ADVERTISEMENT

ಎಲ್ಲಿ ಹೋದವೋ ಸುಗ್ಗಿಯ ಆ ದಿನಗಳು...

ಎಸ್‌.ಸುರೇಶ್‌
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಎಲ್ಲಿ ಹೋದವೋ ಸುಗ್ಗಿಯ ಆ ದಿನಗಳು...
ಎಲ್ಲಿ ಹೋದವೋ ಸುಗ್ಗಿಯ ಆ ದಿನಗಳು...   

ಈ ಹಿಂದೆ ಸುಗ್ಗಿ ಎಂದಾಕ್ಷಣ ಸೆಗಣಿಯಿಂದ ಸಾರಿಸಿದ ಒಕ್ಕಲು ಕಣ, ಐದಾರು ಮಾರು ಉದ್ದದ ಬಣವೆ, ಬಣವೆ ಸಂದಿಯಲ್ಲಿ ಮಕ್ಕಳ ಕಣ್ಣಾಮುಚ್ಚಾಲೆ ಆಟ, ಕಣದಲ್ಲಿರುವ ಹುಲ್ಲಿನ ಮೇಲೆ ಪಲ್ಟಿ ಒಡೆಯುವ ಆಟ, ರೋಣಗಲ್ಲು, ಎತ್ತು, ಹಸು, ಕೋಣ, ಮೆರೆ, ಹಲುವೆ, ಗ್ವಾರೆ, ಉತ್ತ್ರಾಣೆಬರ್ಲು, ಮುಳ್ಬರ್ಲು, ವನ್ನೆ, ಗೂಡೆ, ಜಲ್ಲೆ, ಕೈಯಲುವೆ, ಮರ(ದವಸ ಶುದ್ಧೀಕರಿಸುವ ಸಾಧನ) ಕಣ್ಣಿಗೆ ಕಟ್ಟುತ್ತಿದ್ದ ಸುಗ್ಗಿ ಸಾಮಗ್ರಿಗಳು.

ಆದರೆ ಈ ಬಾರಿ ಭೀಕರ ಬರಗಾಲದಿಂದ ರಾಜ್ಯದ ಹಲವೆಡೆ ಸುಗ್ಗಿ ಕಣದಲ್ಲಿ ಈ ಹಿಂದೆ ಬಳಸುತ್ತಿದ್ದ ಸುಗ್ಗಿಯ ಹಲವು ಸಾಮಗ್ರಿಗಳಿಲ್ಲದೇ ರೈತರು ಸುಗ್ಗಿ ಮಾಡುತ್ತಿರುವುದನ್ನು ನೋಡಿದರೆ ನಮ್ಮ ಪೂರ್ವಜರ ಕಾಲದ ಸುಗ್ಗಿ ಸಂಸ್ಕೃತಿ ಕಣ್ಮರೆಯಾಗುತ್ತಿದೆಯೋ ಎಂಬ ಆತಂಕ ಎದುರಾಗಿದೆ.

ಒಂದು ದಶಕದ ಹಿಂದೆ ಗ್ರಾಮಗಳಲ್ಲಿ ಸುಗ್ಗಿ ಕಾರ್ಯ ಸುಮಾರು ಎರಡು ತಿಂಗಳ ಕಾಲ ನಡೆಯುತ್ತಿತ್ತು. ಸುಗ್ಗಿ ಕಾರ್ಯಕ್ಕೆ ಬೇಕಾದ ಸಾಮಗ್ರಿ ಜೋಡಿಸುವಲ್ಲಿ ಒಂದು ತಿಂಗಳ ಮುಂಚೆಯೇ ಅನ್ನದಾತರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹಿಂಗಾರು ಹಂಗಾಮಿನ ವಿವಿಧ ಬೆಳೆಗಳು ಕಟಾವು ಆಗುತ್ತಿದ್ದಂತೆ ಹೊಲದಲ್ಲಿಯೇ ಬಣವೆ ಒಟ್ಟುತ್ತಿದ್ದರು.

ನಂತರ ಗುದ್ದಲಿ, ಸಲಿಕೆ, ಮಚ್ಚು, ಕೊಡಲಿ, ಕುಡುಗೋಲು ಬಳಸಿ  ಸುಗ್ಗಿಕಣದಲ್ಲಿ ಬೆಳೆದಿದ್ದ ಕಾಡು ಜಾತಿಯ ಗಿಡ, ಹಸಿ ಹುಲ್ಲು ಹಾಗೂ ಮುಳ್ಳನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದರು. ನಂತರ ಸುಗ್ಗಿಕಣ ಶುಭ್ರಗೊಳಿಸಲು ಒಂದು ವಾರದಿಂದ ಹಸು, ಎತ್ತು, ಎಮ್ಮೆ ಸೆಗಣಿ ಸಂಗ್ರಹಿಸುತ್ತಿದ್ದರು.

ಸಾಕಾಗುವಷ್ಟು ಸೆಗಣಿ ಸಂಗ್ರಹಿಸಿದ ನಂತರ ಸುಗ್ಗಿಕಣ ಸಾರಿಸುತ್ತಿದ್ದರು. ಇಬ್ಬರು ಕಣ ಸಾರಿಸುವವರಾದರೆ ಸುಮಾರು ಐದಾರು ಮಂದಿ ಸಮೀಪದ ಹಳ್ಳದಿಂದ ಕೊಡದಲ್ಲಿ ನೀರು ತಂದುಕೊಡುತ್ತಿದ್ದರು. ಒಂದು ಗ್ರಾಮದಲ್ಲಿ 300 ಮಂದಿ ರೈತರಿದ್ದರೆ 200ಕ್ಕೂ ಅಧಿಕ ಸುಗ್ಗಿಕಣಗಳು ಸಿದ್ಧವಾಗುತ್ತಿದ್ದವು.

ಸುಗ್ಗಿಕಣ ಸಿದ್ಧವಾದ ನಂತರ ಒಕ್ಕಲು ಮಾಡುವ ದವಸದ ಹುಲ್ಲನ್ನು ಎತ್ತಿನ ಗಾಡಿಯಲ್ಲಿಯೇ ತುಂಬಿಕೊಂಡು ಸುಗ್ಗಿ ಕಣಕ್ಕೆ ತಂದು ಮತ್ತೆ ಬಣವೆ ಒಟ್ಟುತ್ತಿದ್ದರು. ಈ ಬಣವೆಗಳು ಸುಮಾರು ಇಪ್ಪತ್ತು ದಿನ ಸುಗ್ಗಿ ಕಣದಲ್ಲಿ ಇರುತ್ತಿದ್ದವು. ಹೊಲದಿಂದ ಒಕ್ಕಲು ಮಾಡುವ ಹುಲ್ಲನ್ನು ಸುಗ್ಗಿ ಕಣಕ್ಕೆ ತರುವ ಒಂದು ತಿಂಗಳು ಮುಂಚೆಯೇ ರೈತರು ಕುಲುಮೆಯವರ ಹತ್ತಿರ ಎತ್ತಿನ ಬಂಡಿಯ ಚಕ್ರದ ಅಳಿ ಕಟ್ಟಿಸಿ ಹೊಸ ಬಣ್ಣ ಬಳಿಯುತ್ತಿದ್ದರು.

ADVERTISEMENT

ಹಾಗೆಯೇ ದೂರದ ಹೊಲಗಳಿಂದ ಸುವ್ಯವಸ್ಥಿತವಾಗಿ ಹುಲ್ಲನ್ನು ಗಾಡಿಯಲ್ಲಿ ತುಂಬಿಕೊಂಡು ಬರಲು ಅನುಕೂಲ ಆಗುವಂತೆ ಬಂಕ, ಖಣಿಗೆ ಜೋಡಿಸುತ್ತಿದ್ದರು. ಬಂಡಿಗೆ ಬಳಸುವ ಎತ್ತು, ಹಸು ಅಥವಾ ಕೋಣಗಳ ಕೊಂಬಿಗೂ ಬಣ್ಣ ಹಚ್ಚಿ, ಗೆಜ್ಜೆ ಹಾಕಲಾಗುತ್ತಿತ್ತು.

ಜಾನುವಾರು ಮೈಮೇಲೆ ಅಲಂಕೃತ ಬಟ್ಟೆ ಹಾಕಿ ಗಾಡಿಗೆ ಬಳಸಲಾಗುತ್ತಿತ್ತು. ಆಗ ಗೆಜ್ಜೆಯ ಶಬ್ದ ಊರೆಲ್ಲಾ ಕೇಳಿಸುತ್ತಿತ್ತು. ಇದರಿಂದ ಸುಗ್ಗಿ ಕಾರ್ಯ ಮುಗಿಯುವವರೆಗೂ ಒಂದು ರೀತಿ ಸುಗ್ಗಿ ಹಬ್ಬದ ಸಂಭ್ರಮವಿರುತ್ತಿತ್ತು. ಎತ್ತಿನ ಗೆಜ್ಜೆ ಶಬ್ದಕ್ಕೆ ಚಿಕ್ಕ ಮಕ್ಕಳು ಎತ್ತಿನ ಬಂಡಿ ಬಳಿಗೆ ಓಡಿ ಬರುತ್ತಿದ್ದರು.

ಸರದಿಯಂತೆ ಒಬ್ಬರ ನಂತರ ಮತ್ತೊಬ್ಬ ರೈತರು ತಾವು ಬೆಳೆದ ದವಸದ ಒಕ್ಕಲನ್ನು ರೋಣಗಲ್ಲು ಹಾಗೂ ಜಾನುವಾರು ಬಳಸಿ ಮಾಡುತ್ತಿದ್ದರು. ಕಾರಣ ಒಬ್ಬ ರೈತನ ಸುಗ್ಗಿ ಕಾರ್ಯಕ್ಕೆ ಮತ್ತೊಬ್ಬ ರೈತ ತನ್ನ ಎತ್ತು ಅಥವಾ ಹಸು, ರೋಣಗಲ್ಲು ಸಹಿತ ಹೋಗುತ್ತಿದ್ದರು. ರೋಣಗಲ್ಲಿನಿಂದ ಒಕ್ಕಲು ಮಾಡಿದ ಒಣಹುಲ್ಲು ಶುಚಿಯಾಗಿ ಇರುತ್ತಿತ್ತು. ಜಾನುವಾರು ವರ್ಷವಿಡೀ ಆ ಹುಲ್ಲನ್ನು ಒಂದು ಕಡ್ಡಿ ಬಿಡದಂತೆ ತಿನ್ನುತ್ತಿದ್ದವು.

ವಿವಿಧ ಬೆಳೆಯ ಒಕ್ಕಲು ಮಾಡಿದ ನಂತರ ದವಸದ ರಾಶಿ ಹಾಕುತ್ತಿದ್ದರು. ಸುಗ್ಗಿ ಕಾರ್ಯಕ್ಕೆ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ಶುದ್ಧೀಕರಿಸಿ, ಅವುಗಳಿಗೆ ಅರಿಶಿಣ–ಕುಂಕುಮ ಹಚ್ಚಿ, ಮಾವಿನ ಸೊಪ್ಪು, ಬಾಳೆಕಂದು ಹಾಗೂ ಅಗ್ನೂಲ್ದಾರ ಕಟ್ಟಿ ಶ್ರದ್ಧಾಭಕ್ತಿಯಿಂದ ಸುಗ್ಗಿ ಕಣದಲ್ಲಿ ರಾಶಿಪೂಜೆ ಮಾಡುತ್ತಿದ್ದರು.

ಈ ಪೂಜಾ ಕಾರ್ಯಕ್ಕೆ ಮುತ್ತೈದೆಯರು, ದಾಸಯ್ಯ(ದಾಸಪ್ಪ) ಅವರು ವಿಶೇಷ ಪಾತ್ರ ವಹಿಸುತ್ತಿದ್ದರು. ಜಾಗಟೆ ಹಾಗೂ ಭವನಾಷಿ ಶಬ್ಧ ಗಮನ ಸೆಳೆಯುತ್ತಿತ್ತು. ರಾಶಿಪೂಜೆ ಬಳಿಕ ಮೊದಲು ಗುರುವಿಗೆ ಒಂದಷ್ಟು ದವಸವನ್ನು ಧಾನ ಮಾಡುತ್ತಿದ್ದರು. ನಂತರ ಶ್ರಮಿಕರಿಗೆ ಶಕ್ತ್ಯಾನುಸಾರ ಒಂದಷ್ಟು ದವಸ ಧಾನ ನೀಡಿ ಉಳಿದ ದವಸವನ್ನು ಮನೆಯಲ್ಲಿ ಸಂಗ್ರಹಿಸುತ್ತಿದ್ದರು.

ಆದರೆ ಕಳೆದ ವರ್ಷ ರಾಜ್ಯದ ವಿವಿಧೆಡೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷಿ ಕೆಲಸ ಇಳಿಮುಖವಾಗಿದೆ. ಮಳೆ ಅಭಾವದಿಂದ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದ ರಾಗಿ, ಸಾವೆ, ಹುರುಳಿ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿದವು. ಮೇವಿನ ಸಮಸ್ಯೆ ಇರುವೆಡೆ ಕುರಿ, ಮೇಕೆ, ಹಸು, ಎತ್ತುಗಳನ್ನು ಕೂಡಿ ಒಣಗುವ ಸ್ಥಿತಿಯಲ್ಲಿದ್ದ ಬೆಳೆ ಮೇಯಿಸಿದರು.

ಇನ್ನೂ ಕೆಲವೆಡೆ ಅಲ್ಪಸ್ವಲ್ಪ ಮಳೆಗೆ ಬೆಳೆ ಇಳುವರಿಯೂ ಕಡಿಮೆಯಾಗಿತ್ತು. ಐದಾರು ಟ್ರ್ಯಾಕ್ಟರ್‌ ಲೋಡ್‌ ರಾಗಿ ಹುಲ್ಲು ಬೆಳೆಯುತ್ತಿದ್ದ ರೈತರಿಗೆ ಎರಡು ಟ್ಯಾಕ್ಟರ್‌ ಹುಲ್ಲಾಗಿದೆ. ಇದೇ ರೀತಿಯಲ್ಲಿ ಬೇರೆ ಬೆಳೆಯೂ ಕಡಿಮೆ ಆಗಿರುವುದರಿಂದ ರೈತರು ಹೊಲದಿಂದ ತಂದ ರಾಗಿ ಹುಲ್ಲನ್ನು ಬಣವೆ ಒಟ್ಟದೇ ಟ್ರ್ಯಾಕ್ಟ್‌ರ್‌ನಿಂದಲೇ ಒಕ್ಕಲು ಮಾಡುತ್ತಿದ್ದಾರೆ. ಮೇವು ಹಾಗೂ ನೀರಿನ ಸಮಸ್ಯೆಯಿಂದ ಹಲವು ರೈತರು ಜಾನುವಾರು ಮಾರಾಟ ಮಾಡಿದ್ದಾರೆ. ಸುಗ್ಗಿಕಣ ಬಳಿಯಲು (ಸಾರಿಸಲು) ಕೆಲವೆಡೆ ಹಸಿ ಸೆಗಣಿಗೂ ರೈತರು ಪರದಾಡುವಂತಾಗಿದೆ.

ಇದರಿಂದಾಗಿ ಈ ಹಿಂದೆ ರೈತರು ಮಾಡುತ್ತಿದ್ದ ರೀತಿಯಲ್ಲಿ ಸುಗ್ಗಿಕಣದ ಸಿದ್ಧತೆ ಮಾಡುತ್ತಿಲ್ಲ. ಮಾಡಿದರೂ ಸಿದ್ಧಗೊಂಡ ಹತ್ತು ಕಣದಲ್ಲಿ ಸುಮಾರು 100ಮಂದಿ ರೈತರು ಒಕ್ಕಲು ಮಾಡುತ್ತಿದ್ದಾರೆ.

ಕಣದಲ್ಲಿ ಒಟ್ಟುತ್ತಿದ್ದ ಐದಾರು ಮಾರು ಉದ್ದದ ರಾಗಿ ಬಣವೆಗಳು, ಬಣವೆಗಳ ಸಂದಿಯಲ್ಲಿ ಮಕ್ಕಳು ಆಡುತ್ತಿದ್ದ ಹಾಗೂ ಕಣದಲ್ಲಿ ಹರಡಿದ್ದ ಸಾವೆ, ನವಣೆ ಹುಲ್ಲಿನ ಮೇಲೆ ಪಲ್ಟಿ ಒಡೆಯುತ್ತಿದ್ದ ಆಟಗಳು, ಹಾಗೆಯೇ ಆಧುನಿಕತೆಯ ಭರಾಟೆಯಲ್ಲಿ ಸುಗ್ಗಿಕಣದ ಬದಲಿಗೆ ರಸ್ತೆ, ರೋಣಗಲ್ಲಿನ ಬದಲಿಗೆ ಟ್ರ್ಯಾಕ್ಟರ್‌ ಹಾಗೂ ಒಕ್ಕಲು ಮಾಡಿದ ದವಸವನ್ನು ಮಹಿಳೆಯರು ತೂರುತ್ತಿದ್ದ ಮರದ (ದವಸ ಶುಚಿಗೊಳಿಸುವ ಸಾಧನ) ಬದಲಿಗೆ ದವಸ ಶುಚಿಗೊಳಿಸುವ ಯಂತ್ರ ಬಳಸಿ ಒಕ್ಕಲು ಮಾಡುತ್ತಿದ್ದಾರೆ. ಟ್ರ್ಯಾಕ್ಟರ್‌ನಿಂದ ಒಕ್ಕಲು ಮಾಡಿದ ಒಣಹುಲ್ಲನ್ನು ಜಾನುವಾರು ಸರಿಯಾಗಿ ತಿನ್ನುತ್ತಿಲ್ಲ.

ಕಳೆದ ಸುಮಾರು ಒಂದು ದಶಕದಿಂದ ರಾಜ್ಯದ ಹಲವೆಡೆ ನಡೆದಿರುವ ತೋಟಗಾರಿಕೆ ಬೆಳೆಯ ಕ್ರಾಂತಿಯಿಂದ ಒಂದೆಡೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುತ್ತಿದ್ದ ಪ್ರದೇಶ ಸುಮಾರು ಶೇ 30ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ ಈ ಬಾರಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ಬಹಳಷ್ಟು ಬಿತ್ತನೆ ಪ್ರದೇಶ ಮತ್ತಷ್ಟು ಕ್ಷೀಣಿಸಿದೆ.

ಸಮೃದ್ಧವಾಗಿ ಮಳೆಯಾಗುತ್ತಿದ್ದಾಗ ಸಣ್ಣ ಹಾಗೂ ಅತಿ ಸಣ್ಣ ರೈತರು ಸಹ ಸುಗ್ಗಿ ಕಣದಲ್ಲಿ ಸುಮಾರು ಐದು ಮಾರಿನ ರಾಗಿ ಹಲ್ಲಿನ ಬಣವೆ ಒಟ್ಟುತ್ತಿದ್ದರು. ಮೂರು –ನಾಲ್ಕು ಎತ್ತಿನ ಗಾಡಿ ಸಾವೆ ಹುಲ್ಲು, ಮೂರು ಗಾಡಿ ಹುರುಳಿ ಸೊಪ್ಪು ಬೆಳೆದು ಸುಮಾರು ಒಂದು ತಿಂಗಳ ಕಾಲ ಸುಗ್ಗಿ ಕಣದಲ್ಲಿ ರೈತರೆಲ್ಲರೂ ಸೇರಿ ರೋಣಗಲ್ಲು, ಎತ್ತು ಹಾಗೂ ಹಸು ಬಳಸಿ ಸಂಭ್ರಮ ಸಡಗರದಿಂದ ಸುಗ್ಗಿ ಮಾಡುತ್ತಿದ್ದರು.

ಒಕ್ಕಲು ಮಾಡಿದ ರಾಗಿಯನ್ನು ಕಣದಲ್ಲಿ ದೊಡ್ಡಗಾಬು, ಸಣ್ಣಗಾಬು ಹಾಗೂ ಮಣ್ಣಗಾಬು ಎಂದು ಮೂರು ರಾಶಿಗಳಾಗಿ (ಗುಡ್ಡೆ) ವಿಂಗಡಿಸುತ್ತಿದ್ದರು. ಬಳಿಕ ಮಹಿಳೆಯರು ಗಾಳಿಯ ಸಹಾಯದಿಂದ ಮರದಿಂದ (ದವಸ ಶುಚಿಗೊಳಿಸುವ ಸಾಧನ) ದವಸವನ್ನು ಶುಚಿ ಮಾಡುತ್ತಿದ್ದರು. ಆದರೆ ದವಸ ಶುಚಿ ಮಾಡುವ ಯಂತ್ರ ಬಂದಿರುವುದರಿಂದ ಒಕ್ಕಲು ಮಾಡಿದ ದವಸವನ್ನು ಈ ಹಿಂದೆ ಮಾಡುತ್ತಿದ್ದ ರೀತಿಯಲ್ಲಿ ಕೆಲವು ರೈತರು ಮೂರು ಗುಡ್ಡೆ ಮಾಡುತ್ತಿಲ್ಲ. ಒಂದೇ ಗುಡ್ಡೆಗೆ ರಾಶಿ ಮಾಡಿ ಯಂತ್ರದಿಂದ ಶುಚಿ ಮಾಡಿಸಿಕೊಳ್ಳುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ಸುಗ್ಗಿ ಕಣದಲ್ಲಿ ಎಷ್ಟೇ ಗಾಳಿಯ ಸಮಸ್ಯೆ ಇದ್ದರೂ ಮಹಿಳೆಯರು ಮರದ ಸಹಾಯದಿಂದಲೇ ಒಕ್ಕಲು ಮಾಡಿದ ರಾಗಿ, ಸಾವೆ, ಹುರುಳಿ ದವಸವನ್ನು ತೂರಿ ಶುಚಿಗೊಳಿಸುತ್ತಿದ್ದರು. ಗಾಳಿ ಅಭಾವವಿದ್ದರೆ ಗಾಳಿ ಬೀಸುವಂತೆ ವಾಯುದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಪ್ರಸ್ತುತ ಗ್ರಾಮಗಳಲ್ಲಿ ಒಕ್ಕಲು ಮಾಡಿದ ದವಸ ತೂರುವ ಮಹಿಳೆಯರ ಕೊರತೆ ಹೆಚ್ಚಾಗುತ್ತಿದೆ.

ತೂರುವವರು ಇದ್ದರೂ ಒಂದು ದಿನ ದವಸ ತೂರಲು ಬಂದರೆ ಎರಡರಿಂದ ಮೂರು ಮರ ರಾಗಿ ಕೂಲಿಯಾಗಿ ಕೊಡಬೇಕು. ಒಂದು ಮರಕ್ಕೆ ಆರು ಸೇರಿ ಕಟ್ಟಿದರೂ 12 ಸೇರು ರಾಗಿಯಾಗುತ್ತದೆ.

ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಸೇರು ರಾಗಿಗೆ ಸುಮಾರು ₹30 ದರವಿದೆ. 12 ಸೇರು ರಾಗಿಗೆ ₹360 ಆಗುತ್ತದೆ. ಬೆಳೆದಿರುವ ನಾಲ್ಕು ಚೀಲ ರಾಗಿಯಲ್ಲಿ ಕೂಲಿಯವರಿಗೆ ಒಂದಿಷ್ಟು ಕೊಟ್ಟರೆ ವರ್ಷವಿಡೀ ಮುದ್ದೆ ಊಟ ಮಾಡಲು ರಾಗಿ ಇರುವುದಿಲ್ಲ.

ಇದರಿಂದ ಒಕ್ಕಲು ಮಾಡಿದ ದವಸ ತೂರುವ ಯಂತ್ರದವರಿಗೆ ₹60 ಕೊಟ್ಟರೆ ಒಂದು ಚೀಲ ರಾಗಿ ಶುಚಿಯಾಗುತ್ತದೆ. ಯಂತ್ರ ಬಳಕೆಯಿಂದ ಹಣ, ಸಮಯ, ಶ್ರಮವೂ ಕಡಿಮೆಯಾಗುತ್ತದೆ. ಒಕ್ಕಲು ಮಾಡಿದ ದವಸ ಶುಚಿಗೊಳಿಸುವ ಕಾರ್ಮಿಕರನ್ನು ಹಿಡಿದು ಕರೆತರುವ ತಲೆನೋವು ಇಲ್ಲದಂತಾಗುತ್ತದೆ ಎಂಬುದು ಪ್ರಗತಿಪರ ರೈತರ ಅಭಿಪ್ರಾಯ. 

ಯಂತ್ರ ಬಳಕೆ: ಯಂತ್ರೋಪಕರಣದ ಬಳಕೆ ಹೆಚ್ಚಾದಂತೆ ಗ್ರಾಮೀಣ ಭಾಗದಲ್ಲಿದ್ದ ಕೃಷಿ ಚಟುವಟಿಕೆ ಮತ್ತು ಸುಗ್ಗಿ ವೈಭವ ಕಣ್ಮರೆಯಾಗುತ್ತಿದೆ. ಸುಗ್ಗಿ ಕಣದಲ್ಲಿ ಒಕ್ಕಲು ಮಾಡಿದ ಸುಮಾರು 10 ಚೀಲ ರಾಗಿ ಶುಚಿಗೊಳಿಸಲು ಮೂರು ಮಂದಿ ಮಹಿಳೆಯರಿಗೆ ಎರಡು ದಿನ ಬೇಕು. ಆದರೆ ಯಂತ್ರದಲ್ಲಿ ಅರ್ಧ ದಿನಕ್ಕೆ ಕೆಲಸ ಮುಗಿಯುತ್ತದೆ.

ರಾಶಿಪೂಜೆ ಕಣ್ಮರೆ: ದವಸ ಕಡಿಮೆ ಇರುವುದರಿಂದ ಈ ಹಿಂದೆ ಮಾಡುತ್ತಿದ್ದ ರಾಶಿಪೂಜೆಯನ್ನು ಕೈಬಿಟ್ಟಿದ್ದಾರೆ. ಕಾರಣ ರಾಶಿಪೂಜೆ ಮಾಡಿದರೆ ಗುರುಗಳಿಗೆ, ಶ್ರಮಿಕರಿಗೆ ಕನಿಷ್ಠ 20 ಸೇರು ರಾಗಿ ದಾನ ಮಾಡಬೇಕಾಗುತ್ತದೆ. ದಾನ ಮಾಡುವ ರಾಗಿ ಉಳಿಸಿಕೊಂಡರೆ ಒಂದು ತಿಂಗಳ ಆಹಾರಕ್ಕೆ ನೆರವಾಗುತ್ತದೆ ಎಂಬುದು ಮೂರು –ನಾಲ್ಕು ಚೀಲ ರಾಗಿ ಬೆಳೆದಿರುವ ರೈತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.