೂಚಿಸಿದೆ.

ಹಾಳೆಗೆ ಉಬ್ಬು ಬರಿಸುವುದು ಯಾಂತ್ರಿಕ ಕೆಲಸ. ಇದಕ್ಕಾಗಿ ಇವರು ಲೋಹದ ಡೈ (ಪಡಿಯಚ್ಚು) ಮಾಡಿಕೊಳ್ಳಬೇಕು. ಈ ಪಡಿಯಚ್ಚಿನ ತಯಾರಿಗೆ ಸಾವಿರಗಟ್ಟಲೆ ವೆಚ್ಚವಿದೆ. ಒಳ್ಳೆ ಶಾಖ ಕೊಟ್ಟು ಹಾಳೆಯನ್ನು ಒತ್ತುಯಂತ್ರದ ಮೂಲಕ ಈ ಪಡಿಯಚ್ಚಿನ ಮೇಲೆ ಒತ್ತಿದಾಗ ಉಬ್ಬುಕೃತಿ ತಯಾರಾಗುತ್ತದೆ.

ಈ ಹಾಳೆ ಕೃತಿಗಳ ಹಾಲುಬಣ್ಣ ಮಾಯದೆ ಉಳಿದೀತೇ? ಬೂಷ್ಟು ಬೆಳೆಯಬಹುದೇ? ‘ಒಳ್ಳೆ ಬೆಚ್ಚನೆ ವಾತಾವರಣದಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ’ ಎನ್ನುತ್ತಾರೆ ಇವರು. ಆದರೂ ಬಣ್ಣ ಬದಲಾಗದೆ, ಫಂಗಸ್ ಬೆಳೆಯದೆ ಇರಲು ಸ್ವಲ್ಪ ಆರೈಕೆ ಬೇಕಾದೀತು.

ಈ ಆಲೋಚನೆಗೆ ಎಂ.ಡಿ. ಮ್ಯಾಥ್ಯೂ ಅವರನ್ನು ಅಭಿನಂದಿಸಲೇಬೇಕು. ‘ಲಾವಂಚದ್ದು ಈಗ ಸಾಕಷ್ಟು ಐಟಂ ಹೊರಗೆ ಬಂತು. ಕೆಲವರು ಇದನ್ನು ಕಾಪಿ ಮಾಡುತ್ತಾರೆ. ಅಂತೂ ಈ ಕೆಲಸ ಇನ್ನು ಮುಂದೆ ಹೋಗುತ್ತಲೇ ಇದ್ದೀತು. ಹಾಗಾಗಿ ಹೊಸ ಕಚ್ಚಾವಸ್ತುವಿಗೆ ಕೈ ಹಾಕಿದೆ. ಸುಲಭ ಲಭ್ಯವಾದ ಸ್ಥಳೀಯ ವಸ್ತುಗಳನ್ನು ನಾವು ಹೀಗೆ ಮೌಲ್ಯ ವರ್ಧನೆಗೆ ಬಳಸಬೇಕು. ಹೊಸ ರೂಪ ಕೊಟ್ಟು ಹೊರತಂದರೆ ಅದೇ ಕಚ್ಚಾವಸ್ತುವಿನ ಬೆಲೆ ಹೇಗೆ ಹೆಚ್ಚುತ್ತದೆ ನೋಡಿ’ ಎನ್ನುತ್ತಾರೆ ಅವರು.

ಲಾವಂಚದ ಕರಕುಶಲ ವಸ್ತು ತಯಾರಕರಿಗೆ ಈಗ ಹಾಳೆ ಅತ್ಯಗತ್ಯ. ಗಣೇಶ ಅಥವಾ ಇನ್ನಿತರ ಕೃತಿ ತಯಾರಿಸುವಾಗ ಅದಕ್ಕೆ ಒಳಗಿನಿಂದ ರೂಪ, ದೃಢತೆ ಕೊಡಲು ಹಾಳೆಯ ಬನಿಯನ್ ಹಾಕುತ್ತಿದ್ದಾರೆ. ಎರಡು ವರ್ಷಗಳಿಂದೀಚೆಗಿನ ಬೆಳವಣಿಗೆ ಇದು.

‘ಹಿಂದೆ ಒಳಗೆ ಬಟ್ಟೆಯನ್ನು ಫಿಲ್ಲಿಂಗ್ ಮೆಟೀರಿಯಲ್ ಆಗಿ ಬಳಸುತ್ತಿದ್ದೆವು. ಈಗ ಹಾಳೆ ಬನೀನು ತೊಡಿಸೋದ್ರಿಂದ, ಗಣಪನಂತಹ ಕಲಾಕೃತಿಗಳ ಗುಣಮಟ್ಟ ಸುಧಾರಿಸಿದೆ. ಉತ್ಪಾದನೆ ಮೂರು ಪಟ್ಟು ವೇಗದಲ್ಲಿ ಆಗುತ್ತದೆ. ಒಂದು ಹಾಳೆಗೆ ಎರಡು ರೂಪಾಯಿ ಕೊಟ್ಟು ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ
ಬೆಂಗ್ರೆ ಮಾವಿನಕಟ್ಟೆಯ ಅನ್ನಪೂರ್ಣ ಹ್ಯಾಂಡಿಕ್ರಾಫ್ಟಿನ ದಿನೇಶ್ ದೇವಾಡಿಗ.

ಸಂಪರ್ಕಕ್ಕೆ: ಉಶೀರ ಇಂಡಸ್ಟ್ರೀಸ್– (08385) 260745 ; 94486 29439.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.