ADVERTISEMENT

ಮಹಿಳಾ ನಿಲಯದಲ್ಲಿ ಮದುವೆ ಸುಗ್ಗಿ

ಪ್ರಕಾಶ ಕುಗ್ವೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ನಿಲಯದಲ್ಲಿ ಈಚೆಗೆ ನಡೆದ ಮದುವೆ.– ಚಿತ್ರಗಳು: ಅನೂಪ್ ಆರ್.ತಿಪ್ಪೇಸ್ವಾಮಿ.
ನಿಲಯದಲ್ಲಿ ಈಚೆಗೆ ನಡೆದ ಮದುವೆ.– ಚಿತ್ರಗಳು: ಅನೂಪ್ ಆರ್.ತಿಪ್ಪೇಸ್ವಾಮಿ.   

‘ಆರಾಮ ಇದ್ಯೇನೆ.. ಮಕ್ಕ ಹೆಂಗಿದ್ದ.. ಅಡಿಕೆ ಕೊಯ್ಲು ಆತನೇ, ಅತ್ತೆ–ಮಾವ ಆರಾಮಾ...’ ಹೀಗೆ ಹವ್ಯಕ ಭಾಷೆಯಲ್ಲಿ ಹೆಣ್ಣುಮಕ್ಕಳು ಪರಸ್ಪರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದರು. ತಮ್ಮಂತೆ ಈ ನಿಲಯದಲ್ಲಿ ಬೆಳೆದ ಹೆಣ್ಣುಮಕ್ಕಳ ಮದುವೆಗೆ ಇವರೆಲ್ಲರೂ ತವರುಮನೆಗೆ ಬಂದಷ್ಟೇ ಖುಷಿಯಲ್ಲಿದ್ದರು.

ಇವರೆಲ್ಲರ ಭಾಷೆ ಬದಲಾಗಿದೆ. ವೇಷ ಮಾರ್ಪಾಡಾಗಿದೆ. ಮೈ ತುಂಬಾ ಬಂಗಾರದ ಆಭರಣಗಳು. ಕಂಕಳಲ್ಲಿ ಒಂದು, ಕಾಲಬುಡದಲ್ಲಿ ಮತ್ತೊಂದು ಮಗು. ಮುಖದ ತುಂಬಾ ನಗು, ಆತ್ಮವಿಶ್ವಾಸದ ನಡೆ. ಒಟ್ಟಿನಲ್ಲಿ ಇವರದ್ದು ಈಗ ಸುಖ ಸಂಸಾರದ ಮಾತುಕತೆ.

ಇವರೆಲ್ಲರೂ ದಾವಣಗೆರೆಯ ರಾಜ್ಯ ಮಹಿಳಾ ನಿಲಯದ ಹಳೆಯ ನಿವಾಸಿಗಳು. ಈಗ ಉತ್ತರ ಕನ್ನಡದ ಸೊಸೆಯಂದಿರು. ಈ ಒಂದೇ ಜಿಲ್ಲೆಗೆ ನಿಲಯದ 18 ಹೆಣ್ಣುಮಕ್ಕಳು ಮದುವೆಯಾಗಿದ್ದಾರೆ.

ಇವರದೇ ರೀತಿ ಕಂಕಣಭಾಗ್ಯ ಕಾಣುವ ಹೆಣ್ಣುಮಕ್ಕಳ ಮದುವೆಗೆ ಬಂದು ಹರಿಸುತ್ತಾರೆ. ಅವರಿಗೆ ಧೈರ್ಯದ ಮಾತು ಹೇಳುತ್ತಾರೆ. ಅಕ್ಕ–ಅಮ್ಮನಂತೆ ಓಡಾಡಿ ಅನಾಥಭಾವ ಕಾಡದಂತೆ ನೋಡಿಕೊಳ್ಳುತ್ತಾರೆ.

ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ–4 ಪಕ್ಕದ ಶ್ರೀರಾಮ ನಗರದಲ್ಲಿ ರಾಜ್ಯ ಮಹಿಳಾ ನಿಲಯವಿದೆ. ಇದು ಸರ್ಕಾರಿ ಸಂಸ್ಥೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕೆಲಸ ನಿರ್ವಹಿಸುತ್ತಿದೆ. ಅನಾಥ, ನೊಂದ, ಕೌಟುಂಬಿಕ ಹಾಗೂ ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದ 18 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದೆ. ಈ ಸಂಸ್ಥೆ ಆರಂಭಗೊಂಡಿದ್ದು 1997ರಲ್ಲಿ. ಇಲ್ಲಿಯವರೆಗೆ 22 ಮದುವೆ, 15 ನಾಮಕರಣಗಳು ಇಲ್ಲಿ ನಡೆದಿವೆ. ಈಗ 57 ಜನ ನಿವಾಸಿಗಳು ಹಾಗೂ 10 ಮಕ್ಕಳು ಸೇರಿದಂತೆ ಒಟ್ಟು 67 ಜನ ವಾಸವಾಗಿದ್ದಾರೆ.

ಮದುವೆ ಇದ್ದಾಗ ಇಡೀ ಮಹಿಳಾ ನಿಲಯ ಅಕ್ಷರಶಃ ಕಲ್ಯಾಣಮಂಟಪವಾಗಿ ಮಾರ್ಪಾಡಾಗುತ್ತದೆ. ಮದುವೆ ಮನೆಯ ಸಂಭ್ರಮ, ಸಡಗರ, ಗಡಿಬಿಡಿ, ಅತಿಥಿ ಸತ್ಕಾರ ಎಲ್ಲವೂ ಇಲ್ಲಿರುತ್ತವೆ. ಬಾಳೆ ತಂದು ಮದುವೆ ಚಪ್ಪರ ಹಾಕಲಾಗುತ್ತದೆ. ರಂಗವಲ್ಲಿ ಬಿಡಿಸಿ, ಮಾವಿನ ತಳಿರು, ತೋರಣಗಳಿಂದ ಸಿಂಗರಿಸಲಾಗುತ್ತದೆ. ಪಾಯಸ, ಚಿತ್ರಾನ್ನ, ಅನ್ನ, ಸಾಂಬಾರಿನ ಸಮೃದ್ಧ ಭೋಜನವನ್ನೂ ಸಿದ್ಧಪಡಿಸಲಾಗುತ್ತದೆ.

ಮದುವೆಗೆ ಹದಿನೈದು ದಿನ ಮುಂಚೆಯೇ ಆಹ್ವಾನ ಪತ್ರಿಕೆ ಮುದ್ರಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ವಧು–ವರರ ಸಂಬಂಧಿಕರಿಗೆ ಕಳುಹಿಸುತ್ತಾರೆ. ಬಟ್ಟೆ, ಬಂಗಾರದಿಂದ ಹಿಡಿದು ವಧುವಿಗೆ ನೀಡುವ ಉಡುಗೊರೆ ಸಾಮಾನುಗಳ ಖರೀದಿ ನಡೆಯುತ್ತದೆ. ಇದಕ್ಕೆ ದಾನಿಗಳ ನೆರವು ಪಡೆಯಲಾಗುತ್ತದೆ.

ಗಣ್ಯರೇ ನೆಂಟರು
ಜಿಲ್ಲೆಯ ಅಧಿಕಾರಿಗಳು, ರಾಜಕಾರಣಿಗಳು ಅಥವಾ ಅವರ ಮಕ್ಕಳ ಮದುವೆಗೆ ತಪ್ಪಿಸಿಕೊಳ್ಳಬಹುದು. ಆದರೆ, ಮಹಿಳಾ ನಿಲಯ ವಾಸಿಗಳ ಮದುವೆಗೆ ಮಾತ್ರ ಕಡ್ಡಾಯ ಹಾಜರಾತಿ ಇರುತ್ತದೆ. ಕೇವಲ ಅಧಿಕಾರಿಗಳಾಗಿ ಅಲ್ಲ, ತಾವೇ ಆ ಹೆಣ್ಣುಮಕ್ಕಳ ಅಣ್ಣ–ಅಪ್ಪ, ಅಮ್ಮ–ಅಕ್ಕನ ರೀತಿ ಓಡಾಡುತ್ತಾರೆ.

ಜಿಲ್ಲಾ ನ್ಯಾಯಾಧೀಶರಿಂದ ಹಿಡಿದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಈ ಮದುವೆಯಲ್ಲಿ ಪಾಲ್ಗೊಳ್ಳುತ್ತಾರೆ.

ಮದುವೆಯಾಗುವ ಪ್ರತಿ ಜೋಡಿಗೆ ₹15,000 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಹಣವನ್ನು ಬ್ಯಾಂಕ್‌ನಲ್ಲಿ ಪತಿ, ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಠೇವಣಿ ಇಡಲಾಗುತ್ತದೆ. ಮೂರು ವರ್ಷದ ನಂತರ ಈ ಹಣವನ್ನು ಇಬ್ಬರಿಗೂ ನೀಡಲಾಗುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌.ವಿಜಯಕುಮಾರ್.

ಹುಡುಗ–ಹುಡುಗಿ ಪರಸ್ಪರ ಒಪ್ಪಿದ ನಂತರವೇ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕುಟುಂಬದ ಸಾಮಾಜಿಕ, ಆರ್ಥಿಕ ಜೀವನದ ಬಗ್ಗೆ ಆಯಾ ಜಿಲ್ಲಾ ಪರಿವೀಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ವರನ ಮನೆಗೆ ನಿಲಯದ ಸಿಬ್ಬಂದಿ ಕೂಡ ಭೇಟಿ ನೀಡುತ್ತಾರೆ.

ಈ ಪ್ರಕ್ರಿಯೆಗಳು ಮುಗಿದ ನಂತರವೇ ಮದುವೆ ಮಾತುಕತೆ ನಡೆಯುತ್ತವೆ. ಮದುವೆ ನಡೆದು ಮೂರು ವರ್ಷದವರೆಗೆ ದಂಪತಿ ಯೋಗಕ್ಷೇಮವನ್ನು ನಿರಂತರ ವಿಚಾರಿಸಲಾಗುತ್ತದೆ ಎನ್ನುತ್ತಾರೆ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಪ್ರಫುಲ್ಲಾ ಡಿ.ರಾವ್.

ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಮಹಿಳಾ ನಿಲಯಗಳಿವೆ. ಆದರೆ, ಅತಿ ಹೆಚ್ಚು ಮದುವೆಗಳು ನಡೆದಿದ್ದು ಇಲ್ಲಿ. ಒಟ್ಟು 22 ಮದುವೆಗಳಲ್ಲಿ 18 ಉತ್ತರ ಕನ್ನಡ ಜಿಲ್ಲೆ, ಮೂರು ದಕ್ಷಿಣ ಕನ್ನಡ, ಎರಡು ದಾವಣಗೆರೆ ಹಾಗೂ ಒಬ್ಬ ಶಿವಮೊಗ್ಗ ಜಿಲ್ಲೆಯ ವರರು ಇಲ್ಲಿನ ವಧುಗಳನ್ನು ಮದುವೆ ಮಾಡಿಕೊಂಡು ಸುಖಜೀವನ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.

ಉತ್ತರ ಕನ್ನಡಕ್ಕೂ ನಿಲಯಕ್ಕೂ ನಂಟು!
ಈ ಮಹಿಳಾ ನಿಲಯಕ್ಕೂ, ಉತ್ತರ ಕನ್ನಡ ಜಿಲ್ಲೆಗೂ ಅವಿನಾಭಾವ ಸಂಬಂಧ. ಇಲ್ಲಿ ನಡೆದ 22 ಮದುವೆಗಳಲ್ಲಿ 18 ಉತ್ತರ ಕನ್ನಡ ಜಿಲ್ಲೆಯ ವರರು. 2007ರಲ್ಲಿ ಈ ಜಿಲ್ಲೆಯ ಯಲ್ಲಾಪುರದ ಗೋಪಾಲ ಹೆಗಡೆ ಅವರು ಇಲ್ಲಿನ ಅಂಬಿಕಾ ಅವರನ್ನು ಮದುವೆಯಾದರು. ಅಲ್ಲಿಂದ ಆರಂಭಗೊಂಡ ಕಂಕಣಭಾಗ್ಯ ಇಂದಿಗೂ ಮುಂದುವರಿದಿದೆ.

ಈಚೆಗೆ 2017ರ ಮಾರ್ಚ್ 1ರಂದು ಇದೇ ಜಿಲ್ಲೆಯ ಯಲ್ಲಾಪುರದ ತಾಲ್ಲೂಕಿನ ಉಪಳೇಶ್ವರ ಹುತ್ಕಂಡ ಗ್ರಾಮದ ನಿವಾಸಿ ನಾಗರಾಜ ನರಸಿಂಹಭಟ್ಟ ಅವರು ನಿಲಯದ ನಿವಾಸಿ ನೇತ್ರಾ ಅವರ ವಿವಾಹ ಬಂಧನಕ್ಕೆ ಒಳಗಾದರು.

ನಾಗರಾಜ ನರಸಿಂಹಭಟ್ಟ ಓದಿದ್ದು ದ್ವಿತೀಯ ಪಿಯು. ವೃತ್ತಿ ಟೈಲರಿಂಗ್. ಎರಡು ಎಕರೆ ಅಡಿಕೆ ತೋಟ ಇದೆ. ವಧು ನೇತ್ರಾಗೆ ತಂದೆ ಇಲ್ಲ. ತಾಯಿ ಕಣ್ಮರೆಯಾಗಿದ್ದಾರೆ. ಬಾಲಮಂದಿರ, ರಾಜ್ಯ ಮಹಿಳಾ ನಿಲಯಗಳ ನಿವಾಸಿಯಾಗಿ ಬೆಳೆದ ನೇತ್ರಾ ಓದಿದ್ದು ಎಂಟನೇ ತರಗತಿ. ಮೂಲ ಹರಿಹರದ ಮಲೇಬೆನ್ನೂರು. ಇಲ್ಲಿ ಮದುವೆಯಾದ ಬಹುತೇಕ ವರ ಮತ್ತು ವಧುಗಳ ಹಿನ್ನೆಲೆ ಹೀಗೆಯೇ ಇದೆ.

‘ನಮಗೆ ಅಡಿಕೆ ತೋಟ, ತೆಂಗು, ಬಾಳೆ, ಏಲಕ್ಕಿ ತೋಟಗಳಿವೆ. ಆಧುನಿಕ ಪ್ರಪಂಚದ ಎಲ್ಲಾ ಸವಲತ್ತುಗಳೂ ನಮ್ಮೂರಲ್ಲಿವೆ. ನಮಗೆ ಕಷ್ಟ ಎಂಬುದೇ ಇಲ್ಲ. ಅತ್ತೆ–ಮಾವನೇ ನಮಗೆ ತಂದೆ–ತಾಯಿ. ಗಂಡನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮುದ್ದಿನಂತಹ ಮಕ್ಕಳಿವೆ. ಜೀವನದಲ್ಲಿ ಇನ್ನೇನು ಬೇಕು ನಮಗೆ?’ ಎನ್ನುತ್ತಾರೆ ವಿಜಯಲಕ್ಷ್ಮಿ.

‘ನಾವೆಲ್ಲ ಒಂದೇ ಜಿಲ್ಲೆಯಲ್ಲಿರುವುದರಿಂದ ಆಗಾಗ್ಗೆ ಒಟ್ಟು ಸೇರುತ್ತೇವೆ. ಕಷ್ಟ–ಸುಖ ಹಂಚಿಕೊಳ್ಳುತ್ತೇವೆ. ನಿಲಯಕ್ಕೆ ಕನಿಷ್ಠ ವರ್ಷಕ್ಕೊಮ್ಮೆ ಭೇಟಿ ನೀಡುತ್ತೇವೆ. ತವರುಮನೆಗೆ ಬಂದಂತಹ ಅನುಭವವಾಗುತ್ತದೆ. ನಮ್ಮಂತಹವರಿಗೆ ಹೊಸ ಬದುಕು ಕಲ್ಪಿಸಿದ ಇಲ್ಲಿನ ಅಧಿಕಾರಿಗಳಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆ’ ಎನ್ನುತ್ತಾರೆ ಅವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.