ADVERTISEMENT

ಜಲಕ್ಷಾಮಕ್ಕೆ ಇಲ್ಲಿ ಜಾಗವಿಲ್ಲ..!

ಪ್ರದೀಶ್ ಎಚ್.ಮರೋಡಿ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಕಾರ್ಕಳ ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂಗುಗುಂಡಿ ನಿರ್ಮಾಣದ ಕಾರ್ಯ
ಕಾರ್ಕಳ ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂಗುಗುಂಡಿ ನಿರ್ಮಾಣದ ಕಾರ್ಯ   

2016ರ ಮಾತು. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಫೆಬ್ರುವರಿ ತಿಂಗಳಲ್ಲೇ ನೀರಿಗಾಗಿ ಪರದಾಟ ಶುರುವಾಗಿತ್ತು. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ಅವಧಿಗೆ ಮುನ್ನವೇ ವಿಶ್ರಾಂತಿಗೆ ಜಾರಿದ್ದವು. ಜಲಮೂಲದ ಕೊರತೆಯಿಂದ ಗ್ರಾಮದಲ್ಲಿ ಕೆಲ ಅಡಿಕೆ ಮರಗಳು ಒಣಗಿದ್ದವು. ಆದರೆ, ಈ ಬಾರಿಯ ಚಿತ್ರಣವೇ ಬದಲಾಗಿದೆ. ಬಿಸಿಲಿನ ತಾಪ ಏರಿದ್ದರೂ ಜನರಿಗೆ ಬರ ಇದುವರೆಗೂ ತಟ್ಟಿಲ್ಲ.

ಇಂಥದ್ದೊಂದು ಅಚ್ಚರಿಯನ್ನು ಗ್ರಾಮ ಕಂಡಿರುವುದಕ್ಕೆ ಕಾರಣ, ಗ್ರಾಮದಲ್ಲಿ 500ಕ್ಕೂ ಅಧಿಕ ಹಾಗೂ ಕಾರ್ಕಳ ತಾಲ್ಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿರುವುದು. ಇದರಿಂದಾಗಿ, ಈ ಬೇಸಿಗೆ ಮುಗಿಯುವವರೆಗೂ ಜಲಕ್ಷಾಮ ಎದುರಾಗದು ಎಂಬ ಭರವಸೆ ಗ್ರಾಮಸ್ಥರದ್ದು.

ಕಾರ್ಕಳ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ನೀರಿನ ಸೆಲೆ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಳವಾಗಿರುವ ಹಿಂದಿರುವ ಶಕ್ತಿ ಸ್ಥಳೀಯ ಶಾಸಕ ವಿ. ಸುನೀಲ್‌ ಕುಮಾರ್. ಅವರ ನೇತೃತ್ವದಲ್ಲಿ ನಡೆದ ‘ಪರಿಸರ ಉತ್ಸವ’ ಎಂಬ ವಿಶಿಷ್ಟ ಕಾರ್ಯಕ್ರಮದಿಂದಾಗಿ ಇಲ್ಲಿಯ ಚಿತ್ರಣವೇ ಬದಲಾಗಿದೆ.

ಹೆಚ್ಚುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ಅಂತರ್ಜಲದ ಜಾಗೃತಿಗಾಗಿ 2016ರ ಮೇ ತಿಂಗಳಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ‘ಪರಿಸರ ಸಂರಕ್ಷಣಾ ಸಮಿತಿ’ ಹುಟ್ಟಿಕೊಂಡಿದೆ.

ಈ ಸಮಿತಿ ಮೂಲಕ ‘ಸಸಿ ನೆಡೋಣ– ಇಂಗುಗುಂಡಿ ತೋಡೋಣ– ಅಂತರ್ಜಲ ಹೆಚ್ಚಿಸೋಣ’ ಎಂಬ ಚಿಂತನೆಯಡಿ ಪ್ರತಿವರ್ಷ ಪರಿಸರ ಉತ್ಸವ ಆಯೋಜಿಸಿ 2020ರ ವೇಳೆಗೆ ಲಕ್ಷ ಇಂಗುಗುಂಡಿ ನಿರ್ಮಾಣ ಮತ್ತು ಲಕ್ಷ ಸಸಿ ನೆಡುವ ದೂರದೃಷ್ಟಿಯ ಸಂಕಲ್ಪ ಹಾಕಲಾಗಿದೆ. ಅದರ ಮೊದಲ ಭಾಗವಾಗಿ 2016ರಲ್ಲಿ 20 ಸಾವಿರಕ್ಕೂ ಅಧಿಕ ಇಂಗುಗುಂಡಿ ಮತ್ತು 35ಕ್ಕೂ ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ.

ಪರಿಸರ ಉತ್ಸವ ಸಂಬಂಧ ಮೇ ತಿಂಗಳಿನಲ್ಲಿ ತಾಲ್ಲೂಕು ಕೇಂದ್ರ ಮತ್ತು 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಶಾಸಕರೇ ಖುದ್ದಾಗಿ ಭೇಟಿ ನೀಡಿ ಇಂಗುಗುಂಡಿಯ ಮಹತ್ವ ತಿಳಿಸಿದ್ದರು.

ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲವನ್ನು ಹೆಚ್ಚಿಸಿ ಮಣ್ಣಿನ ಕೊಚ್ಚಣೆ ತಡೆಯಬಹುದು, ಬರಗಾಲದಲ್ಲೂ ನೀರು ಸಿಗುವುದು, ತಗ್ಗಿನ ಪ್ರದೇಶಗಳಿಗೆ ಬರುವ ನೆರೆ ಪ್ರವಾಹವನ್ನು ತಡೆಗಟ್ಟಬಹುದು,  ನೀರನ್ನು ಮೇಲೆತ್ತುವಲ್ಲಿ ವಿದ್ಯುತ್ತಿನ ಕಡಿಮೆ ಬಳಕೆಯಾಗುವುದು... ಇತ್ಯಾದಿಯಾಗಿ ಅವರು ಜನಸಾಮಾನ್ಯರ ಗಮನ ಸೆಳೆದಿದ್ದರು.

ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿಗಳನ್ನು ಅಗೆಯಲಾಯಿತು. ಸರಾಗವಾಗಿ ಹರಿದು ಹೋಗುವ ಮಳೆ ನೀರನ್ನು ಹಿಡಿದಿಡುವ ಪ್ರಯತ್ನ ನಡೆಯಿತು. ಖಾಸಗಿ ಸ್ಥಳಗಳಲ್ಲಿ ‘ಮನೆಗೊಂದು ಇಂಗುಗುಂಡಿ’ ನಿರ್ಮಿಸುವಂತೆ ಸೂಚಿಸಿದ್ದರಿಂದ ಸಾವಿರಾರು ಮಂದಿ ಬಾವಿಯ ಜಲಮೂಲಕ್ಕೆ ಪೂರಕವಾಗಿ ಸ್ವಂತ ಖರ್ಚಿನಲ್ಲಿ ಗುಂಡಿ ತೋಡಿದ್ದಾರೆ.

‘ಸೆಪ್ಟೆಂಬರ್‌ ಅಂತ್ಯಕ್ಕೆ ತಾಲ್ಲೂಕಿನಾದ್ಯಂತ 20 ಸಾವಿರಕ್ಕೂ ಅಧಿಕ ಇಂಗುಗುಂಡಿಗಳು ನಿರ್ಮಾಣವಾಗಿರುವುದು ದಾಖಲೆಯೇ ಸರಿ’ ಎನ್ನುತ್ತಾರೆ ಸ್ಥಳೀಯರಾದ ದಯಾನಂದ ಹೆಗ್ಡೆ ಕಡ್ತಲ.

ಆಗಸ್ಟ್‌ 1ರಂದು ಅರಣ್ಯ, ಕೃಷಿ, ತೋಟಗಾರಿಕಾ ಇಲಾಖೆಗಳು ಹಾಗೂ ಸ್ಥಳೀಯ ನರ್ಸರಿಗಳ ಸಹಕಾರದೊಂದಿಗೆ ಗೇರು, ಬೀಟೆ, ಸಾಗುವಾನಿ ಇನ್ನಿತರ ಸಸಿಗಳನ್ನು ಹಂಚಲಾಗಿದೆ. ಎರಡು ವಾರದ ಅವಧಿಯಲ್ಲಿ 35 ಸಾವಿರಕ್ಕೂ ಅಧಿಕ ಗಿಡಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ನೆಡಲಾಗಿದೆ. ಸರ್ಕಾರಿ ಸ್ಥಳಗಳಲ್ಲಿ ನೆಟ್ಟ ಸಸಿಗಳನ್ನು ಕನಿಷ್ಠ ಎರಡು ವರ್ಷ ಪೋಷಣೆಯ ಹೊಣೆಯನ್ನು ಸ್ಥಳೀಯ ಸಂಘಸಂಸ್ಥೆಗಳೇ ವಹಿಸಿಕೊಂಡಿವೆ. 

‘2017ರಲ್ಲಿ 25 ಸಾವಿರ ಇಂಗುಗುಂಡಿಗಳ ನಿರ್ಮಾಣದ ಜತೆಗೆ 2 ಸಾವಿರಕ್ಕೂ ಅಧಿಕ ನಿರುಪಯುಕ್ತ ಕೊಳವೆಬಾವಿಗಳ ಮರುಪೂರಣಕ್ಕೆ ಯೋಜನೆ ಹಾಕಿದ್ದೇವೆ. ಶಾಲಾ ಮಕ್ಕಳ ಮೂಲಕ 25 ಸಾವಿರ ಹಣ್ಣಿನ ಗಿಡಗಳನ್ನು ವಿತರಿಸುವ ಚಿಂತನೆಯಿದೆ.

‘ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಕಾರ್ಕಳದಲ್ಲಿ ದಶಕದ ಹಿಂದೆ ಜೀವಜಲಕ್ಕೆ ಯಾವುದೇ ಬರ ಇರಲಿಲ್ಲ. ಮುಂಗಾರಿನಲ್ಲಿ ಸುರಿಯುವ ಮಳೆಯಿಂದ ಅನೇಕ ನದಿತೊರೆಗಳು ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿಯುವುದರಿಂದ ತಾಲ್ಲೂಕಿನಲ್ಲಿ ನೀರಿನ ಚಿಂತೆ ಇರಲಿಲ್ಲ. ಆದರೆ, ವರ್ಷವಿಡೀ ಹರಿಯುತ್ತಿದ್ದ ನದಿತೊರೆಗಳು ಜನವರಿ ತಿಂಗಳಲ್ಲೇ ಹರಿವನ್ನು ನಿಲ್ಲಿಸುತ್ತಿವೆ.

ಅಂತರ್ಜಲ ಮಟ್ಟ ಹಿಂದಿಗಿಂತ 200 ಅಡಿಗಳಷ್ಟು ಪಾತಾಳಕ್ಕೆ ಇಳಿದಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ಇಂಗುಗುಂಡಿಯ ಬಗ್ಗೆ ಚಿಂತಿಸಿದೆ’ ಎಂದರು ಶಾಸಕ ಸುನೀಲ್‌ ಕುಮಾರ್.

‘ನಮ್ಮ ಮನೆ ಇರುವುದು ಗುಡ್ಡ ಜಾಗದಲ್ಲಿ. ಮೂರ್ನಾಲ್ಕು ವರ್ಷಗಳಿಂದ ಮಾರ್ಚ್‌ ತಿಂಗಳಲ್ಲೇ ಬಾವಿಯಲ್ಲಿ ನೀರಿನ ಸೆಲೆ ಬತ್ತುತ್ತಿತ್ತು. ನಾವು ನೀರಿಗಾಗಿ ಅನುಭವಿಸುತ್ತಿದ್ದ ಪಾಡು ದೇವರಿಗೇ ಪ್ರೀತಿ. ಆದರೆ, ಈ ಬಾರಿ ಅದೇ ಬಾವಿಯಲ್ಲಿ ಇನ್ನೂ ನೀರಿನ ಸೆಲೆಯಿದೆ.

ಮನೆ ಬಳಕೆಗೆ ಬೇಕಾಗುವಷ್ಟು ನೀರು ಸಿಗುತ್ತಿದೆ. ಒಂದು ತಿಂಗಳು ಮಳೆಯಾಗದಿದ್ದರೂ ನೀರು ಸಿಗುವ ವಿಶ್ವಾಸವಿದೆ. ನಮ್ಮ ಬಾವಿಯ ಪಕ್ಕದಲ್ಲೇ ಇಂಗುಗುಂಡಿ ನಿರ್ಮಿಸಿದ್ದ­ರಿಂದ ಇದು ಸಾಧ್ಯವಾಯಿತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕುಕ್ಕುಂದೂರಿನ ರವೀಂದ್ರ ಪಡಿವಾಳ್‌.


ಪ್ರತಿ ಮನೆಯಲ್ಲೂ ಇಂಗುಗುಂಡಿ ನಿರ್ಮಿಸುವಂತೆ ಜನರಿಗೆ ತಿಳಿ ಹೇಳಲಾಗಿದೆ. ಈ ಪ್ರಕ್ರಿಯೆಯನ್ನು ಕನಿಷ್ಠ ಐದು ವರ್ಷ ಮುಂದುವರಿಸುತ್ತೇವೆ. ತಾಲ್ಲೂಕಿನಲ್ಲಿ ಒಂದು ಲಕ್ಷ ಇಂಗುಗುಂಡಿ ನಿರ್ಮಾಣವಾದರೆ ಭವಿಷ್ಯದಲ್ಲಿ ನಮಗೆ ಜಲಕ್ಷಾಮದ ಭೀತಿಯಿಲ್ಲ’ ಎನ್ನುತ್ತಾರೆ ಕೃಷಿಕ ಸೀತಾನದಿ ವಿಠಲ ಶೆಟ್ಟಿ.

‘ನಾವು ಮರಗಳನ್ನು ಕಡಿದು ಪರಿಸರದ ಮೇಲೆ ಸವಾರಿ ಮಾಡಿದ್ದೇವೆ. ಅದರ ಫಲ ಈಗ ಅನುಭವಿಸುತ್ತಿದ್ದೇವೆ. ಈಗಲಾದರೂ ಪಾಠ ಕಲಿಯಬೇಕಿದೆ. ನಾವೇ ತಂದುಕೊಂಡ ಅಪಾಯಕ್ಕೆ ಇಂಗುಗುಂಡಿಗಳ ಮೂಲಕ ನೈಸರ್ಗಿಕವಾಗಿ ಪರಿಹಾರ ಕಂಡುಕೊಂಡಿರುವುದು ಸೂಕ್ತ ಮಾರ್ಗ’ ಎನ್ನುತ್ತಾರೆ ಬಜಗೋಳಿಯ ಜಾರಪ್ಪ.

‘ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿದರೆ ಸಾಲದು, ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕೆಲಸವೂ ನಡೆಯಬೇಕು. ಅದರ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟ ಸಸಿಗಳನ್ನು ಪೋಷಿಸುವ ಕೆಲಸವನ್ನು ಸಂಘಸಂಸ್ಥೆಗಳು ಸಮರ್ಪಕವಾಗಿ ನಿರ್ವಹಿಸದಿದ್ದರೆ ಮಾಡಿದ ಪ್ರಯತ್ನವೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ’ ಎಂಬುದು ಕಳಕಳಿಯ ಮಾತು.

ADVERTISEMENT

ಸೆಲ್ಫಿ ವಿತ್‌ ಇಂಗುಗುಂಡಿ
ಪರಿಸರ ಉತ್ಸವದಲ್ಲಿ ಯುವಕರನ್ನು ಹೆಚ್ಚು ತೊಡಗಿಸುವ ಉದ್ದೇಶದಿಂದ ‘ಸೆಲ್ಫಿ ವಿತ್‌ ಇಂಗುಗುಂಡಿ’ ಎಂಬ ಕಾರ್ಯಕ್ರಮ ಪರಿಚಯಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಗಳಲ್ಲಿ ನಿರ್ಮಿಸಿದ ಇಂಗುಗುಂಡಿಯ ಜತೆಗೆ ಸೆಲ್ಫಿ ಫೋಟೊ ತೆಗೆದು ವಾಟ್ಸ್‌ಆ್ಯಪ್‌ಗೆ ಕಳುಹಿಸಲು ಸೂಚಿಸಲಾಗಿತ್ತು.

ಜೂನ್‌ 12ರಂದು ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಫೋಟೊಗಳು ಬಂದಿದ್ದವು. ಸೆಪ್ಟೆಂಬರ್‌ ಕೊನೆತನಕವೂ ನಿರಂತರವಾಗಿ ಫೋಟೊ ಬಂದಿವೆ. ಅವುಗಳನ್ನು ಶಾಸಕರು ಮತ್ತು ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ವೀಕ್ಷಿಸಿ, ಯುವಕರ ಕಾರ್ಯವನ್ನು ಅಭಿನಂದಿಸಿದ್ದರು.

*
‘ನಾಳಿನ ಕಾರ್ಕಳ’ಕ್ಕಾಗಿ ಇಂಗುಗುಂಡಿ ನಿರ್ಮಾಣ ಮತ್ತು ಸಸಿಗಳನ್ನು ನೆಡುವ ಮೂಲಕ ಸಣ್ಣ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಆರಂಭಿಕ ಯಶಸ್ಸು ಲಭಿಸಿರುವುದರಿಂದ ಈ ಬಾರಿಯ ಪರಿಸರ ಉತ್ಸವಕ್ಕೆ ಇನ್ನಷ್ಟು ಹುರುಪು ಬಂದಿದೆ.
–ಸುನೀಲ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.