ADVERTISEMENT

ಬಟ್ಟೆ ಶುಚಿಯಾಗಿ, ಕೈ–ಕಾಲಲ್ಲಿ ಹುಣ್ಣಾಗಿ...

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ಬಟ್ಟೆ ಶುಚಿಯಾಗಿ, ಕೈ–ಕಾಲಲ್ಲಿ ಹುಣ್ಣಾಗಿ...
ಬಟ್ಟೆ ಶುಚಿಯಾಗಿ, ಕೈ–ಕಾಲಲ್ಲಿ ಹುಣ್ಣಾಗಿ...   

ಇವರ ಜೀವನದ ಬಹುತೇಕ ಸಮಯ ನೀರಿನಲ್ಲೇ ಕಳೆದು ಹೋಗುತ್ತದೆ. ಇವರಿಗೆ ನೀರೇ ಸರ್ವಸ್ವ. ನೀರಿದ್ದರೆ ಮಾತ್ರ ಇವರ ಬದುಕಿನ ಬಂಡಿ ಓಡುತ್ತದೆ. ಕೈಯಲ್ಲಿ ಹಣ ಆಡುತ್ತದೆ. ಹೊಟ್ಟೆಗೆ ಹಿಟ್ಟು ಬೀಳುತ್ತದೆ. ನೀರಿಲ್ಲದಿದ್ದಲ್ಲಿ ಇವರ ಬದುಕಿಗೆ ಅರ್ಥವೇ ಇರುವುದಿಲ್ಲ. ತುತ್ತು ಅನ್ನಕ್ಕೂ ಪರದಾಟ ನಡೆಸಬೇಕಾಗುತ್ತದೆ.

ಇದು ಹೊಸಪೇಟೆ ಭಾಗದ ಬಹುತೇಕ ಮಡಿವಾಳ ಸಮುದಾಯದವರ ಕಥೆ–ವ್ಯಥೆ. ತಾತ, ಮುತ್ತಜ್ಜ ಮಾಡುತ್ತಿದ್ದ ವೃತ್ತಿಯನ್ನೇ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದು ಬಿಟ್ಟರೆ ಇವರಿಗೆ ಬೇರೇನೂ ಗೊತ್ತಿಲ್ಲ. ಬಟ್ಟೆ ತೊಳೆಯುವುದೇ ಇವರ ಮುಖ್ಯ ಕಾಯಕ. ಊರ ಜನರ ಬಟ್ಟೆಯನ್ನು ಸ್ವಚ್ಛವಾಗಿ ಒಗೆದು ಫಳಫಳ ಹೊಳೆಯುವಂತೆ ಮಾಡುತ್ತಾರೆ. ಆದರೆ, ಇವರ ಬದುಕಿನಲ್ಲಿ ಹೊಳಪು ಬಂದಿಲ್ಲ. ಅದು ಬರುತ್ತದೆ ಎನ್ನುವ ಭರವಸೆಯೂ ಇವರಿಗಿಲ್ಲ.

ಇವರ ದೈನಂದಿನ ಕೆಲಸಕ್ಕೆ ತುಂಗಭದ್ರೆಯೇ ಆಧಾರ. ಒಂದುವೇಳೆ ಆಕೆ ಮುನಿಸಿಕೊಂಡರೆ ಇವರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ತುಂಗೆಯ ಒಡಲು ತುಂಬಿ ಕಾಲುವೆಗಳಲ್ಲಿ ನೀರು ಹರಿದರೆ ಮಾತ್ರ ಇವರಿಗೆ ಕೈತುಂಬ ಕೆಲಸ. ಕಿಸೆ ತುಂಬ ಹಣ. ಇಲ್ಲವಾದರೆ ಇವರಿಗೆ ಸಂಕಷ್ಟ. ಅದು ಕೂಡ ಒಂದೆರಡಲ್ಲ. ಹಲ ಬಗೆಯವು.

ADVERTISEMENT

ಕಾಲುವೆಯಲ್ಲಿ ನೀರು ಹರಿಯದಿದ್ದರೆ ನಿಂತ ಅಲ್ಪ ಸ್ವಲ್ಪ ನೀರಿನಲ್ಲಿಯೇ ಬಟ್ಟೆ ತೊಳೆಯುತ್ತಾರೆ. ಇದರಿಂದ ಸ್ವಲ್ಪ ಹಣವನ್ನು ಗಳಿಸಬಹುದೇನೋ. ಜಲಾಶಯದ ಸುತ್ತಮುತ್ತಲಿನ ಅನೇಕ ಕಾರ್ಖಾನೆಗಳ ರಾಸಾಯನಿಕ ನೀರಿನೊಂದಿಗೆ ಬೆರೆಯುತ್ತದೆ. ಹಾಗೇ ರಾಸಾಯನಿಕ ಬೆರೆತ ನೀರು ಸುತ್ತಮುತ್ತಲಿನ ಪರಿಸರದ ಮೇಲೆ ಅನೇಕ ರೀತಿಯ ಪರಿಣಾಮ ಬೀರುತ್ತದೆ. ಅಂತಹದ್ದರಲ್ಲಿ ಐದಾರು ಗಂಟೆಗಳವರೆಗೆ ಅದರಲ್ಲಿಯೇ ನಿಂತುಕೊಂಡು ಬಟ್ಟೆ ಒಗೆದರೆ ಏನಾಗಬಾರದು? ರಾಸಾಯನಿಕ ಮಿಶ್ರಿತ ನೀರಿನಿಂದ ಅವರ ಕೈಕಾಲುಗಳು ಊದಿಕೊಳ್ಳುತ್ತವೆ. ಚರ್ಮವೆಲ್ಲ ಒಡೆದು ರಕ್ತ ಸೋರುತ್ತದೆ. ಮೈ, ಕೈಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೂ ಸಮಸ್ಯೆ ಆಗುತ್ತದೆ. ನೀರಿನಲ್ಲಿಳಿದು ಕೆಲಸ ಮಾಡಿದರೆ ಇಷ್ಟೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ. ನೀರಿಗಿಳಿಯದೇ ಕೈಚೆಲ್ಲಿ ಕುಳಿತುಕೊಂಡರೆ ಬೇರೆಯದೇ ಸಮಸ್ಯೆ. ಮೈ, ಕೈ ಹಿಡಿದುಕೊಳ್ಳುತ್ತವೆ. ಸುಧಾ ರಿಸಿಕೊಳ್ಳಲು ಮತ್ತೆ ಹಲವು ದಿನಗಳೇ ಬೇಕಾಗಬಹುದು.

ಮಳೆಯಾಗದೆ ತುಂಗ ಭದ್ರಾ ಅಣೆಕಟ್ಟೆಯಲ್ಲಿ ಕಡಿಮೆ ನೀರಿದ್ದಾಗ ಕಾಲುವೆಗೆ ನೀರು ಹರಿಸಲ್ಲ. ಹೀಗಾಗಿ ಆಗ ಅವರ ಕೆಲಸ ಸಂಪೂರ್ಣ ನಿಂತು ಹೋಗುತ್ತದೆ. ಕೆಲವರು ಇನ್ಯಾವುದೋ ಕೂಲಿ, ನಾಲಿ ಮಾಡಿಕೊಂಡು ಬದುಕು ನಡೆಸುತ್ತಾರೆ. ಮತ್ತೆ ಕೆಲವರು ಬೇರೆ ಕೆಲಸ ಮಾಡಲಾಗದೇ ಕೈಸಾಲ ಮಾಡಿಕೊಂಡು ಹೇಗೋ ಜೀವನ ದೂಡುತ್ತಾರೆ. ಮಳೆ ಸುರಿಯಬೇಕು. ಜಲಾಶಯ ಮೊದಲಿನಂತೆ ತುಂಬಬೇಕು. ಕಾಲುವೆಗೆ ಸದಾ ನೀರು ಹರಿಯಬೇಕು ಎನ್ನುವ ಸದಾಕಾಲದ ಆಶಯ ಅವರದು.

ಹೊಸಪೇಟೆಯ ರಾಣಿಪೇಟೆಯ ನಿವಾಸಿ ಘಾಳೆಪ್ಪ ಸುಮಾರು 45 ವರ್ಷಗಳಿಂದ ಬಟ್ಟೆ ಒಗೆದು ಬದುಕು ಸಾಗಿಸುತ್ತಿದ್ದಾರೆ. ಮನೆಯ ಒಟ್ಟು ಆರು ಜನ ಸದಸ್ಯರಲ್ಲಿ ಇಬ್ಬರು ಗಂಡು ಮಕ್ಕಳು. ಗಂಡು ಮಕ್ಕಳು ಕಾಲುವೆಗೆ ಹೋಗಿ ಬಟ್ಟೆ ತೊಳೆದುಕೊಂಡು ಬಂದರೆ, ಹೆಣ್ಣು ಮಕ್ಕಳು ಮನೆಯ ಕೆಲಸ ಮುಗಿಸಿಕೊಂಡು ಆರಿದ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾರೆ. ಈ ಕೆಲಸ ಬಿಟ್ಟರೆ ಅವರಿಗೆ ಮತ್ತೊಂದು ಗೊತ್ತಿಲ್ಲ.

‘ಕಾಲುವ್ಯಾಗ ನೀರ್‌ ಇಲ್ಲದಿದ್ರ ಬಹಳ ತೊಂದ್ರೆ ಆಗ್ತೈತಿ. ಕೆಲ್ಸಾ ಪೂರ್ಣ ನಿಂತ್‌ ಹೋಗ್ತೈತಿ. ಈ ಬಾರಿ ಡ್ಯಾಂನಲ್ಲಿ ನೀರಿಲ್ಲ. ಯಾವಾಗ್ಲೋ ಒಮ್ಮೊಮ್ಮೆ ನೀರ್‌ ಹರಿಸ್ತಾರ. ಅದು ಯಾವಾಗ ಅನ್ನೋದು ಗೊತ್ತಾಗಲ್ಲ. ಅವ್ರ ಮನಸ್ಸಿಗ ಬಂದ್ಹಂಗ ಮಾಡ್ತಾರ. ಇದರಿಂದ ನಮ್ಮ ಕೆಲ್ಸಾಕ್ಕ ಹೊಡೆತ ಬಿದ್ದದ’ ಎನ್ನುತ್ತಾರೆ ಗಾಳೆಪ್ಪ.

‘ಕಾಲುವೆಯಲ್ಲಿ ನೀರಿಲ್ಲ. ಸುತ್ತಮುತ್ತ ಕೆರೆ, ಕಟ್ಟೆಗಳು ಒಣಗ್ಯಾವ. ಬೇರೆ ಕಡೆನೂ ಹೋಗಂಗಿಲ್ಲ. ನಮ್ದೂ ಅನಿವಾರ್ಯ. ಕಾಲುವೆಯಲ್ಲಿ ನಿಂತ ಸ್ವಲ್ಪ ನೀರಿನಾಗ ಬಟ್ಟೆ ತೊಳಿತೀವಿ. ಕೈ, ಕಾಲುಗಳಲ್ಲಿ ಹುಣ್ಣಾಗ್ತಾವ. ವಿಪರೀತ ನೋವು ಬರ್ತದ. ರಾತ್ರಿಯಿಡೀ ಮಲ್ಗಲ್ಕ ಆಗವಲ್ದು’ ಎಂದು ತಮ್ಮ ಎರಡೂ ಕೈಗಳಲ್ಲಿ ಬಂದಿರುವ ಇಸುಬು ತೋರಿಸಿ ನೋವು ಹಂಚಿಕೊಳ್ಳುತ್ತಾರೆ.

42 ವರ್ಷದ ಪಂಪಾಪತಿ ಕೂಡ ಇದೇ ಕೆಲಸ ನೆಚ್ಚಿಕೊಂಡಿದ್ದಾರೆ. ತಮ್ಮಂತೆ ತಮ್ಮ ಮಕ್ಕಳು ಕಷ್ಟ ಎದುರಿಸಬಾರದು ಎಂದು ಅವರಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ‘ನಾನು ಹುಟ್ಟಿದಾಗಿನಿಂದ ಬಟ್ಟೆ ತೊಳೆಯುವ ಕೆಲಸ ಮಾಡುತ್ತಿದ್ದೇನೆ. ನಮ್ಮ ಹಿರೀಕರು ಕೂಡ ಇದೇ ಕೆಲಸ ಮಾಡುತ್ತಿದ್ದರು. ನಾನೂ ಇದನ್ನೇ ಮುಂದುವರಿಸಿದ್ದೇನೆ. ಈ ಕೆಲಸದಲ್ಲಿ ಕಾಯಂ ಆದಾಯ ಇಲ್ಲ. ನೀರು ಇಲ್ಲದಿದ್ದರೆ ನಮ್ಮ ಕೆಲಸ ನಿಂತು ಹೋಗುತ್ತದೆ’ ಎನ್ನುತ್ತಾರೆ ಪಂಪಾಪತಿ.

‘ಮನೆಯಲ್ಲಿ ಐದು ಜನರಿದ್ದೇವೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದಾನೆ. ನನ್ನಂತೆ ಮಕ್ಕಳಿಗೆ ಕಷ್ಟ ಬರಬಾರದು. ಆದಕಾರಣ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇನೆ. ನನಗೆ ಎಷ್ಟೇ ಕಷ್ಟ ಬರಲಿ ಅವರ ಓದಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಭಾವುಕರಾಗಿ ಹೇಳುತ್ತಾರೆ.

ನಿಂತ ನೀರಲ್ಲಿ ಬಟ್ಟೆ ಒಗೆದರೆ ಆರೋಗ್ಯದ ಸಮಸ್ಯೆ ಒಂದು ಕಡೆಯಾದರೆ, ಈ ನೀರಿನಲ್ಲಿ ಬಟ್ಟೆ ತೊಳೆದರೆ ವಾಸನೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಜನ, ಹೋಟೆಲ್‌ ಹಾಗೂ ವಾಹನಗಳ ಮಾಲೀಕರು ಬಟ್ಟೆ ಕೊಡಲು ಹಿಂದೇಟು ಹಾಕುತ್ತಾರೆ. ಹೀಗೆ ಎಲ್ಲವೂ ಇವರ ತದ್ವಿರುದ್ಧವಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಎಂದು ಇವರಿಗೆ ದಿಕ್ಕೇ ತೋಚದಂತಾಗುತ್ತದೆ. ಹೊಸಪೇಟೆ, ಗಂಗಾವತಿ, ಕಂಪ್ಲಿ, ಬಳ್ಳಾರಿ ನಗರದಲ್ಲಿ ನೂರಾರು ಮಡಿವಾಳರು ಇದ್ದಾರೆ. ಕಾಲುವೆಯಲ್ಲಿ ನೀರಿಲ್ಲದೇ ಅವರ ಬದುಕು ಅತಂತ್ರವಾಗಿದೆ. ಹಾಗಿದ್ದರೆ ಇವರ ಅತಂತ್ರ ಬದುಕಿಗೆ ಕೊನೆ ಎಂಬುದೇ ಇಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.