ADVERTISEMENT

ಮಲೆನಾಡ ಸುಗ್ಗಿಹಬ್ಬವೂ... ಮೆಣಸಿನ ತೋಟವೂ...

​ಪ್ರಜಾವಾಣಿ ವಾರ್ತೆ
Published 30 ಮೇ 2016, 19:30 IST
Last Updated 30 ಮೇ 2016, 19:30 IST
ದೇವರಮನೆ–ಐತಿಹಾಸಿಕ ಭೈರವೇಶ್ವರನ ದೇವಾಲಯ.
ದೇವರಮನೆ–ಐತಿಹಾಸಿಕ ಭೈರವೇಶ್ವರನ ದೇವಾಲಯ.   

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕೃಷಿ ಸಂಸ್ಕೃತಿಯ ಮುಖ್ಯ ನೆಲೆ ಎಂಬಂತೆ ತೋರುತ್ತದೆ. ಮಲೆನಾಡಿನ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಇಲ್ಲಿನ ಕೃಷಿ ಪದ್ಧತಿ ಅವಿನಾಭಾವ ಸಂಬಂಧ ಹೊಂದಿ ತನ್ನ ವೈವಿಧ್ಯತೆಯನ್ನು ಗುರುತಿಸಿಕೊಂಡಿದೆ. ಇದಕ್ಕೆ ಮುಖ್ಯ ನಿದರ್ಶನವಾಗಿ ಕಂಡುಬರುವುದು ಮಲೆನಾಡ ಮೆಣಸಿನತೋಟ. ಮಳೆಗಾಲವಿಡೀ ವಿವಿಧ ತಳಿಯ ಭತ್ತದ ಪೈರುಪಚ್ಚೆಯೊಂದಿಗೆ ಇಲ್ಲಿನ ಗದ್ದೆ ಬಯಲುಗಳು ಕಂಗೊಳಿಸುತ್ತವೆ.

ಆದರೆ ಬೇಸಿಗೆ ಕಾಲದಲ್ಲಿ ದನಕರುಗಳು ಮೇಯುವ, ಮಕ್ಕಳಾಡುವ ಮೈದಾನವಾಗಿ ಮಾತ್ರ ಉಳಿಯದೆ ಅಲ್ಲೊಂದು, ಇಲ್ಲೊಂದು ಪುಟ್ಟ ಕೈತೋಟವಾಗಿಯೂ ಗಮನ ಸೆಳೆಯುತ್ತದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಗ್ರಾಮದೇವತೆಗಳ ಸಮ್ಮುಖದಲ್ಲಿ ನಡೆಯುವ ಸುಗ್ಗಿ ಹಬ್ಬಕ್ಕೆ ಈ ಭಾಗದ ಕೃಷಿಕ ಕುಟುಂಬದ ಸದಸ್ಯರು ತಾವೇ ಬೆಳೆಸಿದ ಮೆಣಸಿನ ತೋಟದ ತರಕಾರಿಯಿಂದ ವಿಶೇಷ ಸಾಂಬಾರು ತಯಾರಿಸುತ್ತಾರೆ. ನೆನೆಸಿದ ಅಕ್ಕಿಯನ್ನು ಒನಕೆ ಹಾಗೂ ಕಲ್ಲಿನ ಒಳ್ಳಿನಿಂದ ಕುಟ್ಟಿ ಹಿಟ್ಟನ್ನಾಗಿಸಿ ಕಡುಬು ಮಾಡಿ ಮೆಣಸಿನ ತೋಟದ ಸಾರಿನೊಂದಿಗೆ ಸವಿಯುತ್ತಾರೆ.

 ಮಳೆಗಾಲದಲ್ಲಿ ಥಂಡಿಯನ್ನು ಸರಿದೂಗಿಸಿಕೊಳ್ಳಲು ಸಹಾಯಕವಾದ ಖಾರಯುಕ್ತ ಮಲೆನಾಡಿನ ವಿಶಿಷ್ಟ ತಳಿ ನೆಟ್ಟಿಮೆಣಸಿನಕಾಯಿಯನ್ನು ರೈತರು ಇಲ್ಲಿ ಬೆಳೆಸುತ್ತಾರೆ. ಸುಗ್ಗಿಹಬ್ಬಕ್ಕೆ ಬೇಕಾದ ತರಕಾರಿಯ ನೆಪದಲ್ಲಿ ಬೆಳೆಸುವ ಕೈತೋಟದ ಈ ನೆಟ್ಟಿಮೆಣಸಿನಕಾಯಿಯನ್ನು ಒಣಗಿಸಿಟ್ಟುಕೊಂಡು ವರ್ಷಪೂರ್ತಿ ಅಡುಗೆಗೆ ಬಳಸುವುದು ವಿಶೇಷತೆಯೇ ಸರಿ. ಸುಗ್ಗಿಹಬ್ಬದಲ್ಲಿ ‘ಪಚ್ಚಡಿ’ ತಯಾರಿಸಲಾಗುತ್ತದೆ. ಇದಕ್ಕೆ ಪರಂಗಿ ಕಾಯಿ, ಕಡಲೆ ಬೇಳೆ, ಮಾವಿನಕಾಯಿ, ಈರುಳ್ಳಿ, ತೆಂಗಿನಕಾಯಿಯ ತುರಿಯ ಜತೆಗೆ ಹಸಿ ನೆಟ್ಟಿ ಮೆಣಸಿನಕಾಯಿಯನ್ನು ಬಳಸಲಾಗುತ್ತದೆ.

ಗ್ರಾಮದೇವತೆಗೆ ಮನೆಯಲ್ಲಿ ಬಿಂದಿಗೆ ತುಂಬ ಮೈಲಿಗೆಯಾಗದ ರೀತಿಯಲ್ಲಿ ಹೊಸ ತಿಳಿನೀರನ್ನಿಟ್ಟು ‘ಎಡಕಲು’ ಎಂಬ ಗದ್ದುಗೆ ನಿರ್ಮಿಸಿ ಹೂವಿನಿಂದ ಅಲಂಕಾರ ಮಾಡುತ್ತಾರೆ. ತದನಂತರ ಮೆಣಸಿನ ತೋಟದಲ್ಲಿ ಬೆಳೆಸಿದ್ದ ಅಲಸಂದೆ, ಮುಳುಗಾಯಿ, ಗಡ್ಡೆ ಕೋಸು, ಬೆಂಡೆಕಾಯಿ, ಟೊಮೆಟೊ, ಮೂಲಂಗಿ, ಕಾಯಿಮೂಲಂಗಿ, ಸೌತೆಕಾಯಿ ಮುಂತಾದ ತರಕಾರಿಗಳೆಲ್ಲದರಿಂದ ತಯಾರಿಸಿದ ರುಚಿಯುಕ್ತ ಹುಳಿಸಾಂಬಾರನ್ನು ಕುಟ್ಟಿದ ಕಡುಬಿನೊಂದಿಗೆ ಬಡಿಸಿ ಎಡೆ ಪೂಜೆ ಮಾಡುತ್ತಾರೆ. ಇದು ಎಲ್ಲ ಹಬ್ಬಗಳಂತೆ ಕೇವಲ ಹಬ್ಬದೂಟವಾಗಿರದೆ ಚೌತ ಎಂಬುದಾಗಿ ಕರೆಯಲಾದ ಪ್ರಸಾದ ಸೇವನೆ ಎನ್ನಲಾಗುತ್ತದೆ.

ಇಷ್ಟುಮಾತ್ರವಲ್ಲದೆ ಊಟ ಪ್ರಾರಂಭ ಮಾಡುವುದನ್ನು ಚೌತ ಹಿಡಿಯುವುದು, ಊಟ ಮುಗಿಸುವುದನ್ನು ಚೌತ ಬಿಡಿಸುವುದು ಎನ್ನಲಾಗುತ್ತದೆ. ನಂತರ ತಿಂದುಂಡ ಬಾಳೆ ಎಲೆಯನ್ನು ಬೇಕಾಬಿಟ್ಟಿ ಬಿಸಾಡದೆ ಬೇಲಿಗೆ ಸಿಕ್ಕಿಸಿಡಲಾಗುವುದು ಅಥವಾ ದನಗಳಿಗೆ ತಿನ್ನಲು ನೀಡಲಾಗುತ್ತದೆ. ಚೌತದೂಟ ಮಾಡಿದ ನೆಂಟರಿಷ್ಟರು ಎಲೆ ಅಡಿಕೆ ತಾಂಬೂಲ ಮೆಲ್ಲುತ್ತ ‘ಎಲ್ಲೋ ಮರಾಯ, ಮೆಣಸಿನ ತೋಟ ಹೇಗೆ ಮಾಡಿದ್ದೀಯಾ ನೋಡೋಣ!’ ಎನ್ನುತ್ತ ಮೆಣಸಿನ ತೋಟವನ್ನು ಸಂದರ್ಶಿಸಿ ವಿವರ ಪಡೆದು ಪ್ರಫುಲ್ಲಚಿತ್ತರಾಗುವ ಪರಿ ಮುದವನ್ನುಂಟುಮಾಡುತ್ತದೆ.

ಸುಗ್ಗಿಹಬ್ಬದಲ್ಲಿ ಗ್ರಾಮದೇವತೆಗಳಿಗೆ ವಿಶೇಷವಾಗಿ ಸೇವಾಕರ್ತರನ್ನು ‘ಜಕ್ಕಿಮಕ್ಕಳು’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಗ್ರಾಮಗಳಲ್ಲಿ ಸುಗ್ಗಿಹಬ್ಬವನ್ನು ಕಟ್ಟುನಿಟ್ಟಾಗಿ ಆಚರಿಸುವವರ ಮನೆಯಿಂದ ಅಕ್ಕಿ, ಭತ್ತ, ಉಪ್ಪು, ಮೆಣಸಿನಕಾಯಿ, ತರಕಾರಿಯನ್ನು ಪಡೆಯುತ್ತಾರೆ. ಪ್ರತಿಯಾಗಿ ವಾರಕ್ಕೂ ಮೀರಿ ನಡೆಯುವ ಸುಗ್ಗಿ ಉತ್ಸವದ ವಿವರಗಳನ್ನು ಕ್ರಮಬದ್ಧತೆಯಿಂದ ಮೌಖಿಕ ಸ್ವರೂಪವಾಗಿ ತಿಳಿಸಿಕೊಡುತ್ತಾರೆ. ವಿಶೇಷವಾಗಿ ಮೂಡಿಗೆರೆ ತಾಲ್ಲೂಕಿನ ಕೋಳೂರು ಸಾವಿರದ ಸುಗ್ಗಿಹಬ್ಬದಲ್ಲಿ ಈ ಪರಂಪರೆ ಹಲವು ತಲೆಮಾರುಗಳಿಂದಲೂ ಮುಂದುವರೆದುಕೊಂಡು ಬಂದಿದೆ.

ಸುಗ್ಗಿಹಬ್ಬದ ಎಲ್ಲಾ ಸೇವಾಚರಣಾ ಕಾರ್ಯಕ್ರಮಗಳು ಮುಗಿದ ತರುವಾಯ ಮಲೆನಾಡಿಗರ ಮನೆದೇವರು ಎಂಬ ಖ್ಯಾತಿಯೊಂದಿಗೆ ಪೂಜಿಸಲಾಗುವ ದೇವರಮನೆ ಎಂಬ ಐತಿಹಾಸಿಕ ಭೈರವೇಶ್ವರನ ದೇವಾಲಯದ ಆವರಣದಲ್ಲಿ ಸೊಪ್ಪು ಅಥವಾ ಹಬ್ಬ ಒಪ್ಪಿಸುವ ಕಾರ್ಯಕ್ರಮ ಇರುತ್ತದೆ. ಇದನ್ನು ದೇವರಿಗೆ ಸುಗ್ಗಿಹಬ್ಬದ ಮೀಸಲು ಸಮರ್ಪಿಸಲಾಗುವ ಕಾರ್ಯಕ್ರಮ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ಗ್ರಾಮದ  ಮುಖಂಡರು, ಸುಗ್ಗಿಹಬ್ಬದ ಕಾರ್ಯಕರ್ತರು, ವಿವಿಧ ಗ್ರಾಮಗಳನ್ನೆಲ್ಲ ಒಟ್ಟುಗೂಡಿಸಿ ‘ಸಾವಿರ’ ಎಂದು ಕರೆಯಲಾಗುವ ಹಬ್ಬದ ಅಡುಗೆ ಮಾಡಿ ಪಾಳೆಯದ ಜನರೆಲ್ಲ ಕೂಡಿಕೊಂಡು ಭೈರವನಿಗೆ ಎಡೆಹಾಕಿ ಪೂಜಿಸುತ್ತಾರೆ.

ತದನಂತರ ಬೇರೆ ಬೇರೆ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಹಬ್ಬದೂಟ ಸವಿಯುತ್ತಾರೆ. ಇದು ಸುಗ್ಗಿ ವ್ರತ ಕೈಬಿಡುವ ಮಹತ್ವದ ಆಚರಣೆಯಾಗಿದೆ. ಆದರೀಗ ಮಲೆನಾಡಿನ ಪ್ರತೀಕವಾದ ಸುಗ್ಗಿಹಬ್ಬದೊಂದಿಗೆ ಭಾವನಾತ್ಮಕ ನಂಟನ್ನು ಬೆಸೆದುಕೊಂಡಿದ್ದ ಮೆಣಸಿನ ತೋಟ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ. ಗ್ರಾಮೀಣ ರೈತ ಸಮುದಾಯದ ಪುರುಷ, ಮಹಿಳೆ, ಮಕ್ಕಳೆಲ್ಲರು ಒಟ್ಟುಗೂಡಿ, ಬೆಳೆಸಿ ಸಂಭ್ರಮ ಪಡುತ್ತಿದ್ದ ಮೆಣಸಿನ ತೋಟವು ಸುಗ್ಗಿಹಬ್ಬ ಎಂಬ ಪ್ರಜ್ಞೆಯಲ್ಲಿ ಮರೆಯಲಾಗದ ಸವಿ ಚಿತ್ರವಾಗಿಯೂ ಮನದಂಗಳದಲ್ಲಿ ದಾಖಲಾಗಿ ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.