ADVERTISEMENT

ಆಹಾ, ಮೈಸೂರ್‌ ಪಾಕ್‌...

ಗಣೇಶ ಅಮಿನಗಡ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
ಆಹಾ, ಮೈಸೂರ್‌ ಪಾಕ್‌...
ಆಹಾ, ಮೈಸೂರ್‌ ಪಾಕ್‌...   

ಮೈಸೂರಿಗೆ ಬಂದವರೆಲ್ಲ ‘ಮೈಸೂರು ಪಾಕ್‌’ ರುಚಿ ನೋಡದೆ ಹೋದವರಿಲ್ಲ. ಹಾಗೆ ಹೋಗುವಾಗ ಕಿಲೋಗಟ್ಟಲೆ ಕೊಂಡು ಹೋಗದವರು ಅಪರೂಪ.

ರಾಜ್ಯದಾದ್ಯಂತ ಎಲ್ಲ ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಸಿಗುವ, ಮದುವೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮೈಸೂರು ಪಾಕ್‌ನ ಅಸಲಿ ರುಚಿ ಸಿಗುವುದು ಮೈಸೂರಿನಲ್ಲಿಯೇ. ಹೀಗೆ ಅಪರೂಪದ, ಅನನ್ಯವಾದ ಮೈಸೂರು ಪಾಕ್ ಇತಿಹಾಸ ಕುತೂಹಲಕಾರಿಯಾಗಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಹತ್ತಿರ ಪಾಕತಜ್ಞರಾದ ಕಾಕಾಸುರ ಮಾರಪ್ಪ ಅವರು ಆಹಾರ ವಿಭಾಗದಲ್ಲಿದ್ದರು. ಅದೊಂದು ದಿನ ಒಡೆಯರ್ ಅವರು ವಿಶೇಷವಾದ ತಿಂಡಿ ಮಾಡಲು ಹೇಳಿದರು. ಆಗ ಸಿದ್ಧಪಡಿಸಿದ ಸಿಹಿತಿಂಡಿಗೆ ‘ಮೈಸೂರು ಪಾಕ್‌’ ಎಂದೇ ಒಡೆಯರ್‌ ಹೆಸರಿಟ್ಟರು.

ಆಮೇಲೆ ಕಾಕಾಸುರ ಮಾರಪ್ಪ ಹಾಗೂ ಅವರ ಪುತ್ರ ಬಸವಣ್ಣ ಅವರು ಅಶೋಕ ರಸ್ತೆಯಲ್ಲಿ ‘ದೇಶಿಕೇಂದ್ರ ಸ್ವೀಟ್ ಮಾರ್ಟ್’ ಎನ್ನುವ ಅಂಗಡಿ ತೆರೆದರು. ನಂತರ ಆ ಸಿಹಿ ತಿನಿಸಿನ ಅಂಗಡಿ ದೇವರಾಜ ಮಾರುಕಟ್ಟೆಗೆ 1957ರಲ್ಲಿ ಸ್ಥಳಾಂತರಗೊಂಡಿತು. ಬಸವಣ್ಣ ಅವರು ಗುರು ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾಗಿದ್ದುದರಿಂದ ‘ಗುರು ಸ್ವೀಟ್‌ ಮಾರ್ಟ್’ ಎಂದು ಪುನರ್ ನಾಮಕರಣ ಮಾಡಿದರು.

ಅವರಿಗೆ ವಯಸ್ಸಾದ ಮೇಲೆ ಅಂಗಡಿಯನ್ನು ಬಸವಣ್ಣ ಅವರ ಅಳಿಯಂದಿರಾದ ಪುಟ್ಟನಂಜಪ್ಪ ಹಾಗೂ ಸಂಗರಾಜು ಅವರು ಮುನ್ನಡೆ ಸಿದರು. ಈಗ ಸಂಗರಾಜು ಮಕ್ಕಳಾದ ಕುಮಾರ್, ನಟರಾಜ್ ಹಾಗೂ ಶಿವಾನಂದ್‌ ಅಂಗಡಿಯ ಉಸ್ತುವಾರಿ ಹೊತ್ತು ಮುನ್ನಡೆ ಸುತ್ತಿದ್ದಾರೆ.
 
ಸಾಂಸ್ಕೃತಿಕ ನಗರಿ ಎಂದೇ ಹೆಸರಾಗಿರುವ ಮೈಸೂರಿನಲ್ಲಿ ಬೃಹತ್‌ ಗಡಿಯಾರಗಳನ್ನು ತಲೆಯ ಮೇಲೆ ಹೊತ್ತುಕೊಂಡಿರುವ ಎರಡು ಬೃಹತ್‌ ಗೋಪುರಗಳಿವೆ. ಅವುಗಳ ಆಕಾರವನ್ನು ಗಮನಿಸಿ ಮೈಸೂರಿನ ಜನರು ಒಂದಕ್ಕೆ ದೊಡ್ಡ ಗಡಿಯಾರ ಎಂದೂ, ಇನ್ನೊಂದಕ್ಕೆ ಚಿಕ್ಕ ಗಡಿಯಾರ ಎಂದೂ ಕರೆಯುತ್ತಾರೆ. ದೇವರಾಜ ಮಾರುಕಟ್ಟೆ ಕಟ್ಟಡದ ಮೂಲೆ ಅಂಗಡಿ ಮಳಿಗೆಯಲ್ಲಿ, ಚಿಕ್ಕಗಡಿಯಾರದ ಎಡಬದಿಗೆ ಕಾಣುವಂತೆ ‘ಗುರು ಸ್ವೀಟ್‌ ಮಾರ್ಟ್‌’ ನೆಲೆಗೊಂಡಿದೆ. ಸಿಹಿ ತಿನಿಸುಗಳ ಪರಿಮಳದಿಂದಲೇ ಅಲ್ಲಿ ಓಡಾಡುವವರೆಲ್ಲರ ಮೂಗು ಅರಳುವಂತೆ, ಬಾಯಲ್ಲಿ  ನೀರೂರುವಂತೆ ಮಾಡುತ್ತದೆ.

ಬೆಳಿಗ್ಗೆ ಏಳೂವರೆಗೆಲ್ಲಾ ಬಾಗಿಲು ತೆರೆದು ವ್ಯಾಪಾರ ಶುರುವಿಡುವ ಈ ಸಿಹಿ ತಿನಿಸಿನ ಅಂಗಡಿ, ರಾತ್ರಿ ಒಂಬತ್ತೂವರೆಯವರೆಗೂ ತೆರೆದಿರುತ್ತದೆ. ಪೇಡ, ಜಿಲೇಬಿ, ಲಾಡು ಎಂದು ಹತ್ತಾರು ಸಿಹಿ ತಿನಿಸುಗಳನ್ನು ಮಾರುತ್ತಿದರೂ, ಈ ಮಳಿಗೆಯಲ್ಲಿ ಮುಖ್ಯವಾಗಿ ಮಾರಾಟವಾಗುವುದು ಮೈಸೂರು ಪಾಕ್. ಇಲ್ಲಿ ವಿಶೇಷವಾಗಿ ಮೈಸೂರು ಪಾಕ್‌ ಬಿಸಿ ಬಿಸಿಯಾಗಿಯೇ ಮಾರಾಟವಾಗುತ್ತದೆ.

ಕಡ್ಲೆ ಹಿಟ್ಟು, ಬೆಣ್ಣೆ ಕಾಯಿಸಿದ ತುಪ್ಪ, ಸಕ್ಕರೆ ಹಾಗೂ ಅರಿಶಿಣ ಸೇರಿಸಿದ ಮೈಸೂರು ಪಾಕನ್ನು ಸಿದ್ಧಗೊಳಿಸುವುದು ಮಾಲೀಕರ ಮನೆಯ ಹಿಂದೆಯೇ ಇರುವ ಪಾಕಶಾಲೆಯಲ್ಲಿಯೆ. ಕಲ್ಲಿದ್ದಲಿನ ಒಲೆ ಮೇಲೆ ಮೈಸೂರ್ ಪಾಕ್‌ ತಯಾರಿಸುವುದರಿಂದ ರುಚಿ ಹೆಚ್ಚು. ಕಲ್ಲಿದ್ದಲಿನ ಬೆಂಕಿಯ ಕಾವು ಹೆಚ್ಚು ಹೊತ್ತು ಇರುತ್ತದೆ ಎನ್ನುವ ಕಾರಣಕ್ಕೆ ಸಿಲಿಂಡರ್, ಕಟ್ಟಿಗೆ ಒಲೆ ಬಳಸುತ್ತಿಲ್ಲ. ಕುಮಾರ್, ನಟರಾಜ್ ಹಾಗೂ ಶಿವಾನಂದ್‌ ಅವರು ಒಂದೇ ಮನೆಯಲ್ಲಿ ವಾಸಿಸುವುದರಿಂದ ವಹಿವಾಟು ನೋಡಿಕೊಳ್ಳಲು ಸುಲಭವಾಗಿದೆ.

‘ನಿತ್ಯ ಬೆಳಿಗ್ಗೆ ಏಳೂವರೆಯಿಂದ ಮೈಸೂರು ಪಾಕ್ ಸಿದ್ಧಗೊಳಿಸುವುದು ಶುರುವಾದರೆ ಸಂಜೆ ಐದೂವರೆವರೆಗೂ ಮುಂದುವರಿಯುತ್ತದೆ’ ಎನ್ನುತ್ತಾರೆ ಕುಮಾರ್‌. ಇವರು ಮೂವರು ಸೋದರರಲ್ಲಿ ಹಿರಿಯರು. 

ನಿತ್ಯ ಒಬ್ಬರು ಪಾಕಶಾಲೆ ನೋಡಿಕೊಂಡರೆ, ಇನ್ನೊಬ್ಬರು ಅಂಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮತ್ತೊಬ್ಬರು ಅಂಗಡಿ ಇಲ್ಲವೇ ಪಾಕಶಾಲೆ ನೋಡಿಕೊಳ್ಳಲು ಸಿದ್ಧರಾಗುತ್ತಾರೆ. ಪಾಳಿಯಂತೆ ಪ್ರತಿ ಆರು ಗಂಟೆಗೊಮ್ಮೆ ತಲಾ ಒಬ್ಬರು ಅಂಗಡಿಯಲ್ಲಿ ಕುಳಿತು ವಹಿವಾಟು ನೋಡಿಕೊಳ್ಳುತ್ತಾರೆ.

‘ವಿಶೇಷ ಮೈಸೂರು ಪಾಕ್ ಕೆ.ಜಿ.ಗೆ ₨340. ಸಾಮಾನ್ಯ ಮೈಸೂರ್‌ ಪಾಕ್‌ ₨240. ಈ ದರ ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸ ವಾಗುತ್ತದೆ. ಆದರೆ, ತಮಗೆ ಇಷ್ಟವಾದುದನ್ನು ಬೇಕಾದ ಅಂಗಡಿಯಲ್ಲಿಯೇ ಕೊಳ್ಳುವ ಗ್ರಾಹಕರೂ ಇದ್ದಾರೆ. ಬೆಳಿಗ್ಗೆಯಿಂದ ಎಷ್ಟು ಕೆ.ಜಿ ಮೈಸೂರ್‌ ಪಾಕ್ ಮಾಡಬೇಕೆಂಬ ನಿಯಮವೇನೂ ಇಲ್ಲ. ಅಂಗಡಿಯಲ್ಲಿ ಖಾಲಿಯಾಗುತ್ತಿದೆ ಎನ್ನುವಾಗಲೇ ಪಾಕಶಾಲೆಯಲ್ಲಿ ಸಿದ್ಧಗೊಳ್ಳುತ್ತಾ ಇರುತ್ತದೆ. 15 ಕಾರ್ಮಿಕರು ಪಾಳಿಯಲ್ಲಿ ಸಿಹಿತಿಂಡಿಗಳನ್ನು ಸಿದ್ಧಗೊಳಿಸುತ್ತಾರೆ. ಅದರಲ್ಲಿ ಮೈಸೂರು ಪಾಕ್‌ಗೇ ಹೆಚ್ಚು ಆದ್ಯತೆ. ನಮ್ಮ ತಾತ ಬಸವಣ್ಣ ಅವರು ಕಡಿಮೆ ಪ್ರಮಾಣದಲ್ಲಿಯೇ ಮೈಸೂರ್‌ ಪಾಕ್‌ ತಯಾರಿಸಿ ಮಾರಾಟ ಮಾಡುತ್ತಾ ಹೆಚ್ಚು ಬೇಡಿಕೆ ಸೃಷ್ಟಿಯಾಗುವಂತೆ ಮಾಡಿ ಹೆಸರು ಗಳಿಸಿದ್ದರು. ಆದರೆ, ಈಗಿನದು ತೀವ್ರ ಸ್ಪರ್ಧೆಯ ಯುಗ. ಅವರ ಕಾಲದ ಹಾಗೆ ಮಾಡಲಾಗದು.

ಹೆಚ್ಚಿನ ಪ್ರಮಾಣದಲ್ಲಿ ಮೈಸೂರ್‌ ಪಾಕ್‌ ಸಿದ್ಧಗೊಳಿಸಿದರೂ ಗುಣಮಟ್ಟದಲ್ಲೇನೂ ರಾಜಿ ಮಾಡಿಕೊಂಡಿಲ್ಲ. ಮುಖ್ಯವಾಗಿ ಆಯಾ ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಯಾರಿಸುತ್ತೇವೆ’ ಎಂದು ಸ್ಪಷ್ಟಪಡಿಸುತ್ತಾರೆ ಶಿವಾನಂದ್.

ಹೀಗೆ ವರ್ಷದುದ್ದಕ್ಕೂ ಮೈಸೂರು ಪಾಕ್‌ ಮಾರುವ ಅವರಿಗೆ ಬೇಡಿಕೆ ಹೆಚ್ಚಾಗಿ ಇರುವುದು ದಸರಾ ಹಾಗೂ ಬೇಸಿಗೆ ರಜೆ ಸಮಯಗಳಲ್ಲಿ. ಆದರೆ, ಅವರು ದಿನಕ್ಕೆ ಎಷ್ಟು ಕಿಲೋ ಮಾರಾಟವಾಗುತ್ತದೆ, ವಹಿವಾಟು ಎಷ್ಟು ಎನ್ನುವ ಗುಟ್ಟನ್ನು ಬಿಟ್ಟುಕೊಡುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.