ADVERTISEMENT

ನೋವು ಮರೆಸಲು ನೆರವಿನ ಚಿಕಿತ್ಸೆ

ಎನ್.ನವೀನ್ ಕುಮಾರ್
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ನೋವು ಮರೆಸಲು ನೆರವಿನ ಚಿಕಿತ್ಸೆ
ನೋವು ಮರೆಸಲು ನೆರವಿನ ಚಿಕಿತ್ಸೆ   

‘ಹನ್ನೊಂದು ವರ್ಷದ ಬಳಿಕ ನನಗೆ ಮಗ ಹುಟ್ಟಿದ. ಆದರೆ, ಅವನಿಗೆ ಮೂಳೆ ಕ್ಯಾನ್ಸರ್‌ ಜತೆಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿದೆ. ಬೇರೆ ಮಗುವಿನಿಂದ ಮೂಳೆಯನ್ನು ವರ್ಗಾವಣೆ ಮಾಡಿಸಿಕೊಳ್ಳಲು ₹25 ಲಕ್ಷ ಬೇಕಾಗಿದೆ. ನನ್ನ ಗಂಡ ಚಂದ್ರಶೇಖರ್‌ ಆರಾಧ್ಯ ಅವರು ಸಕ್ಕರೆ ಕಾಯಿಲೆಗೆ ತುತ್ತಾಗಿದ್ದು, ಅವರ ಒಂದು ಕಾಲನ್ನು ತೆಗೆಯಲಾಗಿದೆ. ಅವರು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಯೋಗಕ್ಷೇಮ ನೋಡಿಕೊಳ್ಳುವವರು ಯಾರೂ ಇಲ್ಲ. ಅವರ ಅಕ್ಕಪಕ್ಕದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೋಷಕರು, ನರ್ಸ್‌ಗಳು, ವೈದ್ಯರು ಊಟೋಪಚಾರ ನೋಡಿಕೊಳ್ಳುತ್ತಾರೆ. ಅಲ್ಲದೆ, ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದೇನೆ...’
ಇದು ರಾಮನಗರ ಜಿಲ್ಲೆ ಅಂಚೆಕೆಂಪೇನದೊಡ್ಡಿ ಗ್ರಾಮದ ಶಶಿಕಲಾ ಅವರ ನೋವಿನ ಕಥೆ. ಶಶಿಕಲಾ ಅವರ ಪುತ್ರ 9 ವರ್ಷದ ಕಾರ್ತಿಕ್‌ ಮೂಳೆ ಕ್ಯಾನ್ಸರ್‌ಗೆ ತುತ್ತಾಗಿದ್ದು, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್‌ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತುಂಬ ಚುರುಕಿನ ಬಾಲಕನಾಗಿರುವ ಕಾರ್ತಿಕ್‌ಗೆ ಕ್ಯಾನ್ಸರ್‌ ಬಗ್ಗೆ ಭಯವಿಲ್ಲ. ‘ನನಗೆ ಕ್ಯಾನ್ಸರ್‌ ಬಂದಿದೆ. ಆದ್ರೆ ಅದಕ್ಕೆ ನಾನು ಭಯ ಪಡಲ್ಲ. ಅಪ್ಪಾಜಿ ಸರ್‌ ಇದ್ದಾರೆ. ಅವರು ಇರೋವರೆಗೂ ನನಗೆ ಯಾವ ಭಯ ಇಲ್ಲ’ ಎನ್ನುತ್ತಾನೆ ಕಾರ್ತಿಕ್‌. ಕ್ಯಾನ್ಸರ್‌ ಎಂಬುದು ಮಾರಣಾಂತಿಕ ಕಾಯಿಲೆ ಎಂಬುದು ಆತನಿಗೆ ಅರಿವಿಲ್ಲ. ಆದರೆ ನೂರ್‍ಕಾಲ ಬಾಳಿ ಬದುಕುತ್ತೇನೆ ಎಂಬ ವಿಶ್ವಾಸ ಆತನಲ್ಲಿ ಮನೆ ಮಾಡಿದೆ. ಅಲ್ಲದೆ, ತನ್ನ ವಿಶ್ವಾಸದ ನುಡಿಗೆ ಒತ್ತಾಸೆಯಾಗಿರುವ ಮಕ್ಕಳ ಕ್ಯಾನ್ಸರ್‌ ವಿಭಾಗದ ಪ್ರಾಧ್ಯಾಪಕ ಅಪ್ಪಾಜಿ ಅವರನ್ನು ಸದಾ ಸ್ಮರಿಸುತ್ತಾನೆ.

‘ಇನ್ನೂ ನಾಲ್ಕು ತಿಂಗಳು ಆಸ್ಪತ್ರೆಯಲ್ಲೇ ಇರ್‍ಬೇಕು. ಆಮೇಲೆ ಮನೆಗೆ ಹೋಗ್ತೇನೆ. 15 ದಿನಗಳಿಗೆ ಒಂದ್ಸಾರಿ ಆಸ್ಪತ್ರೆಗೆ ಬರ್‍ತೇನೆ. ಶಾಲೆಗೆ ಹೋಗಿ ಚೆನ್ನಾಗಿ ಓದಿ ದೊಡ್ಡ ವ್ಯಕ್ತಿ ಆಗ್ತೇನೆ’ ಎನ್ನುವಾಗ ಕಾರ್ತಿಕ್‌ನ ಕಣ್ಣುಗಳಲ್ಲಿ ಭರವಸೆಯ ಮಿಂಚು ಹೊಳೆಯುತ್ತಿತ್ತು.
ಕಿದ್ವಾಯಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್‌ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರನ್ನು ಮಾತನಾಡಿಸಿದರೆ ಇಂತಹ ಹತ್ತಾರು ನೋವಿನ ಕಥೆಗಳು ತೆರೆದುಕೊಳ್ಳುತ್ತವೆ.

ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ನೀಡುವ ಚಿಕಿತ್ಸೆ ದೀರ್ಘಕಾಲೀನವಾದದ್ದು. ದೊಡ್ಡವರಿಗೆ ಕ್ಯಾನ್ಸರ್‌ ಬಂದರೆ ಅವರ ಜತೆ ಒಂದಿಬ್ಬರು ಇದ್ದರೆ ಸಾಕು. ಆದರೆ, ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಕನಿಷ್ಠ ಇಬ್ಬರು ಇರಲೇಬೇಕು. ತಾಯಿ ಮಗುವಿನ ಜತೆಗಿದ್ದರೆ, ಇವರಿಗೆ ಸಹಾಯಕರಾಗಿ ತಂದೆ ಅಥವಾ ಪಾಲಕರು ಇರಬೇಕಾಗುತ್ತದೆ. ಹೀಗೆ 6–9 ತಿಂಗಳು ಆಸ್ಪತ್ರೆಯಲ್ಲೇ ಕಾಲ ಕಳೆಯುವ ತಾಯಂದಿರ ವ್ಯಥೆ, ಪೋಷಕರ ಒದ್ದಾಟ ನೋಡಿಯೇ ಅನುಭವಿಸಬೇಕು.

ತಮ್ಮ ಮಗು ಎಲ್ಲ ಮಕ್ಕಳಂತೆ ಸಹಜ ಜೀವನ ನಡೆಸಬೇಕೆಂಬ ಆಸೆ ಹೊತ್ತ ತಾಯಂದಿರು ಅದಕ್ಕಾಗಿ ಪ್ರತಿದಿನ ಹೋರಾಟ ನಡೆಸುತ್ತಾರೆ. ಪರಿಸ್ಥಿತಿ ಎಷ್ಟೇ ಕ್ಲಿಷ್ಟಕರವಾಗಿದ್ದರೂ ಎದೆಗುಂದದೆ ಮಕ್ಕಳ ಪಾಲನೆಯಲ್ಲಿ ತೊಡಗುತ್ತಾರೆ. ಪ್ರತಿ ವಾರ ಎರಡು ಮೂರು ಬಾರಿ ಮಕ್ಕಳು ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು. ಈ ಸಂದರ್ಭದಲ್ಲಿ ಅವರು ದೈಹಿಕವಾಗಿ ಬಹಳಷ್ಟು ನೋವು ಅನುಭವಿಸುತ್ತಾರೆ. ಪರೀಕ್ಷೆಗಳಿಂದ ಆಯಾಸಗೊಳ್ಳುವ ಮಕ್ಕಳು ಹಾಸಿಗೆ ಮೇಲೆ ಮಲಗಿದ್ದರೆ ಎಂಥ ತಾಯಿಗಾದರೂ ಕರುಳು ಹಿಂಡದೆ ಇರದು.

‘ಅತ್ತೆ–ಮಾವನಿಂದ ಬೇರೆಯಾಗಿ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಕೆಲವೇ ದಿನಗಳಲ್ಲಿ ಐದು ವರ್ಷದ ಮಗ ನಜೀರ್‌ಗೆ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಕಿದ್ವಾಯಿ ಸಂಸ್ಥೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲು ವೈದ್ಯರು ಸೂಚಿಸಿದರು. ಮಗನಿಗೆ ಚಿಕಿತ್ಸೆ ಕೊಡಿಸಲು ನಾನು ಹಾಗೂ ಪತಿ ಇಬ್ಬರೂ ಬೆಂಗಳೂರಿಗೆ ಬಂದರೆ ಉಳಿದ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಗಂಡನ ತಂದೆ–ತಾಯಿ ಬಳಿ ತೆರಳಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವಂತೆ ವಿನಂತಿಸಿದೆವು. ಅವರ ಬಳಿ ಮೂರು ಹಾಗೂ ಏಳು ವರ್ಷದ ಗಂಡು ಮಕ್ಕಳನ್ನು ಬಿಟ್ಟೆವು. ಒಂದೂವರೆ ವರ್ಷದ ಮಗುವನ್ನು ನನ್ನ ತಾಯಿಯ ಆಶ್ರಯದಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದೇವೆ’ ಎನ್ನುತ್ತಾರೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ರುಬೀನಾ. ನಜೀರ್‌ಗೆ ರಕ್ತದ ಕ್ಯಾನ್ಸರ್‌ ಇದ್ದು, ಮೂರು ತಿಂಗಳಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾಯಚೂರು ತಾಲ್ಲೂಕಿನ ಚಾಕೋದಿಹಳ್ಳಿಯ 65 ವರ್ಷದ ದೇವಮ್ಮ ಅವರಿಗೆ ತಮ್ಮ ಮೊಮ್ಮಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯ ಈ ಇಳಿ ವಯಸ್ಸಿನಲ್ಲಿ ಬಂದೊದಗಿದೆ. ಆರು ವರ್ಷದ ಅಖಿಲಮ್ಮ ಎಂಬ ಬಾಲಕಿಗೆ ರಕ್ತದ ಕ್ಯಾನ್ಸರ್‌. ಈಕೆಯ ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅಖಿಲಮ್ಮಳ ತಂದೆ ಹಾಗೂ ಅಜ್ಜಿ ಕಿದ್ವಾಯಿ ಸಂಸ್ಥೆಯಲ್ಲೇ ಏಳು ತಿಂಗಳಿಂದ ಕಾಲ ಕಳೆಯುತ್ತಿದ್ದಾರೆ. ಬೆಂಗಳೂರಿನ ಗವಿಪುರಂನ ವನಿತಾ ಅವರು ತಮ್ಮ ಐದು ವರ್ಷದ ಮಗಳು ಪ್ರಿಯದರ್ಶಿನಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ‘ಮಗಳಿಗೆ ಕಿದ್ವಾಯಿಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಈಗ 15 ದಿನಗಳಿಗೊಮ್ಮೆ ಪರೀಕ್ಷೆಗೆಂದು ಬರುತ್ತೇವೆ. ಕೆಮ್ಮು, ನೆಗಡಿ ಬಂದರೆ ತಕ್ಷಣ ಬಂದು ತೋರಿಸಬೇಕು. ಈಗ ವಾತಾವರಣದಲ್ಲಿ ಬದಲಾವಣೆ ಆಗಿರುವುದರಿಂದ ಬಹಳ ಎಚ್ಚರಿಕೆಯಿಂದ ಇದ್ದೇವೆ’ ಎನ್ನುತ್ತಾರೆ ವನಿತಾ.
ಹಸುಗೂಸು ಅಸುನೀಗಿತು!

ಸಾಮಾನ್ಯವಾಗಿ ಕ್ಯಾನ್ಸರ್‌ ಪೀಡಿತ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರ ಉಪಸ್ಥಿತಿ ಅಗತ್ಯ. ಆದರೆ ಕೆಲವೊಮ್ಮೆ ದೊಡ್ಡ ಮಗ ಅಥವಾ ಮಗಳು ಕ್ಯಾನ್ಸರ್‌ಗೆ ತುತ್ತಾಗಿರುತ್ತಾರೆ. ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡಿರುತ್ತಾರೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ತನ್ನ ಹಸುಗೂಸನ್ನು ಮತ್ಯಾರದೋ ಆರೈಕೆಯಲ್ಲಿ ಬಿಟ್ಟು ಆಸ್ಪತ್ರೆಗೆ ಬರುತ್ತಾರೆ. ಇದರಿಂದ ಮಗುವಿಗೆ ತಾಯಿಯ ಆರೈಕೆ ದೊರೆಯುವುದಿಲ್ಲ. ಹೀಗೆ ಬಂದ ಬಾಣಂತಿಯೊಬ್ಬರು ಕಂದಮ್ಮನನ್ನು ಕಳೆದುಕೊಂಡ ಘಟನೆಯನ್ನು ಇಲ್ಲಿನ ಮಹಿಳೆಯರು ನೆನಪಿಸಿಕೊಳ್ಳುತ್ತಾರೆ.

ಉದ್ಯೋಗ ಚಿಕಿತ್ಸೆ: ಕಿದ್ವಾಯಿಗೆ ಭೇಟಿ ನೀಡುವ ರೋಗಿಗಳು ಹೆಚ್ಚಾಗಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಫಲಾನುಭವಿಗಳು. ಬಡತನದ ಹಿನ್ನೆಲೆಯ ಜನರು ಆರು ತಿಂಗಳು ಕಿದ್ವಾಯಿ ಸಂಸ್ಥೆಯಲ್ಲೇ ಬಿಡಾರ ಹೂಡುವುದರಿಂದ ದುಡಿಮೆಗೆ ತಾತ್ಕಾಲಿಕ ತಡೆ ಬೀಳುತ್ತದೆ. ಅವರಿಗೆ ಅನುಕೂಲವಾಗಲೆಂದು ರಾಮಕೃಷ್ಣ ಆಶ್ರಮದವರು ‘ಉದ್ಯೋಗ ಚಿಕಿತ್ಸೆ’ ಆರಂಭಿಸಿದ್ದಾರೆ. ಮಹಿಳೆಯರಿಗೆ ಬುಟ್ಟಿ ನೇಯುವುದು, ಪೇಪರ್‌ ಕವರ್‌ ಮಾಡುವುದು, ಬಟ್ಟೆ ಹೊಲಿಯಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಬೇಕಾದ ಪರಿಕರಗಳನ್ನು ರಾಮಕೃಷ್ಣ ಆಶ್ರಮದವರು ಒದಗಿಸಿದ್ದಾರೆ. ಒಂದು ಬುಟ್ಟಿಗೆ ₹100 ನೀಡಲಾಗುತ್ತದೆ.

ಇನ್ಫೋಸಿಸ್‌ ಧರ್ಮಶಾಲೆಯಲ್ಲಿ ಇದಕ್ಕೆಂದೇ ಪ್ರತ್ಯೇಕ ಕೇಂದ್ರ ತೆರೆಯಲಾಗಿದೆ. ಮಕ್ಕಳ ಕ್ಯಾನ್ಸರ್‌ ವಿಭಾಗವಷ್ಟೇ ಅಲ್ಲದೆ ಕ್ಯಾನ್ಸರ್‌ ಪೀಡಿತ ಇತರ ರೋಗಿಗಳ ಪೋಷಕರಿಗೂ ಉದ್ಯೋಗದ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಕೈಗೊಂದಿಷ್ಟು ಹಣ ದೊರೆಯುತ್ತಿದೆ.

ಮಕ್ಕಳಿಗೆ ಶಿಕ್ಷಣ: ಕ್ಯಾನ್ಸರ್‌ ಮಕ್ಕಳು ಕನಿಷ್ಠ ಆರು ತಿಂಗಳು ಶಾಲಾ ತರಗತಿಗಳಿಂದ ದೂರು ಉಳಿಯಬೇಕು. ಅವರು ಪಾಠಗಳನ್ನು ಮರೆಯಬಾರದು ಎಂಬ ಉದ್ದೇಶದಿಂದ ಸಮೀಕ್ಷಾ ಫೌಂಡೇಷನ್‌  ಉಚಿತ ಶಿಕ್ಷಣ ನೀಡುತ್ತಿದೆ. ಇದಕ್ಕಾಗಿ ಪಾರ್ವತಿ, ವಿದ್ಯಾ ಎಂಬ ಶಿಕ್ಷಕಿಯರನ್ನು ನೇಮಿಸಿದೆ. ಅವರು ಮಂಗಳವಾರ, ಗುರುವಾರ, ಬುಧವಾರ ಹಾಗೂ ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಪಾಠ–ಪ್ರವಚನ, ಆಟ, ಹಾಡುಗಾರಿಕೆ, ಚಿತ್ರಕಲೆ ಕುರಿತು ಮಕ್ಕಳಿಗೆ ಹೇಳಿಕೊಡುತ್ತಾರೆ. ಮಡಕೆ ಮಾಡುವುದು, ನೃತ್ಯ, ಯೋಗ, ಮ್ಯಾಜಿಕ್‌ ಷೋ  ಮೊದಲಾದ ಕಾರ್ಯಕ್ರಮಗಳನ್ನು ಪರಿಣತರಿಂದ ಆಯೋಜಿಸಲಾಗುತ್ತದೆ.

ಊಟ, ವಸತಿ ವ್ಯವಸ್ಥೆ: ಕ್ಯಾನ್ಸರ್‌ ಪೀಡಿತ ಮಕ್ಕಳು ಹಾಗೂ ಅವರ ತಾಯಂದಿರು ವಾರ್ಡ್‌ನಲ್ಲೇ ಇರುತ್ತಾರೆ. ಅವರ ಸಹಾಯಕ್ಕೆ ಇರುವ ಪೋಷಕರಿಗೆ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಅವರಿಗೆ ಧರ್ಮಶಾಲೆಯಲ್ಲಿ ಮೂರು ಹೊತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ವಿವಿಧ ಸಂಸ್ಥೆಗಳಿಂದ ಸಹಾಯ

ಪ್ರತಿ ತಿಂಗಳು ಮೊದಲ ಭಾನುವಾರ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ಭಜನೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅಂದು ಎಲ್ಲರಿಗೂ  ಪ್ರಸಾದ ವಿತರಿಸಲಾಗುತ್ತದೆ. ಮಕ್ಕಳ ಹುಟ್ಟುಹಬ್ಬವನ್ನು ಸಮೀಕ್ಷಾ ಫೌಂಡೇಷನ್‌ನವರು ಚಾಚೂ ತಪ್ಪದೆ ಆಚರಿಸುತ್ತಾರೆ. ಮಹಾಬೋಧಿ ಸೊಸೈಟಿ ಸದಸ್ಯರು ಆಗಾಗ್ಗೆ ಹಣ್ಣು–ಹಂಪಲು ವಿತರಿಸುತ್ತಾರೆ. ಅಲ್ಲದೆ, ಅನೇಕ ಸ್ವಯಂ ಸೇವಕರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಹಣ್ಣು ಹಂಪಲು, ಪೇಸ್ಟ್‌, ಬ್ರಷ್‌ ಮತ್ತಿತರೆ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ.

ಎನ್‌ಜಿಒಗಳಿಂದ ಆರ್ಥಿಕ ನೆರವು: ರಾಜ್ಯದ ಬಿಪಿಎಲ್‌ ಕುಟುಂಬದವರಿಗೆ ವಾಜಪೇಯಿ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಿಂದ ಮಕ್ಕಳು ಬರುತ್ತಾರೆ. ಅವರಿಗೆ ನಮ್ಮ ಯೋಜನೆಗಳು ಅನ್ವಯ ಆಗುವುದಿಲ್ಲ. ಅಂತಹ ಮಕ್ಕಳಿಗೆ ಕ್ಯೂರಬಲ್‌ ಕ್ಯಾನ್ಸರ್‌ ಇನ್‌ ಕಿಡ್ಸ್‌ (ಸಿಸಿಕೆ) ಟ್ರಸ್ಟ್‌ ಹಾಗೂ ರೋಟರಿ ಕ್ಲಬ್‌ ಕಂಟೋನ್ಮೆಂಟ್‌, ಬಿಪಿಎಲ್‌, ಜೈ ಶಿವಶಕ್ತಿ ಟ್ರಸ್ಟ್‌ನವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ಕ್ಯಾನ್ಸರ್‌ಗೆ ಸ್ಪಷ್ಟ ಕಾರಣವಿಲ್ಲ : ಮಕ್ಕಳಿಗೆ ಬರುವ ಕ್ಯಾನ್ಸರ್ ಕುರಿತು ಮಕ್ಕಳ ಕ್ಯಾನ್ಸರ್‌ ವಿಭಾಗದ ಪ್ರೊ.ಅಪ್ಪಾಜಿ ಅವರು ವಿವರಿಸಿದ್ದು ಹೀಗೆ...
ಕ್ಯಾನ್ಸರ್‌ಗೆ ನಿರ್ದಿಷ್ಟ ಕಾರಣ ಹೇಳಲು ಕಷ್ಟ. ಆದರೂ ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ ಜೀವಕೋಶದ ಜೀವಕಣದಲ್ಲಿ ಆಗುವ ವ್ಯತ್ಯಾಸದಿಂದ ಬರುತ್ತದೆ. ಈ ಜೀವಕಣಗಳ ವ್ಯತ್ಯಾಸ ಅನುವಂಶಿಕವಾಗಿ ಬರಬಹುದು. ವಿಕಿರಣ, ವೈರಾಣುವಿನಿಂದ ಬರಬಹುದು.

ದೊಡ್ಡವರಿಗೆ ಹೋಲಿಸಿದಾಗ ಮಕ್ಕಳಿಗೆ ಕ್ಯಾನ್ಸರ್ ಬರುವುದು ಶೇಕಡಾ 5ರಷ್ಟು ಮಾತ್ರ. 15 ವರ್ಷದೊಳಗಿನ 1 ಲಕ್ಷ ಮಕ್ಕಳಲ್ಲಿ 12ರಿಂದ 14 ಮಕ್ಕಳಿಗೆ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ.

ಕ್ಯಾನ್ಸರ್‌ನಲ್ಲಿ ನಾಲ್ಕು ಹಂತ ಇದೆ. ಮೊದಲ ಮತ್ತು ಎರಡನೇ ಹಂತದಲ್ಲಿ ಶೇಕಡಾ 100ರಷ್ಟು ಗುಣಪಡಿಸಬಹುದು. ಮೂರು ಮತ್ತು ನಾಲ್ಕನೇ ಹಂತದಲ್ಲಿ ವಾಸಿ ಮಾಡಲು ಕಷ್ಟ. ಅದು ಚಿಕಿತ್ಸೆಗೆ ರೋಗಿಯ ಸ್ಪಂದನೆ ಮೇಲೆ ಅವಲಂಬಿತವಾಗಿರುತ್ತದೆ. ಬೆಂಗಳೂರಿನಲ್ಲೇ ಕಿದ್ವಾಯಿ ಬಿಟ್ಟರೆ ಬೇರೆ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಚಿಕಿತ್ಸೆ ದೊರೆಯುವುದಿಲ್ಲ. ಕಾರಣ, ದುಬಾರಿ ವೆಚ್ಚ ಹಾಗೂ ದೀರ್ಘಕಾಲದ ಚಿಕಿತ್ಸೆ. ಆರು ತಿಂಗಳು, ಒಂದು ವರ್ಷ ಚಿಕಿತ್ಸೆ ನೀಡಬೇಕಿರುವುದರಿಂದ ಅಷ್ಟು ದಿನಗಳ ಕಾಲ ಹಾಸಿಗೆಗಳನ್ನು ಭರ್ತಿಯಾಗಿ ಇಟ್ಟುಕೊಳ್ಳಲು ಆಸ್ಪತ್ರೆಗಳು ಇಚ್ಛಿಸುವುದಿಲ್ಲ.

ಕಿದ್ವಾಯಿ ಮಕ್ಕಳ ವಿಭಾಗದಲ್ಲಿ 5 ವೈದ್ಯರಿದ್ದಾರೆ. ಮೂರು ಪಾಳಿಯಲ್ಲಿ ಒಟ್ಟು 8 ನರ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ವಾರ್ಡ್‌ನಲ್ಲಿ 70 ಹಾಸಿಗೆ ಹಾಗೂ ವಿಶೇಷ ವಾರ್ಡ್‌, ತುರ್ತು ಚಿಕಿತ್ಸಾ ಘಟಕದಲ್ಲಿ 30 ಹಾಸಿಗೆಗಳಿದ್ದು, ನೂರು ಮಕ್ಕಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳ ಕ್ಯಾನ್ಸರ್‌ ವಿಭಾಗದ ಪ್ರೊ.ಅಪ್ಪಾಜಿ ಅವರ ಸಂಪರ್ಕಕ್ಕೆ: 97314 41965. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.