ADVERTISEMENT

ಮಳೆಗಾಗಿ ರಕ್ತದ ಅನ್ನ!

ಆಚಾರ ವಿಚಾರ

ಗಿರೀಶ ಎಸ್.ಕಲ್ಲುಗುಡಿ
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST
ಪೂಜೆಗಾಗಿ ಕೆಂಪಮ್ಮನ ದೇವಸ್ಥಾನದ ಮುಂದೆ ಆರತಿಗಳನ್ನು ಜೋಡಿಸಿರುವುದು
ಪೂಜೆಗಾಗಿ ಕೆಂಪಮ್ಮನ ದೇವಸ್ಥಾನದ ಮುಂದೆ ಆರತಿಗಳನ್ನು ಜೋಡಿಸಿರುವುದು   

ಇಲ್ಲಿ, ಮುಂಗಾರು ಮಳೆ ಬಿದ್ದ ನಂತರ ಬರುವ ಅಮಾವಾಸ್ಯೆಯಂದು ಕುರಿಯ ರಕ್ತದಿಂದ ಕಲಸಿದ ಅನ್ನವನ್ನು ಗ್ರಾಮದ ಸುತ್ತಲೂ ಹಾಕುತ್ತಾ ಸಾಗುವರು. ಇದಕ್ಕೆ ಕಾರಣ, ಮಳೆ ಚೆನ್ನಾಗಿ ಆಗಬೇಕೆಂದು!

ಇಂಥದ್ದೊಂದು ವಿಚಿತ್ರ ಸಂಪ್ರದಾಯ ಇರುವುದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲುಗುಡಿ ಗ್ರಾಮದಲ್ಲಿ. ಮುಂಗಾರು ಮಳೆ ಬಿದ್ದ ಒಂದು ಅಥವಾ ಎರಡು ತಿಂಗಳಿನಲ್ಲಿ ಬೀಜ ಬಿತ್ತನೆ ಮಾಡಿದ ರೈತರು ಮಳೆ ಬೆಳೆ ಚೆನ್ನಾಗಿ ಆಗಲೆಂದು ಈ ಸಂಪ್ರದಾಯದ ಮೊರೆ ಹೋಗಿದ್ದಾರೆ.

ಈ ಗ್ರಾಮದಲ್ಲಿ ಮೊದಲು ಗ್ರಾಮದ ಎಲ್ಲಾ ದೇವರಿಗೂ ತಂಬಿಟ್ಟಿನ ಆರತಿ ಮಾಡಲಾಗುವುದು. ಊರಿನಲ್ಲಿ ಕೆಂಪಮ್ಮ (ಅಗ್ರರಾರ್ದಮ್ಮ), ಸಾಕ್ಷದ್ರಮ್ಮ ಎಂಬ ಹೆಣ್ಣು ದೇವತೆಗಳು ಹಾಗೂ ಮಲ್ಲಪ್ಪ, ಆಂಜನೇಯನ ಗುಡಿಯಿದೆ. ಗಂಡು ದೇವರಿಗೆ ಬರೀ ಆರತಿ, ಪೂಜೆ ಮಾಡಿದರೆ ಹೆಣ್ಣು ದೇವರಿಗೆ ಕೋಳಿ ನೈವೇದ್ಯ ಮಾಡಲಾಗುವುದು. ಗ್ರಾಮದ ಪ್ರತಿಯೊಂದು ಮನೆಯವರೂ ಒಂದೊಂದು ಕೋಳಿಯನ್ನು ದೇವಸ್ಥಾನದ ಮುಂದೆ ಕೊಯ್ಯಬೇಕು. ಈ ಮೂಲಕ ಹೆಣ್ಣು ದೇವರಿಗೆ ಪೂಜೆ ಸಲ್ಲಿಸಬೇಕು.

ಇದಾದ ಒಂದು ತಿಂಗಳ ನಂತರ, ಬಿತ್ತಿದ ಬೀಜ ಮೊಳಕೆ ಒಡೆದು ಭೂಮಿಯ ಹೊರಗೆ ಬರುವ ಸಮಯ. ಆ ಸಮಯದಲ್ಲಿ, ಅಂದರೆ ಮೊದಲು ಅಮಾವಾಸ್ಯೆಯಂದು ಎರಡು ಕುರಿಗಳನ್ನು ದೇವರಿಗೆ ಬಲಿ ಕೊಡಲಾಗುವುದು. ಅವುಗಳ ರಕ್ತದಿಂದ ಅನ್ನವನ್ನು ಬೆರೆಸಲಾಗುವುದು. ರಾತ್ರಿ ಒಂಬತ್ತು ಗಂಟೆ ನಂತರ ಊರ ಗಡಿಯಿಂದ ಸುತ್ತುವರೆಯುತ್ತಾ ರಕ್ತದಿಂದ ಕಲಸಿದ ಅನ್ನವನ್ನು ಎರಚುತ್ತಾ ನಡೆಯುವವರು.

ನಂತರ ಪುನಃ ದೇವತೆಗಳಿಗೆ ಆರತಿ ನಡೆಯುತ್ತದೆ. ಅಕ್ಕಿಯಲ್ಲಿ ಚೌಕಾಕಾರದ  ತಂಬಿಟ್ಟು ಮಾಡುತ್ತಾರೆ. ಒಂದು ಬಟ್ಟಲಿಗೆ ಎರಡು ತಂಬಿಟ್ಟು ಇಟ್ಟು ಅದಕ್ಕೆ ಬೇವಿನ ಸೊಪ್ಪು ಮತ್ತು ಕಾಸಿ ಕಣಗಲ ಹೂವಿನಿಂದಲೇ ಅಲಂಕಾರ ಮಾಡುತ್ತಾರೆ. ನಂತರ ಎಲ್ಲಾ ಮಹಿಳೆಯರು ಸೀರೆ ಉಟ್ಟು ತಲೆ ಮೇಲೆ ಅಲಂಕಾರ ಮಾಡಿದ ಬಟ್ಟಲನ್ನು ಹೊತ್ತುಕೊಂಡು ಮೇಳ ವಾದ್ಯದೊಂದಿಗೆ ದೇವಸ್ಥಾನಕ್ಕೆ ಹೊರಡುತ್ತಾರೆ. ಅಲ್ಲಿ ಎಲ್ಲಾ ಆರತಿಗಳನ್ನು ಜೋಡಿಸಿ ಪೂಜೆ ಮಾಡಲಾಗುತ್ತದೆ.

ಪೂಜೆ ಮಾಡಿದ ನಂತರ ಅಲಂಕಾರ ಮಾಡಿದ ಎಲ್ಲಾ ಸೊಪ್ಪು ಹೂವನ್ನು ಪೂಜಾರಪ್ಪ ಕಿತ್ತು ಒಂದು ಕಡೆ ಗುಡ್ಡೆ ಹಾಕುತ್ತಾರೆ. ಅದನ್ನು ಯಾರೂ ತುಳಿಯುವಂತಿಲ್ಲ. ಅದನ್ನು ಮರುದಿನ  ಯಾರೂ ತಿರುಗಾಡದಂತಹ ಜಾಗಕ್ಕೆ ಹಾಕುತ್ತಾರೆ.

ಈ ಸಂದರ್ಭದಲ್ಲಿ ಚೆಲ್ಲುವ ರಕ್ತದ ಅನ್ನವನ್ನು ಯಾರೂ ನೋಡುವಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಯಾರಾದರೂ ನೋಡಿದರೆ ರಕ್ತ ಕಕ್ಕಿ ಸಾಯುತ್ತಾರೆ ಎಂಬ ಅಚಲ ನಂಬಿಕೆಯಿದೆ. ಆದ್ದರಿಂದ ಇದನ್ನು ನೋಡುವ ಉಸಾಬರಿಗೆ ಯಾರೂ ಹೋಗಿಲ್ಲ! ಅದಕ್ಕಾಗಿಯೇ ಅನ್ನವನ್ನು ಚೆಲ್ಲುವ ಸಂದರ್ಭದಲ್ಲಿ ಎಲ್ಲರೂ ಬಾಗಿಲು ಮುಚ್ಚಿಕೊಳ್ಳುತ್ತಾರೆ.

ಮತ್ತೆ ಅವರು ವಾಪಸು ಬರುವವರೆಗೂ ಬಾಗಿಲು ತೆರೆಯುವುದಿಲ್ಲ. ಅನ್ನವನ್ನು ಎರಚುತ್ತಾ ಹೋಗುವಾಗ ಹೋಗಲಿ... ಹೋಗಲಿ... ಹೋಗಲಿ... ಎಂದು ಕೇಕೆ ಹಾಕುತ್ತಾ ಹೋಗುತ್ತಾರೆ. ಊರಿನ ಪೂರ್ಣ ಗಡಿಯನ್ನು ಸುತ್ತುವರೆದ ನಂತರ ಒಂದು ಬೇವಿನ ಮರವಿದೆ. ಅಲ್ಲಿ ಬಲಿ ಕೊಟ್ಟ ಕುರಿ ತಲೆಯನ್ನು ಹೂತು ಪೂಜೆ ಮಾಡಿ ಹಿಂದಿರುಗಿ ನೋಡದಂತೆ ವಾಪಸಾಗುತ್ತಾರೆ.

ಹೀಗೆ ಮಾಡಿದರೆ ಊರಿನಲ್ಲಿರುವ ದನ ಕರುಗಳಿಗಾಗಲೀ ಮನುಷ್ಯನಿಗಾಗಲೀ ಕಾಯಿಲೆ ಕಸಾಲೆಗಳಾಗಲಿ, ದೆವ್ವ ಪಿಶಾಚಿ ಕಾಟಗಳಾಗಲಿ ಬರುವುದಿಲ್ಲ ಎಂಬ ನಂಬಿಕೆಯಿದೆ. ಹೀಗೆ ಮಾಡಿದರೆ ಗ್ರಾಮ ದೇವರುಗಳು ತಮ್ಮನ್ನು ಸದಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯನ್ನಿಟ್ಟ ಗ್ರಾಮಸ್ಥರು ಎಂತಹ ಬರ ಬಂದರೂ ಈ ಆಚರಣೆಯನ್ನು ಮಾತ್ರ ಚಾಚೂ ತಪ್ಪದೇ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.