ADVERTISEMENT

ಶಿಲೆಗಳಲ್ಲಿ ತೆರೆದ ಬುಡಕಟ್ಟು ಬದುಕು

ಬಳಕೂರು ವಿ.ಎಸ್.ನಾಯಕ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಶಿಲೆಗಳಲ್ಲಿ ತೆರೆದ ಬುಡಕಟ್ಟು ಬದುಕು
ಶಿಲೆಗಳಲ್ಲಿ ತೆರೆದ ಬುಡಕಟ್ಟು ಬದುಕು   

ರಮಣೀಯ ಸೌಂದರ್ಯದ ಬೀಡು ಎಂದೆನಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆ, ವಿಭಿನ್ನ ಜನಾಂಗಗಳ ತವರು ಕೂಡ. ಹಾಲಕ್ಕಿ, ಕುಡವಿ, ಹಾಸಲ, ಗೊಂಡ, ತುಮರಿ ಮರಾಠ, ಸಿದ್ಧಿ... ಹೀಗೆ ಎಲೆಮರೆಯಲ್ಲಿಯೇ ಉಳಿದಿರುವ ಜನಾಂಗಗಳಿಗೆ ಲೆಕ್ಕವೇ ಇಲ್ಲ. ಇವರ ಪೈಕಿ ಹಲವರು ಸಮಾಜದ ಮುಖ್ಯವಾಹಿನಿಗೆ ಇನ್ನೂ ಬರದವರು. ಈ ಜನಾಂಗದವರಿಗೆಲ್ಲಾ ಅವರದ್ದೇ ಆದ ವಿಶಿಷ್ಟ ಭಾಷೆಯಿದೆ, ವಿಭಿನ್ನ ರೀತಿಯ ಸಂಸ್ಕೃತಿ ಇದೆ, ಅಚ್ಚರಿ ಎನಿಸುವ ಆಚರಣೆಗಳೂ ಇವೆ.

ಇವೆಲ್ಲವನ್ನೂ ಶಿಲ್ಪದ ಮೂಲಕ ಒಂದೇ ಕಡೆಗೆ ಕಟ್ಟಿಕೊಡುವ ಯತ್ನ ಮಾಡಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಕಾರವಾರದ ಜಿಲ್ಲಾಡಳಿತದ ಸಹಯೋಗದಲ್ಲಿ ಇಲಾಖೆಯು ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಬುಡಕಟ್ಟು ಜನಾಂಗದವರ ಆಚಾರ–ವಿಚಾರಗಳನ್ನು ಶಿಲ್ಪದ ಮೂಲಕ ಪ್ರತಿನಿಧಿಸುವ ‘ಶಿಲ್ಪವನ’ವನ್ನು ರೂಪಿಸಿದೆ. ವಿಶೇಷ ಘಟಕ ಯೋಜನೆಯಡಿಯಲ್ಲಿ 15 ದಿನಗಳು ನಡೆದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರ’ದಲ್ಲಿ ಈ ಶಿಲ್ಪಗಳು ರಚನೆಗೊಂಡಿವೆ.

12 ಹಿರಿಯ ಮತ್ತು 12 ಸಹಾಯಕ ಶಿಲ್ಪಿಗಳು  ಇದನ್ನು ನಿರ್ಮಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ಡಾ.ವಿರೂಪಾಕ್ಷ ಬಡಿಗೇರ ಹಾಗೂ ಕುಮಾರಬಾಬು ಘಸ್ತಿ ಇವರ ಮಾರ್ಗದರ್ಶನದಲ್ಲಿ ಒಟ್ಟು 13 ವಿಭಿನ್ನ ವಿಷಯಗಳ ಮೇಲೆ ಶಿಲ್ಪಗಳನ್ನು ಕೆತ್ತಲಾಗಿದೆ.

ಈ ಜನಾಂಗಗಳ ವೇಷಭೂಷಣ, ಉಡುಗೆ ತೊಡುಗೆ, ಆಹಾರ, ಆಚಾರ ವಿಚಾರಗಳನ್ನು ಎಲ್ಲವನ್ನೂ ಈ ಕಲಾಕೃತಿಗಳಲ್ಲಿ ಬಿಂಬಿಸಲಾಗಿದೆ. ಶಿಲ್ಪರಚನೆಗೂ ಮುನ್ನ ಈ ಎಲ್ಲಾ ಜನಾಂಗದವರ ಜೀವನಕ್ರಮಗಳನ್ನು ಕಲಾವಿದರು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ನಂತರ ಕಬ್ಬಿಣ ಜಲ್ಲಿ ಕಲ್ಲು ಮತ್ತು ಕಚ್ಚಾವಸ್ತುಗಳನ್ನು ಬಳಸಿ ಸಿಮೆಂಟ್‌ನಲ್ಲಿ ಅವರ ಜೀವನಶೈಲಿಗೆ ಜೀವ ತುಂಬಿದ್ದಾರೆ.

ತಾಯಿ ಮತ್ತು ಮಗುವಿನ ಶಿಲ್ಪ, ಅಂಗಳದಲ್ಲಿ ಕುಳಿತ ಹಾಲಕ್ಕಿ ಮಹಿಳೆ, ಹೊಲದಿಂದ ಕಟ್ಟಿಗೆ ತಂದು ಮಾರುವ ಕುಡವಿ ಮಹಿಳೆ, ಭತ್ತ ಕುಟ್ಟುವ ಹಾಸಲ ಮಹಿಳೆ ಮತ್ತು ಡೋಲು ಬಾರಿಸುವ ಗೊಂಡ ಸಮುದಾಯದ ಪುರುಷ, ಹಾಲು ಮಾರುವ ಗೌಳಿ, ಕಂಬಳ ಧರಿಸಿರುವ ತುಮರಿ ಮರಾಠ ವ್ಯಕ್ತಿ, ಸಿದ್ಧಿ ಜನಾಂಗದ ನೃತ್ಯ ವೈವಿಧ್ಯ... ಇವೆಲ್ಲಾ ಇಲ್ಲಿಯ ಪ್ರಮುಖ ಆಕರ್ಷಣೆಗಳು.

ಕಾರವಾರದಿಂದ ಗೋವಾಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಕೂಗಳತೆಯ ದೂರದಲ್ಲಿರುವ ಈ ಶಿಲ್ಪವನಕ್ಕೆ ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ.
‘ಈ ಶಿಲ್ಪಗಳು ಏನಿಲ್ಲವೆಂದರೂ 100 ವರ್ಷದವರೆಗೆ ಬಾಳಿಕೆ ಬರುತ್ತವೆ.

ಸೂಕ್ತ ನಿರ್ವಹಣೆ ಮಾಡಬೇಕಷ್ಟೆ’ ಎನ್ನುತ್ತಾರೆ ಡಾ.ವಿರೂಪಾಕ್ಷ ಬಡಿಗೇರ್‌. ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ವಿನೂತನವಾದ ಸಿಮೆಂಟ್ ಶಿಲ್ಪಕಲಾ ಶಿಬಿರವು ನಡೆದಿರಲಿಲ್ಲ. ಇಲ್ಲಿನ ಸಂಸ್ಕೃತಿಯ ಮಜಲುಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಸಫಲರಾಗಿದ್ದೇವೆ’ ಎನ್ನುತ್ತಾರೆ ಅವರು.

ಕಾರವಾರವು ಬೆಂಗಳೂರಿನಿಂದ ಸುಮಾರು 600 ಕಿ.ಮೀ ದೂರದಲ್ಲಿದೆ. ಖಾಸಗಿ ಮತ್ತು ಕರ್ನಾಟಕದ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯದ ಜೊತೆಗೆ ಬೆಂಗಳೂರು ಕಾರವಾರ ರೈಲ್ವೆ ಸೌಲಭ್ಯವು ಕೂಡ ಇದೆ. ರಜಾದಿನದ ಪಟ್ಟಿಯಲ್ಲಿ ಈ ‘ಶಿಲ್ಪವನ’ದ ಹೆಸರನ್ನು ಸೇರಿಸಿಕೊಳ್ಳುವುದನ್ನು ಮರೆಯಬೇಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.