ADVERTISEMENT

‘ತಿಮ್ಮಪ್ಪ, ಬೊಮ್ಮಪ್ಪ... ಓಲ್ಗಾ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
‘ತಿಮ್ಮಪ್ಪ, ಬೊಮ್ಮಪ್ಪ... ಓಲ್ಗಾ’
‘ತಿಮ್ಮಪ್ಪ, ಬೊಮ್ಮಪ್ಪ... ಓಲ್ಗಾ’   

ಡಾ. ಹನಿಯೂರು ಚಂದ್ರೇಗೌಡ

*

ಬದುಕಿನ ಸಂಪತ್ತು-ಸಮೃದ್ಧಿಗೆ ಕಾರಣವಾದ ಭೂಮಿ, ಆಯುಧ, ಫಸಲನ್ನು ಪೂಜಿಸುವುದಲ್ಲದೆ; ಅಂತಹ ಫಸಲು ತೆಗೆಯಲು ದುಡಿದ ಶ್ರಮಿಕ ವರ್ಗದವರಿಗೆ ದಕ್ಷಿಣೆ-ದಾನ ಕೊಡುವ ಮೂಲಕ ಸ್ಮರಿಸುವಂತಹ ಅನೇಕ ಆಚರಣೆಗಳು ನಮ್ಮ ರೈತ ಸಮುದಾಯದಲ್ಲಿ ಮೊಗೆದಷ್ಟೂ ಸಿಗುತ್ತವೆ. ಅಂತಹ ಆಚರಣೆಗಳಲ್ಲಿ ‘ತೋಟಕ್ಕೆ ಅನ್ನ ಹಾಕುವುದು’ ಸಹ ಒಂದು.

ADVERTISEMENT

ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ವೀಳ್ಯದೆಲೆ ಬೆಳೆಯುವ ಜಿಲ್ಲೆ ಎಂತಲೇ ಖ್ಯಾತಿ ಪಡೆದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಚಾಲ್ತಿಯಲ್ಲಿದೆ ಇಂತಹ ಆಚರಣೆ. ಅಲ್ಲಿ ಗೌರಿ-ಗಣೇಶ ಹಬ್ಬದ ಆಸುಪಾಸಿನ ದಿನಗಳಲ್ಲಿ ಎಲ್ಲರ ಬಾಯಲ್ಲಿ ಒಂದೇ ಮಾತು. ಅದೇ ‘ತ್ವಾಟುಕ್ ಅನ್ನ ಹಾಕೋ ಹಬ್ಬ ನಿಮ್ಮೂರಲ್ ಯಾವಾಗ?’ ಅಂತ.

ಶುಭ ಸಮಾರಂಭವಿರಲಿ, ಶುಭ ಕಾರ್ಯವಿರಲಿ ಅಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವ. ಅದು ಶುಭಸೂಚಕ ಹಾಗೂ ಶುಭ ಸಂಕೇತ. ಅಷ್ಟೇ ಅಲ್ಲ, ‘ಲಕ್ಷ್ಮಿಯ ಸಾಕ್ಷಾತ್ ರೂಪ’ ಎಂಬ ನಂಬಿಕೆಯೇ ಅದಕ್ಕೆ ಕಾರಣ. ಹೀಗಾಗಿ ರೈತರ ಪಾಲಿನ ಆದಾಯ ಮೂಲವಾದ ವೀಳ್ಯದೆಲೆ ಮತ್ತು ವೀಳ್ಯದೆಲೆ ಬೆಳೆಯುವ ತೋಟವನ್ನು ಲಕ್ಷ್ಮಿಯ ಸ್ವರೂಪ ಎಂದೇ ಪೂಜಿಸಲಾಗುತ್ತದೆ.

ಜಿಲ್ಲೆಯಲ್ಲಿ ಅತಿಹೆಚ್ಚು ವೀಳ್ಯದೆಲೆಯನ್ನು ಬೆಳೆಯುವುದು ಚನ್ನಪಟ್ಟಣ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿಯೇ. ಭೂಹಳ್ಳಿ, ವಿರೂಪಸಂದ್ರ, ಬಿ.ವಿ.ಹಳ್ಳಿ, ಮೆಣಸಿಗನಹಳ್ಳಿ, ವಿಠಲೇನಹಳ್ಳಿ, ಹನಿಯೂರು, ಸಿಂಗರಾಜಪುರ, ನಾಗವಾರ, ಅಬ್ಬೂರು, ಚಿಕ್ಕೇನಹಳ್ಳಿ, ಅಕ್ಕೂರು, ಹರೂರು, ಮೊಗೇನಹಳ್ಳಿ ಗ್ರಾಮಗಳಲ್ಲಿ ಎಲ್ಲಿ ನೋಡಿದರಲ್ಲಿ ವೀಳ್ಯದೆಲೆ ತೋಟಗಳೇ. ಅದರಲ್ಲೂ ಸಿಂಗರಾಜಪುರ, ಮೆಣಸಿಗನಹಳ್ಳಿ ಮತ್ತು ಭೂಹಳ್ಳಿಯಲ್ಲಿ ಎಲ್ಲ ರೈತರು ವೀಳ್ಯದೆಲೆ ಬೆಳೆಯುವವರೇ ಆಗಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಗೌರಿ-ಗಣೇಶ ಹಬ್ಬದ ನಂತರದ ಹದಿನೈದು-ಇಪ್ಪತ್ತು ದಿನಗಳಲ್ಲಿ ವೀಳ್ಯದೆಲೆ ಲಕ್ಷ್ಮಿಯನ್ನು ಪೂಜಿಸುವ ಸಂಭ್ರಮ-ಸಡಗರ ಮನೆಮಾಡಿರುತ್ತದೆ.

ಏನೀ ಆಚರಣೆ?

ತೋಟದಲ್ಲಿ ಒಂದು ಜಾಗವನ್ನು ಗುರುತಿಸಿ, ತೆಂಗಿನ ಗರಿಯಿಂದ ಹೆಣೆಯಲಾದ 3x3 ಅಡಿ ಅಗಲ ಹಾಗೂ 2x2 ಅಡಿ ಎತ್ತರದ ಚಪ್ಪರವನ್ನು ಮಾಡಿ, ಅದಕ್ಕೆ ವಿವಿಧ ಹೂವುಗಳಿಂದ ಅಲಂಕರಿಸಿ ಅದರ ಒಳಗಡೆ ಕಳಸ-ತೆಂಗಿನಕಾಯಿಯನ್ನಿಟ್ಟು ಅದಕ್ಕೆ ಹಸಿರು ವಸ್ತ್ರ ತೊಡಿಸುತ್ತಾರೆ. ಮೂಗುತಿ, ಹಸಿರು ಬಳೆ, ಕುಂಕುಮಗಳಿಂದ ಸಿಂಗರಿಸಿ ‘ಧನ-ಧಾನ್ಯ ಲಕ್ಷ್ಮೀ’ಯಂತಿರುವ ಆ ತಾಯಿಗೆ, ‘ಸದಾ ಸಮೃದ್ಧ ಫಸಲನ್ನು ನೀಡಿ, ಕಾಪಾಡು’ ಎಂದು ಬೇಡಿಕೊಳ್ಳುತ್ತಾರೆ.

ಒಂದು ಮಣ್ಣಿನ ಹರವಿಯಲ್ಲಿ ನೀರನ್ನು ತುಂಬಿ, ಅದಕ್ಕೆ ಹೂ-ಅರಿಶಿಣ-ಕುಂಕುಮ ಮುಡಿಸಿ, ಗಂಗಾಪೂಜೆಯನ್ನು ಮಾಡುತ್ತಾರೆ. ಬಾಳೆಹಣ್ಣಿನ ರಸಾಯನ, ಒಬ್ಬಟ್ಟು, ಪಂಚಾಮೃತ, ಹೆಸರುಬೇಳೆ, ಅನ್ನ, ಸಾಂಬಾರು... ಹೀಗೆ ವಿವಿಧ ಭಕ್ಷ್ಯಗಳನ್ನು ನೈವೇದ್ಯಕ್ಕಿಟ್ಟು ಆರತಿ ಮಾಡುತ್ತಾರೆ.

ನೈವೇದ್ಯಕ್ಕೆ ಇಟ್ಟ ಎಲ್ಲ ರೀತಿಯ ಪ್ರಸಾದದಲ್ಲಿ ಸ್ವಲ್ಪ ಸ್ವಲ್ಪವನ್ನು ತೆಗೆದು, ಒಂದು ಸಣ್ಣ ಪಾತ್ರೆಗೆ ಹಾಕಿ, ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಅದರ ಜೊತೆಗೆ ತೀರ್ಥ ಹಾಗೂ ಗಂಧದಕಡ್ಡಿಯನ್ನು ಹೊತ್ತಿಸಿಕೊಂಡು ತಮ್ಮ ತಮ್ಮ ತೋಟದ ಸುತ್ತಲೂ ಸುತ್ತುತ್ತಾ, ಪ್ರಸಾದವನ್ನು ಒಬ್ಬರು ತೋಟದೊಳಕ್ಕೆ ಎರಚುತ್ತಾ ‘ತಿಮ್ಮಪ್ಪ ಬೊಮ್ಮಪ್ಪ... ಓಲ್ಗಾ, ತಿಮ್ಮಪ್ಪ, ಬೊಮ್ಮಪ್ಪ... ಓಲ್ಗಾ’ (ತಮ್ಮ ತಮ್ಮ ಇಷ್ಟ ದೈವಗಳ ಹೆಸರನ್ನು ಹೇಳಲೂಬಹುದು) ಎನ್ನುತ್ತಾ ತೋಟದ ಸುತ್ತಲೂ ಸಾಗುತ್ತಾರೆ. ಹೀಗೆ ಸಾಗಿಬಂದು, ದೇವರ ಚಪ್ಪರವನ್ನು ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಬಂದು ಕೊನೆಗೊಳಿಸಿ, ಅಳಿದುಳಿದ ಪ್ರಸಾದವನ್ನು, ತೀರ್ಥವನ್ನು ‘ಹೆಚ್ಚಿಸಲಾಗುತ್ತದೆ’! ನಂತರ ಮತ್ತೊಮ್ಮೆ ದೇವರಿಗೆ ಮಹಾಮಂಗಳಾರತಿ ಮಾಡಿಸಿ, ತೋಟದ ಏಳಿಗೆಗಾಗಿ ದುಡಿದ ಆಳು-ಕಾಳುಗಳಿಗೆ, ಶ್ರಮಿಕರಿಗೆ ಹೊಸವಸ್ತ್ರವನ್ನು ಕೊಡುಗೆ-ದಾನವಾಗಿ ನೀಡಿ, ಕೃತಜ್ಞತೆ ಸಲ್ಲಿಸಲಾಗುತ್ತದೆ. ಇದಾದ ನಂತರ ಬಂದ ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಪ್ರಸಾದ ವಿನಿಯೋಗ ನಡೆಯುತ್ತದೆ.

‘ನಮ್ಮ ಪುರಾಣಗಳಲ್ಲಿ ವೀಳ್ಯದೆಲೆಗೆ ವಿಶೇಷವಾದ ಸ್ಥಾನವಿದೆ. ಅದು ಶುಭಕರ ಸಂಕೇತವಾಗಿದ್ದು, ಅದು ಸಂಪತ್ತಿನ ದೇವತೆಯ ಪ್ರತೀಕವಾಗಿದೆ’ ಎನ್ನುತ್ತಾರೆ ಗೌರಮ್ಮ ಸಿದ್ದೇಗೌಡ. ‘ಈ ಆಚರಣೆ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿವೆ’ ಎಂದು ಸಿಂಗರಾಜಪುರದ ದೇವರಾಜಯ್ಯ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.