ADVERTISEMENT

ಮಲಗದ್ದೆ... ಮನಗೆದ್ದೆ!

ಎಸ್.ಆರ್.ಎನ್.ಮೂರ್ತಿ
Published 1 ಮೇ 2017, 19:30 IST
Last Updated 1 ಮೇ 2017, 19:30 IST
ಮಲಗದ್ದೆ... ಮನಗೆದ್ದೆ!
ಮಲಗದ್ದೆ... ಮನಗೆದ್ದೆ!   

ಪಶ್ಚಿಮಘಟ್ಟ ಶ್ರೇಣಿಯ ನಡುವಿನ ರಮಣೀಯ ಹಳ್ಳಿ ಮಲಗದ್ದೆ. ಹಸಿರು ತೊಟ್ಟಿಲೊಳಗಿನ ಮಗುವಿನಂತೆ ಪವಡಿಸಿರುವ ಈ ಹಳ್ಳಿ ಕಾರವಾರದಿಂದ 40 ಕಿ.ಮೀ ದೂರದಲ್ಲಿದೆ. ಇಲ್ಲಿ ವಿದ್ಯುತ್‌ನ ಸುಳಿವೇ ಇಲ್ಲ. ನಮ್ಮ ಚಾರಣ ತಂಡ ಇಲ್ಲಿಗೆ ಹೋದಾಗ ಸಂಪೂರ್ಣ ಕತ್ತಲು ಆವರಿಸಿತ್ತು. ಏನೂ ಕಾಣದೆ ತಡಕಾಡುತ್ತಿದ್ದಾಗ ತಾಕುಗೌಡರ ಮನೆ ಮುಂದಿನ ಅಗ್ಗಿಷ್ಟಿಕೆಯ ಬೆಳಕಲ್ಲಿ ಅಸ್ಪಷ್ಟ ನೋಟಗಳು ಕಾಣಸಿಕ್ಕವು. ಗುಡ್ಡದ ಅಗಾಧ ಕತ್ತಲಿನ ಮುಂದೆ ಆ ಬೆಳಕು ಯಾವ ಮಹಾಲೆಕ್ಕ?
ನಾಲ್ಕಾರು ಮನೆಗಳಿರುವ ಪುಟ್ಟ ಹಳ್ಳಿ ಇದು. ಮರಗಿಡ ಬಳ್ಳಿಗಳನ್ನೇ ತನ್ನ ಆಭರಣ ಮಾಡಿಕೊಂಡಿದೆ. ಖಗಪಕ್ಷಿಗಳ ಕಲರವ, ಝರಿಗಳ ನಿನಾದದ ಹಾಡುಗಳನ್ನು ಕೇಳುತ್ತಾ ಮೈಮರೆತಿದೆ. ತಾನಾಯಿತು ತನ್ನ ಪಾಡಾಯಿತು ಎಂಬುದೇ ಇಲ್ಲಿನ ಮಂತ್ರ. ಈ ಊರು ಸಂಪೂರ್ಣ ಸ್ವತಂತ್ರ.

ಸುತ್ತಲೂ ಬೆಟ್ಟಗಳಿದ್ದರೂ ಮಧ್ಯದಲ್ಲಿ ಸಮತಟ್ಟಾದ ಪ್ರದೇಶ. ಅಲ್ಲಿ ನಾಲ್ಕಾರು ಹೆಂಚಿನ ಮನೆಗಳು. ಪಕ್ಕದಲ್ಲಿ ಒಂದಿಷ್ಟು ಭತ್ತ ಬೆಳೆಯುವ ಗದ್ದೆಗಳನ್ನು ಹೊಂದಿದ ಖರ್ವಡ. ಅದೊಂದು ಸ್ಟೇಡಿಯಂ ಥರ. ಸುತ್ತಲೂ ಎತ್ತರದ ಜಾಗ, ನಡುವೆ ಆಟದ ಅಖಾಡ. ಇದನ್ನು ನೋಡಿದಾಗ ಇದು ಮಲಗದ್ದೆಯಲ್ಲ, ‘ಮಲ್ಲಗದ್ದೆ’ಯೇ ಸರಿ ಎನಿಸಿತು.

ಮಲಗದ್ದೆ ಆಡಳಿತಾತ್ಮಕವಾಗಿ ಅಂಕೋಲಾ ತಾಲ್ಲೂಕಿನ ಸುಪರ್ದಿಯಲ್ಲಿದೆ. ಅಲ್ಲಿನ ಗ್ರಾಮಸ್ಥರು ಪಡಿತರಕ್ಕೆ, ಪಂಚಾಯ್ತಿ ಕೆಲಸ ಕಾರ್ಯಗಳಿಗೆ ಅಂಕೋಲಾದ ಹಟ್ಟಿಕೇರಿಯನ್ನೇ ಅವಲಂಬಿಸಿದ್ದಾರೆ, ಉಳಿದಂತೆ ತಲಗೇರಿಯಲ್ಲಿ ಏನಿದೆಯೋ ಅದನ್ನೇ ತರಬೇಕು. ದೈನಂದಿನ ಜೀವನವನ್ನು ಸಾಗಹಾಕಬೇಕು. ಇಲ್ಲಿಗಿಂತಲೂ ನಮಗೆ ಕಾರವಾರದ ದೇವಳಮಕ್ಕಿಯೇ ಪರವಾಗಿಲ್ಲ ಎನ್ನುತ್ತಾರೆ ತಾಕುಗೌಡ್ರು. ಮನೆಯಲ್ಲಿ ಬೆಳಕಿಗೆ ಎಣ್ಣೆಯ ದೀಪವನ್ನೇ ಹಚ್ಚುತ್ತಾರೆ. ಅದರಲ್ಲೂ ಎಳ್ಳೆಣ್ಣೆ ದೀಪಗಳ ಬೆಳಕೇ ಹರಡಿರುತ್ತದೆ. ಎಣ್ಣೆ ಖಾಲಿಯಾದರೆ ಕಟ್ಟಿಗೆ ಉರಿಸಿ ಆ ಮಂದಬೆಳಕಿನಲ್ಲಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ರಾತ್ರಿ ಏಳು ಗಂಟೆಯೊಳಗೆ ಎಲ್ಲಾ ಕೆಲಸಗಳನ್ನು ಪೂರೈಸುತ್ತಾರೆ. ವಿದ್ಯುತ್ ಸೌಕರ್ಯವಿಲ್ಲದ ಕಾರಣ ನಕ್ಷತ್ರಗಳ ಬೆಳಕಲ್ಲಿ ಭತ್ತವನ್ನು ಕುಟ್ಟಿಯೇ ಅಕ್ಕಿ ಮಾಡುತ್ತಾರೆ ಮತ್ತು ಅಕ್ಕಿ ಬೀಸಿಕೊಂಡು ಹಿಟ್ಟು ಮಾಡಿಕೊಳ್ಳುತ್ತಾರೆ.

ADVERTISEMENT

‘ನಾವು ಕೃಷಿಮಾಡುವ ಜಾಗ ದೇವರ ಕೃಪೆಗೆ ಒಳಗಾಗಿದೆ. ಪಾಂಡವರು ಬೇಸಾಯ ಮಾಡಿದ ಪ್ರದೇಶವಿದು. ಆ ಕಾರಣದಿಂದ ನಮ್ಮ ಕೃಷಿಭೂಮಿಯೊಳಗೆ ಚಪ್ಪಲಿಗಳನ್ನು ಹಾಕುವುದಿಲ್ಲ’ ಎಂದು ಅವರು ವಿವರಿಸುತ್ತಾರೆ. 

‘ಕಾರವಾರ, ಅಂಕೋಲಾಗಳಿಗೆ ಹೋಗಿಬರುವುದೇ ಕಷ್ಟ. ಅದನ್ನು ಹೊರತುಪಡಿಸಿದರೆ ಸದ್ಯ ನಾವು ಸುಖವಾಗಿದ್ದೇವೆ’ ಎನ್ನುತ್ತಾರೆ ತಾಕುಗೌಡ್ರು. ಊರಲ್ಲಿ ಶಾಲೆ ಇಲ್ಲದಿರುವ ಕಾರಣ ತಮ್ಮ ಮಕ್ಕಳನ್ನು ದೇವಳಮಕ್ಕಿ ಮತ್ತು ಹಟ್ಟಿಕೇರಿಯಲ್ಲಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿಟ್ಟು ಓದಿಸುತ್ತಿದ್ದಾರೆ. 

‘ನೀವು ಹೊರಗಿನ ಜಗತ್ತು ನೋಡಿದ್ದೀರಿ, ಇಲ್ಲಿ ತಿರುಗಾಡಲು ರಸ್ತೆಯಿಲ್ಲ, ವಿದ್ಯುತ್ ಇಲ್ಲ, ಮನರಂಜನೆಗೆ ಟಿ.ವಿಯಿಲ್ಲ. ಬೇಸರ ಎನಿಸುವುದಿಲ್ಲವೇ’ ಎಂದು ಕೇಳಿದರೆ, ‘ನಮ್ಮ ಬದುಕನ್ನು ಹೀಗೆ ಸವೆಸುವುದೇ ಲೇಸು’ ಎನ್ನುತ್ತಾರೆ ಫಲ್ಗುಣಗೌಡರು. ಸೌಲಭ್ಯಗಳಿಲ್ಲದ ಕಾರಣ ಹೊರಗಿನವರು ಸಂಬಂಧಗಳನ್ನು ಬೆಳೆಸುವವರು, ಬೆಸೆಯುವವರು ಇಲ್ಲಿಗೆ ಯಾರೂ ಬರಲಾರರು, ಉಳಿಯಲಾರರು. ಅದಕ್ಕಾಗಿಯೇ ಇನ್ನೂ ಮದುವೆಯಾಗದ ಯುವಕ ಯುವತಿಯರು ಇಲ್ಲಿದ್ದಾರೆ. ಮಕ್ಕಳು ಮದುವೆ ಆಗದಿರುವುದನ್ನು ನೋಡಿ ಹಿರಿಯರು ಮರುಗುತ್ತಾರೆ.

‘ಬೇಸಾಯದ ಕೆಲಸ ಮುಗಿದ ಮೇಲೆ ನೀವು ಏನು ಮಾಡುತ್ತೀರಿ’ ಎಂಬ ನಮ್ಮ ಪ್ರಶ್ನೆಗೆ, ‘ನೋಡಿ, ನಾವು ಮಳೆಗಾಲಕ್ಕೆ ಬೇಕಾಗುವಷ್ಟು ಕಟ್ಟಿಗೆ ತಂದು ಶೇಖರಿಸುತ್ತೇವೆ ಮತ್ತು ಬಿದಿರಿನ ಅಥವಾ ಬೆತ್ತದ ಕುಕ್ಕೆಗಳ ಬುಟ್ಟಿಗಳನ್ನು ಮಾಡುತ್ತೇವೆ. ರಾತ್ರಿಯ ವೇಳೆ ಎಲ್ಲರೂ ಸೇರಿ ಹರಟುತ್ತೇವೆ. ಹಾಡುಗಳನ್ನು ಗುಂಪುಗುಂಪಾಗಿ ಹಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ಅವರು. ನಾವು ಹೊರಡುವ ಸಮಯದಲ್ಲಿ ತಮ್ಮ ಜಾನಪದ ಕಲೆಯ ವಾದ್ಯ ‘ಗುಮಟೆ’ಯನ್ನು ಬಾರಿಸುತ್ತಾ ಹಾಡಿ ತೋರಿಸಿದರು. ಸಮೃದ್ಧಿಯ ಜಾನಪದ ಸಂಸ್ಕೃತಿಯೇನಾದರೂ ಇದ್ದರೆ ಇಂಥ ಕಡೆಯಲ್ಲಿಯೇ ಇದೆ ಎಂದೆನಿಸಿತು.

ಯಾವ ಆಧುನಿಕತೆಯ ಗಾಳಿ ಬೀಸದ ಕಾರಣ ಜಾನಪದವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅಕಸ್ಮಾತ್ ಈ ಊರಿಗೆ ವಿದ್ಯುತ್ ಬಂದರೆ ಎಲ್ಲರೂ ಟಿ.ವಿ ನೋಡಲು ಕುಳಿತು ಅದರಲ್ಲೇ ತಲ್ಲೀನರಾಗಿ ತಮ್ಮ ಜಾನಪದ ಸಂಸ್ಕೃತಿಯನ್ನು ಮರೆಯುತ್ತಾರಲ್ಲವೇ? ರಸ್ತೆಯ ಸೌಲಭ್ಯವಾದರೆ ಅವರ ಜನಪದ ಜೀವನಶೈಲಿಯನ್ನು ತೊರೆಯುತ್ತಾರಲ್ಲವೇ? ಆರೋಗ್ಯಕರ ಜೀವನ, ಸಿರಿವಂತ ಜನಪದ ಸಂಸ್ಕೃತಿ  ಕಾಣೆಯಾಗುತ್ತದಲ್ಲವೇ? –ಇಂತಹ ಹತ್ತಾರು ಪ್ರಶ್ನೆಗಳು ಕಾಡದೇ ಬಿಡಲಿಲ್ಲ. ಅವರಿಗೆ ಇನ್ನಷ್ಟು ಸೌಲಭ್ಯಗಳು ಸಿಗಬೇಕು, ನೆಲಸಂಸ್ಕೃತಿಯೂ ಉಳಿಯಬೇಕು ಎಂದು ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.