ADVERTISEMENT

ಬರಿದಾದ ಶಾಲ್ಮಲೆ ಒಡಲು ಮೇಲೆದ್ದು ಬಂದ ಶಿವಲಿಂಗಗಳು

ಪ್ರಜಾವಾಣಿ ಚಿತ್ರ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಬರಿದಾದ ಶಾಲ್ಮಲೆ ಒಡಲು ಮೇಲೆದ್ದು ಬಂದ ಶಿವಲಿಂಗಗಳು
ಬರಿದಾದ ಶಾಲ್ಮಲೆ ಒಡಲು ಮೇಲೆದ್ದು ಬಂದ ಶಿವಲಿಂಗಗಳು   

ಸದಾ ಹಚ್ಚ ಹಸಿರಿನ ಪರಿಸರ, ಅಪಾರ ವನ್ಯಜೀವಿ ಸಂಪತ್ತು, ನೋಡಿದಷ್ಟೂ ಮನತಣಿಯದ ಸಹ್ಯಾದ್ರಿ ಪರ್ವತ ಶ್ರೇಣಿ, ಜುಳು, ಜುಳು ಹರಿಯುವ ಝರಿಗಳು, ನದಿಗಳು, ಜಲಪಾತಗಳು... ಇವೆಲ್ಲಾ ಮಲೆನಾಡಿನ ಪರಿಸರವನ್ನು ಬಣ್ಣಿಸುವ ಪರಿ. ಆದರೆ ಈ ಬಾರಿಯ ಬರ ಮಲೆನಾಡಿನ ಮೇಲೂ ಕೆಂಗಣ್ಣು ಬೀರಿದೆ. ಎಂದಿಗೂ ಬತ್ತದ ಕೆರೆಯ ಒಡಲು ಬರಿದಾಗಿ ಬೆಂಗಾಡಾಗಿದೆ.

ಐತಿಹಾಸಿಕ ಯಾತ್ರಾ ಸ್ಥಳಗಳ ಬೀಡು ಎಂದೂ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಶಾಲ್ಮಲೆಯ ಕಣ್ಮಣಿ ಸಹಸ್ರಲಿಂಗದಲ್ಲೀಗ ನೀರು ಸಂಪೂರ್ಣ ಬತ್ತಿ ಹೋಗಿದ್ದು ಶಿವಲಿಂಗಗಳು ದರ್ಶನ ನೀಡುತ್ತಿವೆ.

ಹೊಳೆ ಮಧ್ಯೆ ಬಂಡೆಗಳ ಕುಸುರಿ ಕೆಲಸದಿಂದ ಆಕರ್ಷಿಸುವ ಈ ಲಿಂಗಗಳು ತಮ್ಮ ಸೊಬಗನ್ನು ಬಿಚ್ಚಿಡುತ್ತಿವೆ. ಇದರ ಜೊತೆಗೆ ಶಾಲ್ಮಲೆ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡ ಗಣೇಶ, ಆಂಜನೇಯ, ವೀರಭದ್ರ, ಬಸವಣ್ಣ,  ಬಂಡೆಗಳು, ಪಾಂಡವರು ಬಳಸುತ್ತಿದ್ದರು ಎನ್ನಲಾದ ಒರಳು ಕಲ್ಲುಗಳ ಸವೆದು ಹೋದ ಕುರುಹುಗಳೂ ಅಲ್ಲಲ್ಲಿ ಕಾಣುತ್ತಿವೆ.

ಸೋದೆಯ ದೊರೆ ಸದಾಶಿವರಾಯರ ಆಡಳಿತ ಕಾಲದಲ್ಲಿ ಈ ಲಿಂಗಗಳನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಆದರೆ ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಭೀಮ ಪ್ರತಿಷ್ಠಾಪಿಸಿದ ಶಿವಲಿಂಗವನ್ನು ಧರ್ಮರಾಯ ಪೂಜಿಸಿದನೆಂದು ಪ್ರತೀತಿ ಇದೆ. 

ಪ್ರತೀತಿ ಏನೇ ಇದ್ದರೂ, ಇಲ್ಲಿ ಅಚ್ಚರಿ ಮೂಡಿಸುವ ಶಿವಲಿಂಗಗಳ ಸಂಪೂರ್ಣ ದರ್ಶನ ಆಗಿರುವುದು ಮಾತ್ರ ಸುಮಾರು 80 ವರ್ಷಗಳ ನಂತರವೇ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಣೇಶ್‌ ಹೆಗಡೆ.

‘ನಾನು ಸಣ್ಣವನಿದ್ದಾಗ ಒಮ್ಮೆ ಬರಗಾಲ ಬಂದಿತ್ತು. ಆಗ ನದಿಯ ನೀರು ಒಣಗಿದ್ದು ನೆನಪು. ಅಲ್ಲಿಂದ ಇಲ್ಲಿಯವರೆಗೆ ಬತ್ತಿರಲಿಲ್ಲ’ ಎನ್ನುತ್ತಾರೆ ಅವರು. ಇದೇ ಮಾತು ಶ್ರೀಕಾಂತ ಅವರದ್ದು ಕೂಡ. ಇಲ್ಲಿರುವ ಮೂರ್ತಿಗಳ ಬಗ್ಗೆ ಸಂಶೋಧನೆಗೆ ಇದು ಸಕಾಲವೂ ಆಗಿದೆ.

ವಿವಿಧ ಮೂರ್ತಿಗಳ ದರ್ಶನದ ಜೊತೆ ಕಿಡಿಗೇಡಿಗಳು ಅವುಗಳ ಮೇಲೆ ಬರೆದಿರುವ ಬರಹಗಳೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ. ಇತಿಹಾಸದ ವಿವಿಧ ಘಟನೆಗಳನ್ನು ನೆನಪಿಸುವ ಈ ಸಹಸ್ರಲಿಂಗ ಈ ರೀತಿ ಕಿಡಿಗೇಡಿಗಳ ಕೃತ್ಯದಿಂದ ಹಾಳಾಗುವುದನ್ನು ತಪ್ಪಿಸುವ ಅವಶ್ಯಕತೆ ಇದೆ. ಶಿವಲಿಂಗವನ್ನು ಪೂಜಿಸುವ ನೆಪದಲ್ಲಿ ಅವುಗಳನ್ನು ಹಾಳು ಮಾಡುವ ಕೆಲಸವೂ ಇಲ್ಲಿ ಸಾಕಷ್ಟು ನಡೆಯುತ್ತಿದೆ. ಲಿಂಗಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.