ADVERTISEMENT

ಪ್ಲಾಸ್ಟಿಕ್‌ ಹಾವಳಿಗೆ ಇಲ್ಲಿದೆ ಪರಿಹಾರ

ಪ್ರವೀಣ ಕುಲಕರ್ಣಿ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಯಾರಿಗೆ ಗೊತ್ತು? ಯಾವತ್ತೋ ನೀರು ಕುಡಿದು ಎಸೆದಿದ್ದ ಪ್ಲಾಸ್ಟಿಕ್‌ ಬಾಟಲಿಯೇ ಇವತ್ತು ನೀವು ಧರಿಸಿದ ಪಾಲಿಸ್ಟರ್ ಅಂಗಿ ಆಗಿರಬಹುದು ಇಲ್ಲವೆ ಮನೆಯಲ್ಲಿ ಹಾಸಿದ ಕಾರ್ಪೆಟ್‌ನ ನೂಲಾಗಿಯೂ ಅದು ಬಂದಿರಬಹುದು. ಹಾಗೆಯೇ ಯಾವುದೋ ಬಸ್ಸಿನ ಕಿಟಕಿಯಿಂದ ಬಿಸಾಡಿದ ಪ್ಲಾಸ್ಟಿಕ್‌ ಬ್ಯಾಗ್‌, ಮತ್ತೆ ಎಂದಾದರೂ ನೀವು ಅದೇ ಬಸ್‌ ಏರಿದಾಗ, ಅದರ ಇಂಧನದ ಟ್ಯಾಂಕ್‌ನಲ್ಲಿ ಪೆಟ್ರೋಲ್‌ ರೂಪದಲ್ಲಿ ಬಂದು ಸೇರಿರಬಹುದು!

ನಮ್ಮ ಬೆಂಗಳೂರಿನ ರಸ್ತೆಗಳಿಗೆ ನೀರು ಕಂಡರೆ ಎಷ್ಟೊಂದು ಭಯವೆಂದರೆ ಹಾಕಿದ ದಪ್ಪ ಗಾತ್ರದ ಟಾರು ಒಂದೇ ಮಳೆಗೆ ಕಿತ್ತು ಹೋಗುತ್ತದೆ. ಮಳೆ ನೀರು ರಸ್ತೆಯ ಒಡಲೊಳಗೆ ಇಳಿದು ಅಡಿ ಅಡಿಗೂ ಗುಂಡಿಗಳು ಏಳುತ್ತವೆ. ರಸ್ತೆಗಳ ಈ ನೀರಿನ ‘ಭಯ’ ಹೋಗಲಾಡಿಸಲು ಪ್ಲಾಸ್ಟಿಕ್‌ ರಸವೇ ಉತ್ತಮ ‘ಔಷಧಿ’ ಎನ್ನುವುದು ತಜ್ಞರ ಅಭಿಪ್ರಾಯ. ರಾಜ್ಯದ ಕೆಲವು ರಸ್ತೆಗಳಲ್ಲಿ ಈಗಾಗಲೇ ಟಾರಿನ ಜತೆ ಪ್ಲಾಸ್ಟಿಕ್‌ ದ್ರವವನ್ನು ಮಿಶ್ರಣಮಾಡಿ ಬಳಸಲಾಗಿದೆ.

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ... ಹೀಗೆ ಸಾಲು ಸಾಲು ನಗರಗಳು ಈಗೀಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಿಸುತ್ತಿವೆ. ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಹಾವಳಿ ಹೆಚ್ಚು ಎನ್ನುವ ದೂರು ಸಾಮಾನ್ಯವಾಗಿದೆ. ಜೈವಿಕ ಕ್ರಿಯೆಯಲ್ಲಿ ಕರಗಲಾರೆ ಎನ್ನುವ ಪ್ಲಾಸ್ಟಿಕ್‌ ಮೇಲೆ ಎಲ್ಲರೂ ಕೋಪ ಮಾಡಿಕೊಳ್ಳುವವರೇ. ಆದರೆ, ಹಾರುವ ವಿಮಾನದಿಂದ ಹೃದಯದ ಕವಾಟದವರೆಗೆ ‘ನಾನಿಲ್ಲದೆ ನಿಮ್ಮ ಬದುಕೇ ಇಲ್ಲ’ ಎನ್ನುವಂತೆ ಪ್ಲಾಸ್ಟಿಕ್‌ ಎಲ್ಲರನ್ನೂ ಆವರಿಸಿಬಿಟ್ಟಿದೆ.

ಪ್ರತಿ ಸಲ ನಿಷೇಧದ ಬಾಣ ಬಿಟ್ಟಾಗಲೂ ರಕ್ತ ಬೀಜಾಸುರನಂತೆ ಪ್ಲಾಸ್ಟಿಕ್‌ ಬಳಕೆ ಹತ್ತಕ್ಕೆ ನೂರಾಗಿ, ನೂರಕ್ಕೆ ಸಾವಿರವಾಗಿ ಬೆಳೆಯುತ್ತಲೇ ಇದೆ. ಎಲ್ಲಿ ಈ ಬೀಜಾಸುರ ಭಸ್ಮಾಸುರನಾಗಿ ನಮ್ಮನ್ನೇ ಹಾಳು ಮಾಡುವನೋ ಎನ್ನುವ ಚಿಂತೆಯಿಂದ ಉದ್ದಿಮೆದಾರರು ಪ್ಲಾಸ್ಟಿಕ್‌ ಮರುಬಳಕೆಗೆ ಹಲವು ವಿನೂತನ ವಿಧಾನ ಕಂಡುಕೊಂಡಿದ್ದಾರೆ. ಹೌದು, ಇದು ಭಸ್ಮಾಸುರನನ್ನೇ ಭಸ್ಮ ಮಾಡುವ ತಂತ್ರಜ್ಞಾನ.

ಬೆಂಗಳೂರಿನ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ನೂರಾರು ಘಟಕಗಳು ಈಗ ಬಳಕೆಯಾದ ಪ್ಲಾಸ್ಟಿಕ್‌ ಬ್ಯಾಗ್ ಮತ್ತು ಬಾಟಲಿಗಳನ್ನು ವಿವಿಧ ರೂಪದಲ್ಲಿ ಮರು ಬಳಕೆಗೆ ಸನ್ನದ್ಧಗೊಳಿ ಸುತ್ತಿವೆ. ಗಿರಣಿಯಂತಹ ಯಂತ್ರಗಳಿಗೆ ಒಂದೆಡೆಯಿಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸುರಿಯುವ ಇಲ್ಲಿನ ಕಾರ್ಮಿಕರು, ಇನ್ನೊಂದೆಡೆ ಯಿಂದ ಪೈಪು, ಬ್ಯಾಗ್‌, ವೈರ್‌, ತೈಲವನ್ನು ಜಾದೂಗಾರರಂತೆ ತೆಗೆದು ತೋರಿಸುತ್ತಾರೆ.

ಪ್ಲಾಸ್ಟಿಕ್‌ನಿಂದ ನೂಲು ತೆಗೆಯುವ ಯಂತ್ರ ಇನ್ನೂ ಬೆಂಗಳೂರಿಗೆ ಬಂದಿಲ್ಲ. ಆದರೆ, ಪೀಣ್ಯದಲ್ಲಿ ತ್ಯಾಜ್ಯವನ್ನು ಸಿಪ್ಪೆಯಂತೆ ಸುಲಿದು ನೂಲು ತೆಗೆಯಲು ಹೈದರಾಬಾದ್‌ ಮತ್ತು ಮುಂಬೈ ಘಟಕಗಳಿಗೆ ಕಳುಹಿಸಿ ಕೊಡಲಾಗುತ್ತದೆ.

200 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ ಪ್ಲಾಸ್ಟಿಕ್‌ ಕರಗುತ್ತದೆ. ಅದೇ 400 ಡಿಗ್ರಿ ಸೆಲ್ಸಿಯಸ್‌ ಶಾಖ ಕೊಟ್ಟಾಗ ನೀರಾಗಿ ಹರಿಯಲು ಆರಂಭಿಸುತ್ತದೆ. ಆ ಶಾಖವನ್ನೇ ದ್ವಿಗುಣಗೊಳಿಸಿದಾಗ (800 ಡಿಗ್ರಿ ಸೆಲ್ಸಿಯಸ್‌) ಅನಿಲವಾಗಿ ಮಾರ್ಪಡುತ್ತದೆ. ಪ್ಲಾಸ್ಟಿಕ್‌ ಕರಗಿಸಿ ಉಂಡೆ ಮಾಡುವ, ನೀರಾಗಿಸಿ ಹೊಸ ಸಾಮಗ್ರಿ ತಯಾರಿಸುವ, ಅನಿಲವಾಗಿಸಿ ಇಂಧನ ಟ್ಯಾಂಕರ್‌ ತುಂಬುವ ಎಲ್ಲ ವಿಧದ ಕೈಗಾರಿಕೆಗಳು ಇಲ್ಲಿ ತಳವೂರಿವೆ.

ಪ್ಲಾಸ್ಟಿಕ್‌ನಲ್ಲಿ ಮುಖ್ಯವಾಗಿ ಎರಡು ವಿಧ. ಎಂಜಿನಿಯರಿಂಗ್‌ ಮತ್ತು ಕಮಾಡಿಟಿ (ಪದಾರ್ಥ) ಪ್ಲಾಸ್ಟಿಕ್‌. ಎಂಜಿನಿಯರಿಂಗ್ ಪ್ಲಾಸ್ಟಿಕ್‌ ಅತ್ಯುನ್ನತ ಗುಣಮಟ್ಟದ್ದು. ಪದಾರ್ಥ ಪ್ಲಾಸ್ಟಿಕ್‌ನಲ್ಲಿ ಸಿಕ್ಕಾಪಟ್ಟೆ ವಿಧಗಳಿದ್ದು ಕಡಿಮೆ ಮೈಕ್ರಾನ್‌ನ ಕಳಪೆ ಬ್ಯಾಗ್‌ನಿಂದ ಹಿಡಿದು, ಗುಣಮಟ್ಟದ ಪಾಲಿಮರ್‌ ಸರಕಿನವರೆಗೆ ಎಲ್ಲವೂ ಇದರಲ್ಲಿ ಸೇರಿವೆ. ಅಗಾಧ ಪ್ರಮಾಣದಲ್ಲಿ ಉತ್ಪಾದನೆಯಾದ ಬ್ಯಾಗ್‌ಗಳು ಮತ್ತು ಬಾಟಲ್‌ಗಳು ಬದಲಾದ ನಗರ ಸಂಸ್ಕೃತಿಯಿಂದ ತ್ಯಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಎಲ್ಲರ ಕಳವಳಕ್ಕೆ ಇದೇ ಪ್ರಮುಖ ಕಾರಣವಾಗಿದೆ.

ಮರುಬಳಕೆ ಹೇಗೆ?
ನಾವು–ನೀವೆಲ್ಲ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಪದಾರ್ಥಗಳು –ವಿಶೇಷವಾಗಿ ಬಾಟಲ್‌ ಮತ್ತು ಬ್ಯಾಗ್‌ಗಳು– ತ್ಯಾಜ್ಯದೊಳಗೆ ಸೇರುತ್ತವೆ; ಇಲ್ಲದಿದ್ದರೆ ಹಾರುತ್ತಾ ಹೋಗಿ ಚರಂಡಿಯೊಳಗೆ ಬಿದ್ದು ಹೂಳು ಹೆಚ್ಚಾಗಲು ಕಾರಣವಾಗುತ್ತವೆ. ಚಿಂದಿ ಆಯುವವರು ಅಂತಹ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಆಯ್ದು ಸಗಟು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಕಾರರಿಗೆ ಮಾರಾಟ ಮಾಡುತ್ತಾರೆ. ಬೆಂಗಳೂರು ನಗರವೊಂದರಲ್ಲೇ 50 ಸಾವಿರ ಚಿಂದಿ ಆಯುವವರು ಇದ್ದಾರೆ ಎಂಬ ಲೆಕ್ಕಾಚಾರವಿದೆ.

ಚರಂಡಿಯಲ್ಲಿ ಬಿದ್ದ ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ಬ್ಯಾಗ್‌ಗೆ ಕೋಲು ಹಾಕಿ ತೆಗೆಯುವುದು ತುಸು ಕಷ್ಟ. ಅಲ್ಲದೆ, ತೂಕವೇ ಇಲ್ಲದಷ್ಟು ಹಗುರವಾಗಿರುವ ಇಂತಹ ಕಡಿಮೆ ಮೈಕ್ರಾನ್‌ ಬ್ಯಾಗ್‌ಗಳಿಂದ ಚಿಂದಿ ಆಯುವವರಿಗೆ ಹೆಚ್ಚಿನ ಆದಾಯವೂ ಸಿಗುವುದಿಲ್ಲ. ಆದ್ದರಿಂದಲೇ ಬಾಟಲಿ–ದಪ್ಪ ಗಾತ್ರದ ಬ್ಯಾಗ್‌ ಕಡೆಗೆ ಅವರ ಕೋಲು ಹೊರಳುತ್ತದೆ.

ಗುಣಮಟ್ಟದ ಶ್ರೇಣಿಗೆ ತಕ್ಕಂತೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪ್ರತ್ಯೇಕ ಮಾಡಲಾಗುತ್ತದೆ. ಎಲ್ಲ ವಿಧದ ಪ್ಲಾಸ್ಟಿಕ್‌ ಒಟ್ಟುಗೂಡಿಸಿ ಶಾಖ ಕೊಟ್ಟರೆ ಒಂದು ಶ್ರೇಣಿ ಕರಗುವಾಗ ಮತ್ತೊಂದು ನೀರಾಗಿ ಹರಿಯಲು ಆರಂಭಿಸುತ್ತದೆ. ಅಂತಹ ಮಿಶ್ರಣ ಯಾವುದಕ್ಕೂ ಪ್ರಯೋಜನವಿಲ್ಲ. ಪ್ರತ್ಯೇಕಿಸಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮೊದಲು ತೊಳೆದು ಒಣಗಿಸಲಾಗುತ್ತದೆ. ಬಳಿಕ ಅವುಗಳ ಶ್ರೇಣಿಗೆ ತಕ್ಕಂತೆ ಯಂತ್ರದ ಗಿರಣಿಗೆ ಹಾಕಿ ಬಿಲ್ಲೆ ಮಾಡುವ ಅಥವಾ ಹೊಸ ಪದಾರ್ಥ ತಯಾರಿಸುವ ಕಾರ್ಯ ನಡೆಯುತ್ತದೆ.

ಬೆಂಗಳೂರು ನಗರ ಒಂದರಲ್ಲೇ ಪ್ಲಾಸ್ಟಿಕ್‌ ಪುನರ್‌ಬಳಕೆ ಕ್ಷೇತ್ರದಲ್ಲಿ ತೊಡಗಿರುವ 1,200 ಸಂಘಟಿತ ಕೈಗಾರಿಕೆಗಳಿದ್ದರೆ, ಏಳು ಸಾವಿರಕ್ಕೂ ಅಧಿಕ ಅಸಂಘಟಿತ ಘಟಕಗಳಿವೆ. ಬೆಂಗಳೂರಿನ ಘನತ್ಯಾಜ್ಯದಲ್ಲಿ ಶೇ 11ರಷ್ಟು ಪ್ಲಾಸ್ಟಿಕ್‌ ಇದೆ. ರಾಜ್ಯದ ಸರಾಸರಿ ತೆಗೆದುಕೊಂಡರೆ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ.

ಉತ್ಕೃಷ್ಟ ಗುಣಮಟ್ಟದ ಪ್ಲಾಸ್ಟಿಕ್‌ ತ್ಯಾಜ್ಯದಿಂದ –ವಿಶೇಷವಾಗಿ ನೀರಿನ ಬಾಟಲಿಯಿಂದ– ಪಾಲಿಸ್ಟರ್‌ ನೂಲು ತೆಗೆಯಲಾಗುತ್ತದೆ. ಈ ವಿಧದ ಪ್ಲಾಸ್ಟಿಕ್‌ ಶೇಕಡಾ ನೂರರಷ್ಟು ಮರು ಬಳಕೆ ಆಗುತ್ತದೆ. ಎರಡು ಲೀಟರ್‌ನ ಐದು ಬಾಟಲಿಗಳಿಂದ ತೆಗೆದ ನೂಲಿನಿಂದ ಮೂರು ಚದರ ಅಡಿಗಳಿಗೆ ಆಗುವಷ್ಟು ಕಾರ್ಪೆಟ್‌ ತಯಾರಿಸಲು ಸಾಧ್ಯ.

ಒಂದು ಟನ್‌ ಪ್ಲಾಸ್ಟಿಕ್‌ ಬಾಟಲಿಗಳನ್ನು ಕರಗಿಸಿದರೆ 3.8 ಬ್ಯಾರಲ್‌ಗಳಷ್ಟು ತೈಲ ಸಿಗುತ್ತದೆ. ಅಲ್ಲದೆ, ಅಷ್ಟೊಂದು ದೊಡ್ಡ ಪ್ರಮಾಣದ ತ್ಯಾಜ್ಯ ಸಂಗ್ರಹ ಪ್ರದೇಶ ಬೇರೆ ಉದ್ದೇಶಗಳಿಗೆ ಬಳಸಲು ಲಭ್ಯವಾಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ತ್ಯಾಜ್ಯ ಸಿಗದೆ ಹಲವು ಘಟಕಗಳು ಕಾರ್ಯಾಚರಣೆ ಬಂದ್‌ ಮಾಡಬೇಕಾದ ಸ್ಥಿತಿ ಒದಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆಯ ಗಿರಣಿಗಳದ್ದು ಬಕಾಸುರನ ಹೊಟ್ಟೆ. ಎಷ್ಟು ಹಾಕಿದರೂ ಹಸಿವು ಇಂಗುವುದಿಲ್ಲ. ಹೀಗಾಗಿ ಪಕ್ಕದ ಗೋವಾ ರಾಜ್ಯದಿಂದಲೂ ಪ್ಲಾಸ್ಟಿಕ್ ತ್ಯಾಜ್ಯ ಹೊತ್ತ ಲಾರಿಗಳು ಬೆಂಗಳೂರಿನ ಘಟಕಗಳಿಗೆ ಧಾವಿಸಿ ಬರುತ್ತವೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳ ಪ್ರಮುಖ ಸಮಸ್ಯೆ ಎಂದರೆ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕ ಮಾಡದೇ ಇರುವುದು. ಹೀಗಾಗಿ ಹೇರಳ ಪ್ರಮಾಣದ ಪ್ಲಾಸ್ಟಿಕ್‌, ತ್ಯಾಜ್ಯದಲ್ಲೇ ಉಳಿಯುತ್ತಿದೆ. ಮಂಡೂರಿನಂತಹ ಸಮಸ್ಯೆಗಳು ಉದ್ಭವವಾಗುವುದು ಇಂತಹದ್ದೇ ಕಾರಣದಿಂದ. ನೂರಾರು ಅನಧಿಕೃತ ಘಟಕಗಳು ಬೆಂಗಳೂರಿನ ಸಂದಿ–ಗೊಂದಿಗಳಲ್ಲಿ, ಚರಂಡಿಗಳ ದಂಡೆಯಲ್ಲಿ ತಲೆ ಎತ್ತಿದ್ದು, ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ತಯಾರಿಸುತ್ತಿವೆ. ಈ ಘಟಕಗಳಿಗೆ ಮೂಲಸೌಕರ್ಯ ನೀಡದ ಸರ್ಕಾರ, ಮರುಬಳಕೆ ಉತ್ಪನ್ನಗಳ ಮೇಲೂ ಶೇ 14ರಷ್ಟು ತೆರಿಗೆ ಹಾಕುವುದರಿಂದ ಲಾಭ ಗಿಟ್ಟುವುದಿಲ್ಲ. ಹೀಗಾಗಿ ಇಂತಹ ಅಡ್ಡಮಾರ್ಗ ಹಿಡಿಯಲಾಗುತ್ತದೆ ಎನ್ನುವ ವಾದ ಕೇಳಿಬಂದಿದೆ. ಮರುಬಳಕೆ ಮಾಡುತ್ತ ಹೋದರೆ ಮಾತ್ರ ಪ್ಲಾಸ್ಟಿಕ್‌ ತ್ಯಾಜ್ಯದ ಹಾವಳಿ ನಿಯಂತ್ರಿಸಲು ಸಾಧ್ಯ. ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆ ಕುರಿತು ತಲೆ ಕೆಡಿಸಿಕೊಳ್ಳದೆ ಆಗಾಗ ನಿಷೇಧದ ಬಗೆಗೆ ಅಬ್ಬರಿಸಿ ಸುಮ್ಮನಾದರೆ ಪ್ಲಾಸ್ಟಿಕ್‌ ‘ಭಸ್ಮಾಸುರ’ ಮಾತ್ರ ಬೀಜಾಸುರನಾಗಿ
ಬೆಳೆಯುತ್ತಲೇ ಇರುತ್ತಾನೆ!

ತ್ಯಾಜ್ಯ ಕೊಟ್ಟು, ಕಾಸು ಪಡೆಯಿರಿ!
‘ಪ್ಲಾಸ್ಟಿಕ್‌ ಬೇರ್ಪಡಿಸಿ ಕೊಟ್ಟರೆ ಅದು ಎಷ್ಟೇ ಪ್ರಮಾಣದಲ್ಲಿದ್ದರೂ ಖರೀದಿಸಲು ನಾವು ಸಿದ್ಧರಿದ್ದೇವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಸಂಘದ ಕಾರ್ಯದರ್ಶಿ ಸುರೇಶ್‌ ಸಾಗರ. ‘ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದೊಂದು ಘಟಕ ಹಾಕಲು ನಾವು ನೆರವು ನೀಡಲಿದ್ದೇವೆ. ಅಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಅದೇ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಪುಡಿಯಾಗಿಸಿ, ತೂಕಮಾಡಿ, ಹಣಕೊಟ್ಟು ತರುತ್ತೇವೆ’ ಎಂದು ಹೇಳುತ್ತಾರೆ.

‘ಪ್ಲಾಸ್ಟಿಕ್‌ ಮರುಬಳಕೆ ಕೈಗಾರಿಕೆ ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸಬೇಕು. ಘಟಕ ಹಾಕುವವರಿಗೆ ಸಬ್ಸಿಡಿ ಕೊಡಬೇಕು. ಮರುಬಳಕೆ ಉತ್ಪನ್ನಗಳ ಮೇಲಿನ ತೆರಿಗೆ ರದ್ದುಗೊಳಿಸಬೇಕು. ಇದಿಷ್ಟೇ ನಮ್ಮ ಬೇಡಿಕೆ. ರಾಜ್ಯದ ಬೊಕ್ಕಸಕ್ಕೆ ನಮ್ಮಿಂದ ಪ್ರತಿವರ್ಷ ₹120 ಕೋಟಿ ತೆರಿಗೆ ಹೋಗುತ್ತದೆ’ ಎಂದು ಸುರೇಶ್‌ ವಿವರಿಸುತ್ತಾರೆ.

‘ಬೆಂಗಳೂರಿನಲ್ಲಿ ಚಿಂದಿ ಆಯುವವರನ್ನು ಸಂಘಟಿಸಿ, ಅವರಿಗೆ ಕನಿಷ್ಠ ವೇತನ ಗೊತ್ತುಮಾಡಿ, ಪ್ಲಾಸ್ಟಿಕ್‌ ಆಯ್ದುತಂದ ಪ್ರಮಾಣಕ್ಕೆ ತಕ್ಕಂತೆ ಹಣ ನೀಡುವ ಯೋಜನೆಯನ್ನು ಸಹ ರೂಪಿಸಲಾಗಿತ್ತು. ಹಲವು ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಲು ಮುಂದೆ ಬಂದಿದ್ದವು. ಆದರೆ, ಬಿಬಿಎಂಪಿ ಅಸಹಕಾರದಿಂದ ಯೋಜನೆ ಬಿದ್ದುಹೋಯಿತು’ ಎನ್ನುತ್ತಾರೆ ಪ್ಲಾಸ್ಟಿಕ್‌ ಸಂಘದ ಮಾಜಿ ಅಧ್ಯಕ್ಷ ಚಂದ್ರಮೋಹನ್‌.

‘ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾಗದದ ಚೀಲ ಬಳಕೆ ಮಾಡುವ ಮಾತುಗಳನ್ನು ಆಡಲಾಗುತ್ತದೆ. ಅದರಿಂದ ಅರಣ್ಯ ನಾಶವಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ. ‘ಗ್ರಾಹಕರಿಗೆ ಕೊಡುವ ಪ್ಲಾಸ್ಟಿಕ್‌ ಬ್ಯಾಗ್‌ಗೆ ಅಂಗಡಿಕಾರರು ದರ ವಿಧಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆಯದಂತೆ ಜನಜಾಗೃತಿ ಉಂಟು ಮಾಡಬೇಕು. ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ಪ್ಲಾಸ್ಟಿಕ್‌ ಸಂಘವೂ ಶಾಲೆಗಳಲ್ಲಿ ಜಾಗೃತಿ ಆಂದೋಲನ ನಡೆಸಲು ಉದ್ದೇಶಿಸಿದೆ. ಪಣಜಿ ನಗರದ ಶಾಲೆಗಳಲ್ಲಿ ಮಕ್ಕಳಿಂದ ಪ್ಲಾಸ್ಟಿಕ್‌ ಸಂಗ್ರಹಿಸಿ ಹಣ ನೀಡಲಾಗುತ್ತಿದೆ. ಬಿಬಿಎಂಪಿ ಕೈಜೋಡಿಸಿದರೆ ಅಂತಹ ಯೋಜನೆಯನ್ನು ಬೆಂಗಳೂರಿನಲ್ಲೂ ತರುವ ಆಸಕ್ತಿ ಸಂಘಕ್ಕಿದೆ.

ಗುಣಮಟ್ಟದ ಮೇಲೆ ಶ್ರೇಯಾಂಕ
ಪ್ರತಿಯೊಂದು ವಿಧದ ಪ್ಲಾಸ್ಟಿಕ್‌ನ ಗುಣಮಟ್ಟಕ್ಕೆ ತಕ್ಕಂತೆ ಅವುಗಳಿಗೆ 1ರಿಂದ 7ರವರೆಗೆ ಶ್ರೇಯಾಂಕ ಸಂಖ್ಯೆ ನೀಡಲಾಗುತ್ತದೆ. ಯಾವುದೇ ಪ್ಲಾಸ್ಟಿಕ್‌ ಸಾಮಗ್ರಿ ಸಿದ್ಧಪಡಿಸಿದಾಗ ಈ ಶ್ರೇಯಾಂಕ ಸಂಖ್ಯೆ ಹಾಕುವುದು ಕಡ್ಡಾಯ. ಜನಸಾಮಾನ್ಯರು ಆ ಸಂಖ್ಯೆಗಳನ್ನು ನೋಡಿ ಮನೆಯಲ್ಲಿಯೇ ಪ್ಲಾಸ್ಟಿಕ್‌ ತ್ಯಾಜ್ಯ ಪ್ರತ್ಯೇಕಗೊಳಿಸಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಸಂಖ್ಯೆ ನೀಡಲಾಗುತ್ತದೆ. ಆಯಾ ಶ್ರೇಯಾಂಕದಲ್ಲಿ ಸಾಮಾನ್ಯವಾಗಿರುವ ಸರಕುಗಳ ಮಾಹಿತಿ ಇಲ್ಲಿದೆ:

* ನಂ. 1 ಪಾಲಿಥಿಲಿನ್ ಟೆರೆಪ್ಯಾಥ್ಲೇಟ್‌ (ಪಿಇಟಿ)
ನೀರು, ತಂಪುಪಾನೀಯ ಹಾಗೂ ಬೀರ್‌ ಬಾಟಲಿಗಳು, ಅಡುಗೆ ಎಣ್ಣೆ ಕಂಟೇನರ್‌ಗಳು, ಓವನ್‌ನಲ್ಲಿ ಬಳಕೆ ಮಾಡುವ ಟ್ರೇಗಳು

* ನಂ. 2 ದಟ್ಟ ಸಾಂದ್ರತೆಯುಳ್ಳ ಪಾಲಿಥಿಲಿನ್‌ (ಎಚ್‌ಡಿಪಿಇ)
ಜ್ಯೂಸ್‌ ಬಾಟಲಿಗಳು, ಪಿನಾಯಿಲ್‌–ಶ್ಯಾಂಪೊ ಕಂಟೇನರ್‌ಗಳು, ಮೋಟಾರ್‌ ಆಯಿಲ್‌ ಬಾಟಲಿಗಳು

* ನಂ. 3 ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ)
ಆಹಾರದ ಪ್ಯಾಕಿಂಗ್‌ ಸಾಮಗ್ರಿಗಳು, ವೈರ್‌ ಜಾಕೆಟ್‌ಗಳು, ವೈದ್ಯಕೀಯ ಉಪಕರಣಗಳು, ಪೈಪ್‌ಗಳು

* ನಂ. 4 ಕಡಿಮೆ ಸಾಂದ್ರತೆಯುಳ್ಳ ಪಾಲಿಥಿಲಿನ್‌ (ಎಲ್‌ಡಿಪಿಇ)
    ಬ್ಯಾಗ್‌ಗಳು, ಪೀಠೋಪಕರಣಗಳು, ಕಾರ್ಪೆಟ್‌ಗಳು

* ನಂ. 5 ಪಾಲಿಪ್ರೊಪೆಲಿನ್‌ (ಪಿಪಿ)
    ಸಿರಪ್‌ ಮತ್ತು ಕೆಚಪ್‌ ಬಾಟಲಿಗಳು, ಕ್ಯಾಪ್‌ಗಳು, ಸ್ಟ್ರಾಗಳು, ಔಷಧಿ ಬಾಟಲಿಗಳು

* ನಂ. 6 ಪಾಲಿಸ್ಟೆರಿನ್‌ (ಪಿಎಸ್‌)
    ಪ್ಲೇಟ್‌ಗಳು, ಕಪ್‌ಗಳು, ಮಾಂಸದ ಟ್ರೇಗಳು, ಕಾಂಪ್ಯಾಕ್ಟ್‌ ಡಿಸ್ಕ್‌ಗಳು

* ನಂ. 7 ಇತರೆ: ಸನ್‌ಗ್ಲಾಸ್‌ಗಳು, ಡಿವಿಡಿಗಳು, ಐಪಾಡ್‌ಗಳು,
    ಕಂಪ್ಯೂಟರ್‌ ಕೇಸ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT