ADVERTISEMENT

ಬತ್ತಿದ ಹಳ್ಳದಲ್ಲಿ ತಿಳಿನೀರ ಡೋಣಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST
ಬತ್ತಿದ ಹಳ್ಳದಲ್ಲಿ ತಿಳಿನೀರ ಡೋಣಿ
ಬತ್ತಿದ ಹಳ್ಳದಲ್ಲಿ ತಿಳಿನೀರ ಡೋಣಿ   

*ಕಿಶನರಾವ್ ಕುಲಕರ್ಣಿ

ಮೂರು ವರ್ಷಗಳಿಂದ ಕೊಪ್ಪಳ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿದೆ. ಹೇಳಿಕೊಳ್ಳುವಂತಹ ಮಳೆ ಇಲ್ಲ. ಆಚೀಚೆ ಚದುರಿಂತೆ ಮಳೆಯಾಗಿದ್ದು ಅರೆಬರೆ ಹಸಿಯಲ್ಲಿಯೇ ರೈತರು ಬಿತ್ತನೆ ಮಾಡಿ ಮುಗಿಲು ನೋಡುತ್ತ ಕುಳಿತಿದ್ದಾರೆ. ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಆಸರೆಯಾಗಿದ್ದ ಹಳ್ಳಕೊಳ್ಳಗಳು ಮಳೆರಾಯನ ಅವಕೃಪೆಯಿಂದ ಬತ್ತಿ ಬೆಂಡಾಗಿ ಹೋಗಿವೆ.

ಮನುಷ್ಯರು ಹೇಗೋ ಹೋರಾಟ ಮಾಡಿ ಕುಡಿಯಲು ನೀರು ದಕ್ಕಿಸಿಕೊಳ್ಳುತ್ತಾರೆ. ಆದರೆ ಕಾಡು ಪ್ರಾಣಿಗಳು, ಜಂತುಗಳು, ಪಕ್ಷಿಗಳು ಬಾಡಿದ ಬನದಲ್ಲಿ ನೀರಿಗಾಗಿ ಎದೆಯುಸಿರು ಬಿಡುತ್ತಿವೆ. ಈ ಬಗ್ಗೆ ಯೋಚನೆ ಮಾಡಿದ ಕೊಪ್ಪಳ ಜಿಲ್ಲೆ ಕುಷ್ಟಗಿಯ 12 ಜನ ಯುವಕರು ಯಾವುದೇ ಫಲಾಪೇಕ್ಷೆ ಇಲ್ಲದೆ ದ್ವಾರಕಾಮಾಯಿ ಸಾಯಿ ಸೇವಾ ಟ್ರಸ್ಟ್‌ ವತಿಯಿಂದ ಪ್ರಾಣಿಗಳಿಗೆ ನೀರುಣಿಸುವ ಹಾಗೂ ಹಸಿದ ಜಾನುವಾರುಗಳಿಗೆ ಮೇವು ನೀಡುವ ನಿಷ್ಕಾಮ ಸೇವೆಯನ್ನು ಸದ್ದಿಲ್ಲದೆ ಎರಡು ವರ್ಷಗಳಿಂದ ಮಾಡುತ್ತಿದ್ದಾರೆ.

ADVERTISEMENT

ಹಳ್ಳದತ್ತ ನೀರನ್ನು ಅರಸಿ ಬಂದಂತಹ ಪ್ರಾಣಿ ಪಕ್ಷಿಗಳು ನೀರಿಲ್ಲದೇ ವಾಪಸ್ಸಾಗುವುದು, ನೀರು ಹುಡುಕುತ್ತಾ ರಸ್ತೆಗೆ ಬಂದು ವಿಲವಿಲ ಒದ್ದಾಡಿ ಪ್ರಾಣಬಿಡುವಂತಹ ದಯನೀಯ ಸ್ಥಿತಿ ಕಂಡ ಈ ಯುವಕರು, ಹಳ್ಳದ ಪ್ರದೇಶದಲ್ಲಿ ಸಿಮೆಂಟ್ ಕಿರು ತೊಟ್ಟಿಗಳನ್ನು ಹಾಕಿ ಪ್ರಾಣಿಗಳಿಗಾಗಿ ಅಳಿಲು ಸೇವೆ ಮಾಡುತ್ತಿದ್ದಾರೆ.

ಈ ಸೇವೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದು ಮಳೆಗಾಲದಲ್ಲಿ ನಿಲ್ಲಿಸಲಾಗಿತ್ತು. ಈ ಬಾರಿ ಬೇಸಿಗೆಯಿಂದ ಈ ಕಾರ್ಯ ನಡೆದಿದ್ದು ಮಳೆ ಬಂದು ಹಳ್ಳದಲ್ಲಿ ನೀರು ನಿಲ್ಲುವ ತನಕ ಮುಂದುವರೆಯುತ್ತದೆ ಎಂದು ಕೃಷ್ಣ ಕಂದಕೂರ ಹೇಳುತ್ತಾರೆ.

ಕಿರು ನೀರಿನ ತೊಟ್ಟಿಯಲ್ಲಿ ಬೆಳಿಗ್ಗೆ ನೀರು ತುಂಬಿಟ್ಟಾಗ ಬೆಳಗಾಗುವುದರೊಳಗೆ ನೀರು ಖಾಲಿಯಾಗುತ್ತದೆ. ತೊಟ್ಟಿ ಖಾಲಿಯಾಗುತ್ತಿದ್ದಂತೆ ಅದರಲ್ಲಿನ ಕಸಕಡ್ಡಿ ತೆಗೆದು ಟ್ಯಾಂಕರ್‌ ಮೂಲಕ ನೀರು ತುಂಬಿಸುವುದು ಈ ಯುವಕರ ದೈನಂದಿನ ಕೆಲಸವಾಗಿದೆ.

ಯುವಕರು ದಿನವೂ ಬೆಳಿಗ್ಗೆ ವ್ಯಾಯಾಮದ ಸಮಯವನ್ನು ಈ ಸೇವೆಗಾಗಿಯೇ ಮೀಸಲಿರಿಸಿದ್ದು ಗಮನಾರ್ಹವೆನಿಸಿದೆ. ಸಂಸ್ಥೆಯ ಗೆಳೆಯರ ಬಳಗ ವಿವಿಧ ಕಡೆ ಇಟ್ಟಿರುವ ತೊಟ್ಟಿಗಳ ಕಡೆಗೆ ಜಾಗಿಂಗ್ ಮಾಡುತ್ತಾ ನೀರು ತುಂಬಿ ಬರುವುದನ್ನು ನಿತ್ಯದ ಪರಿಪಾಠ ಮಾಡಿಕೊಂಡಿದ್ದಾರೆ.

ಇವತ್ತು ತೊಟ್ಟಿಯಲ್ಲಿ ಪ್ರಾಣಿ, ಪಕ್ಷಿ ಎಷ್ಟೆಷ್ಟು ನೀರು ಕುಡಿದಿವೆ ಎಂದು ಅವಲೋಕಿಸುತ್ತಾರೆ. ಪ್ರಾಣಿ, ಪಕ್ಷಿಗಳು ನೀರು ಕುಡಿದಷ್ಟು ಖುಷಿ ಹಂಚಿಕೊಳ್ಳುತ್ತಾರೆ. ತೊಟ್ಟಿ ಖಾಲಿಯಾದರೆ ಮಾತ್ರ ನಮಗೆ ನೆಮ್ಮದಿ ಎನಿಸುತ್ತದೆ, ಒಂದೊಂದು ದಿನ ಅರ್ಧ ಪ್ರಮಾಣದಲ್ಲಿ ಖಾಲಿಯಾಗಿರುವುದನ್ನು ನೋಡಿದರೆ ಇಂದು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ ಎಂದು ತಿಳಿದುಕೊಳ್ಳುತ್ತೇವೆ ಎಂದು ಸತೀಶ ಕಂದಗಲ್ ಹೇಳುತ್ತಾರೆ. ಈ ಯುವಕರ ಕಾರ್ಯಕ್ಕೆ ಸ್ಥಳೀಯರು ಅಭಿಮಾನಪಟ್ಟರೆ, ಮೂಕ ಪ್ರಾಣಿಗಳ ಮೊಗದಲ್ಲಿ ಧನ್ಯತಾಭಾವ.

ಹಗಲು ಹೊತ್ತಿನಲ್ಲಿ ಜಾನುವಾರುಗಳು, ಓತಿಕ್ಯಾತ, ಮೊಲ, ಕೋತಿ, ಅಳಿಲು, ಪಕ್ಷಿಗಳು ಹಾಯಾಗಿ ನೀರು ಕುಡಿಯುತ್ತಿದ್ದರೆ, ರಾತ್ರಿ ಸಮಯದಲ್ಲಿ ನರಿ, ತೋಳ, ಕರಡಿಗಳಂತಹ ಪ್ರಾಣಿಗಳು ಈ ನೀರಿನ ತೊಟ್ಟಿಗಳತ್ತ ಬರುತ್ತವೆ ಎಂದು ಹೇಳುತ್ತಾರೆ. ಹಗಲು ಹೊತ್ತಿನಲ್ಲಿ ತುಂಬಿಯೇ ಇರುವ ನೀರಿನ ಟ್ಯಾಂಕ್‌ಗಳು ಬೆಳಗಾಗುವುದರೊಳಗೆ ಖಾಲಿಯಾಗಿರುತ್ತವೆ. ಅಲ್ಲದೆ ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಲೆಂದು ತೊಟ್ಟಿಯ ಪಕ್ಕದಲ್ಲಿ ಕವಲು ಕಟ್ಟಿಗೆ ನೆಟ್ಟಿದ್ದಾರೆ. ಮಂಗ, ನರಿ, ತೋಳಗಳಂತಹ ಪ್ರಾಣಿಗಳು ಕುಳಿತು ನೀರು ಕುಡಿಯಲು ಅನುಕೂಲವಾಗಲೆಂದು ತೊಟ್ಟಿಯ ಮಧ್ಯೆ ಎತ್ತರ ಕಲ್ಲುಗಳನ್ನು ಹಾಕಿರುವುದರಿಂದ ಅದರ ಮೇಲೆ ಈ ಪ್ರಾಣಿಗಳು ಕುಳಿತು ನೀರು ಕುಡಿಯುತ್ತವೆ ಎಂದು ರಾಮು ಬನ್ನಿಗೋಳ ಸಂತಸದಿಂದ ಹೇಳುತ್ತಾರೆ.

ಬರಗಾಲದ ಈ ಸಮಯದಲ್ಲಿ ಜಾನುವಾರುಗಳಿಗೆ ಮೇವಿಲ್ಲದೆ ಜಾನುವಾರುಗಳನ್ನು ರೈತರು ಮಾರಾಟ ಮಾಡುತ್ತಿದ್ದಾರೆ. ಈ ಯುವಕರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಲೋಡ್‌ಗಟ್ಟಲೆ ಮೇವನ್ನು ಹಸಿದ ಜಾನುವಾರುಗಳಿಗೆ ನೀಡುತ್ತಿದ್ದಾರೆ.

ಈ ಎರಡು ತಿಂಗಳ ಅವಧಿಯಲ್ಲಿ 18 ಲೋಡ್‌ ಮೇವು ನೀಡಿದ್ದಾರೆ. ‘ದುಡ್ಡು ಕೊಟ್ಟರೂ ಮೇವು ಸಿಗುತ್ತಿಲ್ಲ, ಹಳ್ಳಿಗಳಿಗೆ ತೆರಳಿ ಖರೀದಿಸಿ ತಂದು ನೀಡುತ್ತಿದ್ದೇವೆ, ನಮ್ಮ ಸೇವಾ ಕಾರ್ಯ ಕಂಡ ಪ್ರಸಾದ ರೆಡ್ಡಿ ಹಾಗೂ ಹಿರೇಅರಳಿಹಳ್ಳಿಯ ಶ್ರೀಧರ ದೇಸಾಯಿಯಂತಹ ಕೆಲವರು ಉಚಿತವಾಗಿ ಮೇವು ನೀಡಿದ್ದಾರೆ’ ಎಂದು ಅಂಬರೀಶ್ ದಂಡಿನ್ ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.