ADVERTISEMENT

ಜತನದಿಂದ ತೋಪು ಬೆಳೆಸುವ ಜವರಯ್ಯ!

ಗಣಂಗೂರು ನಂಜೇಗೌಡ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಜವರಯ್ಯ
ಜವರಯ್ಯ   

ಈ 70ರ ಇಳಿ ವಯಸ್ಸಿನ ಅಜ್ಜನಿಗೆ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ ಮತ್ತು ಅದರಿಂದ ಉಂಟಾಗುವ ಪರಿಣಾಮದ ಅರಿವಿಲ್ಲ. ಓಜೋನ್‌ ಪದರದಲ್ಲಿ ರಂಧ್ರಗಳು ಉಂಟಾದರೆ ಏನಾಗುತ್ತದೆ ಎಂಬ ಪರಿವೂ ಇಲ್ಲ. ಆಮ್ಲಜನಕ, ಇಂಗಾಲ ಯಾವುದೂ ಗೊತ್ತಿಲ್ಲ. ಗೊತ್ತಿರುವುದೊಂದೇ: ‘ನರ ಮನುಸನಾಗಿ ಹುಟ್ಟೀವ್ನಿ. ನಾಕು ಜನ್ರಿಗೆ ನೆರಳು ನೀಡಿದ್ರೆ, ಪಶು– ಪಕ್ಷಿಗಳ ಹೊಟ್ಟೆ ತುಂಬಿಸಿದ್ರೆ ಈ ಜಲ್ಮ ಸಾರ್ಥ್ಕ ಆಯ್ತದೆ’ ಎಂಬ ಪರೋಪಕಾರ ಬುದ್ಧಿ. ಇಂತಹ ಸೇವಾ ಮನೋಭಾವದಿಂದ ಎರಡು ನೆಡು ತೋಪುಗಳು ಎಕರೆಗಟ್ಟಲೆ ಬೆಳೆದು ನೆರಳು ಚೆಲ್ಲುತ್ತಿವೆ. ಹೂ, ಹಣ್ಣನ್ನೂ ಕೊಡುತ್ತಿವೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಡಿ ಭಾಗದ ಬಸ್ತಿಪುರ, ಕೆಆರ್‌ಎಸ್‌ ಜಲಾಶಯದ ದಡದಲ್ಲಿರುವ ಊರು. ಜಲಾಶಯಕ್ಕೆ ಮೂರು ಕಿ.ಮೀ. ದೂರದಲ್ಲಿದ್ದರೂ ‘ಸಮುದ್ರದ ನಂಟು ಉಪ್ಪಿಗೆ ಬರ’ ಎಂಬಂತೆ ಬೇಸಿಗೆ ಬಂತೆಂದರೆ ಇಲ್ಲಿ ಕುಡಿಯುವ ನೀರಿಗೆ ಇನ್ನಿಲ್ಲದ ತತ್ವಾರ. ಇಂತಿಪ್ಪ ಊರಿನಲ್ಲಿ ಜವರಯ್ಯನೆಂಬ ದಿನಗೂಲಿಯನ್ನೇ ನೆಚ್ಚಿ ಬದುಕುವ ಬಡಪಾಯಿ ಕಳೆದ 25 ವರ್ಷಗಳಿಂದ ಸದ್ದಿಲ್ಲದೆ ಮರ ಬೆಳೆಸುವ ಕಾಯಕ ಮಾಡುತ್ತಿದ್ದಾರೆ.

ಊರಿನ ಮುಂಭಾಗದ ಕಾಳಮ್ಮನ ಗುಡಿ ಆವರಣದಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲೂ ಬಗೆ ಬಗೆಯ ಗಿಡಗಳನ್ನು ನೆಟ್ಟು ಅವುಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಪಶು, ಪಕ್ಷಿಗಳಿಗಾಗಿ ಸ್ವಂತ ದುಡ್ಡಿನಿಂದ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸಿ ದಾಹ ನೀಗಿಸುತ್ತಿದ್ದಾರೆ.

ADVERTISEMENT

(ಜವರಯ್ಯ)

ಜವರಯ್ಯ ಅವರ ಆಸಕ್ತಿಯ ಫಲವಾಗಿ ಬಸ್ತಿಪುರದ ಕಾಳಮ್ಮನ ಗುಡಿ ಆವರಣದಲ್ಲಿ 14 ಆಲದ ಮರಗಳು ಬೆಳೆದಿವೆ. ಎಂಟು ಹೊಂಗೆ, ತಲಾ ನಾಲ್ಕು ನೇರಳೆ, ಸಾಗುವಾನಿ, ತಲಾ ಮೂರು ಬೇವು, ರೈನ್‌ ಟ್ರೀ, ಎರಡು ಹತ್ತಿ, ಅರಳಿ, ಬೆಟ್ಟದ ಆವರಿಕೆ, ಕರಿಗೊಬ್ಬಳಿ, ಬಸರಿ, ಬಾಗೆ, ಬರ್ಜಾಲ (ಮುಳ್ಳಿ) ಇತರ ಜಾತಿಯ ಮರಗಳು ಟಿಸಿಲೊಡೆದು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿವೆ. ನೇರಳೆ ಮತ್ತು ಹತ್ತಿ ಮರಗಳು ಸೀಸನ್‌ನಲ್ಲಿ ಹಣ್ಣು ಬಿಡುತ್ತಿದ್ದು ಬುಲ್‌ಬುಲ್‌, ಮೈನಾ ಇತರ ಪಕ್ಷಿಗಳಿಗೆ ಆಹಾರ ಒದಗಿಸುತ್ತಿವೆ.

ಗ್ರಾಮಕ್ಕೆ ಮೈಲು ದೂರ ಇರುವ ಸಾರ್ವಜನಿಕ ಸ್ಮಶಾನದಲ್ಲಿ ಕೂಡ ಜವರಯ್ಯ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. 12 ಆಲ, 5 ಬೇವು, 4 ಕತ್ತಿ ಮರ, ಎರಡು ಹೊಂಗೆ ಮಾತ್ರವಲ್ಲದೆ ಮಾವು, ಬಾಗೆ, ಬೆಟ್ಟದ ಆವರಿಕೆ ಮರಗಳು ಮುಗಿಲತ್ತ ಮುಖಮಾಡಿ ಬೆಳೆಯುತ್ತಿವೆ. ತಾವು ನೆಟ್ಟ ಸಸಿಗಳ ಬುಡದಲ್ಲಿ ಬೆಳೆಯುವ ಕಳೆ ಗಿಡಗಳನ್ನು ಕಿತ್ತು, ಗೊಬ್ಬರ ಹಾಕಿ, ನೀರೆರೆದು ತಾವೇ ಹಡೆದ ಮಕ್ಕಳಂತೆ ಪೊರೆಯುತ್ತಿದ್ದಾರೆ.

ಜವರಯ್ಯ ಮುಂಜಾನೆ 6ರಿಂದ 7.30ರ ವರೆಗೆ ಪ್ರತಿ ದಿನ ಅಡ್ಡೆಯಲ್ಲಿ (ಬಿದಿರು ದೊಣ್ಣೆಯ ಎರಡೂ ಬದಿ ಬಿಂದಿಗೆ ಕಟ್ಟಿ ನೀರು ಹೊತ್ತು ತರುವುದು) ನೀರು ಹೊತ್ತು ಸಸಿಗಳನ್ನು ಬೆಳೆಸುವ ಕಾಯಕ ಮಾಡುತ್ತಾರೆ. ಕೊಳವೆ ಬಾವಿಯಿಂದ ನೀರು ತಂದು ಸಸಿಗಳಿಗೆ ಹಾಕುತ್ತಾರೆ. ಬೇಸಿಗೆಯ ದಿನಗಳಲ್ಲಿ ಗಿಡಗಳಿಗೆ ಪ್ರತಿದಿನ ನೀರುಣಿಸಿ ಪೋಷಣೆ ಮಾಡುತ್ತಾರೆ. ಸಣ್ಣ ಸಸಿಗಳನ್ನು ದನ, ಕರುಗಳು ಮೇಯದಂತೆ ಅವುಗಳಿಗೆ ಈಚಲು ಸೋಗೆಯ ಬೇಲಿ ಕಟ್ಟಿ ಕಾಪಾಡುತ್ತಾರೆ.

‘25 ವರ್ಷಗಳ ಕೆಳಗೆ ಎರಡು ಆಲದ ಕೊನೆಗಳನ್ನು ತಂದು ಊರ ಮುಂದಿನ ಗೋ ಕಟ್ಟೆ ಬಳಿ ನೆಟ್ಟು ನೀರು ಹಾಕಿದೆ. ದಿನ ಕಳೆದಂತೆ ಅವು ಚಿಗರೊಡೆದು ಬೆಳೆಯಲಾರಂಭಿಸಿದವು. ಉಳಿದ ಖಾಲಿ ಜಾಗ ಏಕೆ ಬಿಡಬೇಕು ಅಂತ ಮೈಸೂರು, ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ನರ್ಸರಿ ಇತರೆಡೆಗಳಿಂದ ವಿವಿಧ ಜಾತಿಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದನ್ನು ಮುಂದುವರೆಸಿದೆ.

ಕಾಳಮ್ಮನ ಗುಡಿ ಮತ್ತು ಸ್ಮಶಾನದಲ್ಲಿ ಈಗ ಏನಿಲ್ಲ ಅಂದ್ರೂ 50ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದೇನೆ. ತಾವು ಸಿಕ್ಕ ಕಡೆ ಈಗಲೂ ಸಸಿಗಳನ್ನು ನೆಡುತ್ತಿದ್ದೇನೆ. ಕೆಲವು ಮರಗಳಲ್ಲಿ ಯಾವ ಯಾವುದೋ ಜಾತಿಯ ಹಕ್ಕಿಗಳು ಗೂಡು ಮಾಡಿಕೊಂಡಿವೆ. ಮಂಗಗಳ ಹಿಂಡು ಮರದಿಂದ ಮರಕ್ಕೆ ಹಾರುತ್ತ ಹಣ್ಣು, ಕಾಯಿ– ಕಸಿ ತಿನ್ನುತ್ತದೆ. ಜನರು ಈ ಮರಗಳ ನೆರಳಲ್ಲಿ ಕೂತು ದಣಿವಾರಿಸಿಕೊಳ್ತಾರೆ. ಇದನ್ನೆಲ್ಲ ನೋಡಕ್ಕೆ ಖುಷಿ ಆಯ್ತತೆ...’ ಎಂದು ಜವರಯ್ಯ ತಾವು ಮರ ಬೆಳೆಸಿದ್ದರಿಂದ ಅಗಾಧವಾದ ಫಲ ಸಿಕ್ಕಂತೆ ಮಂದಹಾಸ ಬೀರುತ್ತಾರೆ.

ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುವ ಜವರಯ್ಯ ಬಸ್ತಿಪುರ ಗ್ರಾಮದಲ್ಲಿ ಪಶು–ಪಕ್ಷಿಗಳಿಗಾಗಿ ಸ್ವಂತ ದುಡ್ಡಿನಿಂದ ಒಂದು ನೀರಿನ ತೊಟ್ಟಿ ಕಟ್ಟಿಸಿದ್ದಾರೆ. ಹುಣಸೂರು ತಾಲ್ಲೂಕಿನ ಬೆಂಕಿಪುರ ಮತ್ತು ಗೌರಿಪುರ ಗ್ರಾಮಗಳಲ್ಲಿ ತಲಾ ಎರಡು ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೊಳವೆ ಬಾವಿಗಳ ಪಕ್ಕ ಇರುವ ತೊಟ್ಟಿಗಳಿಗೆ ಪೈಪು ಅಳವಡಿಸಿ ಅವುಗಳಿಗೆ ಪ್ರತಿ ದಿನ ನೀರು ತುಂಬಿಸುವ ಕಾಯಕ ಮಾಡುತ್ತಾರೆ.

‘ಎರಡು ದಶಕಗಳ ಹಿಂದೆ ಕಾಳಮ್ಮನ ದೇವಾಲಯದ ಆವರಣ ಭಣ ಭಣ ಎನ್ನುತ್ತಿತ್ತು. ಎಡೆ ಬಿಡದೆ ವಾರಗಟ್ಟಲೆ ಮಳೆ ಸುರಿದರೆ ಮಾತ್ರ ದೇಗುಲದ ಪಕ್ಕದ ಗೋ ಕಟ್ಟೆಯಲ್ಲಿ ಮಂಡಿಯುದ್ದ ನೀರು ನಿಲ್ಲುತ್ತಿತ್ತು. ಜವರಯ್ಯ ಅವರಿಂದಾಗಿ ದೇವಾಲಯದ ಆವರಣದಲ್ಲಿ ಹಸಿರು ತೋಪು ಸೃಷ್ಟಿಯಾಗಿದೆ. ಗೋ ಕಟ್ಟೆಗೆ ಅಲ್ಪ ಸ್ವಲ್ಪ ನೀರೂ ಬರುತ್ತಿದೆ. ಸ್ಮಶಾನದಲ್ಲೂ ಬಗೆ ಬಗೆಯ ಮರಗಳು ಬೆಳೆಯುತ್ತಿವೆ’ ಎಂದು ಬಸ್ತಿಪುರ ಗ್ರಾಮದ ಮುಖಂಡ ನಾಗರಾಜು ಹರ್ಷ ವ್ಯಕ್ತಪಡಿಸುತ್ತಾರೆ.

‘ನಮ್ಮಪ್ಪ ಊಟ ಮರೆತರೂ ಗಿಡಗಳಿಗೆ ನೀರು ಹುಯ್ಯುವುದನ್ನು ಮರೆಯುವುದಿಲ್ಲ. ಬೇಸಿಗೆಯಲ್ಲಿ ನನ್ನನ್ನೂ ತಮ್ಮ ಜತೆ ಎಳೆದೊಯ್ಯುತ್ತಾರೆ. ಸೇದು ಬಾವಿ ಇಲ್ಲವೆ ಕೊಳವೆ ಬಾವಿಯಿಂದ ಅಡ್ಡೆಯಲ್ಲಿ ನೀರು ಹೊತ್ತು ತಂದು ಮರ ಬೆಳೆಸುತ್ತಿದ್ದಾರೆ’ ಎಂಬ ಜವರಯ್ಯನವರ ಮಗ ಚಂದ್ರು ಹೇಳುವ ಮಾತು ಅವರ ಪರಿಸರ ಕಾಳಜಿಗೆ ಕನ್ನಡಿ ಹಿಡಿಯುತ್ತದೆ.

ಸಂಪರ್ಕಕ್ಕೆ ಮೊ: 8904718322.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.