ADVERTISEMENT

ಜಾತ್ರೆಯ ಸಡಗರದಲ್ಲಿ ಉಜ್ಜಿನಿ

ಡಾ.ಶಿವರಾಜ್ ಬ್ಯಾಡರಹಳ್ಳಿ
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
ಜಾತ್ರೆಯ ಸಡಗರದಲ್ಲಿ ಉಜ್ಜಿನಿ
ಜಾತ್ರೆಯ ಸಡಗರದಲ್ಲಿ ಉಜ್ಜಿನಿ   

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉಜ್ಜಿನಿಯಲ್ಲೀಗ ಚೌಡಮ್ಮ ಜಾತ್ರೆಯ ಸಂಭ್ರಮ. ಮದ್ದೂರು, ಚನ್ನಪಟ್ಟಣ, ಹುಲಿಯೂರು ದುರ್ಗದ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಉಜ್ಜನಿಯಲ್ಲಿ 1429ರಲ್ಲಿ ಪ್ರತಿಷ್ಠಾಪನೆಗೊಂಡ ಚೌಡಮ್ಮ ಈ ಗ್ರಾಮದ ದೈವ. ಮೊನ್ನೆ ಭಾನುವಾರದಿಂದಲೇ ಜಾತ್ರೆ ಆಚರಣೆಗಳು ಶುರುವಾಗಿದ್ದು ಬರುವ ಶುಕ್ರವಾರದವರೆಗೂ ನಡೆಯಲಿದೆ. ಜಾತ್ರೆಯಲ್ಲಿ ನಡೆಯುವ ಕೊಂಡದ ಸೌದೆ, ಮಡೆಹೊಯ್ಯುವ ಆಚರಣೆ ಬಲು ವಿಶೇಷ. ಸೌದೆಗಳನ್ನು ತಂದು ಬೆಟ್ಟದಂತೆ ಜೋಡಿಸಿ ಅದನ್ನು ಸುಡುತ್ತಾರೆ. ಇಡೀ ರಾತ್ರಿ ಸೌದೆಯ ರಾಶಿ ಉರಿದು ಹೋದಾಗ ಅದನ್ನು ಕೊಂಡದ ಹೊಂಡದ ಗಾತ್ರಕ್ಕೆ ತುಂಬುತ್ತಾರೆ.

ನಂತರ ನಿಡಸಾಲೆಯ ಚೌಡಮ್ಮನ ಪೂಜೆ ನಡೆಯುತ್ತದೆ. ಈ ವೇಳೆ, ಉಜ್ಜನಿ ಚೌಡಮ್ಮನ ಬೆಳ್ಳಿ ಕರಗವೂ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಅಗ್ನಿಕೊಂಡ, ದೇವರ ಮೆರೆದಾಟ, ದೇವರ ತಬ್ಬಾಟ, ರಥೋತ್ಸವ, ಪಲ್ಲಕ್ಕಿ ಹೀಗೆ ಹಲವು ಆಚರಣೆಗಳು ನಡೆಯುತ್ತವೆ. ಪ್ರತಿವರ್ಷ ಯುಗಾದಿ ಹಬ್ಬದ ದಿನ ಕಂಬ ಪ್ರತಿಷ್ಠಾಪನೆ ಮಾಡಿದ ಮೇಲೆ ಹಬ್ಬ ನಿಗದಿಯಾಗುತ್ತದೆ. ಯುಗಾದಿ ಹಬ್ಬದಿಂದ ಸರಿಯಾಗಿ 15ನೇ ದಿನಕ್ಕೆ ಆಚರಣೆ ಶುರು. ಈ ಬಗ್ಗೆ ತೋಟಿ ಊರಲೆಲ್ಲಾ ಸಾರುತ್ತಾನೆ.

‘ಹೊಲೆಯರ ದೇವತೆ’ ಎಂದೇ ಪ್ರಚಲಿತದಲ್ಲಿರುವ ಹೆಬ್ಬಾರಮ್ಮನ ಗುಡ್ಡರಿಗೆ ಜನಿವಾರ ಹಾಕುವುದು ವಿಶೇಷ. ಅರಿಶಿಣ ಸೀಗೆಕಾಯಿ ಹಾಕಿ ಹೋಮ, ನೇಮ ಮಾಡಿ ಜನಿವಾರ ಹಾಕಿ ಹೆಬ್ಬಾರಮ್ಮನನ್ನು ಬ್ರಾಹ್ಮಣರನ್ನಾಗಿ ಪರಿವರ್ತಿಸುವ ಆಚರಣೆ ಇಲ್ಲಿದೆ. ಇದರಿಂದ ಜಾತಿಮತದ ಭೇದವಿಲ್ಲದೇ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಉಜ್ಜನಿಗೆ ಸಮೀಪದಲ್ಲಿರುವ ನಿಡಸಾಲೆಯಲ್ಲಿ ಚೌಡಮ್ಮ ನೆಲೆಸಿದ್ದಾಳೆ. ಆದ್ದರಿಂದ ಎರಡೂ ಊರಿನ ಗ್ರಾಮಸ್ಥರೊಟ್ಟಿಗೆ ಒಟ್ಟಿಗೇ ಜಾತ್ರೆ ನಡೆಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.