ADVERTISEMENT

ಗಂಜಾಂ ಗುಲಾಬಿ

ಗಣಂಗೂರು ನಂಜೇಗೌಡ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಶ್ರೀರಂಗಪಟ್ಟಣ ಸಮೀಪ ಕಾವೇರಿ ನದಿ ದಡದ ಗಂಜಾಂನಲ್ಲಿರುವ ಗುಲಾಬಿ ಹೂದೋಟ.
ಶ್ರೀರಂಗಪಟ್ಟಣ ಸಮೀಪ ಕಾವೇರಿ ನದಿ ದಡದ ಗಂಜಾಂನಲ್ಲಿರುವ ಗುಲಾಬಿ ಹೂದೋಟ.   

ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ‘ದರಿಯಾ ದೌಲತ್‌ ಭಾಗ್‌’ ಮತ್ತು ಆತನ ಸಮಾಧಿ ಸ್ಥಳ ‘ಗುಂಬಸ್‌ ಭಾಗ್‌’ ಈ ಎರಡೂ ಸುಂದರ ಉದ್ಯಾನಗಳ ಮಧ್ಯೆ ಗುಲಾಬಿ ಹೂಬೆಳೆಗೆ ಹೆಸರಾದ ಗಂಜಾಂ ಎಂಬ ಊರು ಚಾಚಿಕೊಂಡಿದೆ.

ಕಾವೇರಿ ನದಿಯ ದ್ವೀಪದಲ್ಲಿರುವ ಗಂಜಾಂನ ಯಾವ ದಿಕ್ಕಿಗೆ ಕಾಲಿಟ್ಟರೂ ಇಲ್ಲೊಂದು ಹೂದೋಟ ಕಾಣಸಿಗುತ್ತದೆ. ಅದರಲ್ಲೂ ‘ಪ್ರೇಮದ ಸಂಕೇತ’ವಾದ ಕೆಂಪು ಗುಲಾಬಿಗಳ ತೋಟಗಳು ಕಣ್ಮನ ತಣಿಸುತ್ತವೆ. ಗಂಜಾಂನಲ್ಲಿ 5 ದಶಕಗಳ ಹಿಂದೆ ಪ್ರಸಿದ್ಧಿಯಾಗಿದ್ದ ‘ಅಂಜೂರ’ದ ಹಣ್ಣಿನ ಸ್ಥಾನವನ್ನು ಈಚಿನ ವರ್ಷಗಳಲ್ಲಿ ಗುಲಾಬಿ ಆಕ್ರಮಿಸಿಕೊಂಡಿದೆ. ಮನೆಯ ಹಿತ್ತಲಿನಲ್ಲಿ ಎರಡಂಕಣದಷ್ಟು ಜಾಗ ಸಿಕ್ಕರೂ ಸಾಕು ಅಲ್ಲಿ ಗುಲಾಬಿ ಬೆಳೆಯಲಾಗುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಗುಲಾಬಿ ಹೂ ಬೆಳೆಗಾರರು ಇರುವುದು ಗಂಜಾಂನಲ್ಲಿ. ಇಲ್ಲಿ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಗುಲಾಬಿ ಹೂ ಬೆಳೆಯಲಾಗುತ್ತದೆ. ವರ್ಷದ ಎಲ್ಲ ದಿನವೂ ಇಲ್ಲಿ ಚೆಂಗುಲಾಬಿ ಸಿಗುತ್ತದೆ. ಮುಂಜಾನೆ ಹೂ ಕೀಳುವ, ಅದನ್ನು ವಿಂಗಡಿಸುವ, ಮಾರುಕಟ್ಟೆಗೆ ಸಾಗಿಸುವ ದೃಶ್ಯಗಳು ಗಂಜಾಂನ ಸುತ್ತಮುತ್ತ ಸಾಮಾನ್ಯ.

ತೋಟದ ತುಂಬ ಅರಳಿ ನಗೆ ಚೆಲ್ಲುವ ಗುಲಾಬಿ ಹೂಗಳನ್ನು ನೋಡುತ್ತಿದ್ದರೆ ವಿಶೇಷ ಅನುಭೂತಿ ಉಂಟಾಗುತ್ತದೆ. ಹಿಮ ಮಣಿಗಳಿಂದ ಅಲಂಕೃತವಾದ ಚೆಂಗುಲಾಬಿಯನ್ನು ನೋಡಿದರೆ ‘ಈ ಗುಲಾಬಿಯು ನಿನಗಾಗಿ... ಅದು ಚೆಲ್ಲುವ ಪರಿಮಳ ನಿನಗಾಗಿ...’ ಎಂಬ ಹಾಡು ನೆನಪಿನಾಳದಲ್ಲಿ ತನ್ನಿಂತಾನೆ ಹಾದು ಹೋಗುತ್ತದೆ.

ಗಂಜಾಂನಲ್ಲಿ ಬೆಳೆಯುವ ಕೆಂಪು, ಹಳದಿ ಇತರ ವರ್ಣದ ಗುಲಾಬಿ ಹೂಗಳನ್ನು ಸಮೀಪದ ಮೈಸೂರು, ಬೆಂಗಳೂರು ಇತರ ಕಡೆಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ. ತಾಜಾ ಗುಲಾಬಿ ಹೂ ಬಯಸುವವರು ತೋಟಕ್ಕೇ ಬಂದು ಹೂಗಳನ್ನು ಖರೀದಿಸುತ್ತಾರೆ. ದಿನವೊಂದಕ್ಕೆ ಸುಮಾರು ಒಂದು ಲಕ್ಷ ಗುಲಾಬಿ ಹೂಗಳು ಇಲ್ಲಿಂದ ವಿವಿಧ ಮಾರುಕಟ್ಟೆಗೆ ರವಾನೆಯಾಗುತ್ತವೆ.

ಚಮನ್‌ ಬಯಲು: ಆಳರಸರ ಕಾಲದಲ್ಲಿ ಗಂಜಾಂನಲ್ಲಿ ಫಲವತ್ತಾದ ಜಾಗವನ್ನು ಹೂದೋಟಕ್ಕೆಂದೇ ಮೀಸಲಿಡಲಾಗಿತ್ತು. ಗುಂಬಸ್‌ ಮತ್ತು ಕಾವೇರಿ ಸಂಗಮದ ಮಧ್ಯೆ ಇರುವ ಹತ್ತಾರು ಎಕರೆ ಸಮತಟ್ಟು ಪ್ರದೇಶದಲ್ಲಿ ಹೂಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಯದುವಂಶದ ಒಡೆಯರ್‌ ದೊರೆಗಳು ಹಾಗೂ ಹೈದರ್‌ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿ ಬಗೆಬಗೆಯ ಹೂಗಳನ್ನು ಇಲ್ಲಿ ಬೆಳೆಯುತ್ತಿದ್ದರು.

ದೇವರ ಪೂಜೆ, ಸುಗಂಧ ದ್ರವ್ಯ ಉತ್ಪಾದನೆ, ಸಿಹಿತಿನಿಸು ತಯಾರಿಕೆ ಉದ್ದೇಶದಿಂದ ಸುಗಂಧ ಸೂಸುವ, ವಿವಿಧ ವರ್ಗ ಮತ್ತು ವರ್ಣದ ಹೂಗಳನ್ನು ಬೆಳೆಯಲಾಗುತ್ತಿತ್ತು. ಹಾಗಾಗಿ ಈಗಲೂ ಈ ಬಯಲನ್ನು ‘ಚಮನ್‌ ಬಯಲು’ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ.

ಗಂಜಾಂನಲ್ಲಿ ಗುಲಾಬಿಯಿಂದ, ಬಾಯಿ ನೀರೂರಿಸುವ ರಸವತ್ತಾದ ‘ಗುಲ್ಕನ್‌’ ತಯಾರಿಸಿ ಮನೆಗಳ ಮುಂದೆಯೇ ಮಾರಾಟ ಮಾಡುತ್ತಾರೆ. ರೋಸ್‌ ಫೇಸ್‌ಪ್ಯಾಕ್‌, ರೋಸ್‌ ಡ್ರೈಲೀಫ್‌, ರೋಸ್‌ ವಾಟರ್‌, ರೋಸ್‌ ವೈನ್‌ ಇತರ ಉತ್ಪನ್ನ ತಯಾರಿಸುವ ಸಂಬಂಧ ಗುಲಾಬಿ ಬೆಳೆಗಾರರಲ್ಲಿ ಚರ್ಚೆಗಳು ಶುರುವಾಗಿವೆ.

ಗುಲಾಬಿ ಕೃಷಿ: ಗಂಜಾಂ ಮತ್ತು ಆಸುಪಾಸಿನಲ್ಲಿ ಗುಲಾಬಿ ಬೆಳೆಯುವವರು ತಮಿಳುನಾಡಿನ ಹುಸೂರಿನಿಂದ ಗಿಡಗಳನ್ನು ತಂದು ಬೆಳೆಸುತ್ತಾರೆ. ಕೆಮ್ಮಣ್ಣು, ಕೊಟ್ಟಿಗೆ ಗೊಬ್ಬರವನ್ನು ಬಳಸಿ ಹದವಾಗಿ ಮಣ್ಣನ್ನು ಸಿದ್ಧಪಡಿಸಿಕೊಂಡ ಭೂಮಿಯಲ್ಲಿ ಎರಡೂವರೆ ಅಥವಾ ಮೂರು ಅಡಿಗಳಷ್ಟು ಅಂತರದಲ್ಲಿ ಗುಲಾಬಿ ಗಿಡ ನೆಟ್ಟು ಬೆಳೆಸುತ್ತಾರೆ.

ADVERTISEMENT

ಒಮ್ಮೆ ನಾಟಿ ಮಾಡಿದ ಗಿಡ 6 ರಿಂದ 7 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಆದರೆ ವರ್ಷಕ್ಕೊಮ್ಮೆ ಕಡ್ಡಿಗಳನ್ನು ಕತ್ತರಿಸಿ ಮತ್ತೆ ಚಿಗುರಿಸಬೇಕು. ‘ಗುಚ್ಛ ಗ್ರಾಮ’ ಮಾದರಿಯಲ್ಲಿ ಗುಲಾಬಿ ಬೆಳೆಯುವವರಿಗೆ ತೋಟಗಾರಿಕೆ ಇಲಾಖೆ ಪ್ರತಿ ಎಕರೆಗೆ 20 ಸಾವಿರ ರೂಪಾಯಿವರೆಗೆ ಧನ ಸಹಾಯ ನೀಡುತ್ತದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರದೀಪ್‌ಕುಮಾರ್‌. ಸಂಪರ್ಕಕ್ಕೆ: 9480072052.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.